KoranaKote Krishna :ಒಂದೇ ಮಾತಲ್ಲಿ, ಕಾಡು ಸುಡುವಷ್ಟು ಸ್ಫೋಟಕಗಳನ್ನ ಹುಡುಕಿಕೊಟ್ಟಿದ್ದ ಆತ ! ಮಲೆನಾಡ ನಕ್ಸಲ್​ ಕಥನ ಜೆಪಿ ಬರೆಯುತ್ತಾರೆ!

Shimoga Naxal KoranaKote Krishna Story

KoranaKote Krishna :ಒಂದೇ ಮಾತಲ್ಲಿ, ಕಾಡು ಸುಡುವಷ್ಟು ಸ್ಫೋಟಕಗಳನ್ನ ಹುಡುಕಿಕೊಟ್ಟಿದ್ದ ಆತ ! ಮಲೆನಾಡ ನಕ್ಸಲ್​ ಕಥನ ಜೆಪಿ ಬರೆಯುತ್ತಾರೆ!
Shimoga Naxal KoranaKote Krishna Story

Shimoga Naxal KoranaKote Krishna Story ಒಂದೇ ಮಾತಲ್ಲಿ, ಕಾಡು ಸುಡುವಷ್ಟು ಸ್ಫೋಟಕಗಳನ್ನ ಹುಡುಕಿಕೊಟ್ಟಿದ್ದ ಆತ! ನಕ್ಸಲರ ಗುರುತೇ ಇಲ್ಲದ ರಾಜ್ಯದ ಪೊಲೀಸರಿಗೆ ಇಡೀ ತಂಡದ ವಿಳಾಸ ತಿಳಿಸಿದ್ದ! ಇಡೀ ರಾಜ್ಯದಲ್ಲಿಯೇ ಕೆಂಪು ಉಗ್ರರ ಮಗ್ಗಲು ಮುರಿದಿದ್ದ ಕೊರನ ಕೋಟೆ ಕೃಷ್ಣನ ಕಥೆಯಿದು! ಎಲ್ಲಿಯು ಸಿಗದ ಸ್ಟೋರಿ! ಮಲೆನಾಡ ನಕ್ಸಲ್​ ಕಥನ ಜೆಪಿ ಬರೆಯುತ್ತಾರೆ!

ಅನುಮಾನಸ್ಪದವಾಗಿ ಬಂಧಿತನಾದ ಆ ಯುವಕ ಕೊಟ್ಟ ಸುಳಿವು ನಕ್ಸಲರು ಅಡಗಿಸಿಟ್ಟಿದ್ದ ಡಂಪ್ಸ್ ಪತ್ತೆಯಾಗುವಂತೆ ಮಾಡ್ತು ಹೇಗೆ ಗೊತ್ತಾ?

ಆತನ ಬಂಧನದಿಂದ ಮುಂದೆ ನಕ್ಸಲರು ಹೇಗೆ ಸರಣಿ ಬಂಧನವಾದ್ರು,ಮಲೆನಾಡಿನಲ್ಲಿ ನಕ್ಸಲರ ಜಂಗಾಬಲವೇ ಕುಸಿಯುವಂತೆ ಮಾಡಿದ ಆ ಮಾಜಿ ನಕ್ಸಲ್ ಯಾರು? .

2003 ರಿಂದ 2009 ರವರೆಗೆ ಮಲೆನಾಡಿನಲ್ಲಿ ನಕ್ಸಲರು ಹಾಗು ಪೊಲೀಸರ ನಡೆ ತೀವ್ರ ಸಂಘರ್ಷ ಏರ್ಪಟ್ಟಿತ್ತು. ಪೊಲೀಸರು ಪ್ರತಿದಿನ ಕೂಂಬಿಂಗ್ ನಡೆಸುವುದು ಕಾಡಿನಲ್ಲಿ ಆ್ಯಂಬುಷ್​ ನಲ್ಲಿರುವುದು ಬಿಟ್ಟರೆ, ಪಶ್ಟಿಮಘಟ್ಟ ಪ್ರದೇಶದ ಕಾಡಿನಲ್ಲಿ ಸಕ್ರೀಯರಾಗಿದ್ದ ನಕ್ಸಲರ ಮುಖವನ್ನು ಪೊಲೀಸರು ನೋಡಿರಲಿಲ್ಲ.

ಯಾರು ಅನ್ನುವುದೇ ಗೊತ್ತಿರಲಿಲ್ಲ ಪೊಲೀಸರಿಗೆ!?

ಶಂಕಿತ ನಕ್ಸಲರ ಪೋಟೋಗಳನ್ನು ಅವರ ಮನೆಯಿಂದ ಸಂಗ್ರಸಿದ್ದ ಪೊಲೀಸರಿಗೆ ಆ ಸಂದರ್ಭದಲ್ಲಿ ಅವರ ಮುಖ ಹೇಗಿರಬಹುದು ಎಂಬ ಊಹೆ ಕೂಡ ಇರಲಿಲ್ಲ.

ಹಳೇ ಪೋಟೋಗಳಿಂದ ನಕ್ಸಲರನ್ನು ಗುರುತಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಅಲ್ಲದೆ ಹೊಸ ಮುಖಗಳೆಷ್ಟು ಕಾಡು ಸೇರಿವೆ ಎಂಬ ಲೆಕ್ಕಾಚಾರವಿರಲಿಲ್ಲ.

ಸಮಾಜದ ಮುಖ್ಯವಾಹಿನಿಯಲ್ಲಿದ್ದ ಯಾವ ವ್ಯಕ್ತಿಗಳು ಕಾಡಿನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿಗಳಿರಲಿಲ್ಲ.

ಎಷ್ಟೂ ಮಂದಿ ಸಂಘಟನೆ ತೊರೆದಿದ್ದಾರೆ. ಯಾರ್ಯಾರು ಎಲ್ಲಿದ್ದಾರೆಂಬ ಸ್ಪಷ್ಟ ಚಿತ್ರಣವಿರಲಿಲ್ಲ. ಎಲ್ಲವೂ ಕ್ರೂಡ್ ಮೆಥೆಡ್ ನಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಗಳೇ ಆಗಿದ್ದವು. ಕಾಡಿನಲ್ಲಿ ಹೋದ ಪುಟ್ಟ ಬಂದಪುಟ್ಟ ಎಂಬಂತಿದ್ದವು ಕೂಂಬಿಂಗ್ ಕಾರ್ಯಾಚರಣೆ.

ವಿಪಕ್ಷಗಳಿಗೆ ಅಸ್ತ್ರವಾಗಿತ್ತು!?

ಇತ್ತ ನಕ್ಸಲರು ಪೊಲೀಸ್ ಮಾಹಿತಿದಾರರನ್ನು ಕೊಂದ ಪ್ರಕರಣಗಳು ಪ್ರತಿಪಕ್ಷಗಳಿಗೆ ಅಸ್ತ್ರವಾಗಿದ್ದವು. ಆಡಳಿತ ಪಕ್ಷಕ್ಕೆ ಮಲೆನಾಡಿನ ನಕ್ಸಲರು ದೊಡ್ಡ ಸೆಟ್ ಬ್ಯಾಕ್ ಆಗಿದ್ದರು.

ಇವೆಲ್ಲದರ ನಡುವೆ ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸರಿಗೆ ಆ ಯುವಕ ಬಂಧನವಾಗಿದ್ದು,ಅದು ನಕ್ಸಲರ ಅಭಿಮನ್ಯು ಕೋಟೆ ಭೇದಿಸಿದಂತೆ ಮಾಡ್ತು.ಆತನ ಹೆಸರೇ ಕೋರನಕೋಟೆ ಕೃಷ್ಣ.

ಕಾಡಿನ ಹೆಜ್ಜೆಗುರುತುಗಳನ್ನು ಬಲ್ಲ ಟಾರ್ಜನ್ ಕೃಷ್ಣ

ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕಿನ ಗಡಿಭಾಗದಲ್ಲಿರುವ ಕೊರನಕೋಟೆ ಗ್ರಾಮ ಕೃಷ್ಣನ ಜನ್ಮಸ್ಥಳ. ದಲಿತ ಸಮುದಾಯದಲ್ಲಿ ಹುಟ್ಟಿದ ಕೃಷ್ಣ ಮನೆಯ ಬಡತನದ ಕಾರಣ ಶಾಲೆಯ ಮೆಟ್ಟಲನ್ನೇ ಹತ್ತಲಿಲ್ಲ.

ಅಕ್ಕಪಕ್ಕ ಗ್ರಾಮದ ತೋಟದ ಮನೆಗಳಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ. ಸಣ್ಣ ವಯಸ್ಸಿನಲ್ಲಿ ಸ್ವಲ್ಪ ಕೆಟ್ಟತನವನ್ನು ಮೈಗೂಡಿಸಿಕೊಂಡಿದ್ದ. ಸಣ್ಣಪುಟ್ಟ ಅಪರಾದ ಕೃತ್ಯಗಳನ್ನು ಈತ ಎಸಗಿದ್ದ. ಎಳೆ ಕರುಗಳನ್ನು ಕಡಿದು ಜಿಂಕೆ ಮಾಂಸವೆಂದು ಜನರನ್ನು ನಂಬಿಸಿ ಒದೆಯನ್ನು ತಿಂದು,ಕೆಲಸವನ್ನು ಕಳೆದುಕೊಂಡಿದ್ದ.

ಕಾಡಿನಲ್ಲಿ ಸಿಕ್ಕಿದ್ದರು ಅವರು!?

ಸುತ್ತಮುತ್ತ ಉತ್ತಮ ಹೆಸರು ಗಳಿಸಲು ಆಗದ ಕೃಷ್ಣ ಕಾಡಿನಲ್ಲಿಯೇ ಬಹುಕಾಲದವೆರೆಗೆ ಇರುತ್ತಿದ್ದ.

ಕಾಡಿನಲ್ಲಿ ಸಿಕ್ಕ ಹಣ್ಣುಹಂಪಲು ಗೆಡ್ಡೆ ಗೆಣಸು ಮೀನು ಹಿಡಿದು ಬದುಕನ್ನು ಹೇಗೋ ದೂಡುತ್ತಿದ್ದ,

ಈತನಿಗೆ ಕಾಡಿನ ಪರಿಚಯವಿದ್ದ ಕಾರಣಕ್ಕೆ ಕಾಡಿನ ಮೂಲಕ ಉಡುಪಿ, ಚಿಕ್ಕಮಗಳೂರು ,ಮಂಗಳೂರು ಶಿವಮೊಗ್ಗ ಗಡಿಭಾಗಗಳನ್ನು ಕಾಡಿನಲ್ಲಿ ನಡೆದೇ ಮುಟ್ಟುತ್ತಿದ್ದ. ಇದೇ ಇವನ ಸ್ಪೆಷಲ್ ಕ್ಯಾರೆಕ್ಟರ್.

ಕಾಡಿನ ನಿಗೂಢ ಅರ್ಥ ಮಾಡಿಕೊಂಡಿದ್ದ ಕೊರನಕೋಟೆ ಕೃಷ್ಣ

ಏಕೆಂದರೆ ಆಗುಂಬೆ ಆಸುಪಾಸಿನ ಕಾಡಿನ ಪ್ರದೇಶ ದಟ್ಟ ಅರಣ್ಯವನ್ನು ಹೊಂದಿದೆ..ಒಂದು ಹತ್ತು ಹೆಜ್ಜೆ ಕಾಡಿನಲ್ಲಿ ನಡೆದು ಹಿಂದೆ ನೋಡಿದರೆ ನಾವು ಬಂದ ಹಾದಿಯೇ ಏನೆಂದರೆ ಏನೂ ಗೊತ್ತಾಗದ ಹಾದಿಯಾಗುತ್ತದೆ.

ಹೀಗೆ ಕಾಡಿನಲ್ಲಿ ಟ್ರಕ್ಕಿಂಗ್ ಮಾಡಲು ಹೋದ ಅದೆಷ್ಟೋ ಪ್ರವಾಸಿಗರು ದಾರಿತಪ್ಪಿ ಜೀವವನ್ನೇ ಕಳೆದುಕೊಂಡ ಉದಾಹರಣೆಗಳಿವೆ.

ಅಂತದ್ರಲ್ಲಿ ಒಂದೇ ದಿನದಲ್ಲಿ ನಾಲ್ಕು ಜಿಲ್ಲೆಗಳ ಗಡಿಗಳನ್ನು ಕಾಡಿನಲ್ಲಿ ಹೊಸ ಕಾಲುದಾರಿಯಲ್ಲಿಯೇ ನಡೆದು ಅದನ್ನು ಮುಟ್ಟಿಬರುವ ಚಾಣಾಕ್ಷತನವನ್ನು ಮೈಗೂಡಿಸಿಕೊಂಡಿದ್ದ ಕೃಷ್ಣ.

ಕಾಡಿನ ಮಾರ್ಗ ಗೊತ್ತಿದ್ದವರಿಗಾಗಿ ಹುಡುಕಾಡುತ್ತಿದ್ದ ನಕ್ಸಲರು.

ವಿಕ್ರಂ ಗೌಡನ ತಂಡಕ್ಕೆ ಕಾಡಿನಲ್ಲಿ ಎದುರಾದ ಕೃಷ್ಣ

ಹೀಗೆ ಕೃಷ್ಣ ಕಾಡಿನಲ್ಲಿ ಓಡಾಡುವ ಹೊತ್ತಿಗೆ ಪಶ್ಚಿಮಘಟ್ಟ ಪ್ರದೇಶದಲ್ಲಿ ನಕ್ಸಲರ ಪ್ರಾಬಲ್ಯ ಕೂಡ ಹೆಚ್ಚಿತ್ತು. ತುಂಗಾ ಭದ್ರಾ ನೇತ್ರಾವತಿ ವರದಾ ಎಂದು ತಂಡಗಳನ್ನು ಕಟ್ಟಿಕೊಂಡು ಬಿ.ಜಿ ಕೃಷ್ಣಮೂರ್ತಿ ನೇತ್ರತ್ವದಲ್ಲಿ ನಕ್ಸಲರು ಕಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದ ಕಾಲ.

ಮಲೆನಾಡಿನ ಹುಡುಗ ಹುಡಿಗಿಯರು ನಕ್ಸಲರಾದರೂ ಅಷ್ಟೊಂದು ಕಾಡಿನ ಪರಿಚಯವಿರಲಿಲ್ಲ.ತಮ್ಮ ಸುತ್ತಮುತ್ತ ಪ್ರದೇಶದ ಬಗ್ಗೆ ಮಾತ್ರ ಅನುಭವ ಹೊಂದಿದ್ದರು. ಹೀಗಾಗಿ ಜಿಲ್ಲಾ ಗಡಿಭಾಗವನ್ನು ದಾಟುವಾಗ ಕಾಡಿನಲ್ಲಿ ದಾರಿ ತಪ್ಪುವ ಪ್ರಸಂಗಗಳು ಎದುರಾಯಿತು.

ಇದು ನಕ್ಸಲರಿಗೆ ದೊಡ್ಡ ತಲೆನೋವಾಯಿತು.ನಾಲ್ಕು ದಿಕ್ಕುಗಳಿಂದ ಪೊಲೀಸರು ಕೂಂಬಿಂಗ್ ನಡೆಸುತ್ತಿದ್ದರೆ ನಕ್ಸಲರಿಗೆ ಕಾಡಿನಲ್ಲಿ ಓಡಾಡುವುದೇ ಕಷ್ಟವಾಗಿತ್ತು.

ಪೊಲೀಸರು ತಕ್ಷಣಕ್ಕೆ ಎದುರಾದರೆ ತಪ್ಪಿಸಿಕೊಳ್ಳಲು ಮಾರ್ಗಗಳನ್ನು ಹುಡುಕಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಪರಿಸ್ಥಿತಿಗಳಿಂದ ಪಾರಾಗಲು ನಕ್ಸಲರು ಎಷ್ಟೇ ನಕಾಶೆಗಳನ್ನು ಮಾಡಿಕೊಂಡು,ಕಂಪಾಸ್ ಹಿಡಿದು ಕಾಡಿನಲ್ಲಿ ಸಂಚರಿಸಿದರೂ,ದಿಕ್ಕುತಪ್ಪುವುದು ಮಾತ್ರ ತಪ್ಪುತ್ತಿರಲಿಲ್ಲ.

2006-07 ರಲ್ಲಿ ಎನ್​ಕೌಂಟರ್​!

ಹೀಗಾಗಿಯೇ 2006-07 ರಲ್ಲಿ ಪೊಲೀಸರು ಮತ್ತು ನಕ್ಸಲರು ಕಾಡಿನಲ್ಲಿ ಮುಖಾಮುಖಿಯಾದ ಸಂದರ್ಭದಲ್ಲಿ ನಕ್ಸಲರು ಗುಂಡೇಟು ತಿನ್ನುವಂತಾಯಿತು.

ಎನ್ಕೌಂಟರ್ ಗಳಲ್ಲಿ ಸಾವನ್ನಪ್ಪಬೇಕಾಯಿತು. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕೊರನಕೋಟೆ ಕೃಷ್ಣ ಸಿಕ್ಕಿದ್ದ, ಆ ಕಾಡಿನಲ್ಲಿ ಕೃಷ್ಣ ಸಣ್ಣ ಹಳ್ಳದಲ್ಲಿ ಮೀನು ಹಿಡಿದು ಬರುತ್ತಿದ್ದ, ಆಗ ಅಲ್ಲಿ ನಕ್ಸಲ್ ವಿಕ್ರಂ ಗೌಡನ ತಂಡ ಎದುರಾಯಿತು.

ಮೀನನ್ನು ಕೊಂಡುಕೊಂಡ ನಕ್ಸಲರು ಸಂಘಟನೆಗೆ ಸೇರುವಂತೆ ಪ್ರೇರೇಪಿಸಿದರು. ಆದರೆ ನಕ್ಸಲ್ ಸಂಘಟನೆಯ ಆಳ ಉದ್ದಗಳನ್ನು ಅರಿಯುವಷ್ಟು ಬುದ್ದಿವಂತನಲ್ಲದ ಕೃಷ್ಣ ತಕ್ಷಣ ಹೂ ಅಂದುಬಿಟ್ಟ.

ನಕ್ಸಲರಿಗೆ ಕಾಡಿನ ಮಾರ್ಗ ಪರಿಚಯಿಸಿದ ಕೃಷ್ಣ,

ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿ ಸಹಾಯಕನಾದ

ನಕ್ಸಲ್ ಸಂಘಟನೆಗೆ ಸೇರಿಕೊಂಡ ಕೃಷ್ಣ ತನ್ನದೆ ಆದರೀತಿಯಲ್ಲಿ ಕಾಡಿನ ರಹದಾರಿಗಳನ್ನು ತೋರಿಸಿಕೊಟ್ಟ.

ಗುಡ್ಡದ ಮೇಲ್ಬಾಗ,ತಳಭಾಗ,ನೀರಿನ ಸೆಲೆಯಿರುವ ಜಾಗ,ರಕ್ಷಣಾ ಸ್ಥಳಗಳು ತಕ್ಷಣಕ್ಕೆ ಅಡಗಿಕೊಳ್ಳಬಹುದಾದ ಎಲ್ಲಾ ಮಾರ್ಗಗಳ ಪರಿಚಯ ಮಾಡಿಕೊಟ್ಟ.

ಹೀಗಾಗಿಯೇ ನಕ್ಸಲ್ ನಾಯಕ ಬಿ.ಜಿ ಕೃಷ್ಣನ ಅಸಿಸ್ಟೆಂಟ್ ಕೂಡ ಆಗಿಬಿಟ್ಟ.ಆತನ ಲ್ಯಾಪ್ ಟಾಪ್,ಬಂದೂಕು ಹೊತ್ತು ಮಾರ್ಗ ತೋರಿಸುತ್ತಿದ್ದ.

ನಕ್ಸಲ್ ಟೀಮ್ ಹಗಲು ರಾತ್ರಿ ಸಂಚರಿಸುತ್ತಿದ್ದರೆ ಕೃಷ್ಣನೇ ಮುಂದಾಳಾಗಿರುತ್ತಿದ್ದ. ಇಂತ ಕೃಷ್ಣ ನಮ್ಮ ಸಂಘಟನೆಗೆ ದೊಡ್ಡ ಅಸೆಟ್ ಎಂದು ಭಾವಿಸಿದ ನಕ್ಸಲರು ಆತನಿಗೆ ನಕ್ಸಲ್ ಸಾಹಿತ್ಯವನ್ನು ಭೋದಿಸಲು ಮುಂದಾಗುತ್ತಾರೆ.

ಓದು ಬರಹವನ್ನು ಕಲಿಸಲು ಪ್ರಯತ್ನಿಸುತ್ತಾರೆ.ಆದರೆ ಕೃಷ್ಣನಿಗೆ ಕಲಿಯುವ ಮನಸ್ಸಿರಲಿಲ್ಲ.ಹೀಗಾಗಿ ಅವನಿಗೆ ಕ್ಯಾಂಪ್ ಗಳಲ್ಲಿ ಸೆಂಟ್ರಿ ಪ್ರೆಂಟ್ ಅಂಡ್ ರೇರ್ ಗಾರ್ಡ್,ಅಡುಗೆ ಕೆಲಸ ಮತ್ತು ಟೆಂಟ್ ಹಾಕುವ ಕೆಲಸ ನೀಡಲಾಗುತ್ತಿತ್ತು.

ತಾಯಿ ಸತ್ತಾಗಲೂ ಕ್ಯಾಂಪ್ ನಿಂದ ಬಿಡದ ನಕ್ಸಲರು

ನಕ್ಸಲರ ದಿನಚರಿಗೆ ಒಗ್ಗಿಕೊಳ್ಳದ ಕೃಷ್ಣ.

ಕೃಷ್ಣ ಕೊರನಕೋಟೆ ,ಮೇಲುಸಂಕ ಗ್ರಾಮಕ್ಕೆ ಆಗ್ಗಿಂದಾಗ್ಗೆ ಬಂದೂಕು ಹಿಡಿದು ಕೊಂಡೆ ಬರುತ್ತಿದ್ದ ಇವನನ್ನು ಸ್ಥಳೀಯರು ನಕ್ಸಲ್ ಸಂಘಟನೆಯಲ್ಲಿ ಗುರುತಿಸುಕೊಂಡಿರುವುದನ್ನು ಖಾತರಿ ಪಡಿಸಿಕೊಂಡು, ಪೊಲೀಸರಿಗೆ ಅನುಮಾನ ವ್ಯಕ್ತಪಡಿಸಿದರು.

ಹೀಗೆ ಕಾಡಿನಲ್ಲಿ ನಕ್ಸಲರೊಂದಿಗಿದ್ದ ಕೃಷ್ಣನಿಗೆ ಬಹುಕಾಲ ಅವರೊಂದಿಗೆ ಇರಲು ಸಾಧ್ಯವಾಗಲಿಲ್ಲ. ಪ್ರತಿದಿನ ನಕ್ಸಲರು ಏಳುತ್ತಿದ್ದಂತೆ ಪ್ರಾರಂಭವಾಗುವ ದಿನಚರಿಗೆ ಕೃಷ್ಣ ಹೊಂದಿಕೊಳ್ಳಲಾಗುತ್ತಿರಲಿಲ್ಲ.

ಕ್ಯಾಂಪ್ ಗಳಲ್ಲಿದ್ದ ಬಹುತೇಕ ಮಂದಿಗೆ ಸಂಗಾತಿಗಳಿದ್ದರೂ,ಒಬ್ಬಂಟಿಗನಾದ ಕೃಷ್ಣನಿಗೆ ನಕ್ಸಲ್ ಸಿದ್ದಾಂತಕ್ಕಿಂತಲೂ, ಎಣ್ಣೆ ಬೀಡಿ ಸೇದುವುದು. ಕಾಡಿನಲ್ಲಿ ಸ್ವಚ್ಚಂದವಾಗಿ ವಿಹರಿಸುವುದೇ ಇಷ್ಟವಾಗಿತ್ತು.

ಒಮ್ಮೆ ಕೃಷ್ಣನ ತಾಯಿ ತೀರಿಕೊಂಡಾಗಲೂ,ಕ್ಯಾಂಪ್ ನಿಂದ ಆತನಿಗೆ ಹೋಗಲು ಬಿಟ್ಟಿರಲಿಲ್ಲ.ಇದರಿಂದ ಕೃಷ್ಣ ಬೇಸರಗೊಂಡಿದ್ದ.ಕೃಷ್ಣನಿಗೆ ನಕ್ಸಲರು ಕಿರಣ ಎಂದು ಹೆಸರಿಟ್ಟಿದ್ದರು.

ಒಂದು ದಿನ ಇದ್ದಕ್ಕಿದ್ದ ಹಾಗೆ ಕೃಷ್ಣ ಮನೆಗೆ ಹೋಗಿ ಬರುವುದಾಗಿ ಹೇಳಿದ.ಸಕಾಲಕ್ಕೆ ವಾಪಸ್ಸಾಗುವಂತೆ ನಕ್ಸಲರು ಒಂದಿಷ್ಟು ಹಣ ನೀಡಿ ಕಳಿಸಿದ್ದರು.

ತೀರ್ಥಹಳ್ಳಿಯಲ್ಲಿ ಸಿನಿಮಾ ನೋಡಿ ವಾಪಸ್ಸಾಗುವಾಗ ಅಂದರ್ ಆದ ಕೃಷ್ಣ

ಕೃಷ್ಣ ಕಾಡಿನಿಂದ ಸೀದಾ ತೀರ್ಥಹಳ್ಳಿಯ ಅಣ್ಣನ ಮನೆಗೆ ಬರ್ತಾನೆ. ಕೃಷ್ಣ ಬಂದಿರುವ ಮಾಹಿತಿ ಆ ಒಬ್ಬ ಪೊಲೀಸ್ ಕಾನ್ ಸ್ಟೆಬಲ್ ಗೆ ಮಾತ್ರ ನಿಖರವಾಗಿ ಮಾಹಿತಿದಾರನಿಂದ ಸಿಕ್ಕಿರುತ್ತೆ.

ಮಳೆಯಲ್ಲೇ ಆಗುಂಬೆಯಿಂದ ತೀರ್ಥಹಳ್ಳಿಗೆ ಬೈಕ್ ನಲ್ಲಿ ಬರುವ ಆ ಪೊಲೀಸ್ ಪೇದೆಗೆ ಅಂದಿನ ಕ್ರೈಂ ಸಬ್ ಇನ್ಸ್ ಪೆಕ್ಟರ್ ಅವಮಾನ ಮಾಡಿ ಕಳಿಸುತ್ತಾರೆ.

ಆದರೂ ಬೆನ್ನು ಬಿಡದ ಆ ಪೇದೆ, ಕೃಷ್ಣನನ್ನು ಹಗಲುರಾತ್ರಿ ಹದ್ದಿನ ಕಣ್ಣಿಟ್ಟು ಕಾದಿರುತ್ತಾನೆ. ಇದೇ ಸಂದರ್ಭದಲ್ಲಿ ಹೊಸನಗರದಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ಪ್ರಹ್ಲಾದ್​​ಗೆ ಮಾಹಿತಿದಾರನೊಬ್ಬನಿಂದ ಕೃಷ್ಣ ಕಾಡು ತೊರೆದು ತೀರ್ಥಹಳ್ಳಿಯಲ್ಲಿ ಓಡಾತ್ತಿರುವ ಮಾಹಿತಿ ಸಿಗುತ್ತೆ.

ಬೆನ್ನಟ್ಟಿ ಹಿಡಿದ್ರು ಕೃಷ್ಣನನ್ನು!

ತಕ್ಷಣ ಅಲರ್ಟ್ ಆಗುವ ಪ್ರಹ್ಲಾದ್,ತೀರ್ಥಹಳ್ಳಿ ಸಬ್ ಇನ್ಸ್ ಪೆಕ್ಟರ್ ರಾಜುರವರಿಗೆ ಅಲರ್ಟ್ ಮಾಡ್ತಾರೆ. ಎಸ್ಸೈ ರಾಜು, ಠಾಣೆಯಲ್ಲಿದ್ದ ಸುಧಾಕರ್,ರವಿ ನಾಯಕ್, ಗಿರೀಶ್ ಪೊಲೀಸ್ ಸಿಬ್ಬಂದಿಗಳ ತಂಡ ರೆಡಿ ಮಾಡ್ತಾರೆ.

ಮತ್ತೆ ರಾಜು ಪ್ರಹ್ಲಾದ್ ಸಹ ಕೃಷ್ಣನ ಬೆನ್ನಹಿಂದೆ ಬಿದ್ದಿದ್ದ ಪೇದೆಯ ಸಹಾಯ ಪಡಿತಾರೆ. ಮೊದಲೇ ನಕ್ಸಲ್ ಆಗಿದ್ದರಿಂದ ವೆಪನ್ ಇದ್ರೆ ಅನ್ನೋ ಭಯದಲ್ಲೇ ಎಲ್ಲರೂ ಸುತ್ತುವರಿದು ಕೃಷ್ಣನನ್ನು ಬಂಧಿಸುತ್ತಾರೆ.

ಯಾವಾಗ ಕೃಷ್ಣ ಪೊಲೀಸರ ಅತಿಥಿಯಾದನೋ,ಆರಂಭದಲ್ಲಿ ನಾನು ಕಿರಣ ಅಂತಿದ್ದವನು ನಂತರ ನಾನೇ ಕೃಷ್ಣ ಎನ್ನುವಂತೆ ಮಾಡಿದ್ರು ತೀರ್ಥಹಳ್ಳಿ ಇನ್ ಸ್ಪೆಕ್ಟರ್ ಕಲ್ಲೇಶಪ್ಪ.

ಆಗ ತಾನೆ ಪಾವಗಡದಿಂದ ವರ್ಗಾವಣೆಯಾಗಿ ಬಂದಿದ್ದ ಅವರಿಗೆ ಅಲ್ಲಿನ ನಕ್ಸಲ್ಸ್​ ಬಗ್ಗೆ ಸಾಕಷ್ಟು ಮಾಹಿತಿಇತ್ತು.

ಹೊರಬಿತ್ತು ನಕ್ಸಲ್​ ಡಂಪ್!

ನಕ್ಸಲರ ಡಂಪ್ಸ್ ಬಗ್ಗೆ ಕಲ್ಲೇಶಪ್ಪರಿಗೆ ಮಾಹಿತಿ ಇದ್ದ ಕಾರಣಕ್ಕೆ ಅವರು ಕೃಷ್ಣನಿಗೆ ಕಾಡಿನಲ್ಲಿ ಎಲ್ಲಿ ಡಂಪ್ಸ್ ಬಚ್ಚಿಟ್ಟಿದ್ದಿರೋ ಹೇಳೋ ಮಗನೇ ಅಂತಿದ್ದ ಹಾಗೆ ಕೃಷ್ಣ ಎಲ್ಲವನ್ನು ಬಾಯಿ ಬಿಟ್ಟಿದ್ದ. ಆತ ವಿಚಾರಣೆಯಲ್ಲಿ ಬಾಯ್ಬಿಟ್ಟ ಸತ್ಯವನ್ನು ಕೇಳಿ ಪೊಲೀಸ್ರು ಸಹ ಬೆಚ್ಚಿಬಿದ್ರು.

ಆಗುಂಬೆಯ ಕಾಡಲ್ಲಿ ಎರಡು ಡಂಪ್ಸ್ ಪತ್ತೆ ಮಾಡಿ ಪೊಲೀಸರಿಗೆ ತೋರಿಸಿದ

ಆಗಸ್ಟ್ 2008 ರಲ್ಲಿ ಕೊರನಕೋಟೆ ಕೃಷ್ಣನ ಬಂಧನವಾಗುತ್ತಿದ್ದಂತೆ ಪಶ್ಚಿಮಘಟ್ಟದಲ್ಲಿ ಸಕ್ರಿಯರಾಗಿರುವ ನಕ್ಸಲರ ಮಾಹಿತಿಯನ್ನು ಪೊಲೀಸರಿಗೆ ನೀಡಿದ.

ಕೃಷ್ಣ ನೀಡಿದ ಸುಳಿವು ನಕ್ಸರಿಗೆ ಎಷ್ಟು ಹಿನ್ನಡೆಯಾಯಿತೆಂದರೆ ಅವನು ನೀಡಿದ ಸುಳಿವು ಅಂತಿದ್ದಲ್ಲ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಎಲ್ಲಾ ನಕ್ಸಲರಿಗಾಗುವಷ್ಟು ಶಸ್ತ್ರಾಸ್ತ್ರಗಳನ್ನು ಹುದಿಗಿಟ್ಟ ಜಾಗವನ್ನು ಆತ ತೋರಿಸಿದ್ದ,

ಎಸ್ಪಿ ಮುರುಗನ್ ನೇತ್ರತ್ವದ ತಂಡ ಈತನ ಸುಳಿವಿನ ಮೇರೆಗೆ ಕಾಡಿನಲ್ಲಿ ಎರಡು ದೊಡ್ಡ ಡಂಪ್ಸ್ ಗಳನ್ನು ಪತ್ತೆ ಮಾಡಿತು.

ಡಂಪ್ಸ್​ನಲ್ಲಿತ್ತು ಭಾರೀ ಪ್ರಮಾಣದ ಮಾರಕಾಸ್ತ್ರಗಳು

ಡಂಪ್ಸ್ ನಲ್ಲಿ ಎಕೆ 45,ಎಸ್.ಎಲ್.ಆರ್ ಗನ್ ಮದ್ದು ಗುಂಡುಗಳು ಡಿಟೋನೆಟರ್ ಗ್ರಾನೈಡ್,ವೈರ್ ಲೆಸ್ ಸೆಟ್,ಆರ್.ಡಿ.ಎಕ್ಸ್ ನಂತ ಸ್ಪೋಟಕಗಳಿದ್ದವು.

ಡಂಪ್ಸ್ ಪತ್ತೆ ಮೂಲಕ,ಪೊಲೀಸರು ನಕ್ಸಲರ ಶಸ್ತ್ರಾಗಾರಕ್ಕೆ ಕೈ ಹಾಕಿದರು.ಇದು ನಕ್ಸಲರಿಗಾದ ಮೊದಲ ಹಿನ್ನಡೆಯಾಯಿತು..

ನಂತರ ಕೃಷ್ಣ ನಕ್ಸಲರ ಸಂಪೂರ್ಣ ಚಿತ್ರಣವನ್ನು ಪೊಲೀಸರ ಬಳಿ ಎಳೆಎಳೆಯಾಗಿ ಬಿಡಿಸಿಟ್ಟ.

ಪಶ್ಚಿಮಘಟ್ಟದಲ್ಲಿ ನಕ್ಸಲರ ಆಡಳಿತ ವ್ಯವಸ್ಥೆ, ಹಣಕಾಸು ನಿರ್ವಹಣೆ ,ಶಸ್ತ್ರಾಸ್ತ್ರ ಪೂರೈಕೆ ಮತ್ತು ಬಳಕೆ, ಶಿಸ್ತು,ಮತ್ತು ಆಹಾರ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ.

ಕೃಷ್ಣನ ನಂತರ ಸರಣಿ ರೂಪದಲ್ಲಿ ಬಂಧನಕೊಳ್ಳಗಾದ ಶಂಕಿತ ನಕ್ಸಲರು.

ಪ್ರಮುಖ ಪೊಲೀಸರಿಗೆ ಸೆರೆಸಿಕ್ಕ ಕೃಷ್ಣನ ಮಾಹಿತಿಯಿಂದ ಪೊಲೀಸರು ನಕ್ಸಲರ ಶಸ್ತ್ರಗಾರಕ್ಕೆ ಕೈ ಹಾಕುವ ಮೂಲಕ ದೊಡ್ಡ ಪೆಟ್ಟನ್ನೇ ನೀಡಿದ್ದರು.

ನಂತರದಲ್ಲಿ ಈತ ನೀಡಿದ ಸುಳುವಿನ ಮೇರೆಗೆ ಪ್ರಮುಖ ಶಂಕಿತ ಬಂಧನವಾಯಿತು. ಆತ ನೀಡಿದ ಮಾಹಿತಿ ಸಮಾಜದ ಮುಖ್ಯವಾಹಿನಿ ಮೇಲೆ ಪೊಲೀಸರು ಹದ್ದಿನ ಕಣ್ಣಿಡುವಂತೆ ಮಾಡಿತು.

ಬಂಧನಕ್ಕೊಳಗಾದ ಶಂಕಿತ ನಕ್ಸಲರು ನೀಡಿದ ಮಾಹಿತಿಯ ಆಧಾರದಲ್ಲಿ ಕಾರ್ಯಪ್ರವೃತ್ತರಾಗಿರುವ ಪೊಲೀಸರು ನಕ್ಸಲರ ಬುಡಕ್ಕೆ ಕೈಹಾಕಿದರು.

ಕೃಷ್ಣನನ್ನು ಬಂಧಿಸಿದರೂ ಆತನನ್ನೆ,ನಕ್ಸಲರ ವಿರುದ್ಧ ಪ್ರಮುಖ ಸಾಕ್ಷಿಯನ್ನಾಗಿ ಮಾಡಿಕೊಂಡರು. ಪೊಲೀಸರೆ ಖುದ್ದು ನಿಂತು ನ್ಯಾಯಾಲಯದಲ್ಲಿ ಕೃಷ್ಣನಿಗೆ ಜಾಮೀನು ಕೊಡಿಸಿದರು.

ನಕ್ಸಲರು ಕಾಡಿನಲ್ಲಿಲ್ಲ..ನಾಡಿನಲ್ಲೇ ಬೀಡುಬಿಟ್ಟಿದ್ದಾರೆಂಬ ಸತ್ಯ ಗೊತ್ತಾಗುವಂತೆ ಮಾಡಿದ್ದೇ ಕೃಷ್ಣ
ಕೃಷ್ಣನ ಮಾಹಿತಿಯಿಂದ ಸಂಘಟನೆ ತೊರೆದು ಪಟ್ಟಣ ಸೇರಿದ್ದ ಶಂಕಿತ ನಕ್ಸಲರು ಬಂಧನಕ್ಕೊಳಗಾದರು. ಕವಲ ಒಂದು ವರ್ಷದಲ್ಲಿ ಸಾಕಷ್ಟು ಶಂಕಿತರು ಬಂಧನವಾದರು. ಅವರ ಹೆಸರುಗಳನ್ನು ಗೌಪ್ಯವಾಗಿ ಇಡಲಾಗಿದೆ.

ನಕ್ಸಲ್ ಪ್ಯಾಕೇಜ್ ನಲ್ಲಿ ಕೃಷ್ಣನಿಗೆ ಒಲಿದ ಬಂಪರ್

ಕೊರನಕೋಟೆ ಕೃಷ್ಣನ ಬಂಧನದ ನಂತರ ಪೊಲೀಸರಿಗೆ ಶುಕ್ರದೆಸೆ ಶುರುವಾಯಿತು. ಎಸ್ಸೈ ಇನ್ಸ್ ಪೆಕ್ಟರ್ ಎಸ್ಪಿ ಹೀಗೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಸ್ವರ್ಣ ಪದಕ ಲಭಿಸಿತು.

ಮುರುಗನ್ ಗು ಪ್ರಶಸ್ತಿ ಪುರಸ್ಕಾರಗಳ ಸುರಿಮಳೆ ಹರಿಯಿತು. ಪೊಲೀಸ್ ಇಲಾಖೆಗೆ ನಕ್ಸಲರ ಸಾಕಷ್ಟು ಮಾಹಿತಿ ನೀಡಿದ ಕೃಷ್ಣನಿಗೆ ಎನಾದರೂ ಒಳ್ಳೆಯದು ಮಾಡಬೇಕೆಂಬ ಸಂಕಲ್ಪ ಇಲಾಖೆಗಿತ್ತು.

ಹೀಗಾಗಿಯೇ ನಕ್ಸಲ್ ಪಾಕೇಜ್ ನಲ್ಲಿ ಹೆಚ್ಚಿನ ನೆರವನ್ನು ಆತನಿಗೆ ನೀಡಲಾಯಿತು. 2012 ರಲ್ಲಿ ಅಂದಿನ ಪೊಲೀಸ್ ಮಹಾನಿರ್ದೇಶಕ ಎ.ಆರ್.ಇನ್ ಪಂತ್​ ಮುಂದೆ ಶರಣಾಗತಿ ಪ್ಯಾಕೇಜ್ ನಲ್ಲಿ ಕೃಷ್ಣ ಶರಣಾಗತನಾದ.

ಸಮಾರಂಭದಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಆಂತರಿಕ ಗುಪ್ತದಳದ ಎಡಿಜಿಪಿ ಹರ್ಷವರ್ಧನ್ ರಾಜು, ಎ.ಎನ್.ಎಫ್ ಮುಖ್ಯಸ್ಥ ಅಲೋಕ್ ಕುಮಾರ್ ಪೂರ್ವ ವಲಯ ಐಜಿ ಸಂಜಯ್ ಸಹಾಯ್, ಸೇರಿದಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ಶಿವಮೊಗ್ಗದ ಹೊರವಲಯದಲ್ಲಿ ಎರಡು ಎಕರೆ ಭೂಮಿ,ಆಶ್ರಯ ಮನೆ,ಒಂದು ಲಕ್ಷ ರೂಪಾಯಿ ಚೆಕ್ ,ಬ್ಯಾಂಕ್ ಸಾಲಕ್ಕೆ ಷೂರಿಟಿ ಸೇರಿದಂತೆ ಹತ್ತುಹಲವು ಸವಲತ್ತುಗಳನ್ನು ಕೃಷ್ಣ ತನ್ನದಾಗಿಸಿಕೊಂಡ.

ಉತ್ತಮ ಬದುಕು ಕಟ್ಟಿಕೊಳ್ಳಲು ಈವರೆಗೂ ಸಾಧ್ಯವಾಗಿಲ್ಲ

ನಕ್ಸಲ್ ಶರಣಾಗತಿ ಪ್ಯಾಕೇಜ್ ನಲ್ಲಿ ಲಕ್ಷಾಂತರ ರೂಪಾಯಿ ಆಸ್ತಿಗಳಿಸಿದ ಕೃಷ್ಣನಿಗೆ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಈವರೆಗೂ ಸಾಧ್ಯವಾಗಲಿಲ್ಲ.

ಆತನಿಗೆ ಸರ್ಕಾರ ನೀಡಿದ್ದ ಎರಡು ಜಮೀನು ಈವರೆಗೂ ದಕ್ಕಿಲ್ಲ.ಇದಲ್ಲದೆ ಕೃಷ್ಣನಿಗೆ ಮದುವೆ ಆಗಿ ಇಬ್ಬರು ಮಕ್ಕಳಿದ್ದಾರೆ. ನ್ಯಾಯಾಲಯದಲ್ಲಿದ್ದ ಉಳಿದ ಪ್ರಕರಣಗಳಲ್ಲಿ ಕೃಷ್ಣ ಮತ್ತೆ ಜೈಲುವಾಸ ಅನುಭವಿಸುತ್ತಿದ್ದಾನೆ.
ಶಂಕಿತ ನಕ್ಸಲರೆಂಬ ಹಣೆಪಟ್ಟೆ ಕಳಚಿದೆ.

ಉತ್ತಮ ಬದುಕು ಕಟ್ಟಿಕೊಂಡ ಬೆಟ್ಟದ ಹೂವುಗಳು.

ಪಶ್ಚಿಮಘಟ್ಟ ಪ್ರದೇಶದಲ್ಲಿ ನಕ್ಸಲ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಶಂಕಿತ ನಕ್ಸಲರ ಬಗ್ಗೆ ಕೃಷ್ಣ ಏನೋ ಮಾಹಿತಿ ನೀಡಿದ. ಅವರ ವಿರುದ್ಧ ಪ್ರಮುಖ ಸಾಕ್ಷಿಯಾಗಿದ್ದ.

ಆದರೆ ಬಂಧಿತ ನಕ್ಸಲರು ಒಬ್ಬೊಬ್ಬರಾಗಿಯೇ ಪ್ರಕರಣದಿಂದ ಖುಲಾಸೆಗೊಂಡಕರು. 2009 ರಲ್ಲಿ ಪೊಲೀಸರು ಈತನ ಸುಳಿವಿನ ಮೇರೆಗೆ ಎಷ್ಟು ತರಾತುರಿಯಲ್ಲಿ ನಕ್ಸಲರನ್ನು ಬಂಧಿಸಿ ಜೈಲಿಗಟ್ಟಿದರೊ ಅಷ್ಟೆ ಬೇಗನೇ ಶಂಕಿತ ನಕ್ಸಲರೆಲ್ಲರೂ ಪ್ರಕರಣದಿಂದ ಖುಲಾಸೆಗೊಂಡು ಇಂದು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ.

ಆದರೆ ಪೊಲೀಸರಿಗೆ ಬೇಕಾದಂತ ಮಾಹಿತಿ ಕೊಟ್ಟು,ಎಲ್ಲವನ್ನು ಗಿಟ್ಟಿಸಿಕೊಂಡಿದ್ದ ಕೃಷ್ಣ ಮಾತ್ರ ಇಂದಿಗೂ ಜೈಲುಹಕ್ಕಿಯಾಗಿ ಕಾಲಕಳೆಯುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ