ಶಿವಮೊಗ್ಗ : ಜಿಲ್ಲೆಯ ಸಾಗರದ ಮಹಿಳೆಯೊಬ್ಬರಿಗೆ ಎಟಿಎಂ ಕಾರ್ಡ್ ನವೀಕರಣದ ಸೋಗಿನಲ್ಲಿ ಅಪರಿಚಿತರು ಕರೆ ಮಾಡಿ ಬರೋಬ್ಬರಿ 2.84 ಲಕ್ಷ ರೂಪಾಯಿ ಹಣವನ್ನು ವಂಚಿಸಿದ್ದಾರೆ. ಈ ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನವೆಂಬರ್ 26 ರ ಮಧ್ಯಾಹ್ನದ ಸಮಯದಲ್ಲಿ ಮಹಿಳೆಯ ಮೊಬೈಲ್ ಸಂಖ್ಯೆಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿಯು ಮಹಿಳೆಯ ಎಟಿಎಂ ಕಾರ್ಡ್‌ನ ಅವಧಿ ಮುಗಿದಿದ್ದು, ಅದನ್ನು ಅಪ್‌ಡೇಟ್ ಮಾಡಬೇಕು ಎಂದು ಹೇಳಿದ್ದಾನೆ. ಈ ಕುರಿತು ಪತ್ನಿ ತಮ್ಮ ಪತಿಗೆ ವಿಷಯ ತಿಳಿಸಿದಾಗ, ತಕ್ಷಣವೇ ಪತಿಯು ಅದೇ ಅಪರಿಚಿತ ಸಂಖ್ಯೆಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವಂಚಕನು ತನ್ನನ್ನು ಎಸ್‌ಬಿಐ ಬ್ಯಾಂಕ್‌ನ ವ್ಯವಸ್ಥಾಪಕ ಎಂದು ಪರಿಚಯಿಸಿಕೊಂಡು, ಕಾರ್ಡ್ ನವೀಕರಣದ ಪ್ರಕ್ರಿಯೆಗಾಗಿ ದೂರುದಾರರ ಬ್ಯಾಂಕ್ ಮಾಹಿತಿ ಮತ್ತು ಎಟಿಎಂ ಕಾರ್ಡ್‌ನ ಸಂಪೂರ್ಣ ವಿವರಗಳನ್ನು ಕೇಳಿದ್ದಾನೆ.
Cyber crime ಆ ವ್ಯಕ್ತಿ ಬ್ಯಾಂಕ್ ಮ್ಯಾನೇಜರ್ ಎಂದು ನಂಬಿದ ದೂರುದಾರರು, ತಮ್ಮ ವೈಯಕ್ತಿಕ ಮಾಹಿತಿಯನ್ನು ಅವರಿಗೆ ಒದಗಿಸಿದ್ದಾರೆ. ಇದರ ನಂತರ, ಆ ವಂಚಕನು ದೂರುದಾರರಿಗೆ ಮೊಬೈಲ್‌ಗೆ ಬರುವ ಓಟಿಪಿ ನಂಬರ್ನ್ನು ತಮಗೆ ತಿಳಿಸುವಂತೆ ಕೇಳಿದ್ದಾನೆ. ಅದರಂತೆಯೇ, ದೂರುದಾರರು ತಮ್ಮ ಮೊಬೈಲ್‌ಗೆ ಬಂದಿದ್ದ ಓಟಿಪಿ ಸಂಖ್ಯೆಗಳನ್ನು ಆ ಅಪರಿಚಿತ ವ್ಯಕ್ತಿಗೆ ತಿಳಿಸಿದ್ದಾರೆ. ವಂಚಕನು ಇದೇ ರೀತಿ ಹಂತಹಂತವಾಗಿ ಒಟ್ಟು 13 ಬಾರಿ ದೂರುದಾರರಿಂದ ಓಟಿಪಿಯನ್ನು ಪಡೆದುಕೊಂಡಿದ್ದಾನೆ. ಬ್ಯಾಂಕ್ ಮ್ಯಾನೇಜರ್‌ನಂತೆ ನಟಿಸಿದ ಆ ವಂಚಕ, ಕಾರ್ಡ್ ಅಪ್ಡೇಟ್ ಹಾಗೂ ನಾಮಿನಿ ಪ್ರಕ್ರಿಯೆ ಮಾಡಬೇಕೆಂದು ಸುಳ್ಳು ಹೇಳಿ, ದೂರುದಾರರ ಪತ್ನಿಯ ಡೆಬಿಟ್ ಕಾರ್ಡ್‌ನ ಎಲ್ಲಾ ವೈಯಕ್ತಿಕ ಮಾಹಿತಿ ಮತ್ತು ಓಟಿಪಿಗಳನ್ನು ಸಂಪೂರ್ಣವಾಗಿ ಪಡೆದುಕೊಂಡಿದ್ದಾನೆ.
ಈ ಕೃತ್ಯದ ಮೂಲಕ, ವಂಚಕರು ದೂರುದಾರರ ಬ್ಯಾಂಕ್ ಖಾತೆಯಿಂದ ಒಟ್ಟು 2,84,321 ಹಣವನ್ನು ವಂಚಿಸಿದ್ದಾರೆ. ಎಂದು ಆರೋಪಿಸಿ ದೂರನ್ನು ದಾಖಲಿಸಲಾಗಿದೆ.

