
ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / 17 ವರ್ಷದ ಬಾಲಕಿಯನ್ನ ಪ್ರೀತಿಸುವುದಾಗಿ ನಂಬಿಸಿ ಮನೆಯಿಂದ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಹಾಗೂ ಕೃತ್ಯಕ್ಕೆ ಸಹಕರಿಸಿದ ಮತ್ತಿಬ್ಬರು ಸೇರಿದಂತೆ ಮೂವರಿಗೆ ನ್ಯಾಯಾಲಯ ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಪೋಕ್ಸೊ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್ಟಿಎಸ್ಸಿ-1) ಮೂವರ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿದೆ.



ಪ್ರಕರಣದ ಹಿನ್ನೆಲೆ
ಪ್ರಕರಣದ ಮೊದಲ ಆರೋಪಿ 28 ವರ್ಷದ ಯುವಕ, 17 ವರ್ಷದ ಬಾಲಕಿಗೆ ಆಕೆಯನ್ನ ಪ್ರೀತಿಸುವುದಾಗಿ ಹೇಳಿದ್ದ. ಬಳಿಕ ಆಕೆಯನ್ನು ಅವಳ ಮನೆಯಿಂದ ಕರೆದುಕೊಂಡು ಹೋಗಿದ್ದ. ಹೀಗೆ ಕರೆದೊಯ್ಯಲ್ಲ 33 ವರ್ಷದ ವ್ಯಕ್ತಿ ಕಾರು ನೀಡಿದ್ದ. ಮತ್ತೊಬ್ಬ 28 ವರ್ಷದ ವ್ಯಕ್ತಿ ಈ ಇಬ್ಬರಿಗೂ ತನ್ನ ಜಾಗದಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಿದ್ದ. ಈ ಸ್ಥಳದಲ್ಲಿ ಆರೋಪಿ ಕೃತ್ಯವೆಸಗಿದ್ದ.ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಪ್ರಕರಣದ ತನಿಖೆ ಮುಗಿದ ಬಳಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್ಟಿಎಸ್ಸಿ-1)ಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು.
ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶ್ರೀಧರ್ ಅವರು ವಾದ ಮಂಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶ ನಿಂಗನಗೌಡ ಭ. ಪಾಟೀಲ್ ಅವರು ಮೂವರು ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿರುವುದನ್ನು ಪರಿಗಣಿಸಿ ಶಿಕ್ಷೆ ವಿಧಿಸಿದ್ದಾರೆ.

ಶಿಕ್ಷೆಯ ವಿವರ
- ಮೂವರು ಆರೋಪಿಗಳಿಗೂ ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿರುವ ನ್ಯಾಯಾಲಯ, ಒಟ್ಟು ₹3,29,000 ದಂಡ ಪಾವತಿಸುವಂತೆ ಆದೇಶಿಸಿದೆ.
- ಇದರೊಂದಿಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಬಾಲಕಿಗೆ ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ. ಆರೋಪಿಗಳಿಂದ ವಸೂಲಿಯಾಗುವ ದಂಡದ ಮೊತ್ತದಲ್ಲಿ ₹3,00,000 ಸಂತ್ರಸ್ತ ಬಾಲಕಿಗೆ ನೀಡಬೇಕು. ಅಲ್ಲದೆ, ಸರ್ಕಾರದ ವತಿಯಿಂದ ಪ್ರತ್ಯೇಕವಾಗಿ ₹4,00,000 ಪರಿಹಾರ ಒದಗಿಸುವಂತೆ ಸೂಚಿಸಲಾಗಿದೆ.
- ಈ ಮೂಲಕ ಸಂತ್ರಸ್ತ ಬಾಲಕಿಗೆ ಒಟ್ಟು ₹7,00,000 ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿದೆ. ಇದರಲ್ಲಿ ₹3,00,000 ಆರೋಪಿಗಳ ದಂಡದ ಮೊತ್ತದಿಂದ ಹಾಗೂ ಉಳಿದ ₹4,00,000 ಸರ್ಕಾರದ ವತಿಯಿಂದ ಪಾವತಿಸಲು ನಿರ್ದೇಶಿಸಲಾಗಿದೆ.

