ಜಾತಿ ನಿಂದನೆ ಕೇಸ್​​ : ಭದ್ರಾವತಿ ವ್ಯಕ್ತಿಗೆ 6 ವರ್ಷ ಜೈಲು ಶಿಕ್ಷೆ, ಏನಿದು ಪ್ರಕರಣ

prathapa thirthahalli
Prathapa thirthahalli - content producer

ಭದ್ರಾವತಿ: ಜಾತಿ ನಿಂದನೆ ಮತ್ತು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದೆ. ಭದ್ರಾವತಿ ತಾಲ್ಲೂಕಿನ ಉಜ್ಜನಿಪುರ ಗ್ರಾಮದ ನಿವಾಸಿಗಳಾದ ಗುರೋಜಿ ರಾವ್ ಮತ್ತು ಆಶಾ ಶಿಕ್ಷೆಗೆ ಒಳಗಾದ ಆರೋಪಿಗಳು.

Crime news  ಏನಿದು ಪ್ರಕರಣ

ಪರಿಶಿಷ್ಟ ಜಾತಿಗೆ ಸೇರಿದ 33 ವರ್ಷದ ಮಹಿಳೆಯೊಬ್ಬರು ಬೇರೆ ಜಾತಿಯ ವ್ಯಕ್ತಿಯೊಂದಿಗೆ ಪ್ರೇಮ ವಿವಾಹವಾಗಿದ್ದರು. ಇದರಿಂದ ಕುಪಿತಗೊಂಡ ಆರೋಪಿಗಳಾದ ಗುರೋಜಿ ರಾವ್ ಮತ್ತು ಆಶಾ ಮಹಿಳೆ ಮತ್ತು ಆಕೆಯ ಪತಿಯೊಂದಿಗೆ ಜಗಳ ತೆಗೆದಿದ್ದರು. ಈ ವೇಳೆ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ಹೆಸರಿನಲ್ಲಿ ಬೈದು, ಕೈಯಿಂದ ಮುಖಕ್ಕೆ ಹೊಡೆದು, ಬ್ಲೇಡಿನಿಂದ ಗೀರಿ ಹಲ್ಲೆ ಮಾಡಿದ್ದರು. ಇದೇ ವೇಳೆ ಮಹಿಳೆಯ ಪತಿಗೆ ಮರದ ರಿಪೀಸ್‌ನಿಂದ ಹೊಡೆದು ಗಾಯಗೊಳಿಸಿದ್ದರು.

ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ (ಗುನ್ನೆ ನಂ: 017/2020) ಕಲಂ 323, 324, 504 ಜೊತೆಗೆ 34 ಐಪಿಸಿ ಮತ್ತು ಎಸ್‌ಸಿ & ಎಸ್‌ಟಿ (ಪಿ.ಎ) ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಗಳಾದ ಸುಧಾಕರ್ ನಾಯ್ಕ್, ಡಿವೈಎಸ್‌ಪಿ, ಭದ್ರಾವತಿ ಉಪ ವಿಭಾಗದವರು ಪ್ರಕರಣದ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ  ಚಾರ್ಜ್​ ಶೀಟ್​  ಸಲ್ಲಿಸಿದ್ದರು.

ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಿತು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ. ವಾದ ಮಂಡಿಸಿದರು. ಆರೋಪಿತರ ವಿರುದ್ಧದ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ, ದಿ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ತೀರ್ಪು ಪ್ರಕಟಿಸಿದರು.

ಗುರೋಜಿ ರಾವ್ (48) ಅವರಿಗೆ ಎಸ್‌ಸಿ & ಎಸ್‌ಟಿ (ಪಿ.ಎ) ಕಾಯ್ದೆಯಡಿ ಹಲವು ವಿಭಾಗಗಳಲ್ಲಿ ಶಿಕ್ಷೆ ವಿಧಿಸಲಾಗಿದ್ದು, ಕಲಂ 3(1)(ಆರ್)(ಡಿ) ಮತ್ತು 3(1)(ಎಸ್) ಅಡಿಯಲ್ಲಿ 4 ವರ್ಷಗಳ ಕಠಿಣ ಸೆರೆವಾಸ ಮತ್ತು 20,000 ರೂ. ದಂಡ. ದಂಡ ಕಟ್ಟಲು ತಪ್ಪಿದಲ್ಲಿ 2 ತಿಂಗಳು ಸಾದಾ ಸೆರೆವಾಸ. ಕಲಂ 3(2)(ವಿಎ) ಅಡಿಯಲ್ಲಿ 2 ವರ್ಷಗಳ ಕಠಿಣ ಸೆರೆವಾಸ ಮತ್ತು 10,000 ರೂ. ದಂಡ. ದಂಡ ಕಟ್ಟಲು ತಪ್ಪಿದಲ್ಲಿ 1 ತಿಂಗಳು ಸಾದಾ ಸೆರೆವಾಸ. ಕಲಂ 504 ಐಪಿಸಿ ಅಡಿಯಲ್ಲಿ 10,000 ರೂ. ದಂಡ. ದಂಡ ಕಟ್ಟಲು ತಪ್ಪಿದಲ್ಲಿ 1 ತಿಂಗಳು ಸಾದಾ ಸೆರೆವಾಸ.ಕಲಂ 324 ಐಪಿಸಿ ಅಡಿಯಲ್ಲಿ 20,000 ರೂ. ದಂಡ. ದಂಡ ಕಟ್ಟಲು ತಪ್ಪಿದಲ್ಲಿ 2 ತಿಂಗಳು ಸಾದಾ ಸೆರೆವಾಸ.ಕಲಂ 323 ಐಪಿಸಿ ಅಡಿಯಲ್ಲಿ 1,000 ರೂ. ದಂಡ. ದಂಡ ಕಟ್ಟಲು ತಪ್ಪಿದಲ್ಲಿ 4 ದಿನಗಳ ಸಾದಾ ಸೆರೆವಾಸ. ಶಿಕ್ಷೆಯನ್ನು ವಿಧಿಸಲಾಗಿದೆ.

ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಆಶಾ (35) ಅವರಿಗೆ ಕಲಂ 323 ಐಪಿಸಿ ಅಡಿಯಲ್ಲಿ 1,000 ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ. ದಂಡ ಕಟ್ಟಲು ವಿಫಲರಾದರೆ 4 ದಿನಗಳ ಸಾದಾ ಸೆರೆವಾಸ ಶಿಕ್ಷೆ ಅನುಭವಿಸಬೇಕಾಗುತ್ತದೆ.

TAGGED:
Share This Article