Hodala ತೀರ್ಥಹಳ್ಳಿ: ತಾಲೂಕಿನ ಹೊದಲ-ಅರಳಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊದಲದ ಪ್ರಮುಖ ಸಾಮಾಜಿಕ ಹಾಗೂ ಧಾರ್ಮಿಕ ಧುರೀಣ, ವಿಶ್ವಕರ್ಮ ಚಂಡೆ ಬಳಗದ ಪ್ರಮುಖರಾಗಿದ್ದ ನಾಗರಾಜ ಆಚಾರ್ಯ (45) ಅವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಶಿವಮೊಗ್ಗ : ಖಾಸಗಿ ಆಸ್ಪತ್ರೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ವಿಚಾರ, ಒಂದು ವಾರ ಗಡುವು, ಪ್ರತಿಭಟನೆಯ ಎಚ್ಚರಿಕೆ
ಹೊದಲ ಸ್ಪೋರ್ಟ್ಸ್ ಅಸೋಸಿಯೇಷನ್ ಸಂಸ್ಥಾಪಕ ಸದಸ್ಯರಾಗಿ, ಹೊದಲ ಶ್ರೀ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾಗಿ ಹಾಗೂ ಹೊದಲ ವಿಶ್ವಕರ್ಮ ಚಂಡೆ ಬಳಗದ ನೇತೃತ್ವ ವಹಿಸಿಕೊಂಡಿದ್ದ ನಾಗರಾಜ ಆಚಾರ್ಯ ಅವರು, ಈ ಭಾಗದ ಯಾವುದೇ ಕ್ರೀಡಾ, ಸಾಮಾಜಿಕ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಮುಂಚೂಣಿಯಲ್ಲಿ ನಿಂತು ಯಶಸ್ವಿಗೊಳಿಸುತ್ತಿದ್ದರು. ಸದಾ ಕ್ರಿಯಾಶೀಲರಾಗಿದ್ದ ಅವರು ಶನಿವಾರ ಬೆಳಗಿನ ಜಾವ 1:35ರ ಸುಮಾರಿಗೆ ನಿಧನರಾಗಿದ್ದಾರೆ.
ವಿಶ್ವಕರ್ಮ ಸಮಾಜದಲ್ಲಿ ಅತ್ಯಂತ ಗೌರವಾನ್ವಿತ ಹಾಗೂ ಸಕ್ರಿಯ ವ್ಯಕ್ತಿತ್ವ ಹೊಂದಿದ್ದ ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧುಮಿತ್ರರನ್ನು ಅಗಲಿದ್ದಾರೆ. ಅವರ ಹಠಾತ್ ನಿಧನಕ್ಕೆ ಹೊದಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಹೊದಲ ಗ್ರಾಮದ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ಮಧ್ಯಾಹ್ನ 2:00 ಗಂಟೆಯ ವೇಳೆಗೆ ಪಟ್ಟಣದ ತುಂಗಾ ತೀರದ ರೋಟರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
