Ferry Service 5 ದಶಕಗಳ ಕಾಲ ಕಾರ್ಯನಿರ್ವಹಿಸಿದ ಲಾಂಚ್ ಸೇವೆ ಅಂತ್ಯ : ಮುಂದೇನು
Ferry Service : ನಾಡಿಗೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಲಿಂಗನಮಕ್ಕಿ ಮುಳುಗಡೆ ಸಂತ್ರಸ್ತರ ಪ್ರತಿನಿತ್ಯದ ಸಂಚಾರಕ್ಕೆ ಸರ್ಕಾರ ಕಲ್ಪಿಸಿದ್ದ ಲಾಂಚ್ ಸೇವೆ ಈಗ ನೆನಪಿನಂಗಳದ ಮ್ಯೂಸಿಯಂನಂತಾಗಿದೆ.ಸಿಗಂದೂರು ಸೇತುವೆಯ ಲೋಕಾರ್ಪಣೆಯಾದ ನಂತರ ಪ್ರಯಾಣಿಕರು ಲಾಂಚ್‌ಗಳತ್ತ ಮುಖ ಮಾಡುತ್ತಿಲ್ಲ. ದಡದಲ್ಲಿ ಗತಕಾಲದ ನೆನಪುಗಳನ್ನು ಸಾರಿ ಹೇಳುವ ವಾಹನವಾಗಿ ಲಾಂಚ್ ಗಳು ಉಳಿದಿವೆ. 56 ವರ್ಷಗಳ ನಿರಂತರ ಸೇವೆ ನೀಡಿದ ಈ ಲಾಂಚ್‌ಗಳಲ್ಲಿ ಸಣ್ಣಪುಟ್ಟ ಅವಘಡಗಳು ನಡೆದಿದ್ದರೂ, ಒಂದು ಜೀವಹಾನಿಯ ಪ್ರಕರಣವೂ ವರದಿಯಾಗಿಲ್ಲ.
ಆರಂಭದ ದಿನಗಳಲ್ಲಿ ಎರಡು ದೋಣಿ ಸೇರಿಸಿದ ಜಂಗಲ್ ದೋಣಿಯಲ್ಲಿ ಪಯಣಿಸುವಾಗ ಹಲವು ಸಾವು-ನೋವುಗಳಾಗಿದ್ದವು. ಆದರೆ ಲಾಂಚ್ ಸೇವೆ ಬಂದ ನಂತರ ಅಂತಹ ಅವಘಡಗಳು ನಡೆಯಲಿಲ್ಲ. ಇದಕ್ಕೆ ಸಿಗಂದೂರು ಚೌಡೇಶ್ವರಿಯ ಕೃಪೆ ಎನ್ನುತ್ತಾರೆ ಲಾಂಚ್ ಸಿಬ್ಬಂದಿಗಳು. ಜೀವ ರಕ್ಷಕ ಉಪಕರಣಗಳ ಕೊರತೆಯ ನಡುವೆಯೂ ಸಾಹಸಮಯ ಸೇವೆ ನೂರಾರು ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದ ಲಾಂಚ್‌ಗಳಲ್ಲಿ ಹೆಸರಿಗೆ ಮಾತ್ರ ನಾಲೈದು ಜೀವ ರಕ್ಷಕ ಉಪಕರಣಗಳಿದ್ದವು. ಇಷ್ಟು ಕಡಿಮೆ ಉಪಕರಣಗಳಿದ್ದರೂ,ಕೋಟಿಗೂ ಅಧಿಕ ಪ್ರಯಾಣಿಕರು, ಲಕ್ಷಾಂತರ ವಾಹನಗಳನ್ನು ಹೊತ್ತು, ಒಂದು ದಡದಿಂದ ಮತ್ತೊಂದು ದಡಕ್ಕೆ ಸುರಕ್ಷಿತವಾಗಿ ಸಾಗಿದ್ದೇ ಒಂದು ರೋಚಕ ಸಂಗತಿ. ಬೆರಳೆಣಿಕೆಯಷ್ಟು ಜೀವ ರಕ್ಷಣೆ ಉಪಕರಣಗಳನ್ನು ಹೊರತುಪಡಿಸಿದರೆ, ನದಿಮಧ್ಯೆ ಅಪಘಾತವಾದಾಗ ತುರ್ತು ರಕ್ಷಣೆಗೆ ಒಂದು ಸ್ಪೀಡ್ ಬೋಟ್ ವ್ಯವಸ್ಥೆ ಕೂಡ ಇರಲಿಲ್ಲ.
Ferry Service 2012ರ ಜುಲೈ 18ರಂದು ಹೊಳೆಬಾಗಿಲಿನ ಶರಾವತಿ ಹಿನ್ನೀರಿನಲ್ಲಿ ಲಾಂಚ್ ಅರ್ಧ ಮುಳುಗಿದ್ದ ಘಟನೆ ಹಾಗೂ 2019ರ ಸೆಪ್ಟೆಂಬರ್ 11ರಂದು ಹೊಳೆಬಾಗಿಲು-ತುಮರಿ ಮಧ್ಯದ ಶರಾವತಿ ಹಿನ್ನೀರಿನಲ್ಲಿ ಎರಡು ಲಾಂಚ್‌ಗಳು ಮುಖಾಮುಖಿ ಡಿಕ್ಕಿಯಾದ ಘಟನೆ ಹೊರತುಪಡಿಸಿದರೆ, ಇದುವರೆಗೂ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಈಸಂದರ್ಭಗಳಲ್ಲಿ ಲಾಂಚ್ ಗಳಲ್ಲಿ ಜೀವ ರಕ್ಷಕ ಉಪಕರಣಗಳ ಕೊರತೆ ಇರುವುದು ಬೆಳಕಿಗೆ ಬಂದಿತ್ತು. ಲಾಂಚ್ ಸಿಬ್ಬಂದಿಗಳ ನಿರಂತರ ಸೇವೆಗೆ ಹ್ಯಾಟ್ಸಾಫ್, ಆದರೆ ಭವಿಷ್ಯ ಅತಂತ್ರ ಹಲವು ಕೊರತೆಗಳ ನಡುವೆಯೂ, ಇಲ್ಲಿನ ಲಾಂಚ್ ಸಿಬ್ಬಂದಿಗಳು ಪ್ರವಾಸಿಗರನ್ನು ಸುರಕ್ಷಿತವಾಗಿ ದಡ ಸೇರಿಸುತ್ತಿದ್ದರು. 56 ವರ್ಷಗಳ ಲಾಂಚ್ ಸಿಬ್ಬಂದಿಗಳ ನಿರಂತರ ಸೇವೆಗೆ ‘ಮಲೆನಾಡು ಟುಡೆ’ ದಿನಪತ್ರಿಕೆ ಹ್ಯಾಟ್ಸಾಫ್ ಹೇಳುತ್ತದೆ.
Ferry Service ಇಷ್ಟು ವರ್ಷ ಕಾಲ ಜೀವಹಾನಿಯಾಗದಂತೆ ಪ್ರವಾಸಿಗರ ಹಿತ ಕಾಪಾಡಿದ ಈ ಲಾಂಚ್ ಸಿಬ್ಬಂದಿಗಳ ಬದುಕು ಈಗ ಅತಂತ್ರವಾಗಿದೆ. ಸಿಗಂದೂರು ಸೇತುವೆ ಲೋಕಾರ್ಪಣೆಯಾಗುತ್ತಿದ್ದಂತೆ ಜನರು ಸಹಜವಾಗಿ ಸೇತುವೆಯ ಮೇಲೆ ಪಯಣಿಸುತ್ತಿದ್ದಾರೆ.ದ್ವೀಪದ ಜನರಿಗೆ ಆಸರೆಯಾಗಿದ್ದ ಲಾಂಚ್ ಸೇವೆ ಈಗ ಸ್ಥಗಿತಗೊಂಡಿದ್ದು, ಲಾಂಚ್ ಸಿಬ್ಬಂದಿಗಳು ನಿರುದ್ಯೋಗದ ಭೀತಿಯನ್ನು ಎದುರಿಸುತ್ತಿದ್ದಾರೆ.


