Thalapathy Vijay’s ಶಿವಮೊಗ್ಗ: ತಮಿಳುನಾಡಿನ ರಾಜಕೀಯ ರಂಗದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿರುವ, ತಮಿಳಗೆ ವೆಟ್ರಿ ಕಳಗಂ’ ಪಕ್ಷದ ಸಂಸ್ಥಾಪಕ ಹಾಗೂ ಬಹುನಿರೀಕ್ಷಿತ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ‘ದಳಪತಿ’ ವಿಜಯ್ ಅವರ ಯಶಸ್ಸಿನ ಹಾದಿಯಲ್ಲಿ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೂ ಒಂದು ವಿಶೇಷವಾದ ನಂಟಿದೆ. ಹೌದು, ವಿಜಯ್ ಅಭಿನಯದ ಬ್ಲಾಕ್ ಬಸ್ಟರ್ ಹಿಟ್ ‘ಮಾಸ್ಟರ್’ (ಆರಂಭದಲ್ಲಿ ದಳಪತಿ 64 ಎಂದು ಹೆಸರಿಸಲಾಗಿದ್ದ) ಸಿನಿಮಾದ ಬಹುಪಾಲು ಚಿತ್ರೀಕರಣ ನಡೆದಿರುವುದು ಇದೇ ಶಿವಮೊಗ್ಗದಲ್ಲಿ. ಶಿವಮೊಗ್ಗ ನಗರದ ಲಕ್ಷ್ಮೀ ಥಿಯೇಟರ್ ಬಳಿ ಇರುವ ಐತಿಹಾಸಿಕ ಹಳೇ ಕೇಂದ್ರ ಕಾರಾಗೃಹದಲ್ಲಿ ಈ ಸಿನಿಮಾದ ಪ್ರಮುಖ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿತ್ತು.
ಜೂನ್ ಮೊದಲ ವಾರದಲ್ಲಿ , ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್
1897ರಲ್ಲಿ ನಿರ್ಮಿಸಲಾದ, ಸುಮಾರು 46 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಈ ಹಳೆಯ ಜೈಲು ಸ್ವಾತಂತ್ರ್ಯ ಹೋರಾಟದ ಅನೇಕ ನೆನಪುಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಕಾಲೇಜು ಹಿನ್ನೆಲೆಯ ಗ್ಯಾಂಗ್‌ಸ್ಟರ್ ಕಥಾಹಂದರವುಳ್ಳ ಚಿತ್ರದ ಚಿತ್ರೀಕರಣಕ್ಕಾಗಿ 2019ರ ಡಿಸೆಂಬರ್ 1 ರಿಂದ 2020ರ ಜನವರಿ 18 ರವರೆಗೆ ಸತತ ಒಂದೂವರೆ ತಿಂಗಳ ಕಾಲ ವಿಜಯ್ ಹಾಗೂ ವಿಜಯ್ ಸೇತುಪತಿ ಶಿವಮೊಗ್ಗದಲ್ಲೇ ವಾಸ್ತವ್ಯ ಹೂಡಿದ್ದರು. ಈ ಸುದೀರ್ಘ ವಾಸ್ತವ್ಯದ ಅವಧಿಯಲ್ಲಿ ಮಲೆನಾಡಿನ ಪರಿಸರ, ಆತಿಥ್ಯ ಹಾಗೂ ವಿಶೇಷವಾಗಿ ಮಂಡಗದ್ದೆಯ ಮೀನಿನ ಊಟದ ರುಚಿಗೆ ನಟ ವಿಜಯ್ ಸೇತುಪತಿ ಮಾರುಹೋಗಿದ್ದರು. ದೆಹಲಿಯಲ್ಲಿ ಚಿತ್ರೀಕರಣ ಮುಗಿಸಿದ ನಂತರ ಇಡೀ ಚಿತ್ರತಂಡವು ನೇರವಾಗಿ ಶಿವಮೊಗ್ಗಕ್ಕೆ ಆಗಮಿಸಿ, ಬಿಗಿ ಭದ್ರತೆಯ ನಡುವೆ ಯಶಸ್ವಿಯಾಗಿ ಶೂಟಿಂಗ್ ಪೂರ್ಣಗೊಳಿಸಿತ್ತು.
ದಳಪತಿ ವಿಜಯ್ ಅವರು ಇಂದು ರಾಜಕೀಯದಲ್ಲಿ ಸಾಧಿಸುತ್ತಿರುವ ಯಶಸ್ಸಿನ ಹಿಂದೆ ಅವರ ಮಾಸ್ಟರ್ ಸಿನಿಮಾವೂ ಸೇರಿದಂತೆ ಹಲವು ಸಿನಿಮಾಗಳ ಕೊಡುಗೆ ಅಪಾರವಾಗಿದೆ. ಕೇವಲ ಕಮರ್ಷಿಯಲ್ ಹಾಗೂ ರೊಮ್ಯಾಂಟಿಕ್ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವಿಜಯ್, ನಂತರದ ದಿನಗಳಲ್ಲಿ ತಮ್ಮ ಸಿನಿಮಾಗಳ ಮೂಲಕವೇ ತಮಿಳುನಾಡಿನ ಪ್ರಬಲ ರಾಜಕೀಯ ಧ್ವನಿಯಾಗಿ ರೂಪಾಂತರಗೊಂಡರು. ದಶಕಗಳ ಕಾಲ ಚಿತ್ರರಂಗದಲ್ಲಿ ಅವರು ಸಂಪಾದಿಸಿದ ಕೋಟ್ಯಂತರ ಅಭಿಮಾನಿಗಳ ಪಡೆಯೇ ಇಂದು ಅವರ ರಾಜಕೀಯ ಶಕ್ತಿಯಾಗಿ, ಮತಬ್ಯಾಂಕ್ ಆಗಿ ಪರಿವರ್ತನೆಗೊಂಡಿದೆ. ತಮಗೆ ಒಲಿದ ಬಣ್ಣದ ಲೋಕದ ವೇದಿಕೆಯನ್ನು ಜನಸಾಮಾನ್ಯರ ನೋವು-ನಲಿವುಗಳಿಗೆ ಸ್ಪಂದಿಸುವ ಅಸ್ತವಾಗಿ ಅವರು ಅತ್ಯಂತ ಸಮರ್ಥವಾಗಿ ಬಳಸಿಕೊಂಡರು.
ವಿಜಯ್ ಅವರ ರಾಜಕೀಯ ಪ್ರವೇಶಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದು ಅವರ ಸಿನಿಮಾಗಳಲ್ಲಿನ ಸಾಮಾಜಿಕ ಕಳಕಳಿ ಹಾಗೂ ವ್ಯವಸ್ಥೆಯನ್ನು ಪ್ರಶ್ನಿಸುವ ಹರಿತವಾದ ಸಂಭಾಷಣೆಗಳು. ಅವರ ರಾಜಕೀಯ ಹಾದಿಗೆ ದಿಕ್ಕೂಚಿಯಾದವು. ಅದರಲ್ಲಿ ಮುಖ್ಯವಾಗಿ ಮಾಸ್ಟರ್ ಸಿನಿಮಾ ಬಾಲಪರಾಧಿಗಳನ್ನು ಬಳಸಿಕೊಂಡು ಸಮಾಜದಲ್ಲಿ ಡ್ರಗ್ಸ್ ದಂಧೆ ಮಾಡುತ್ತಿರುವವರ ವಿರುದ್ಧ ವಿಜಯ್ ಹೋರಾಟ ನಡೆಸಿದ್ದರು. ಈ ಸಿನಿಮಾದಲ್ಲಿ ಇಬ್ಬರು ಬಾಲಪರಾಧಿಗಳ ಸಾವು, ವಿಜಯ್ ಮನವನ್ನ ಕಲಕುತ್ತದೆ. ಆ ಸಂದರ್ಭದಲ್ಲಿ ವಿಜಯ್ ಹೊಡೆಯುವ ಡೈಲಾಗ್ ಗಳು ಸೂಪರ್ ಹಿಟ್ ಆಗಿದ್ದವು. ಅದರಲ್ಲಿಯೂ ವಿಲನ್‌ಗೆ ನನ್ನವರು ಕೋಟಿಗಟ್ಟಲೇ ಮಂದಿ ಇದ್ದಾರೆ ಎಷ್ಟು ಮಂದಿ ಅಂತಾ ಸಾಯಿಸ್ತಿಯಾ ಎಂಬ ಮಾತು ಜನರೆಲ್ಲಾ ನನ್ನವರು ಎಂಬ ಆಂಗಲ್ ನಲ್ಲಿಯೇ ಫೇಮಸ್ ಆಗಿತ್ತು.
ಇನ್ನೂ ಮೆರ್ಸಲ್ ಸಿನಿಮಾದಲ್ಲಿ ಅಟ್ಲಿ ನಿರ್ದೇಶನ ವಿಜಯ್ ರಾಜಕೀಯ ಕನಸಿಗೆ ವೇಗ ನೀಡಿತು. ದೇಶದ ಆರೋಗ್ಯ ವ್ಯವಸ್ಥೆಯಲ್ಲಿನ ಲೋಪಗಳು ಹಾಗೂ ಜಿಎಸ್‌ಟಿ ನೀತಿಗಳ ಬಗ್ಗೆ ಈ ಚಿತ್ರವು ಬೆಳಕು ಚೆಲ್ಲಿ, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು. ಜನಸಾಮಾನ್ಯರ ಪರವಾಗಿ ಧ್ವನಿ ಎತ್ತುವ ನಾಯಕನಾಗಿ ವಿಜಯ್ ಇಲ್ಲಿ ವಿಜೃಂಭಿಸಿದ್ದರು. ಸರ್ಕಾರ್ ಸಿನಿಮಾ ರಾಜಕೀಯ ವ್ಯವಸ್ಥೆಯಲ್ಲಿ ಬೇರೂರಿರುವ ಭ್ರಷ್ಟಾಚಾರ ಹಾಗೂ ಪ್ರಜಾಪ್ರಭುತ್ವದಲ್ಲಿ ಒಂದು ಮತದ ಮಹತ್ವವನ್ನು ಸಾರುವ ಕಥಾಹಂದರವನ್ನು ಈ ಸಿನಿಮಾ ಹೊಂದಿತ್ತು. ಕಳ್ಳಮತದಾನದ ವಿರುದ್ಧ ಸಿಡಿದೆದ್ದ ಎನ್‌ಆರ್‌ಐ ಉದ್ಯಮಿಯ ಪಾತ್ರದಲ್ಲಿ ಅವರು ಅಭಿನಯಿಸಿದ್ದರು. ಈ ಚಿತ್ರದ ಬಿಡುಗಡೆಯ ಬಳಿಕವೇ ವಿಜಯ್ ರಾಜಕೀಯ ಪ್ರವೇಶ ಖಚಿತ ಎಂಬ ಮಾತುಗಳು ಬಲವಾಗಿ ಕೇಳಿಬರತೊಡಗಿದವು.
ಕತ್ತಿ ಸಿನಿಮಾದಲ್ಲಿ ರೈತರ ಸರಣಿ ಆತ್ಮಹತ್ಯೆಗಳು ಹಾಗೂ ಬಂಡವಾಳಶಾಹಿ ಕಾರ್ಪೊರೇಟ್ ಕಂಪನಿಗಳ ದಬ್ಬಾಳಿಕೆಯ ವಿರುದ್ಧದ ಹೋರಾಟವನ್ನು ಈ ಸಿನಿಮಾ ಕಟ್ಟಿಕೊಟ್ಟಿತ್ತು. ಇದು ವಿಜಯ್ ಅವರನ್ನು ಕೇವಲ ಒಬ್ಬ ನಟನನ್ನಾಗಿ ಮಾತ್ರವಲ್ಲದೆ, ಓರ್ವ ಹೋರಾಟಗಾರನನ್ನಾಗಿಯೂ ಬಿಂಬಿಸುವಲ್ಲಿ ಯಶಸ್ವಿಯಾಯಿತು. ತುಪ್ಪಾಕಿ ಸಿನಿಮಾದಲ್ಲಿ ದೇಶಪ್ರೇಮವನ್ನು ಸಾರುವ ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಒಳಗೊಂಡಿದ್ದ ವಿಜಯ್ ಪಾತ್ರ ಪ್ರಸ್ತುತ ವ್ಯವಸ್ಥೆಯಲ್ಲಿನ ಹಲವು ಲೋಪದೋಷಗಳನ್ನು ಕಣ್ಣಿಗೆ ಕಟ್ಟುವಂತೆ ಪ್ರಸ್ತುತಪಡಿಸಿತ್ತು.
ಅಂತಿಮವಾಗಿ ‘ಜನ ನಾಯಗನ್’ ಚಿತ್ರವನ್ನು ರಾಜಕೀಯಕ್ಕೆ ಅಧಿಕೃತವಾಗಿ ಕಾಲಿಡುವ ಮುನ್ನವೇ ವಿಜಯ್ ಆಯ್ಕೆ ಮಾಡಿಕೊಂಡಿದ್ದರು. ಇದು ಅವರ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಸೈದ್ಧಾಂತಿಕ ಬುನಾದಿ ಹಾಗೂ ಶಕ್ತಿ ತುಂಬುವಂತಿತ್ತು. ವಿಜಯ್ ಅವರು ಮುಖ್ಯಮಂತ್ರಿಯಾದ ಬಳಿಕ ಈ ಬಹುನಿರೀಕ್ಷಿತ ಸಿನಿಮಾ ತೆರೆಕಾಣುವ ಸಾಧ್ಯತೆಗಳಿವೆ. ಒಟ್ಟಾರೆಯಾಗಿ, ವಿಜಯ್ ಅವರು ಸಿನಿಮಾ ರಂಗಕ್ಕೆ ವಿದಾಯ ಹೇಳುವ ಸುಳಿವು ನೀಡಿದ್ದರೂ, ತಮ್ಮ ಚಲನಚಿತ್ರಗಳ ಮೂಲಕ ಅವರು ಕಟ್ಟಿಕೊಟ್ಟ ಸಾಮಾಜಿಕ ಕಳಕಳಿಯ ‘ಮಾಸ್’ ಪಾತ್ರಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚಳಿಯದೆ ಉಳಿಯಲಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಆ ಹಾದಿಯಲ್ಲಿ ಶಿವಮೊಗ್ಗದ ಜೈಲಿನಲ್ಲಿ ಚಿತ್ರೀಕರಣಗೊಂಡ ಮಾಸ್ಟರ್ ಸಿನಿಮಾ ಕೂಡ ಅವರ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲಾಗಿ ಉಳಿಯಲಿದೆ.
Thalapathy Vijay’s Master Connection with Shimoga




