Malenadu today news report | Ravi Channannavar ಕೋಮುಗಲಭೆಯಲ್ಲಿ ಸತ್ತ ಎಂದವ ಕೊಲೆಯಾಗಿದ್ದ! ಗಂಡಸಾಗಿದ್ರೆ ಹಿಡಿರೋ ಎಂದು ಸವಾಲು ಹಾಕಿದ್ದವರೇ ಆಗಿದ್ರು ಅಪರಾಧಿಗಳು! ಪರಿಹಾರ ಕೊಟ್ಟ ಸರ್ಕಾರವೇ ಬೆಚ್ಚಿಬಿದ್ದಿತ್ತು! ರವಿ ಚನ್ನಣ್ಣವರ್ ಟೀಂ ಭೇದಿಸಿದ ನಂಬಲಾಗದ ‘ಶಿವಮೊಗ್ಗ-2015’ ಕ್ರೈಂ ಸ್ಟೋರಿ!
ಆತನ ಹೆಸರಲ್ಲಿ 7 ಲಕ್ಷ ತೆಗೆದುಕೊಂಡವರು ಕೊಲೆಗಾರರಾಗಿದ್ರು! ಪರಿಹಾರ ಕೊಟ್ಟ ಮುಖಂಡರೇ ಬೆಚ್ಚಿಬಿದಿದ್ದರು! 2015 ರಲ್ಲಿ ಶಿವಮೊಗ್ಗದಲ್ಲಿ ನಡೆದ ರಿಯಲ್ ಕಹಾನಿಪೊಲೀಸರ ಇವತ್ತಿನ ಜೆಪಿ ಫ್ಲ್ಯಾಶ್ಬ್ಯಾಕ್ ನಲ್ಲಿ! ಒಂದು ಕೊಲೆ! ಒಂದು ಬೈಕ್, ಒಬ್ಬ ಕಾಮನ್ಮ್ಯಾನ್, ಒಬ್ಬ ಆರೋಪಿ! ಒಂದು ಕ್ರೈಂ ಸ್ಟೋರಿ!
ಸ್ನೇಹಿತರೇ, ಕ್ರೈಂ ಲೋಕದಲ್ಲಿ ಕಾಣುವುದೇ ಒಂದು! ನಡೆವುದೇ ಒಂದು! ಎನ್ನುವುದಕ್ಕೆ ಸಾಕ್ಷಿಯಾಗಿ ಈ ಪ್ರಕರಣವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
2015 ನೆ ಇಸವಿ, ಶಿವಮೊಗ್ಗದಲ್ಲಿ ಒಂದು ಘಟನೆ ನಡೆದಿತ್ತು. ಜನ ಅದನ್ನ ಕೋಮುಗಲಭೆಯಲ್ಲಿ ನಡೆದ ಕೊಲೆಯೆಂದೇ ಬಾವಿಸಿದ್ರು. ಅಥವಾ ಅದನ್ನು ಹಾಗೆಯೇ ಬಿಂಬಿಸಲಾಗಿತ್ತು. ಸ್ವತಃ ಅಂದಿನ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ,ಕೆ.ಜೆ ಜಾರ್ಜ್ ರವರು ಬಂದು ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿ, ಲಕ್ಷಗಟ್ಟಲೆ ಪರಿಹಾರ ಕೊಟ್ಟತ್ತು. ಆದರೆ ಲೇಟರ್ ಆನ್, ಸರ್ಕಾರ ಕೊಟ್ಟ ದುಡ್ಡ ಇಸ್ಕೊಂಡಿದ್ದ ಕುಟುಂಬದವರೆಲ್ಲಾ ಕೊಲೆಗಾರರು ಎಂದು ಎಸ್ಪಿ ರವಿ ಡಿ ಚಣ್ಣನ್ನವರ್ ಸಾಭೀತುಪಡಿಸಿದ್ರು… ಹೇಗೆ ಗೊತ್ತಾ? ಮುಂದೆ ಹೇಳುತ್ತೇನೆ ಓದಿ…
ಕೋಮುಬಣ್ಣ ರಾಜ್ಯ ಸರ್ಕಾರವೇ ಗಢಗಢ
ಶಿವಮೊಗ್ಗ ಗಲಭೆ ಸಂದರ್ಭದಲ್ಲಿ ಬಹುಶಃ ಅದೊಂದು ಕೊಲೆ ಅಂದು ನಡೆಯದೆ ಹೋಗಿದ್ರೆ ಆ ಟೈಂನಲ್ಲಿ ಶಿವಮೊಗ್ಗ ನಗರ ಹೊತ್ತಿ ಉರಿಯುತ್ತಿರಲಿಲ್ಲ. ತಿಂಗಳುಗಟ್ಟಲೆ ನಗರದಲ್ಲಿ ನಿಷೇದಾಜ್ಞೆ ಜಾರಿಯಾಗುತ್ತಿರಲಿಲ್ಲ. ಕೋಮುಬಣ್ಣ ಮೆತ್ತಿಕೊಂಡಿದ್ದ ಈ ಪ್ರಕರಣ, ರಾಜ್ಯ ಸರ್ಕಾರದ ಬುಡವನ್ನೇ ಅಲುಗಾಡಿಸಿಬಿಟ್ಟಿತ್ತು.
ಬೆಂಕಿ ಬಿದ್ದ ಮನೆಯಲ್ಲಿ ಚಳಿ ಕಾಯಿಸಿಕೊಂಡಿದ್ದರು
ಬೆಂಕಿಬಿದ್ದ ಮನೆಯಲ್ಲಿ ಚಳಿ ಕಾಯಿಸಿಕೊಳ್ಳೋರು ಇದ್ದೇ ಇರ್ತಾರೆ ಅಂತಾರಲ್ಲ, ಆ ಗಾದೆ ಮಾತಿಗೆ ಅಕ್ಷರ ಸಹ ಮ್ಯಾಚ್ ಆಗೋ ಸ್ಟೋರಿಯಿದು. ಕೇವಲ ರಾಜಕಾರಣಿಗಳು ಮಾತ್ರ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳೋ ಜಾಯಮಾನದವರು ಅಂತಾ ಎಲ್ಲರು ಅಂದುಕೊಂಡಿದ್ರು. ಆದ್ರೆ ಈ ಪ್ರಕರಣದಲ್ಲಿ ಹಂತಕರು ಕೋಮುದ್ವೇಷದ ಬೆಂಕಿಗೆ ತುಪ್ಪವನ್ನೇ ಸುರಿದು ಹೋಗಿದ್ರು. ಇದರ ಲಾಭ ಪಡೆದಿದ್ದು ಯಾರು ಅನ್ನೋದು ನಿಮ್ಮ ಭಾವನೆಗೆ ಬಿಟ್ಟಿದ್ದೇನೆ.. ಆದರೆ ಈ ಘಟನೆಯಿಂದ ಹೈರಾಣಾಗಿದ್ದು ಶಿವಮೊಗ್ಗದ ಪೊಲೀಸರು.
ಒಂದು ಮೆರವಣಿಗೆ , ಒಂದು ಕೊಲೆ, ಇನ್ನೊಂದು ಮರ್ಡರ್
2015 ಪೆಬ್ರವರಿ 19. ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಸಂಘಟನೆ ಶಿವಮೊಗ್ಗದಲ್ಲಿ ಐಕ್ಯತಾ ರಾಲಿ ಮತ್ತು ಸಮಾವೇಶ ಆಯೋಜಿಸಿತ್ತು. ಸೈನ್ಸ್ ಮೈದಾನದಲ್ಲಿ ಆಯೋಜಿಸಿದ್ದ ರ್ಯಾಲಿಯದು.
ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದ ಬಳಿ ಸಂದರ್ಭದಲ್ಲಿ ರ್ಯಾಲಿ ಬಂದ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಸೃಷ್ಟಿಸಿದ ಅವಾಂತರದಿಂದಾಗಿ, ಇಡೀ ಶಿವಮೊಗ್ಗ ನಗರ ಹೊತ್ತಿ ಉರಿಯಿತು. ಇದೇ ಗಾಜನೂರು ಬಳಿ ವಿಶ್ವನಾಥ್ ಶೆಟ್ಟಿ ಎಂಬ ವ್ಯಕ್ತಿ ಕೊಲೆಯಾಗಿ ಹೋಯ್ತು. ಈ ಸುದ್ದಿ ಶಿವಮೊಗ್ಗ ನಗರದಲ್ಲಿ ದೊಡ್ಡದಾಗಿ, ಕೋಮು ಸಂಘರ್ಷಕ್ಕೆ ಕಾರಣವಾಯ್ತು. ಪೊಲೀಸರು ಶಾಂತಿ ಸುವ್ಯವಸ್ಥೆಯನ್ನು ಮತ್ತೆ ಸಹಜಸ್ಥಿತಿಗೆ ತರಲು ದೊಡ್ಡ ಹೋರಾಟವನ್ನೆ ಮಾಡಬೇಕಾಯ್ತು.
ಬೆಂಗಳೂರಿನಿಂದ ಬಂತು ಹಿರಿಯ ಪೊಲೀಸ್ ಅಧಿಕಾರಿಗಳ ತಂಡ
ಸನ್ನಿವೇಶ ಹೇಗಿತ್ತು ಎಂದರೆ, ರಾಜ್ಯಸರ್ಕಾರ, ಶಾಂತಿ ಕಾಪಾಡಿ ಎನ್ನುತ್ತಿದ್ದಾಗೆ ಮೂರು ಮೂರು ಎಸ್ಪಿಗಳು ಶಿವಮೊಗ್ಗ ಕಂಟ್ರೋಲ್ಗೆ ಮುಂದಾದರು. ಅಂದಿನ ಎಸ್ಪಿ ರಮಣ್ ಗುಪ್ತ, ಕಾರ್ತಿಕ್ ರೆಡ್ಡಿ, ಶಶಿಕುಮಾರ್ ಸೇರಿದಂತೆ ಮೂರು ಸಾವಿರ ಮಂದಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಕರ್ತವ್ಯಕ್ಕೆ ಅಣಿಯಾದ್ರು. ಕಾನೂನು ಸುವ್ಯವಸ್ಥೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಆಂತರಿಕ ಭದ್ರತೆ ಎಡಿಜಿಪಿ ಕಿಶೋರ್ ಚಂದ್ರ, ಪೂರ್ವ ವಲಯ ಐಜಿ ನಂಜುಂಡಸ್ವಾಮಿ ಶಿವಮೊಗ್ಗ ನಗರದಲ್ಲಿಯೇ ಮೊಕ್ಕಾಂ ಹೂಡಿದ್ರು. ಡಿಆರ್,ಕೆಎಸ್ಆರ್ಪಿ, ರ್ಯಾಪಿಡ್ ಆಕ್ಷನ್ ಫೋರ್ಸ್ ಹೀಗೇ ಸೇನೆಯ ರೀತಿಯಲ್ಲಿ ಪೊಲೀಸ್ ಇಲಾಖೆ ಏರಿಯಾ ಏರಿಯಾದಲ್ಲಿ ಬಂದೋಬಸ್ತ್ ಮಾಡಿದ್ದರೂ ಸಹ, ಆ ರಾತ್ರಿ ಕಳೆಯುವಷ್ಟರಲ್ಲಿ ಮತ್ತೊಂದು ಕೊಲೆ ನಡೆದಿತ್ತು.
ಪೊಲೀಸ್ ಭದ್ರಕೋಟೆಯ ನಡುವೆಯೇ ನಡೆಯಿತು ಹತ್ಯೆ
ವಿಶ್ವನಾಥ್ ಶೆಟ್ಟಿ ಕೊಲೆಯಾದ ಮಾರನೆ ದಿನ ಅಂದ್ರೆ ಫೆಬ್ರವರಿ 20 ರಂದು ಅಂತ್ಯ ಸಂಸ್ಕಾರ ನಡೆದ ದಿನವೂ ಶಿವಮೊಗ್ಗದಲ್ಲಿ ಗಲಾಟೆಯಾಗಿತ್ತು. ಹಾಗಾಗಿ ಅಂತ್ಯಸಂಸ್ಕಾರ ಮುಗಿಯುತ್ತಲೇ ನಿಷೇದಾಜ್ಞೆ ಇನ್ನಷ್ಟು ಕಠಿಣಗೊಳ್ತು. ಶಿವಮೊಗ್ಗ ನಗರವನ್ನು ಜೀರೋ ಟ್ರಾಫಿಕ್ಗೆ ತರಲಾಯ್ತು. ಸೆಕ್ಟರ್ ವೈಸ್ ಮೂವರು ಎಸ್ಪಿಗಳು ನಗರದಲ್ಲಿ ರಾತ್ರಿಯಿಂದ ಬೆಳಗಿನ ಜಾವದವರೆಗೂ ಗಸ್ತು ತಿರುಗಿದ್ರು. ರಾತ್ರಿಯೆಲ್ಲಾ ಹದ್ದಿನ ಕಣ್ಣಿಟ್ಟುಕೊಂಡು ಕೆಲಸ ಮಾಡಿದ್ದ ಪೊಲೀಸರಿಗೆ ಬೆಳಿಗ್ಗೆ ಆಘಾತವೊಂದು ಕಾದಿತ್ತು. ಪೆಬ್ರವರಿ 21 ರಂದು ಮುಂಜಾನೆ ಶಿವಮೊಗ್ಗದ ಪದ್ಮಾ ಟಾಕಿಸ್ ಹಿಂಭಾಗದ ಮೈದಾನದಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿತ್ತು.
ಸುದ್ದಿಯ ಪಸರು! ಪೊಲೀಸರಿಗೆ ಟೆನ್ಶನ್ ಶುರು
ಯಾವುದೋ ಒಂದು ಕೋಮಿನವರು ಕೊಲೆ ಮಾಡಿದ್ದಾರೆಂಬ ಸುದ್ದಿ ಮೊಬೈಲ್ ವಾಟ್ಸಾಪ್,ಗಳಲ್ಲಿ ಹರಿದಾಡಿದವು. ಅರೆ…ರಾತ್ರಿಯಿಡಿ ಅದೇ 100 ಪೀಟ್ ರಸ್ತೆ. ಟಿಪ್ಪುನಗರ, ತುಂಗಾನಗರದಲ್ಲೆಲ್ಲಾ ಮೆನ್ ಗಳು ಡೂಟಿ ಮಾಡಿದ್ದಾರೆ. ಅಧಿಕಾರಿಗಳು ಪೆಟ್ರೋಲಿಂಗ್ ಮಾಡಿದ್ದಾರೆ. ಆದ್ರೆ ಅದ್ಹೇಗೆ ಬೆಳಿಗ್ಗೆ ಅಲ್ಲಿ ಮರ್ಡರ್ ಆಯ್ತು ಎಂದು ಪೊಲೀಸರು ದಿಗ್ಬ್ರಮೆ ಗೊಂಡ್ರು.
ಅಂದಿನ ಐಜಿ ನಂಡುಂಡಸ್ವಾಮಿಯವರೇ, ಕೊಲೆಯಾದ ಸ್ಥಳಕ್ಕೆ ದೌಡಾಯಿಸಿದ್ರು. ಕೊಲೆಯಾದವ ಮಂಜುನಾಥ್ (35) ಎಂದು ಗುರುತಿಸಲಾಯ್ತು. ಆತ ಅದೇ ಏರಿಯಾದ ಮಲ್ಲಿಕಾರ್ಜುನ ಬಡಾವಣೆಯಲ್ಲಿ ವಾಸವಿದ್ದ ವ್ಯಕ್ತಿ ಎಂಬುದು ಸಹ ತಿಳಿದುಬಂದಿತ್ತು. ಆತನ ಎದೆ ಮತ್ತು ದೇಹದ ಇತರ ಭಾಗಗಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಯ್ತು
ಬೆಂಕಿ ತುಪ್ಪವಾದ ಕೊಲೆ
ಪೆಬ್ರವರಿ 19 ರಂದು ವಿಶ್ವನಾಥ್ ಕೊಲೆ. ಅದಾದ 24 ಗಂಟೆಯೊಳಗೆ ಮಂಜುನಾಥ್ ಕೊಲೆ. ಏನ್ರಿ ಇದು ಅನ್ಯಾಯ! ಪೊಲೀಸರು ಏನ್ಮಾಡ್ತಿದ್ದಾರೆ! ಎಕ್ಸ್ಟ್ರಾ…ಎಕ್ಸ್ಟ್ರಾ ಅಂತಾ ಮುಖಂಡರು ನಾಲಿಗೆಗೆ ಕೆಲಸ ಕೊಟ್ಟಿದ್ರೆ, ಇತ್ತ ಮಂಜುನಾಥ್ ಸಹೋದರಿ ದಾಕ್ಷಾಯಣಮ್ಮ , ಅರುಣ್ ಕುಮಾರ್ ಪೊಲೀಸರಿಗೆ ಛೀಮಾರಿ ಹಾಕ್ತಾರೆ.
ಗಂಡಸಾದ್ರೆ ಅವರನ್ನು ಹಿಡಿರೋ!?
ಅವತ್ತು ಎಲ್ಲರ ಮಾತನ್ನು ಕೇಳಿಯು ಪೊಲೀಸರು ಸುಮ್ಮನಿದ್ರು, ಆದರೂ ಅದೊಂದು ಮಾತು ಶವಗಾರದ ಬಳಿಯಲ್ಲಿ ಕೇಳಿದ್ದು ಇಲಾಖೆಯ ತಾಳ್ಮೆಯನ್ನು ಹಿಡಿದು ಅಲ್ಲಾಡಿಸಿತ್ತು.. ಗಂಡಸಾದ್ರೆ ಅವರನ್ನು ಹಿಡಿರೋ ಹೀಗಂತ ಅಲ್ಲಿದ್ದ ಮೃತನ ಕುಟುಂಬಸ್ಥರು ಬೊಬ್ಬೆ ಹೊಡೆಯುತ್ತಿದ್ರೆ, ಪೊಲೀಸರು ಅಪ್ನಾ ಟೈಂ ಆಯೇಗಾ!? ಅಂದ್ಕೊಂಡೇ ಹಲ್ಲು ಕಚ್ಚಿಕೊಂಡು ಸುಮ್ಮನಿದ್ರು.
ಆ ಸಂದರ್ಭದಲ್ಲಿ ಶಿವಮೊಗ್ಗಕ್ಕೆ ಬಂದ ಅಂದಿನ ಗೃಹಸಚಿವ ಕೆಜೆ ಜಾರ್ಜ್, ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಾರೆ. ಸರ್ಕಾರದಿಂಧ 10 ಲಕ್ಷ ರೂಪಾಯಿ ಪರಿಹಾರ ಘೋಷಿಸುತ್ತಾರೆ. ಜಿಲ್ಲಾಡಳಿತದಿಂದದ ಏಳು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಇಷ್ಟಾದರೂ ಸಚಿವರ ವಿರುದ್ಧವೇ ಘೋಷಣೆ ಕೇಳಿ ಬರುತ್ತೆ. ಮೃತದೇಹದ ಮೆರವಣಿಗೆ ಮಾಡ್ತೀವಿ ಎಂದು ಪಟ್ಟು ಹಿಡಿಯುತ್ತಾರೆ. ಆದರೆ ಇದಕ್ಕೆ ಪೊಲೀಸ್ ಇಲಾಖೆ ಒಪ್ಪುವುದಿಲ್ಲ. ಪೊಲೀಸ್ ವಾಹನದಲ್ಲಿಯೇ ಮೃತದೇಹ ಶಿಫ್ಟ್ ಮಾಡಿದ ಎಸ್ಪಿ ರಮಣಗುಪ್ತ, ಇನ್ಸ್ಪೆಕ್ಟರ್ ವಸಂತಕುಮಾರ್ ಜವಾಬ್ದಾರಿಯಲ್ಲಿ ಅಂತ್ಯಕ್ರಿಯೆ ಮುಗಿಯುವಂತೆ ನೋಡಿಕೊಳ್ಳುತ್ತಾರೆ.
ಟೀಕೆಗಳನ್ನು ಕೇಳುತ್ತಲೇ ಪೊಲೀಸ್ ಕೆಲಸ ಆರಂಭ!
ಆಗ ಪೊಲೀಸರನ್ನ ಎಲ್ಲರೂ ಟೀಕಿಸುವವರೆ ಆಗಿದ್ದರು. ಒಬ್ಬೊಬ್ಬರದ್ದು ಒಂದೊಂದು ರೀತಿಯ ಅಪಶೃತಿಯಾಗಿತ್ತು. ಹೀಗಿದ್ದರೂ, ತಮ್ಮ ಅನುಮಾನದ ಡ್ಯೂಟಿಗೆ ಇಳಿದ ಪೊಲೀಸ್ ಇಲಾಖೆ ಮಂಜುನಾಥ್ ಕೊಲೆ ಪ್ರಕರಣದ ತನಿಖೆಗೆ ಅಂದಿನ ಸಾಗರ ಡಿವೈಎಸ್ಪಿ ನಂದಿನಿ ನೇತ್ರತ್ವದಲ್ಲಿ ವಿಶೇಷ ತಂಡ ರಚಿಸಿತು. ಬಳಿಕ ನಂದಿನಿ ಸಾಗರದಿಂದ ಶಿವಮೊಗ್ಗಕ್ಕೆ ಬಂದು ತನಿಖೆ ನಡೆಸುವುದು ಕಷ್ಟವೆಂದು ಅರಿತ ಅಂದಿನ ಎಸ್ಪಿ ರವಿ ಚನ್ನಣ್ಣವರ್ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಅಂದಿನ ಶಿವಮೊಗ್ಗ ಡಿವೈಎಸ್ಪಿ ಡಾಕ್ಟರ್ ರಾಮ್ ಎಲ್.ಅರಸಿದ್ದಿ ಯವರಿಗೆ ವಹಿಸಿದ್ರು.
ಎಲ್ಲರೂ ಗಲಾಟೆ ಕೊಲೆ ಅಂದರೆ, ಪೊಲೀಸರಿಗೆ ಬೇರೆಯದ್ದ ಶಂಕೆಯಿತ್ತು!
ಸ್ವಲ್ಪ ಸ್ಟೋರಿ ಲೆಂತಿಯಾಗಿಯೇ ಹೇಳುತ್ತಿದ್ದೇನೆ, ಅದು ಪ್ರೊಫೇಶನಲ್ ಸೀಕ್ರೆಟ್! ಆದಾಗ್ಯು ಓದಿಸಿಕೊಂಡು ಹೋಗುತ್ತಿದೆ ಅನ್ನೋ ಭಾವನೆಯಲ್ಲಿ ಮುಂದುವರಿಸುತ್ತಿದ್ದೇನೆ! ಶಿವಮೊಗ್ಗದ ಮಲ್ಲಿಕಾರ್ಜುನ ಬಡಾವಣೆಯಲ್ಲಿದ್ದ ಕೊಲೆಯಾದ ಮಂಜುನಾಥ್ನ ಅಕ್ಕ ದಾಕ್ಷಾಯಣಮ್ಮ ಮತ್ತಾಕೆಯ ಕುಟುಂಬವೇ ಪೊಲೀಸರ ಮೊದಲ ಟಾರ್ಗೆಟ್ ಆಗಿತ್ತು! ಅಂದರೆ ಅನುಮಾನ ಅಲ್ಲಿಯೇ ಕೇಂದ್ರಿಕೃತವಾಗಿತ್ತು.
ದಾಕ್ಷಾಯಣಮ್ಮನ ಮಗಳು ನೇತ್ರಾವತಿ ಹಾಗು ಮಗ ಅರಣ್ ಕುಮಾರ್, ಸೊಸೆ ಶ್ವೇತಾ ಮೃತನ ಚಿಕ್ಕಮ್ಮನ ಮಗ ಅರುಣ್ ನನ್ನು ಪೊಲೀಸರು ವಿಚಾರಣೆಗೊಳಪಡಿಸುತ್ತಾರೆ. ಆದರೆ ಎನ್ಕ್ವೈರಿಗೆ ಸ್ಪಂದಿಸದ ಅವರೆಲ್ಲಾ ನಾವು ದುಃಖದಲ್ಲಿದ್ದೇವೆ. ನೀವು ಈ ಸಂದರ್ಭದಲ್ಲಿ ಬಂದು ತನಿಖೆ ನೆಪದಲ್ಲಿ ಇಲ್ಲಸಲ್ಲದ ಪ್ರಶ್ನೆ ಕೇಳ್ತಿರಿ ಅಂತಾ ಲಾಯರ್ ಇಂದ ಸರ್ಚ್ ವಾರೆಂಟ್ ಹಾಕಿಸ್ತಾರೆ. ಇದು ಪೊಲೀಸರ ತನಿಖೆಗೆ ಸೆಟ್ ಬ್ಯಾಕ್ ಆಗುತ್ತೆ.
ಕೇಸ್ ಕೈ ಬಿಟ್ಟಿದ್ದರೂ ಯಾರು ತಲೆಕೆಡಿಸಿಕೊಳ್ತಿರಲಿಲ್ಲ! ಏಕೆಂದರೆ!?
ನಂತರ ಪೊಲೀಸರು ಮಂಜುನಾಥ್ ಕೊಲೆಯಾದ ಸ್ಥಳದಲ್ಲಿ ಅಂದು ಅಕ್ಕಪಕ್ಕದ ಜನರನ್ನು ವಿಚಾರಣೆ ಮಾಡ್ತಾರೆ. ಸಂಬಂದಿಕರು ಬಳಸುತ್ತಿದ್ದ ಮೊಬೈಲ್ ಪೋನ್ ಸಿಡಿಆರ್ ಚೆಕ್ ಮಾಡುತ್ತಾರೆ. ಎಲ್ಲೂ ಕೊಲೆಯ ಕ್ಲೂ ಸಿಗೋದಿಲ್ಲ. ಮಂಜುನಾಥ್ ಕೊಲೆ ಕೋಮುಗಲಭೆಯಲ್ಲಾದ ಘಟನೆ ಅಂತಾ ಪೊಲೀಸರು ಪ್ರಕರಣಕ್ಕೆ ಎಳ್ಳು ನೀರು ಬಿಟ್ಟಿದ್ರು ಯಾರು ತಲೆಕೆಡಿಸಿಕೊಳ್ತಿರಲಿಲ್ಲ. ಯಾಕೆಂದ್ರೆ ಮಂಜುನಾಥ್ ಕೋಮುಗಲಭೆಯಲ್ಲಿ ಸತ್ತೋಗಿದ್ದಾನೆ ಎಂದು ಎಲ್ಲರೂ ಭಾವಿಸಿದ್ರು. ಆದ್ರೆ ಪೊಲೀಸ್ ತನಿಖಾ ತಂಡ, ಕೇಸನ್ನ ಸುಮ್ಮನೇ ಬಿಡೋ ಯೋಚನೆಯಲ್ಲೇ ಇರಲಿಲ್ಲ! ಹಿಂದೊಮ್ಮೆ ಮಾತು ಕೇಳಿತ್ತಲ್ಲ! ಹಾಗಾಗಿ ಕ್ರೈಂ ಟೀಂ ಆರೋಪಿಗಳ ಜಾಡು ಪತ್ತೆ ಹಚ್ಚಲು ಹೊಸ ಆಯಾಮ ಕಂಡುಕೊಂಡಿತ್ತು.
ಕಥೆ ಕಟ್ಟಿದ ಪೊಲೀಸರು ಹಾಕಿದ್ರು ಮಾರುವೇಷ!
ಮಂಜುನಾಥ್ ನ ಕೊಲೆ ಪ್ರಕರಣ ಭೇದಿಸಲು ಎಸ್ಪಿ ರವಿ ಚಣ್ಣನ್ನನವರ್ ಖಡಕ್ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನೇ ನೇಮಿಸಿದ್ರು. ಡಿವೈಎಸ್ಪಿ ರಾಮ್,ಕೋಟೆ ಠಾಣೆ ಇನ್ಸ್ ಪೆಕ್ಟರ್ ದೀಪಕ್ಮ ತ್ತು ಎಸ್ಸೈ ಕುಮಾರ್ ರ ಜೊತೆ ನುರಿತ ಕ್ರೈಂ ಪೊಲೀಸ್ ಸಿಬ್ಬಂದಿಗಳು ತನಿಖೆಯ ಜಾಡು ಹಿಡಿದು ಹೊರಟರು.
ಮೊದಲು ಮಂಜುನಾಥ್ ಪ್ರೊಪೈಲ್ ಗೆ ಕೈ ಹಾಕಿದ ಪೊಲೀಸರು ಆತ ಇರುತ್ತಿದ್ದ ಸ್ಥಳ,ಪರಿಸರದ ಅಕ್ಕಪಕ್ಕದ ಮನೆಗಳನ್ನೆಲ್ಲಾ ಪೊಲೀಸರು ಜಾಲಾಡಿದ್ದಾರೆ. ಮನೆ ಮನೆಗೆ ಮಾರುವೇಷದಲ್ಲಿ ಅಲೆದಿದ್ದಾರೆ. ಸಂಬಂಧಿಕರು ಇರುವ ಗ್ರಾಮ ಅವರ ಅಕ್ಕಪಕ್ಕದ ಮನೆಗಳನ್ನು ವಿಚಾರಿಸಿದ್ದಾರೆ. ಮಂಜುನಾಥ್ ಕೊಲೆಯಾದ ದಿನ ನೋಡಿದವರು ಸಿಗಬಹುದೇನೋ ಅಂತಾ ಆ ಪರಿಸರದ ಸುತ್ತಲೂ ಹಗಲು ರಾತ್ರಿ ಸುತ್ತಾಡಿದ್ರೂ ಪ್ರಯೋಜನವಾಗೋದಿಲ್ಲ.
ಮಂಜುನಾಥ್ ಸ್ನೇಹಿತರು ಸಂಬಂಧಿಗಳು ಬಳಸುತ್ತಿದ್ದ ಮೊಬೈಲ್ ನಂಬರ್ ಗಳನ್ನೆಲ್ಲಾ ಜಾಲಾಡಿದ್ರೂ, ಕೊಲೆಗಡುಕರ ಸುಳಿವು ಸಿಗೋದಿಲ್ಲ. ಹೀಗಾಗಿ ಪೊಲೀಸರು ತಂತ್ರಜ್ಞಾನದ ಮೊರೆಹೋದ್ರೆ ಪ್ರಯೋಜನವಿಲ್ಲ ಅಂತಾ ತಮ್ಮ 30 ವರ್ಷಗಳ ಹಳೆಯ ಪೊಲೀಸಿಂಗ್ ವಿಚಾರಣೆಗೆ ಅಣಿಯಾಗ್ತಾರೆ. ಹೀಗಾಗಿ ಮಾರುವೇಷದ ಕೆಲಸ ಪೊಲೀಸರಿಗೆ ಸ್ವಲ್ಪ ವರ್ಕೌಟ್ ಆಗ್ತಾ ಬರುತ್ತೆ.
ಜನಸೇರೋ ಜಾಗದಲ್ಲಿಯೇ ಮಾರುವೇಷದಲ್ಲಿ ಕೊಲೆಯ ಬಗ್ಗೆ ಚರ್ಚೆ.
ಇದು ದೃಶ್ಯ ಸಿನಿಮಾದಲ್ಲಿ ನಾಯಕ ಪೊನ್ನಪ್ಪ ಕಟ್ಟುವ ಕಥೆಯಂತೆ ಶಿವಮೊಗ್ಗ ಪೊಲೀಸರು ಮಂಜುನಾಥ್ ಕೊಲೆಗೂ ಒಂದು ಕಾಲ್ಪಿನಿಕ ಕಥೆ ಕಟ್ಟಿ ಕೊಲೆಯಾದ ಪ್ರದೇಶದಲ್ಲಿ ತೇಲಿ ಬಿಡ್ತಾರೆ. ಜನರು ಗುಂಪು ಸೇರೋ ಗಲ್ಲಿ,ಅಂಗಡಿ,ಟೀ ಸ್ಟಾಲ್, ಬೀಡಾ ಸ್ಟಾಲ್ ,ಸೆಲ್ಯೂನ್ ಷಾಪ್ ಗಳಲ್ಲಿ ಮಪ್ತಿ ಪೊಲೀಸರು ಗ್ರಾಹಕರಂತೆ, ಜನಸಾಮಾನ್ಯರಂತೆ ಹೋಗೋದು, ಮಂಜುನಾಥ್ ಪ್ರಕರಣದ ಬಗ್ಗೆಯೇ ಚರ್ಚೆ ಮಾಡೋದನ್ನೇ ಮಾಡ್ತಾ ಇದ್ರು, ಮಂಜುನಾಥ್ ಕೊಲೆಯಾದ ದಿನ ಹಂಗಾಯ್ತು.., ಹಿಂಗಾಯ್ತು.., ಹಿಂಗೂ ಆಗಿರ್ಬುದು.., ಅಂತ ಗುಂಪು ಸೇರೋ ಜನರ ಮದ್ಯೆ ಜನಸಾಮಾನ್ಯರಂತೆ ಚರ್ಚೆ ಮಾಡ್ತಾ ಇದ್ರು.
ಹಿಂಗಾಗಿ ಹಂಗಾಗಿ ಕೊನೆಗೆ ಈಥರ ಆಗೋಯ್ತು
ಹೀಗೆ., ಹಾಗೆ.., ಅಂತಾ ಪೊಲೀಸರೇ ಕಟ್ಟಿದ ಕಥೆಗಳಿಗೆ ಆರಂಭದಲ್ಲಿ ಜನರಿಂದ ಹೌದೇನ್ರಿ ಎಂಬುದು ಬಿಟ್ಟರೇ ಮತ್ತೇನೂ ಉತ್ತರ ಸಿಕ್ಕಿರಲಿಲ್ಲ. ಆದರೆ ಪೊಲೀಸರು ಕಥಾ ಸರಣಿಯನ್ನು ಮುಂದುವರಿಸಿದ್ರು. ಯಾರೋ ತಂದು ಬಾಡಿ ಹಾಕಿದ್ರು! ಆಟೋದಲ್ಲಿ ಶಿಫ್ಟ್ ಮಾಡಿದ್ರಂತೆ ಹೀಗೆ ಕೇಳುತ್ತಾ ಹೇಳುತ್ತಾ ಹೋದ ಪೊಲೀಸರಿಗೆ ಒಬ್ಬ ಕಾಮನ್ ಮ್ಯಾನ್.. ಆಟೋನೂ ಇಲ್ಲ ಲಾರಿನೂ ಇಲ್ಲ ರೆಡ್ ಕಲರ್ ಪಲ್ಸರ್..ನಾನೇ ನೋಡಿದ್ದೀನಿ ಗುರುವೇ ಎಂದು ಬಿಟ್ಟಿದ್ದ!
ಸಿಕ್ಕ ಬಟ್ಟೆಯನ್ನ ಹಾಕ್ಕೊಂಡು ಜನರ ಜೊತೆ ಜನರಾಗಿ ಕಥೆ ಕಟ್ಟಿದ್ದ ಪೊಲೀಸರಿಗೆ ರೆಡ್ ಕಲರ್ ಪಲ್ಸರ್ ಗುರುವೆ ಎಂದ ಮಾತು, ಕುಷ್ಕದಲ್ಲಿ ಕೋಳಿ ಪೀಸ್ ಸಿಕ್ಕಂತಾಗುತ್ತದೆ. ಮಾತಿಗೆ ಮಾತು ಕೊಟ್ಟು ಹೇಳಿದ ವ್ಯಕ್ತಿಯನ್ನು ಕರೆತಂದು ವಿಚಾರಿಸ್ತಾರೆ. ಹೌದು ಸಾರ್, ರೆಡ್ ಕಲರ್ ಪಲ್ಸರ್ ಇಬ್ಬರು ಬಂದಿದ್ರು, ಆಮೇಲೆ ಅದನ್ನು ಹತ್ತಿಕೊಂಡು ಹೋದರು ಎಂದು ಆತ ವಿವರಿಸಿದ್ದಾರೆ.
ಇದಕ್ಕೆ ಅಲ್ವಾ ಪೊಲೀಸ್ ಬ್ರೈನ್ ಅನ್ನೋದು!?
ಶಿವಮೊಗ್ಗದಲ್ಲಿ ಕೆಂಪು ಕಲರ್ ಪಲ್ಸರ್ ಬೈಕ್ ಎಷ್ಟಿಲ್ಲ! ಅದನ್ನೆಲ್ಲಾ ಇದೇ ಗಾಡಿನಾ ಚೆಕ್ ಮಾಡೋದಕ್ಕಾಗುತ್ತಾ! ಆಗದಿರೋ ಕೆಲಸ! ಹೀಗಾಗಿ ಪೊಲೀಸರು ಮಂಜುನಾಥನ ಸ್ನೇಹಿತರು, ಸಂಬಂಧಿಕರು, ಬಂಧುಬಗಳ, ಹಿತೈಷಿಗಳು ಹಾಗೂ ಹಿತಶತ್ರುಗಳ ವಲಯದಲ್ಲಿ ಕೆಂಪು ಕಲರ್ ಪಲ್ಸರ್ ಬೈಕ್ ಯಾರದ್ದಿದೆ ಎಂದು ಹುಡುಕುತ್ತಾರೆ. ಒಂದು ಸಾವಿರಕ್ಕೂ ಅಧಿಕ ಪಲ್ಸರ್ ಬೈಕ್ಗಳನ್ನು ತಪಾಸಣೆ ಮಾಡಿ ಅದರ ಮಾಲೀಕರು ಯಾರು, ಅವರ ಪೈಕಿ ಮಂಜುನಾಥ್ಗೆ ಯಾರಾದರೂ ಲಿಂಕ್ ಇದ್ದಾರಾ ಎಂದು ಹುಡುಕಿದ ಪೊಲೀಸರಿಗೆ ಸಿಕ್ಕಿದ್ದು ಸಣ್ಣ ಕ್ಲೂ!
ಲಿಂಕ್… ಲಿಂಕ್..ಲಿಂಕ್! ಕಲರ್ ಲಿಂಕ್!
ಆರ್ಟಿಒ ಮೂಲಕ ಸಾವಿರ ಪಲ್ಸರ್ ಬೈಕ್ಗಳ ಮಾಹಿತಿ ಪಡೆದ ಪೊಲೀಸರಿಗೆ, ನವುಲೆ ಬಳಿಯಲ್ಲಿ ಒಂದು ರೆಡ್ ಕಲರ್ ಫಲ್ಸರ್ ಬೈಕ್ ಇರುವುದು ಗೊತ್ತಾಗುತ್ತದೆ. ಅದನ್ನ ಪರಿಶೀಲಿಸಿದ ಪೊಲೀಸರಿಗೆ ಒಂದು ಲಿಂಕ್ ಸಿಗುತ್ತದೆ. ಅದರ ಮಾಲೀಕ ಅರುಣ್, ಆತ ಗಲಾಟೆಯ ದಿನ ಸ್ವಿಚ್ ಆಫ್ ಮಾಡಿದ್ದ, ಹಾಗೂ ಆತ ಮಂಜುನಾಥ್ ಜೊತೆ ಲಿಂಕ್ ಹೊಂದಿದ್ದ. ಇದಿಷ್ಟು ಡಿಟೇಲ್ಸ್ ಸಿಗುತ್ತಲೇ ಪೊಲೀಸರು ವಾಚ್ ಆಂಡ್ ಗಾರ್ಡ್ಗೆ ಮುಂದಾಗುತ್ತಾರೆ.
ಮೊಬೈಲ್ ಟ್ರ್ಯಾಪ್ ! ಫಾಲೋ ಟ್ರಿಪ್
ಅರುಣನ ಮೊಬೈಲ್ ಟ್ರ್ಯಾಪ್ ಮಾಡುವ ತನಿಖಾ ತಂಡ ಶಿವಮೊಗ್ಗದಲ್ಲಿ ಗಲಭೆ ನಡೆದ ಪೆಬ್ರವರಿ 19 ರ ತಾರೀಖಿನಿಂದ ಸಿಡಿಆರ್ ತೆಗೆದು ಅನಾಲಿಸಿಸ್ ಮಾಡುತ್ತೆ.
ಪ್ರತಿ ದಿನ 15-20 ಬಾರಿ ಕಮ್ಯುನಿಕೇಟ್ ಆಗುತ್ತಿದ್ದ ಮೊಬೈಲ್ ನಂಬರ್ ಪೆಬ್ರವರಿ 20 ರ ನಂತರ ಏಕಾಏಕಿ ಸ್ವಿಚ್ ಆಫ್ ಆಗಿರುತ್ತೆ. ಮಂಜುನಾಥ್ ಕೊಲೆಯಾದ ದಿನದಿಂದ ಈ ನಂಬರ್ ಸ್ವಿಚ್ ಆಫ್ ಆಗಿರುವ ಬಗ್ಗೆ ಅನುಮಾನಗೊಂಡ ಪೊಲೀಸರು ಅರುಣನ ಚಲನ ವಲನದ ಬಗ್ಗೆ ಕಣ್ಣಿಡುತ್ತಾರೆ.
ಅವನ ನಡವಳಿಕೆ ಪೊಲೀಸರ ಅನುಮಾನವನ್ನು ಗಟ್ಟಿ ಮಾಡುತ್ತೆ. ಅರುಣನನ್ನು ಠಾಣೆಗೆ ಕರೆದು ವಿಚಾರಣೆ ಮಾಡಿದಾಗ ಮಂಜುನಾಥ್ ಕೊಲೆಯ ಗೇಮ್ ಪ್ಲಾನ್ ಅನಾವರಣಗೊಳ್ಳುತ್ತೆ.
ಫಟಾ ಪೋಸ್ಟರ್ ನಿಕಲಾ ವಿಲನ್!
ಶನಿ ಬೆನ್ನತ್ತಿದ್ರೂ ಬಿಡಿಸಿಕೊಳ್ಳಬಹುದು. ಆದರೆ ಪೊಲೀಸರು ಬೆನ್ನತ್ತಿದ್ರೆ, ಆತ ಸೀದಾ ಕಾರಾಗೃಹಕ್ಕೆ! ಅರುಣ್ಗೂ ಆಗಿದ್ದು ಅದೇ ಆತನ್ನ ಹಿಂಬಾಲಿಸಿದ ಪೊಲೀಸರು ಎದುರು ಕರೆದು ಎನಪ್ಪಾ ಕಂದ.. ಎಲ್ಲಾ ಬಿಡಿಸಿ ಹೇಳು ಎಂದು ನೀಟಾಗಿ ಪೊಲೀಸ್ ಭಾಷೆಯಲ್ಲಿ ಕೇಳಿದ್ದಾರೆ. ಹೆದರಿದ ಅರುಣ್ ಇಷ್ಟಕ್ಕೆಲ್ಲಾ ಅಕ್ಕನೇ ಕಾರಣ ಎಂದಿದ್ದ.
ಪೊಲೀಸ್ ಕೆಲಸ ಶುರು !
ಟೀಕೆ, ನಿಂದನೆ, ವಿರೋಧ, ಆಕ್ರೋಶ, ಗಲಾಟೆ, ಊಟ ನಿದ್ರೆಯಿಲ್ಲದ ರಾತ್ರಿಗಳು, ಮಕ್ಕಳ ಮುಖವನ್ನು ನೋಡಲಾಗದಂತಹ ಕಷ್ಟ.. ಎಷ್ಟೊಂದು ಸಹಿಸಿದ್ರು ಪೊಲೀಸರು! ಮುಖಕ್ಕೆ ನೀರು ಕಾಣದಂತೆ ಕೆಲಸ ಮಾಡಿದ್ದ ಪೊಲೀಸರಿಗೆ ಅವತ್ತು ಅರುಣ ಹೇಳಿದ ಅಕ್ಕನ ಸಂಗತಿ ಕೋಟಿ ಕೊಟ್ಟರೂ ಸಿಗದಂತಹ ಸಂತೋಷ ತಂದಿತ್ತು.
ಅರುಣ ಕೊಟ್ಟ ಇನ್ಫಾರ್ಮೇಷನ್ನಡಿಯಲ್ಲಿ ಪೊಲೀಸರು ಮಂಜುನಾಥ್ನ ಅಕ್ಕ ದಾಕ್ಷಾಯಣಮ್ಮ, ಆಕೆಯ ಮಗಳು ನೇತ್ರಾವತಿ ಹಾಗು ಮಗ ಅರಣ್ ಕುಮಾರ್, ಸೊಸೆ ಶ್ವೇತಾ ಹಾಗು ಮೃತನ ಚಿಕ್ಕಮ್ಮನ ಮಗ ಅರುಣ್ ಮತ್ತು ಸ್ನೇಹಿತ ದುರ್ಗೇಶ್ ರನ್ನು ಪೊಲೀಸರು ಬಂಧಿಸಿದ್ರು.
ಇಷ್ಟಕ್ಕೂ ಕೊಲೆ ನಡೆದಿದ್ದು ಏಕೆ ಗೊತ್ತಾ!?
ಕೊಲೆಯಾಗಿದ್ದ ಮಂಜುನಾಥ್ನ ಹೆಸರಲ್ಲಿ ಒಂದು ಸೈಟಿತ್ತು ಇನ್ನೊಂದು ಮನೆಯಿತ್ತು. ಆದರೆ ಮನೆ ಒಂದು ಭಾಗ ಕುಸಿದಿತ್ತು. ಹೀಗಾಗಿ ಆತ ಅಕ್ಕ ದಾಕ್ಷಾಯಣಮ್ಮನ ಮನೆಯಲ್ಲಿದ್ದ. ಆಕೆ, ಮಂಜುನಾಥ್ ಇಲ್ಲದ ವೇಳೆಯಲ್ಲಿ ಆತನ ಸೈಟ್ನ್ನ 15 ಸಾವಿರಕ್ಕೆ ಮಾರಿದ್ದಳು, ಆತನ ಮನೆ ಮೇಲೆ 90 ಸಾವಿರ ಸಾಲ ಪಡೆದಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಈ ಮಧ್ಯೆ ಮಂಜುನಾಥ ಅಕ್ಕನ ಮಗಳ ಮೇಲೆ ಕಣ್ಣು ಹಾಕಿದ್ದ, ಅಷ್ಟೆ ಅಲ್ಲದೆ ಅಕ್ಕನ ಮಗನ ಪತ್ನಿ ಸ್ನಾನ ಮಾಡುವಾಗ, ಚಿಕ್ಕಮ್ಮನ ಮಗನ ಹೆಂಡ್ತಿ ಸ್ನಾನಮಾಡುವಾಗ ಕದ್ದು ನೋಡುವುದು, ಅಶ್ಲೀಲವಾಗಿ ಕರೆಯುವುದು ಮಾಡುತ್ತಿದ್ದನಂತೆ. ಈ ಕಾರಣಕ್ಕೆ ಬೇಸರತ್ತ ಇಡೀ ಫ್ಯಾಮಿಲಿ ಮಂಜುನಾಥನನ್ನ ಮುಗಿಸುವ ನಿರ್ಧಾರಕ್ಕೆ ಬಂದಿದೆ.
ಮುಂದಿನ ಕೊಲೆ & ಅದನ್ನು ಮುಚ್ಚಾಕುವ ಮೆಗಾ ಕ್ಲೈಮ್ಯಾಕ್ಸ್!
ಮಂಜನನ್ನ ಮುಗಿಸೋ ಪ್ಲಾನ್ ಆದ ಹೊತ್ತಿನಿಂದ ಅರುಣ್, ದುರ್ಗೇಶ್, ತಮ್ಮ ಮೊಬೈಲ್ ಬಳಸೋದನ್ನ ನಿಲ್ಲಿಸುತ್ತಾರೆ. ಬದಲಾಗಿ, ತಮ್ಮ ಸ್ನೇಹಿತರ ಮೊಬೈಲ್ ಪಡೆದುಕೊಂಡು ಬೇಕಾದಾಗ ಕಾಲ್ ಮಾಡಿ ಮಾತನಾಡುತ್ತಾರೆ.ಹೋಟೆಲ್ವೊಂದರಲ್ಲಿ ಕೊಲೆಗೆ ಸ್ಕೆಚ್ ಫಿಕ್ಸ್ ಆಗುತ್ತದೆ. ಈ ಕಡೆ ಕೊಲೆಯಾದ ವಿಶ್ವನಾಥ್ ಶೆಟ್ಟಿ ಗಲಾಟೆಯ ಸನ್ನಿವೇಶ. ಇದಕ್ಕಿಂತ ಒಳ್ಳೆ ಚಾನ್ಸ್ ಸಿಗದು ಎಂದುಕೊಂಡ ಕುಟುಂಬಸ್ಥರು, ಫೆಬ್ರವರಿ 20 ರಂದು ಕೊಲೆ ನಡೆಯುತ್ತದೆ. ಅವತ್ತು ರಾತ್ರಿ 11.30 ಕ್ಕೆ ಮಂಜುನಾಥ ಮನೆ ಬಿಟ್ಟು ತುಸು ದೂರ ನಡೆದುಕೊಂಡು ಹೋಗಿದ್ದ. ಅಲ್ಲಿಗೆ ತೆರಳಿದ ಅರುಣ್, ಅಮ್ಮಾ ಕರಿತಿದ್ದಾಳೆ ಬಾ.., ಎಂದು ಕರೆದುಕೊಂಡು ಬಂದಿದ್ಧಾನೆ. ಮನೆಗೆ ಬರುತ್ತಲೇ ಮಂಜುನಾಥ್ ಮೇಲೆ ಹಲ್ಲೆಗೆ ಮುಂದಾದ ಎಲ್ಲರೂ ಆತನ ಮರ್ಮಾಂಗದ ಮೇಲೆ ತುಳಿಯುತ್ತಾರೆ. ಮೊಳೆಯಿದ್ದ ರೀಪರ್ ಪೀಸ್ನಿಂದ ತಲೆಗೆ ಹೊಡೆಯುತ್ತಾರೆ. ಪರಿಣಾಮ ಮಂಜುನಾಥ್ ಸಾವನ್ನಪ್ಪಿದ್ದ
ಲಾಸ್ಟ್ ಪ್ಲಾನ್!
ಪ್ಲಾನ್ ಪ್ರಕಾರ ಮಂಜುನಾಥ್ ನನ್ನು ಕೊಲೆ ಮಾಡುವ ಸಂಬಂಧಿಗಳು, ಕೋಮುಗಲಭೆಯಲ್ಲಿ ಸತ್ತಾ ಅಂತಾ ಬಿಂಬಿಸೋಕೆ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದರು. ಚಾಕು ತೆಗೆದುಕೊಂಡು ಮೃತ ಮಂಜುನಾಥ್ ನ ದೇಹದ ಭಾಗಗಳಿಗೆ ಇರಿಯುತ್ತಾರೆ.
ಬಳಿಕ ದುರ್ಗೇಶ್ ಮತ್ತು ಅರುಣ್ ಬೈಕ್ ನಲ್ಲಿ ಮಂಜುನಾಥ್ ಮೃತದೇಹವನ್ನು ಪದ್ಮಾ ಟಾಕೀಸ್ ಹಿಂಬಾಗದಲ್ಲಿ ಎಸೆದು ಪರಾರಿಯಾಗ್ತಾರೆ. ನಂತರ ಯಾರು ಏನೇ ಕೇಳಿದ್ರೂ ಏನು ಹೇಳಬೇಕು ಎಲ್ಲರ ಉತ್ತರನೂ ಒಂದೇ ಆಗಿರಬೇಕು ಅಂತಾ ಮಾತಾಡಿಕೊಳ್ತಾರೆ.
ಇತ್ತ ಅರುಣ್ ತನ್ನ ಬಟ್ಟೆಯನ್ನು ತಾನು ವಾಸವಿರುವ ಗೋಂದಿ ಚಟ್ನಳ್ಳಿಯ ಚಾನಲ್ ನಲ್ಲಿ ಎಸೆದು ಬಿಡ್ತಾನೆ. ಚಾಕುವನ್ನು ಮನೆಯಲ್ಲಿ ಇಟ್ಟಿರುತ್ತಾನೆ. ಎಲ್ಲರೂ ರಾತ್ರೋ ರಾತ್ರಿ ತಮ್ಮ ತಮ್ಮ ಮನೆ ಸೇರಿಕೊಂಡು ಬಿಡ್ತಾರೆ.
ಮಾರನೇ ದಿನ ಅದೇ ಶವದ ಮುಂದೆ ಕಣ್ಣೀರಿಟ್ಟು ನಾಟಕವಾಡುವ ಸಂಬಂಧಿಗಳು ಲಕ್ಷಗಟ್ಟಲೆ ಪರಿಹಾರವನ್ನು ಪಡೆದಿದ್ದರು.
ಇದು ಕಥೆ
ಗೃಹ ಸಚಿವ ಕೆ.ಜೆ. ಜಾರ್ಜ್ ಸಾಂತ್ವನ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೀಗೆ ಹಲವಾರು ಮಂದಿ ಮಂಜುನಾಥನ ಮನೆಗೆ ಭೇಟಿಕೊಟ್ಟು, ಇದೇ ದಾಕ್ಷಾಯಣಮ್ಮನಿಗೆ ಸಮಾಧಾನ ಹೇಳಿದ್ದರು. ಆದರೆ ಇಡೀ ಕುಟುಂಬ ಪರಿಸ್ಥಿತಿಯ ಲಾಭ ಪಡೆದು, ಮನೆ ಸದಸ್ಯನನ್ನೆ ಕೊಂದು, ಊರಿಗೆ ಕೋಮು ಬೆಂಕಿ ಹಚ್ಚಲು ಹೋಗಿತ್ತು. ಜೊತೆಗೆ ಲಕ್ಷ ಪರಿಹಾರ ಸಹ ಪಡೆದುಕೊಂಡಿತ್ತು. ಆದರೆ, ಆರೋಪಿಗಳು ತಮ್ಮ ನಾಟಕದ ನಡುವೆ, ನಾವು ಕೆಣಕ್ಕಿದ್ದು ಪೊಲೀಸರನ್ನ ಎಂಬುದುನ್ನ ಮರೆತು ಬಿಟ್ಟಿತ್ತು. ಕಾನೂನು ಕಟ್ಟಲೇ ಎನ್ನುತ್ತಾ ವಿಚಾರಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎಂದುಕೊಂಡಿತ್ತು. ಆದರೆ ಬಿಟ್ಟು ಹಿಡಿದ ಪೊಲೀಸರು, ಆರೋಪಿಗಳನ್ನು ಅವರ ಪಾಡಿಗೆ ಅಡ್ಡಾಡಲು ಬಿಟ್ಟಿದ್ದರು, ಒಂದು ಕಥೆ, ಒಬ್ಬ ಕಾಮನ್ ಮ್ಯಾನ್, ಒಂದು ಬೈಕ್, ಒಬ್ಬ ಆರೋಪಿ ಇಡೀ ಸೀನ್ ಚೆಂಜ್ ಮಾಡಿದ್ದ..
ಸ್ನೇಹಿತರೇ, ಶಿವಮೊಗ್ಗದಲ್ಲಿ ನಡೆದ ಇಂತಹ ಹತ್ತಾರು ಘಟನೆಗಳು ಬರಹದ ಜೋಳಿಗೆಯಲ್ಲಿದೆ. ನಿಮ್ಮೆದರು ಮುಂದೆಯು ಹೀಗೆ ಸಂಡೆ ಫ್ಲಾಶ್ ಬ್ಲ್ಯಾಕ್ ಫೀಲ್ಗಾಗಿ ಕ್ರೈಂ ಟಚ್ ಸ್ಟೋರಿಗಳನ್ನು ನೀಡುತ್ತಾ ಹೋಗುತ್ತೇನೆ. ಇದು ನಿಮಗೆ ಇಷ್ಟವಾದಲ್ಲಿ, ಪ್ರತಿಕ್ರಿಯೆ ನೀಡಿ, ಅಭಿಪ್ರಾಯ ನೀಡಿ,,ಇನ್ನಷ್ಟು ಸಲಹೆ ನೀಡಿ.. ಈ ಸ್ಟೋರಿಯನ್ನು ಮುಂದಿನ ಓದುಗರಿಗೆ ಫಾರ್ವರ್ಡ್ ಮಾಡಿ.. ಅಂದಹಾಗೆ ನಂಬರ್ ಗೊತ್ತಲ್ವಾ.. 9353314090
ಇಂತಿ ನಿಮ್ಮ ಜೆಪಿ