ವಿ.ಹೆಚ್.ಪಿ ಮುಖಂಡನಿಗೆ ಸೆಂಟ್ರಲ್ ಜೈಲಿನಿಂದ ಹಣಕ್ಕಾಗಿ ಬೆದರಿಕೆ ಕರೆ! ಹಣ ಕೇಳಲು ಬಂದು ಸಿಕ್ಕಿಬಿದ್ದ ಕಟ್ಟಪ್ಪ !

ಬೈಕ್ ನಲ್ಲಿ ಟಿಪ್ಪು ನಗರದ ಅಲ್ತಾಫ್ ಅಲಿಯಾಸ್ ಕಟ್ಟಪ್ಪ ಎಂಬಾತ ಮತ್ತೊಬ್ಬ ಅಪ್ರಾಪ್ತನೊಂದಿಗೆ ಸ್ಥಳಕ್ಕೆ ಬರುತ್ತಾನೆ. ಈ ವಿಷಯ ತಿಳಿಯುತ್ತಿದ್ದಂತೆ ತುಂಗಾ ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಲ್ತಾಫ್ ಮತ್ತು ಸಹಚರನನ್ನು ಬಂಧಿಸಿದ್ದಾರೆ.

ವಿ.ಹೆಚ್.ಪಿ ಮುಖಂಡನಿಗೆ ಸೆಂಟ್ರಲ್ ಜೈಲಿನಿಂದ ಹಣಕ್ಕಾಗಿ ಬೆದರಿಕೆ ಕರೆ! ಹಣ ಕೇಳಲು ಬಂದು ಸಿಕ್ಕಿಬಿದ್ದ ಕಟ್ಟಪ್ಪ !
VHP leader

ಶಿವಮೊಗ್ಗದಲ್ಲಿ ಮತ್ತೆ ರೌಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಜೈಲುಗಳನ್ನೇ ತಮ್ಮ ಕ್ರಿಮಿನಲ್ ದಂಧೆಗಳಿಗೆ ಅಡ್ಡೆಯನ್ನಾಗಿ ಮಾಡಿಕೊಂಡಿರುವ ಗುಂಡಾಗಳು.  ಜೈಲಿನಿಂದಲೇ ಉದ್ಯಮಿಗಳಿಗೆ ವರ್ತಕರಿಗೆ ಬೆದರಿಕೆ ಹಾಕುವ ಛಾಳಿಯನ್ನು ಮುಂದುವರೆಸಿದ್ದಾರೆ.  ಈಗ ಅದರ ಮುಂದುವರಿದ ಭಾಗವಾಗಿ ಶಿವಮೊಗ್ಗದ ಗೋಪಾಳ ಬಡಾವಣೆಯ ವಿಎಚ್ ಪಿ ತುಂಗಾ ಪ್ರಖಾಂಡದ ಅಧ್ಯಕ್ಷ ಜಿತೇಂದ್ರ ಗೌಡಗೆ ಧಮ್ಕಿ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ. 

ಗುಲ್ಬರ್ಗಾ, ಹಿಂಡಲಗ ಮೈಸೂರು ಕೇಂದ್ರ ಕಾರಗೃಹದಿಂದ ಬೆದರಿಕೆ ಕರೆ ಬಂದಿದ್ದು ನಿಜವೇ? 

ಶಿವಮೊಗ್ಗದ ಗೋಪಾಲ ಗೌಡ ಬಡಾವಣೆಯಲ್ಲಿ ಬಳೆ ಅಂಗಡಿ ಇಟ್ಟುಕೊಂಡಿರುವ ಜಿತೇಂದ್ರ ಗೌಡ ರು, ಪಿ ತುಂಗಾ ಪ್ರಖಾಂಡದ ಅಧ್ಯಕ್ಷರಾಗಿದ್ದಾರೆ. ಗೋ ಸಂರಕ್ಷಣೆ, ಹಿಂದುತ್ವ ಹಾಗೂ ಹಿಂದೂ ಸಮಾಜದ ಸಂಘಟನೆಯಲ್ಲಿ ಸಕ್ರೀಯರಾಗಿದ್ದಾರೆ.

ಯಾರ ತಂಟೆ ಸಹವಾಸಕ್ಕೆ ಹೋಗದ ಜೀತೇಂದ್ರರಿಗೆ ಇತ್ತಿಚ್ಚಿಗೆ ಜೈಲಿನಿಂದ ವಾಟ್ಸಾಪ್ ಬೆದರಿಕೆ ಕರೆಗಳು ಬರಲು ಶುರುವಾದ್ವು, ಮೈಸೂರು ಜೈಲಿನಿಂದ  ರೌಡಿ ಭದ್ರಾವತಿ ನಾಗ ಎಂಬಾತ ಕಾಡ ಕಾರ್ತಿ ಹೆಸರೇಳಿಕೊಂಡು, ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. 

ನವೆಂಬರ್ 25 ರಂದು ಬೆಳಿಗ್ಗೆ 11 ಗಂಟೆಯಿಂದ 26 ರ ಸಂಜೆ 7 ಗಂಟೆಯವರಿಗೆ ಇಬ್ಬರು ರೌಡಿಗಳು ಜೈಲಿನಿಂದ ವಾಟ್ಸಾಪ್ ಕಾಲ್ ಮಾಡಿದ್ದಾರೆ. ಒಂದು ಕರೆ ಗುಲ್ಬರ್ಗ ಜೈಲಿನಿಂದ ಬಂದರೆ ಮತ್ತೊಂದು ಕರೆ ಹಿಂಡಲಗಾ ಜೈಲಿನಿಂದ ಬಂದಿದೆ.

 ಹತ್ತು ಲಕ್ಷಕ್ಕೆ ಡಿಮ್ಯಾಂಡ್ ಹತ್ತು ಸಾವಿರಕ್ಕೆ ಸೆಟಲ್ ಮೆಂಟ್ 

ಭದ್ರಾವತಿ ನಾಗ ಎಂಬಾತ ಕಾಡಾ ಕಾರ್ತಿ ಹೆಸರೇಳಿಕೊಂಡು ಜೀತೇಂದ್ರಗೌಡರಿಗೆ ಹತ್ತು ಲಕ್ಷ ರೂಪಾಯಿಗೆ ಡಿಮ್ಯಾಂಡ್ ಇಟ್ಟಿದ್ದಾನೆ. ಹಾಗೆ ನೋಡಿದ್ರೆ ಕಾಡಾ ಕಾರ್ತಿ ಇರೋದು ಮೈಸೂರಿನಲ್ಲಿ .ಆತ ನಿಜಕ್ಕೂ ಜಿತೇಂದ್ರಗೌಡಗೆ ಕಾಲ್ ಮಾಡಿಸಿದ್ದನೇ ಎಂಬುದು  ಇನ್ನಷ್ಟೆ ತನಿಖೆಯಿಂದ ಗೊತ್ತಾಗಬೇಕಿದೆ.

ಭದ್ರಾವತಿ ನಾಗ ಇರೋದು ಹಿಂಡಲಗಾ ಜೈಲಿನಲ್ಲಿ ..ಈತ ಕಾಡಾ ಕಾರ್ತಿ ಹೆಸರನ್ನು ಏಕೆ ಬಳಸಿಕೊಂಡ ಎಂಬುದು ಕೂಡ ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಇನ್ನು ಗುಲ್ಬರ್ಗ ಜೈಲಿನಿಂದ ಜಿತೇಂದ್ರಗೌಡರಿಗೆ ಯಾರು ಕರೆ ಮಾಡಿದ್ರು ಎಂಬುದು ಸಧ್ಯದ ಪ್ರಶ್ನೆಯಾಗಿದೆ.

ಕರೆ ಮಾಡಿದ ರೌಡಿಗಳು ಮಾತ್ರ ಹತ್ತು ಲಕ್ಷ ರೂಪಾಯಿ ಕೊಡಬೇಕು. ಇಲ್ಲವಾದ್ರೆ ತೊಂದರೆ ಅನುಭವಿಸುತ್ತೀರಿ ಎಂದು ಅವಾಜ್ ಹಾಕಿದ್ದಾರೆ.  ಹತ್ತು ಲಕ್ಷ ರೂಪಾಯಿ ಕೊಡಲು ಒಪ್ಪದ ಜಿತೇಂದ್ರ ಅಂತಿಮವಾಗಿ 25 ಸಾವಿರಕ್ಕೆ ಒಪ್ಪಿಗೆ ನೀಡಿದ್ದರಂತೆ.

ಕೊನೆ ಹಂತದಲ್ಲಿ ಹತ್ತು ಸಾವಿರಕ್ಕೆ ಸೆಟಲ್ ಮೆಂಟ್ ಮಾಡಿಕೊಂಡಿದ್ದಾರೆ. ಪೋನ್ ಪೇ ಇಲ್ಲವೇ ಗೂಗಲ್ ಪೇ ಮೂಲಕ ಹಣ ನೀಡುವಂತೆ ರೌಡಿ ನಾಗ ಹೇಳಿದ್ದಾನೆ. ಆಗ ಜಿತೇಂದ್ರರವರು ನಾನೇ ಖುದ್ದು ಹಣ ನೀಡುತ್ತೇನೆ. ನಿಮ್ಮವರನ್ನು ಯಾರಾದ್ರೂ ಕಳಿಸಿ ನಾನು ಗೋಪಾಳದ ಕೆನರಾ ಬ್ಯಾಂಕ್ ಬಳಿ ಇರುತ್ತೇನೆ ಎಂದು ಹೇಳಿದ್ದಾರೆ.

ಆಗ ಬೈಕ್ ನಲ್ಲಿ ಟಿಪ್ಪು ನಗರದ ಅಲ್ತಾಫ್ ಅಲಿಯಾಸ್ ಕಟ್ಟಪ್ಪ ಎಂಬಾತ ಮತ್ತೊಬ್ಬ ಅಪ್ರಾಪ್ತನೊಂದಿಗೆ ಸ್ಥಳಕ್ಕೆ ಬರುತ್ತಾನೆ. ಈ ವಿಷಯ ತಿಳಿಯುತ್ತಿದ್ದಂತೆ ತುಂಗಾ ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಲ್ತಾಫ್ ಮತ್ತು ಸಹಚರನನ್ನು ಬಂಧಿಸಿದ್ದಾರೆ.

ಯಾರು ಈ ಅಲ್ತಾಫ್ ಅಲಿಯಾಸ್ ಕಟ್ಟಪ್ಪ

ಅಲ್ತಾಫ್ ರೌಡಿ ಶೀಟರ್ ಆಗಿದ್ದು, ಬಹುಪಾಲು ವರ್ಷ ಜೈಲಿನಲ್ಲಿಯೇ ತನ್ನ ಜೀವನವನ್ನು ಕಳೆದಿದ್ದಾನೆ. ಪಕ್ಕಾ ಬಚ್ಚನ್ ಗ್ಯಾಂಗ್ ನ ಸಹಚರನಾಗಿರುವ ಅಲ್ತಾಫ್, ಗಾಂಜಾ ಪೆಡ್ಲರ್ ಕೂಡ ಹೌದು. 

ಈ ಹಿಂದೆ ಖಲೀಂ ಎಂಬ ಉದ್ಯಮಿಗೆ ಫೈರ್ ಮಾಡಿದ ಪ್ರಕರಣದಲ್ಲಿ ಅಲ್ತಾಫ್ ಕೂಡ ಇದ್ದ.,ಹಫ್ತಾ ವಸೂಲಿ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬೆದರಿಸಿ ಹಣ ಕೇಳುವುದು ಈತನಿಗೆ ಖಯಾಲಿಯಾಗಿದೆ. ಟಿಪ್ಪು ನಗರದಲ್ಲಿ ಸಧ್ಯಕ್ಕೆ ಹವಾ ಮೆಂಟೇನ್ ಮಾಡುತ್ತಿರೋ ಅಲ್ಪಾಫ್ ನನ್ನು ತುಂಗಾ ನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. 

ಯಾರು ಈ ರೌಡಿ ನಾಗ 

ನಾಗ ಅಲಿಯಾಸ್ ಭದ್ರಾವತಿ ನಾಗ, ಜೈಲಿನಿಂದಲೇ ಅವಾಸ್ ಹಾಕೋದನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದಾನೆ. ಧಮ್ಕಿ, ಸುಲಿಗೆ, ಅಪಹರಣ ಮತ್ತಿತರ ಪ್ರಕರಣದಲ್ಲಿ ಹಲವು ಬಾರಿ ಬಂಧನಕ್ಕೊಳಗಾಗಿರುವ ನಾಗ, ಈಗ ಮಹಿಳೆ ಯೊಬ್ಬರ ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಹಿಂಡಲಗಾ ಜೈಲಿನಲ್ಲಿ  ಶಿಕ್ಷೆ ಅನುಭವಿಸುತ್ತಿದ್ದಾನೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಭದ್ರಾವತಿ ನಾಗನನ್ನು ವಶಕ್ಕೆ ಪಡೆಯಲಿದ್ದಾರೆ.