ಶಿವಮೊಗ್ಗ: ಅಮೀರ್ ಅಹಮದ್ ಸರ್ಕಲ್‌ನಲ್ಲಿ ತುಳಜಾಭವಾನಿ-ಶಿವಾಜಿ, ಗಾಂಧಿ ಬಜಾರ್‌ನಲ್ಲಿ ಪಂಚಮುಖಿ ಆಂಜನೇಯನ ವಿಗ್ರಹ ಪ್ರತಿಷ್ಠಾಪನೆ!

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗದ ಅಮೀರ್_ ಅಹಮದ್_ ಸರ್ಕಲ್___ನಲ್ಲಿ ಶಿವಾಜಿ ಹಾಗೂ ದೇವಿ ತುಳಜಾ ಭವಾನಿಯ ವಿಗ್ರಹ
ಶಿವಮೊಗ್ಗದ ಅಮೀರ್_ ಅಹಮದ್_ ಸರ್ಕಲ್___ನಲ್ಲಿ ಶಿವಾಜಿ ಹಾಗೂ ದೇವಿ ತುಳಜಾ ಭವಾನಿಯ ವಿಗ್ರಹ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಹೇ ಶಿವಾಜಿ, ನಿನ್ನ ಧರ್ಮನಿಷ್ಠೆ ಹಾಗೂ ಪ್ರಜಾರಕ್ಷಣೆಯ ಸಂಕಲ್ಪದಿಂದ ನಾನು ಪ್ರಸನ್ನಳಾಗಿದ್ದೇನೆ. ಈ ಭೂಮಿಯಲ್ಲಿ ಅಧರ್ಮವನ್ನು ನಾಶಮಾಡಿ, ಧರ್ಮವನ್ನು ಮತ್ತು ಸಜ್ಜನರನ್ನು ರಕ್ಷಿಸಲು ನಿನಗೆ ಈ ದಿವ್ಯ ಖಡ್ಗವನ್ನು ನೀಡುತ್ತಿದ್ದೇನೆ. ಈ ಖಡ್ಗವು ನಿನ್ನ ಬಳಿ ಇರುವವರೆಗೆ ನಿನಗೆ ಯಾವುದೇ ಯುದ್ಧದಲ್ಲಿ ಸೋಲಿಲ್ಲ, ನಿನ್ನ ಸ್ವರಾಜ್ಯದ ಕನಸು ನನಸಾಗುತ್ತದೆ. ಇದು 17 ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಕ್ತಿಗೆ ಮೆಚ್ಚಿ ಅವರ ಇಷ್ಟದೇವತೆಯಾದ ತುಳಜಾ ಭವಾನಿಯು ಪ್ರತ್ಯಕ್ಷಳಾಗಿ ಖಡ್ಗವನ್ನು ನೀಡುವಾಗ ನುಡಿದ ಮಾತು.

ಈ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಲು ಒಂದು ವಿಶೇಷ ಕಾರಣವಿದೆ. ಶಿವಮೊಗ್ಗದ ಪ್ರಸಿದ್ಧ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ನಗರದ ಅಮೀರ್ ಅಹಮದ್ ಸರ್ಕಲ್‌ನಲ್ಲಿ ಶಿವಾಜಿ ಮಹಾರಾಜರ ಬೃಹತ್ ವಿಗ್ರಹ ಪ್ರತಿಷ್ಠಾಪನೆ ಕಾರ್ಯ ಭರದಿಂದ ಸಾಗುತ್ತಿದೆ.

ಪ್ರತಿ ವರ್ಷ ಹಿಂದೂ ಅಲಂಕಾರ್ ಸಮಿತಿಯವರು ವಿವಿಧ ವೃತ್ತಗಳಲ್ಲಿ ಒಂದಲ್ಲಾ ಒಂದು ರೀತಿಯ ಆಕರ್ಷಕ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಮೂಲಕ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆಗೆ ಹೊಸ ಮೆರುಗು ನೀಡುತ್ತಾ ಬಂದಿದ್ದಾರೆ. ಅದರಂತೆ ಕಳೆದ ಬಾರಿ ಅಮೀರ್ ಅಹಮದ್ ಸರ್ಕಲ್‌ನಲ್ಲಿ ಭಗವಾನ್ ಪರಶುರಾಮರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಈ ಬಾರಿ ಶಿವಾಜಿ ಮಹಾರಾಜರು ದೇವಿ ತುಳಜಾಭವಾನಿಯಿಂದ ಖಡ್ಗವನ್ನು ಸ್ವೀಕರಿಸುತ್ತಿರುವ ದಿವ್ಯ ದೃಶ್ಯದ ವಿಗ್ರಹವನ್ನು ಸ್ಥಾಪಿಸಲಾಗುತ್ತಿದೆ.

ಈ ಬಾರಿಯ ವಿಗ್ರಹವನ್ನು ಭದ್ರಾವತಿಯ ಶಿಲ್ಪಿ ವಿಷ್ಣು ಅವರು ಕೆತ್ತಿದ್ದಾರೆ. ಅಮೀರ್ ಅಹಮದ್ ಸರ್ಕಲ್‌ನಲ್ಲಿ ಬೃಹತ್ ಗಾತ್ರದ ವೇದಿಕೆಯನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಸಿಂಹದ ಮೇಲೆ ತುಳಜಾ ಭವಾನಿ ದೇವಿಯು ಶಿವಾಜಿಗೆ ಖಡ್ಗ ನೀಡುತ್ತಿರುವಂತೆ ಹಾಗೂ ಶಿವಾಜಿಯು ಅತ್ಯಂತ ಭಕ್ತಿಯಿಂದ ಕುಳಿತು ಅದನ್ನು ಸ್ವೀಕರಿಸುತ್ತಿರುವಂತೆ ಅತ್ಯಂತ ನೈಜವಾಗಿ ಮೂರ್ತಿಯನ್ನು ವಿನ್ಯಾಸಗೊಳಿಸಲಾಗಿದೆ. ವಿಗ್ರಹ ಪ್ರತಿಷ್ಠಾಪನೆಯ ಅಂತಿಮ ಹಂತದ ಕೆಲಸಗಳು ವೇಗವಾಗಿ ನಡೆಯುತ್ತಿದ್ದು, ಸಂಜೆಯ ವೇಳೆಗೆ ಸಂಪೂರ್ಣ ದೃಶ್ಯಾವಳಿ ಕಣ್ಣಿಗೆ ಮುದ ನೀಡಲಿದೆ.

ಗಾಂಧಿ ಬಜಾರ್‌ನಲ್ಲಿ ಪಂಚಮುಖಿ ಆಂಜನೇಯನ ವಿಗ್ರಹ ಪ್ರತಿಷ್ಠಾಪನೆ

ಕಳೆದ ಬಾರಿ ಶಿಲ್ಪಿ ಜೀವನ್ ಅವರು ಗಾಂಧಿ ಬಜಾರ್‌ನ ಮುಖ್ಯ ದ್ವಾರದಲ್ಲಿ ಸಮುದ್ರಮಂಥನದ ವಿನ್ಯಾಸವನ್ನು ರೂಪಿಸಿದ್ದರು. ಈ ಬಾರಿ ಅದೇ ಸ್ಥಳದಲ್ಲಿ ಪಂಚಮುಖಿ ಆಂಜನೇಯನ ವಿಶೇಷ ಕಲಾಕೃತಿಯನ್ನು ಸಿದ್ಧಪಡಿಸಲಾಗುತ್ತಿದೆ. ಆಂಜನೇಯನ ಎದೆಯೊಳಗಿನ ಹೃದಯದಲ್ಲಿ ಶ್ರೀರಾಮನ ದರ್ಶನವಾಗುವಂತಹ ಆತ್ಮರಾ’ನ ಕಲ್ಪನೆಯನ್ನು ಬಿಂಬಿಸಲು ಸಿದ್ಧತೆಗಳು ನಡೆದಿವೆ.

ಈ ವಿನ್ಯಾಸದ ಮೇಲ್ಭಾಗದಲ್ಲಿ ಆಂಜನೇಯನ ಒಂದು ಮುಖ್ಯ ಮುಖ ಹಾಗೂ ಕೆಳಭಾಗದಲ್ಲಿ ಉಳಿದ ನಾಲ್ಕು ಮುಖಗಳು ಕಾಣುವಂತೆ ರೂಪಿಸಲಾಗಿದೆ. ಈ ಕಲಾಕೃತಿಯು ಇಂದು (ಸೆಪ್ಟೆಂಬರ್ 22) ಸಂಜೆಯ ವೇಳೆಗೆ ಶಿವಮೊಗ್ಗಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ತದನಂತರ ಮಹಾದ್ವಾರದಲ್ಲಿ ವಿಗ್ರಹ ಅಳವಡಿಕೆ ಸೇರಿದಂತೆ ಬಾಕಿ ಕಾಮಗಾರಿಗಳು ನೆರವೇರಲಿವೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor