ಬಾಳಬೇಕಾದವರು ನೀರಿಗೆ ಬಲಿಯಾದರು! ವಾರದಲ್ಲಿ ನಡೀತು ಹಲವು ಜಲ ದುರಂತ!

Four water tragedy incidents have occurred in the state in a week

ಬಾಳಬೇಕಾದವರು ನೀರಿಗೆ ಬಲಿಯಾದರು! ವಾರದಲ್ಲಿ ನಡೀತು ಹಲವು ಜಲ ದುರಂತ!

KARNATAKA NEWS/ ONLINE / Malenadu today/ May 23, 2023 SHIVAMOGGA NEWS

ಇನ್ನಷ್ಟೆ ಯವ್ವನದ ಬೆಳಗಿನ ಕಿರಣಗಳನ್ನ ತಾಗಿಸಿಕೊಂಡು ಪ್ರಜ್ವಲಿಸಬೇಕಿದ್ದ ಆ ಐವರು  ನೀರುಪಾಲಾಗಿದ್ದರು. ರಾಜ್ಯದಲ್ಲಿ ನಡೆದ ನೀರಿನ ದುರಂತ, ನಿಜಕ್ಕೂ ಮರುಕ ಪಡುವಂತೆ ಮಾಡುತ್ತಿದೆ.  

ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿಯ ನಾಲೆಯಲ್ಲಿ ಮೂವರು ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳದ ಬಳಿಯ ಬಲಮುರಿಯ ಕಾವೇರಿ ನದಿಯಲ್ಲಿ ಈಜಲು ಹೋದ ಇಬ್ಬರು ನೀರು ಪಾಲಾಗಿದ್ದು, ಅವರ ಕುಟುಂಬವಷ್ಟೆ ಅಲ್ಲದೆ ಘಟನೆ ಬಗ್ಗೆ ಕೇಳಿದವರೆಲ್ಲಾ ಛೇ ಹೀಗಾಗಬಾರದಿತ್ತು ಎನ್ನುತ್ತಿದ್ದಾರೆ. 

ತರಿಕೇರೆಯಲ್ಲಿ ನಡೆದ ಘಟನೆ !

ಇಲ್ಲಿನ  ಲಕ್ಕವಳ್ಳಿ ಫಾರೆಸ್ಟ್ ಡಿಪೊ ಹಿಂದೆ ಭದ್ರಾ ಕಾಲುವೆ ಇದೆ. ಈ ಕಾಲುವೆಯಲ್ಲಿ,  ಭಾನುವಾರ ಸಂಜೆ  ರವಿ (34), ಶಿವಮೊಗ್ಗ ವಾಸಿ ಅನನ್ಯ (19), ನಂಜನಗೂಡಿನ ಶಾಮವೇಣಿ (16) ಕೊಚ್ಚಿಕೊಂಡು ಹೋಗಿದ್ಧಾರೆ. ಈ ಪೈಕಿ ಇಬ್ಬರ ಶವ ಪತ್ತೆಯಾಗಿದೆ. ಇನ್ನೊಬ್ಬರ ಶವಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ. ನೀರಿಗಿಳಿದು ಆಟವಾಡ್ತಿದ್ದಾಗ ಈ ಘಟನೆ ನಡೆದಿದ್ದು, ಒಬ್ಬರನ್ನ ಒಬ್ಬರು ರಕ್ಷಿಸಲು ಹೋಗಿ ಮೂವರು ಸಾವನ್ನಪ್ಪಿದ್ದಾರೆ. 

ಬಲಮುರಿಯಲ್ಲಿ ಇಬ್ಬರ ಸಾವು

ಇನ್ನೂ ಅತ್ತ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಬಲಮುರಿಯಲ್ಲಿ ಸಂಬಂಧಿಕರ ಮದುವೆ ಬಂದಿದ್ದ ಇಬ್ಬರು ಯುವಕರು ಕಾವೇರಿಯಲ್ಲಿ ನೀರುಪಾಲಾಗಿದ್ದಾರೆ. ಹೊಳೆನರಸೀಪುರದ ಧನಂಜಯ (19) ಹಾಗೂ ಹೌಸಿಂಗ್ ಬೋರ್ಡ್ ನಿವಾಸಿ ದರ್ಶನ್ (19) ಮೃತರು. ಮದುವೆ ಮುಗಿದ ನಂತರ ಸಮೀಪ ದಲ್ಲಿದ್ದ ಕಾವೇರಿ ನದಿಯಲ್ಲಿ ಮೂರಾಲ್ಕು ಮಂದಿ ಜತೆ ಈಜಲು ಹೋಗಿದ್ದೇ ದುರಂತಕ್ಕೆ ಕಾರಣವಾಗಿದೆ.  

ಅಂಡರ್ ಪಾಸ್​ನಲ್ಲಿ ಹೋಯಿತು ಜೀವ

ಇನ್ನೂ ಬೆಂಗಳೂರಿನಲ್ಲಿ ಭಾನುವಾರ ಸಂಜೆ ಅಬ್ಬರಿಸಿದ ಮಳೆಯ ಪರಿಣಾಮವಾಗಿ ಅಂಡರ್‌ಪಾಸ್‌ನಲ್ಲಿ ತುಂಬಿಕೊಂಡ ನೀರಿನಲ್ಲಿ ಮುಳುಗಿ ಇನ್ಫೋಸಿಸ್‌ ಉದ್ಯೋಗಿಯೊಬ್ಬರು ಮೃತಪಟ್ಟಿದ್ದರು. ಕೆ.ಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಈ ದುರ್ಘಟನೆ ನಡೆದಿತ್ತು.  

ಶೃಂಗೇರಿಯಲ್ಲಿ ಸ್ಟೂಡೆಂಟ್ಸ್ ನೀರು ಪಾಲು

ಇನ್ನೊಂದೆಡೆ ಅತ್ತ ಶೃಂಗೇರಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸ್ಟೂಡೆಂಟ್ಸ್ ನೀರುಪಾಲಾಗಿದ್ದಾರೆ. ಈ ಘಟನೆ  ಶೃಂಗೇರಿ ತಾಲೂಕಿನ ನೆಮ್ಮಾರು ಸಮೀಪ ನಡೆದಿತ್ತು.  ಇಲ್ಲಿನ  ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಜ್ವಲ್ ಹಾಗೂ ರಕ್ಷಿತ್ ಮೃತ ಪಟ್ಟವರು. ಸುಂಕದಮಕ್ಕಿ ತೂಗುಸೇತುವೆ  ಸಮೀಪ  ಇವರು ಈಜಲು ತೆರಳಿದ್ದಾರೆ. ಈ ವೇಳೆ ರಕ್ಷಿತ್ ಮುಳುಗುತ್ತಿರುವುದನ್ನ ಗಮನಿಸಿದ ಪ್ರಜ್ವಲ್​ ಆತನನ್ನ ಹಿಡಿಯಲು ಹೋಗಿದ್ದಾನೆ. ಈ ವೇಳೆ ಇಬ್ಬರು ನಿಯಂತ್ರಣ ಕಳೆದುಕೊಂಡು ನೀರಿನಲ್ಲಿ ಮುಳುಗಿದ್ದಾರೆ.