ಅರ್ಧಕೇಜಿಗೂ ಹೆಚ್ಚು ತೂಕದ ಅಮ್ಮನ ತಾಳಿಬೊಟ್ಟು! ಸಾಗರ ಮಾರಿಕಾಂಬೆಯ ವಿಶೇಷತೆ ಏನೇನು ಗೊತ್ತಾ? ಆಚಾರ-ವಿಚಾರಗಳ ಸ್ಪೆಷಲ್​ ರಿಪೋರ್ಟ್​

Do you know what's so special about sagar marikambe? Special Report on Rituals and Ideas #ಮಾರಿಜಾತ್ರೆ2023

ಅರ್ಧಕೇಜಿಗೂ ಹೆಚ್ಚು ತೂಕದ ಅಮ್ಮನ ತಾಳಿಬೊಟ್ಟು! ಸಾಗರ ಮಾರಿಕಾಂಬೆಯ ವಿಶೇಷತೆ ಏನೇನು ಗೊತ್ತಾ? ಆಚಾರ-ವಿಚಾರಗಳ ಸ್ಪೆಷಲ್​ ರಿಪೋರ್ಟ್​
ಅರ್ಧಕೇಜಿಗೂ ಹೆಚ್ಚು ತೂಕದ ಅಮ್ಮನ ತಾಳಿಬೊಟ್ಟು! ಸಾಗರ ಮಾರಿಕಾಂಬೆಯ ವಿಶೇಷತೆ ಏನೇನು ಗೊತ್ತಾ? ಆಚಾರ-ವಿಚಾರಗಳ ಸ್ಪೆಷಲ್​ ರಿಪೋರ್ಟ್​

MALENADUTODAY.COM | SHIVAMOGGA NEWS |SAGARA TALUK

ಮೂರು ವರ್ಷಕ್ಕೊಮ್ಮೆ ನಡೆಯುವ ಸಾಗರ ಮಾರಿಕಾಂಬೆ ದೇವಿಯ ಜಾತ್ರೆ ವಿದ್ಯುಕ್ತವಾಗಿ ಆರಂಭಗೊಂಡಿದೆ.  ಗ್ರಾಮದೇವತೆಯ ಜಾತ್ರೆಯು ಒಂದೊಂದು ಊರಿನಲ್ಲಿ ಆಯಾ ಊರಿನ ವಾಡಿಕೆ ಪದ್ದತಿಗಳಂತೆಯೇ ನಡೆದುಕೊಂಡು ಬರುತ್ತಿದೆ. ಸಾಗರ ಮಾರಿಕಾಂಬೆಯ ವಿಷಯದಲ್ಲಿಯು ಅದರದ್ದೇ ಆದ ವಿಶೇಷ ಪದ್ದತಿಗಳಿವೆ.  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿರುವ ಮಾರಿಕಾಂಬಾ ದೇವಸ್ಥಾನ ಹಿಂದೆ ಪುಟ್ಟ ಗುಡಿಯಾಗಿತ್ತು. ಕೆಳದಿ ಅರಸರ ಆಳ್ವಿಕೆಯಲ್ಲಿ ದೇವಾಲಯ ನಿರ್ಮಾಣವಾಯ್ತು ಎನ್ನಲಾಗುತ್ತದೆ. ಸೈನಿಕರ ರಕ್ಷಣೆಗಾಗಿ ದಂಡಿನ ಮಾರಿ ಗದ್ದುಗೆಯನ್ನು ಸ್ಥಾಪಿಸಿದ್ದರು ಎಂದು ಹೇಳುತ್ತಾರೆ. ಇನ್ನೂ ಆ ಕಾಲದಿಂದಲೂ ಪೂಜಿಸಿಕೊಂಡು ಬರುತ್ತಿರುವ ಮಾರಮ್ಮನ ಜಾತ್ರೆಯಲ್ಲಿ ಪ್ರತಿಯೊಂದು ಶಿಷ್ಟಾಚಾರ ಹಾಗೂ ಪದ್ಧತಿ ತಪ್ಪದಂಥೆ ನಡೆಯುತ್ತದೆ. ಹಾಗೆ ಆಚರಿಸುವ ವಿಶೇಷ ಪದ್ದತಿಗಳಲ್ಲಿ ಕೆಲವೊಂದರ ಮಾಹಿತಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. 

ಸಾಗರ ಮಾರಿಕಾಂಬಾ ದೇವಿಯ ಆಭರಣಗಳನ್ನು ಪ್ರತಿಸಲ ಜಾತ್ರೆ ಸಂದರ್ಭದಲ್ಲಿ ಸ್ವಚ್ಛಗೊಳಿಸಿ ಅವುಗಳಿಗೆ ಹೊಸ ಹೊಳಪು ನೀಡುವ ಕೆಲಸವನ್ನು ಇಲ್ಲಿನ ರತ್ನಾಕರ್​ ಶೇಟ್​ ಕುಟುಂಬಸ್ಥರು ಮಾಡಿಕೊಂಡು ಬಂದಿದ್ಧಾರೆ. ಪ್ರತಿ ಸಲದ ಜಾತ್ರೆಯಲ್ಲಿ ಚೂರು ಹೆಚ್ಚುವರಿ ಚಿನ್ನವನ್ನು ಅಮ್ಮನ ಆಭರಣಗಳಿಗೆ ಸೇರಿಸಿ ಅದನ್ನು ದೇವಿಗೆ ಅರ್ಪಿಸುವುದು ಕುಟುಂಬದ ವಿಶೇಷ. ಈ ಸಲ ವಿಶೇಷ ಅಂದರೆ ಅಮ್ಮನಿಗೆ 672 ಗ್ರಾಮ ತೂಕದ ತಾಳಿಬೊಟ್ಟು ಮತ್ತು ಗುಂಡನ್ನು ಈ ಕುಟುಂಬ ಅರ್ಪಿಸಿದೆ. ಮಾರಿಕಾಂಬೆಯೇ ಕನಸಲ್ಲಿ ಬಂದು ಬಂಗಾರದ ಒಡವೆ ಬಗ್ಗೆ ಹೇಳಿದ್ಧಾಗಿ ಕುಟುಂಬಸ್ಥರು ಹೇಳಿಕೊಳ್ಳುತ್ತಾರೆ. ಆದರೆ ಕನಸಲ್ಲಿ ಕಂಡಂತೆ ಇದುವರೆಗೂ ಮಾಡಲಾಗದೇ, ಈ ಸಲ ಯಥಾಶಕ್ತಿ ದೇವಿಯ ಕೃಪೆಯಿಂದ  672 ಗ್ರಾಮ್ ತೂಕದ ತಾಳಿಬೊಟ್ಟು ಮಾಡಲು ಸಾಧ್ಯವಾಯಿತಂತೆ. 

sagara marikamba jatre ಕಾಪಾಡು ತಾಯಿ! : ಸಾಗರ ಮಾರಿಕಾಂಬೆ ಜಾತ್ರೆಗೆ ವಿದ್ಯುಕ್ತ ಚಾಲನೆ! ದೃಷ್ಟಿಬೊಟ್ಟು ಇಟ್ಟು ಮಾಂಗಲ್ಯ ಧಾರಣೆ!

 ಇನ್ನೂ ಅಣ್ಣಪ್ಪ ಗುಡಿಗಾರ್ ಮನೆತನದವರು ಅಮ್ಮನಿಗೆ ಬಣ್ಣ ಮಾಡುವ ಕೆಲಸ ಮಾಡುತ್ತಾರೆ. ಸದ್ಯ ಅಣ್ಣಪ್ಪ ಗುಡಿಗಾರ್​ರವರ ಪುತ್ರ ದೇವಿದಾಸ್ ಗುಡಿಗಾರ್ ಹಾಗೂ ಮೊಮ್ಮಗ ಕಾರ್ತಿಕ್ ಗುಡಿಗಾರ್ ಹಾಗೂ ಅಣ್ಣಪ್ಪ ಗುಡಿಗಾರ್​ರವರ ಪುತ್ರಿ ಹೇಮಾವತಿಯವರು ಅಮ್ಮನವರಿಗೆ ಬಣ್ಣ ಮಾಡಿದ್ಧಾರೆ. ಜಾತ್ರೆಗೂ ಒಂದುವರೆ ತಿಂಗಳು ಮೊದಲು ಈ ಕುಟುಂಬಕ್ಕೆ ಆಹ್ವಾನಕೊಟ್ಟು ಕೆಲಸವಹಿಸಲಾಗುತ್ತದೆ. ಅಂತಿಮವಾಗಿ ಜಾತ್ರೆಯ ದಿನ ದೃಷ್ಟಿ ಬೊಟ್ಟು ಇಡುವುದರೊಂದಿಗೆ ಮಾರಿಕಾಂಬೆ ಜಾತ್ರೆ ವಿದ್ಯುಕ್ತವಾಗಿ ಆರಂಭವಾಗುತ್ತದೆ. ಇನ್ನು ಅಮ್ಮನಿಗೆ ಮಾಂಗಲ್ಯ ಧಾರಣೆ ಸಂದರ್ಭದಲ್ಲಿ ಬಾಸಿಂಗ ಕಟ್ಟುವುದು ಸಾಗರದ ನಿವಾಸಿಗಳಾದ ಗುಡಿಗಾರ್ ದೇವಪ್ಪನವರ ಕುಟುಂಬದವರು.

ಗುಡಿಗಾರ್ ಕುಟುಂಬದವರು ಬಣ್ಣ ಬಳಿದ ಬಳಿಕ ಅದರ ಭಾಗಗಳನ್ನು ಜೋಡಿಸುವ ಕೆಲಸವನ್ನು ಸಾಗರದ ಚಾರೋಡಿ ಕೊಂಕಣಿ ಆಚಾರ್​ ಸಮಾಜದವರು ಮಾಡುತ್ತಾರೆ. ಜಾತ್ರೆಗೂ ಎರಡು ದಿನ ಮೊದಲು ಮೂರ್ತಿಯನ್ನು ಜೋಡಿಸಿ ಸಿದ್ಧಪಡಿಸುತ್ತಾರೆ. ಹಾಗೆಯೇ ಜಾತ್ರೆ ಮುಗಿದ ಬಳಿಕ ಮಾರಿವನದಿಂದ ಮೂರ್ತಿಯನ್ನು ಪುನಃ ತಂದು ವಿಂಡಗಿಸಿ ದೇವಸ್ಥಾನಕ್ಕೆ ನೀಡುತ್ತಾರೆ. 

#ಮಾರಿಜಾತ್ರೆ2023   ಇನ್ನೂ ಅಮ್ಮನಿಗೆ ಸಿಂಗರಿಸುವ ಜವಾಬ್ದಾರಿಯನ್ನು ಸಾಗರದ ನಾಮದೇವ ಸಿಂಪಿ ಸಮಾಜದ ದಿ. ಗೋವಿಂದ ರಾವ್ ಹೋವಳೆ ಕುಟುಂಬದವರು ಮಾಡುತ್ತಾರೆ.  ಜಾತ್ರೆಯ ಹಿಂದಿನ ದಿನ  ಮೂರ್ತಿಗೆ ಅಲಂಕಾರ ಮಾಡುತ್ತಾರೆ.  ರೇಷ್ಮೆಯ 4 ಸೀರೆ ಬಳಸಿ ಅಮ್ಮನ ಅಲಂಕಾರ ಕೈಗೊಳ್ಳಲಾಗುತ್ತದೆ. ಸೆರಗಿಗೆ ಪ್ರತ್ಯೇಕ ಸೀರೆ, ರವಿಕೆಗೆ ಪ್ರತ್ಯೇಕ ಬಟ್ಟೆ ಹೀಗೆ ಪ್ರತಿಯೊಂದು ಗಮನದಲ್ಲಿಟ್ಟುಕೊಂಡು ವಧುವನ್ನು ಸಿಂಗಾರಗೊಳಿಸಿದ ರೀತಿಯಲ್ಲಿಯೇ ಅಮ್ಮನನ್ನು ಸಿಂಗರಿಸಲಾಗುತ್ತದೆ. 
ಇಷ್ಟೆಲ್ಲಾ ವೈಭವದ ನಡುವೆ ಇವತ್ತು ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಗೆ ಅದ್ಧೂರಿಯಾಗಿ ಚಾಲನೆ ದೊರಕಿತು. ಒಂಬತ್ತು ದಿನಗಳ ಕಾಲ ನಡೆಯುವ ಶ್ರೀ ಮಾರಿಕಾಂಬಾ ಜಾತ್ರೆಯ ಮೊದಲ ದಿನದ ಸಾಂಪ್ರಾದಾಯಿಕ ಪೂಜಾ ವಿಧಿ ವಿಧಾನಗಳು ಬೆಳಗ್ಗೆ ಬ್ರಾಹ್ಮೀ ಮಹೂರ್ತದಲ್ಲಿ ನಡೆಯಿತು. ಜಾತ್ರೆಯ ಮೊದಲ ದಿನವೇ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.
ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಾಲಯದಲ್ಲಿ ತಾಯಿ ಶ್ರೀ ಮಾರಿಕಾಂಬೆಯ ತಾಳಿ ಮತ್ತು ಆಭರಣಗಳಿಗೆ ಪೂಜೆ ಸಲ್ಲಿಸಲಾಯಿತು. ವಿಧಿವಿಧಾನಗಳನ್ನು ದೇವಾಲಯದ ಪ್ರಧಾನ ಅರ್ಚಕ ವಿದ್ವಾನ್ ಪಿ.ಎಲ್.ಗಜಾನನ ಭಟ್ ನೆರವೇರಿಸಿದರು. ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ನಂತರ ಸಂಪ್ರದಾಯದಂತೆ ಪುರೋಹಿತ ರಮೇಶ ಭಟ್ಟರ ಮನೆಯಲ್ಲಿ ಪೂಜಾ ಕಾರ್ಯಕ್ರಮ ನಡೆದವು.

ಶ್ರೀ ಮಹಾಗಣಪತಿ ದೇವಾಲಯದಿಂದ ಮಂಗಳವಾದ್ಯಗಳೊಂದಿಗೆ ಸಾಗರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಬಂದ ದೇವಿಯ ಆಭರಣಗಳನ್ನು ತವರುಮನೆಗೆ ತರಲಾಯಿತು. ಸಾಗರ ನಗರದ ತವರು ಮನೆಯಲ್ಲಿ ಪ್ರತಿಷ್ಠಾಪಿಸಿದ್ದ ಅತ್ಯಾಕರ್ಷಕವಾದ ಶ್ರೀ ಮಾರಿಕಾಂಬಾ ವಿಗ್ರಹಕ್ಕೆ ವಿವಿಧ ಸಾಂಪ್ರಾದಾಯಿಕ ಆಚರಣೆಗಳನ್ನು ನಡೆಸಿ ಆಭರಣಗಳನ್ನು ತೊಡಿಸಲಾಯಿತು. ಪೂಜಾ ಕಾರ್ಯಕ್ರಮದ ನಂತರ ತಾಯಿಯ ವಿಗ್ರಹಕ್ಕೆ ಭಾರಿ ಗಾತ್ರದ ಹಾರ ಸೇರಿದಂತೆ ವೈವಿಧ್ಯಮಯ ಹೂವಿನ ಅಲಂಕಾರ ನಡೆಸಿ ಮಹಾಮಂಗಳಾರತಿ ನಡೆಸಲಾಯಿತು. ನಂತರ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ತವರು ಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕ ಮಧುಕರ್ ಭಟ್, ಪುರೋಹಿತ ರಮೇಶ್ ಭಟ್, ಗಜಾನನ ಜೋಯ್ಸ್, ನೀಲಕಂಠ ಜೋಯ್ಸ್, ಸದಾಶಿವ ಜೋಯ್ಸ್, ರಾಘವೇಂದ್ರ ಭಟ್, ನವೀನ್ ಜೋಯ್ಸ್, ಸುಧೀಂದ್ರ ಜೋಯ್ಸ್, ಲಕ್ಷ್ಮಣ್ ಜೋಯ್ಸ್ ಇತರರು ಇದ್ದರು. ಗಣಪತಿ ದೇವಸ್ಥಾನದಿಂದ ಮಾರಿಕಾಂಬಾ ದೇವಸ್ಥಾನದ ತವರು ಮನೆಯವರೆಗೂ ಮೆರವಣಿಗೆಯಲ್ಲಿ ಸಾಗರದ ದೈವಜ್ಞ ಮಹಿಳಾ ಸಮಾಜದ ಸದಸ್ಯರು ಚಂಡೆವಾದನ ನಡೆಸಿಕೊಟ್ಟರು.
  • ಮೊದಲ ದಿನ ಇವತ್ತು(ಮಂಗಳವಾರ) ತವರು ಮನೆಯಲ್ಲಿ ಪೂಜೆ ನಡೆಯಲಿದೆ. ಫೆ. 8ರಿಂದ ಶ್ರೀ ಮಾರಿಕಾಂಬಾ ದೇವಿಯ ಮೂರ್ತಿಯನ್ನು ಗಂಡನ ಮನೆ ಆವರಣದಲ್ಲಿ ಕೂರಿಸಲಾಗುತ್ತದೆ. ಫೆ. 15ರವರೆಗೂ ಗಂಡನ ಮನೆ ಆವರಣದಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಉಡಿಸೇವೆ, ತುಲಾಭಾರ, ಸೇರಿದಂತೆ ಭಕ್ತರು ಹರಕೆ ಸಲ್ಲಿಸಲು ಜಾತ್ರಾ ಸಮಿತಿ ಪೂರಕ ವ್ಯವಸ್ಥೆ ಮಾಡಿದೆ. 

  • ಒಂಬತ್ತು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಪೂಜಾ ಕಾರ್ಯಗಳ ನಂತರ ಫೆ. 15 ರಂದು ರಾತ್ರಿ 10.30ಕ್ಕೆ ರಾಜಬೀದಿ ಉತ್ಸವ ನಡೆಯಲಿದೆ. ಶ್ರೀ ಮಾರಿಕಾಂಬಾ ದೇವಿಯನ್ನು ವನಕ್ಕೆ ಬಿಡಲಾಗುತ್ತದೆ. ರಾಜಬೀದಿ ಉತ್ಸವದಲ್ಲಿ ಪ್ರಸಿದ್ಧ ಜಾನಪದ ಕಲಾತಂಡಗಳು ಪಾಲ್ಗೊಳ್ಳಲಿವೆ.

ರಾತ್ರಿಯಿಂದಲೇ ದೇವರ ದರ್ಶನಕ್ಕೆ ಜನರ ಸಾಲು

ಮಾರಿಕಾಂಬಾ ಜಾತ್ರೆಯ ಮೊದಲ ದಿನದಂದು ತವರುಮನೆಯಲ್ಲಿ ಶ್ರೀ ಮಾರಿಕಾಂಬೆ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೋಮವಾರ ರಾತ್ರಿಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದರು. ಸೋಮವಾರ ರಾತ್ರಿ ದೇವಸ್ಥಾನದ ಆವರಣದಲ್ಲಿ ನೂರಾರು ಜನರು ಸೇರಿದ್ದರು. ಮಂಗಳವಾರ ಬೆಳಗಿನ ಜಾವ 1 ಗಂಟೆಯಿಂದಲೇ ಸರತಿ ಸಾಲು ಹೆಚ್ಚಾಗತೊಡಗಿತು. ಮಂಗಳವಾರ ಬೆಳಗ್ಗೆ ಪೂಜೆಯ ಸಂದರ್ಭದಲ್ಲಿ ದೇವರ ದರ್ಶನಕ್ಕೆ ನಿಂತಿದ್ದ ಸರದಿ ಸಾಲು ಸಾಗರ ಪಟ್ಟಣದ ಟೌನ್‌ಪೊಲೀಸ್ ಠಾಣೆ ದಾಟಿತ್ತು. ದೈವಜ್ಞ ಸಮಾಜದ ಯುವಕರು ಹಾಗೂ ಆನಂದ ಸಾಗರ ಟ್ರಸ್ಟ್ ವತಿಯಿಂದ ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ಚಹಾ, ಕಾಫಿ, ಬಾದಾಮಿ ಹಾಲನ್ನು ಉಚಿತವಾಗಿ ವಿತರಿಸಿದರು. ಜಾತ್ರೆಗೆ ಆಗಮಿಸಿದ್ದ ಸಾರ್ವಜನಿಕರಿಗೆ ಜಾತ್ರಾ ಸಮಿತಿಯಿಂದ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.