ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿವೆ. ಬೆರಳು ಕೊಟ್ಟರೆ ಹಸ್ತ ನುಂಗುವಂತೆ ಸೈಬರ್ ವಂಚಕರು ಹೊಂಚು ಹಾಕುತ್ತಿರುತ್ತಾರೆ. ನಾವು ಸ್ವಲ್ಪ ಯಾಮಾರಿದರೂ ಲಕ್ಷ ಲಕ್ಷ ಹಣ ಕಳೆದುಕೊಳ್ಳುವುದು ಗ್ಯಾರಂಟಿ. ಆದರೆ, ಸರಿಯಾದ ಸಮಯಕ್ಕೆ ಎಚ್ಚೆತ್ತು ಪೊಲೀಸ್ ದೂರು ನೀಡಿದರೆ ಖಂಡಿತವಾಗಿಯೂ ಹಣವನ್ನು ವಾಪಸ್ ಪಡೆಯಬಹುದು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.
ಏನಿದು ವಿಚಾರ ಅನ್ಕೊಂಡ್ರಾ. ಅದೇನಂದ್ರೆ ಇದೀಗ ಕಳೆದ ಒಂದು ವರ್ಷದ ಹಿಂದೆ ಸೈಬರ್ ವಂಚನೆಗೆ ಒಳಗಾಗಿ ಬರೋಬ್ಬರಿ 67 ಲಕ್ಷ ಕಳೆದುಕೊಂಡ ವ್ಯಕ್ತಿಗೆ ಪೊಲೀಸರು ಸತತ ಕಾರ್ಯಾಚರಣೆ ನಡೆಸುವ ಮೂಲಕ ಹಣವನ್ನು ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಏನಿದು ಪ್ರಕರಣ ಹೇಗೆ ನಡೀತು ಎಂಬುದನ್ನು ತಿಳ್ಕೊಳೋಕಿಂತ ಮುಂಚೆ ಸೈಬರ್ ವಂಚನೆಗಳು ಹೇಗೆ ನಡೀತಾವೆ ಅನ್ನೋದನ್ನ ಒಂದು ಸಣ್ಣ ಉದಾಹರಣೆ ಮೂಲಕ ತಿಳಿಸ್ತೀನಿ ನೋಡಿ.
ಶಿವಮೊಗ್ಗ, ಸರ್ಕಾರಿ ಅಧಿಕಾರಿಗೆ ಬಂತು ಲೋಕಾಯುಕ್ತ ಹೆಸರಿನಲ್ಲಿ ಫೋನ್, ಹೀಗೂ ಇರ್ತಾರೆ ಹುಷಾರ್
Shivamogga Cyber Police ರೀಲ್ಸ್, ಫೇಸ್ಬುಕ್ ನೋಡ್ತಿರುವಾಗ ಕ್ಯಾಚ್ ಹಾಕ್ತಾರೆ ಹುಷಾರ್
ಹೌದು ಡೈಲಿ ನಾವು ಟೈಮ್ ಪಾಸ್ಗೆ ಅಂತ ನೋಡುವ ರೀಲ್ಸ್ ಗಳೇ ಹೆಚ್ಚಾಗಿ ನಮ್ಮ ಖಜಾನೆಯನ್ನ ಬರಿದಾಗಿಸಬಹುದು. ಅದು ಹೇಗೆಂದರೆ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಬಹುತೇಕ ಪ್ರಕರಣಗಳು ರೀಲ್ಸ್ ಮೂಲಕ ಜನರನ್ನು ಸೈಬರ್ ವಂಚಕರು ಆಕರ್ಷಿಸಿ ಬಲೆಗೆ ಬೀಳಿಸಿಕೊಂಡು ಹಣವನ್ನು ವಂಚನೆ ಮಾಡಿರೋದು ಕಾಣಸಿಗುತ್ತೆ.
ಮನೆಯಲ್ಲಿಯೇ ಕುಳಿತು ಹಣ ಸಂಪಾದಿಸಿ ಪೋಷಕರ ಹಣದಲ್ಲಿ ಎಷ್ಟು ದಿನ ಬದುಕುತ್ತೀರಿ? ಇಲ್ಲಿದೆ ಸುಲಭವಾಗಿ ಹಣ ಗಳಿಸುವ ಸುವರ್ಣಾವಕಾಶ ಎಂಬಂತಹ ಆಕರ್ಷಕ ಜಾಹೀರಾತುಗಳ ಮೂಲಕ ನಿಮ್ಮನ್ನು ಸೆಳೀತಾರೆ. ನೀವು ಬಣ್ಣದ ಮಾತಿಗೆ ಮರುಳಾಗಿ ಬಲೆಗೆ ಬಿದ್ದರೆ, ಮೊಳಕೈಗೆ ತುಪ್ಪ ಸವರುವಂತೆ ಆರಂಭದಲ್ಲಿ ಸ್ವಲ್ಪ ಲಾಭ ನೀಡಿ ನಂಬಿಕೆ ಹುಟ್ಟಿಸುತ್ತಾರೆ. ನಂತರ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಿಸಿಕೊಂಡು ವಂಚಿಸಿ ಪರಾರಿಯಾಗುತ್ತಾರೆ.
ಈ ಹಿಂದಿನ ಪ್ರಕರಣದಲ್ಲಿಯೂ ಸಹ ನಡೆದಿದ್ದು ಅದೇ. ಈ ಪ್ರಕರಣವನ್ನು ಪೊಲೀಸರು ಹೇಗೆ ಪತ್ತೆ ಹಚ್ಚಿದ್ರು ಅನ್ನೋದನ್ನ ನೋಡೋಕಿಂತ ಮುಂಚೆ ಪ್ರಕರಣ ಏನು, ನವಂಬರ್ ತಿಂಗಳಲ್ಲಿ ನಡೆದ ಆ ವಂಚನೆಯ ಎಫ್ ಐ ಆರ್ ನಲ್ಲಿ ಏನಿದೆ ಅನ್ನೋದ್ನ ತಿಳ್ಕೊಳೋಣ.
ಎಫ್ ಐ ಆರ್ ಪ್ರಕಾರ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ Funin.com ಎಂಬ ಹೆಸರಿನಲ್ಲಿ ದೂರುದಾರರಿಗೆ, ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುತ್ತೇವೆ ಎಂದು ನಂಬಿಸಿದ್ದರು. ದೂರುದಾರರ ಹೆಸರಿನಲ್ಲಿ Funin Exchange ಎಂಬಲ್ಲಿ ಐಡಿ ಓಪನ್ ಮಾಡಿಸಿ, ಹಂತಹಂತವಾಗಿ ಒಟ್ಟು 67,78, 100ರೂಪಾಯಿ ಹೂಡಿಕೆ ಮಾಡಿಸಿಕೊಂಡಿದ್ದರು.
ಹಣ ಹೂಡಿಕೆಯಾದ ನಂತರ ದೂರುದಾರರ ಐಡಿಯಲ್ಲಿ ಡೆಪಾಸಿಟ್ ಮತ್ತು ವಿತ್ ಡ್ರಾ ಆಯ್ಕೆಗಳನ್ನು ಬ್ಲಾಕ್ ಮಾಡಲಾಗಿತ್ತು. ದೂರುದಾರರು ಕಸ್ಟಮರ್ ಕೇರ್ ನಂಬರ್ ಗೆ ಕರೆ ಮಾಡಿದಾಗ ಯಾವುದೇ ಸರಿಯಾದ ಸ್ಪಂದನೆ ಸಿಗದಿದ್ದಾಗ ತಾವು ಮೋಸ ಹೋಗಿರುವುದು ಅವರಿಗೆ ಅರಿವಾಯಿತು. ಒಟ್ಟು 559 ಹಂತಗಳಲ್ಲಿ ಈ ಬೃಹತ್ ಮೊತ್ತವನ್ನು ವರ್ಗಾಯಿಸಿಕೊಂಡು ವಂಚಿಸಲಾಗಿತ್ತು. ಈ ಹಿನ್ನೆಲೆ ನವಂಬರ್ 30 ರಂದು ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Shivamogga Cyber Police ಪೊಲೀಸರ ಯಶಸ್ವಿ ಕಾರ್ಯಾಚರಣೆ
ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಇನ್ಸ್‌ಪೆಕ್ಟರ್ (PI) ನೇತೃತ್ವದ ತಂಡವು ತನಿಖೆ ಕೈಗೊಂಡಿತು. ಅಕ್ರಮವಾಗಿ ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಗಳ ಮೂಲವನ್ನು ಪತ್ತೆ ಹಚ್ಚಿದ ಪೊಲೀಸರು, ಕೂಡಲೇ ಆ ಖಾತೆಗಳನ್ನು ಫ್ರೀಜ್ ಮಾಡಿಸಿದರು.
ಸತತ ಪರಿಶ್ರಮದ ಫಲವಾಗಿ, ವಂಚನೆಗೊಳಗಾದ ಹಣದಲ್ಲಿ 50,00,000 ರೂಪಾಯಿ ಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾದರು. ಇದೀಗ ನ್ಯಾಯಾಲಯದ ಆದೇಶದ ಮೇರೆಗೆ ಸದರಿ ಹಣವನ್ನು ದೂರುದಾರರಿಗೆ ಹಿಂದಿರುಗಿಸಲಾಗಿದೆ.
ಏನೇ ಇರಲಿ ರೀಲ್ಸ್ ಟೈಮ್ ಪಾಸ್ಗ ಮಾತ್ರ ಸೀಮಿತವಾಗಿರಲಿ. ದುಪ್ಪಟ್ಟು ಹಣ ಗಳಿಸುವ ಉದ್ದೇಶದಿಂದ ಹೂಡಿಕೆ ಮಾಡುವ ಮುನ್ನ ನೂರು ಬಾರಿ ಯೋಚಿಸಿ. ಯಾವುದೇ ಅಪರಿಚಿತ ಲಿಂಕ್ ಅಥವಾ ಆಮಿಷಗಳಿಗೆ ಒಳಗಾಗಬೇಡಿ. ಒಂದು ವೇಳೆ ವಂಚನೆಯಾದರೆ ವಿಳಂಬ ಮಾಡದೆ ತಕ್ಷಣ ಸೈಬರ್ ಪೊಲೀಸರಿಗೆ ದೂರು ನೀಡಿ ಆದಷ್ಟು ಹುಷಾರಾಗಿರಿ ಎಂಬುವುದೇ ಮಲೆನಾಡು ಟುಡೆಯ ಆಶಯ
ವರದಿ : ಪ್ರತಾಪ್ ತೀರ್ಥಹಳ್ಳಿ. ಮಲೆನಾಡು ಟುಡೆ ಕಂಟೆಂಟ್ ಪ್ರೊಡ್ಯೂಸರ್
Shivamogga Cyber Police Recover 50 Lakh

