KARNATAKA NEWS/ ONLINE / Malenadu today/ Aug 3, 2023 SHIVAMOGGA NEWS
ಶಿವಮೊಗ್ಗ: ಸಂಬಳ ಇಲ್ಲದ ಅತಿಥಿ ಉಪನ್ಯಾಸಕರು ವಿಶೇಷ ರೀತಿಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಮೂರು ತಿಂಗಳಿನಿಂದ ಸಂಬಳ ಇಲ್ಲ, ಜೀವನ ನಡೆಸುವುದು ಕಷ್ಟವಾಗುತ್ತಿದೆ. ಸಂಬಳ ಕೊಡುವವರೆಗೂ ಪ್ರತಿ ತಿಂಗಳ ರೇಷನ್ ಕೊಡುವಂತೆ ಪಟ್ಟಿ ಮಾಡಿ ಪ್ರಾಂಶುಪಾಲರ ಮೂಲಕ ಶಿಕ್ಷಣ ಇಲಾಖೆ ಬೇಡಿಕೆ ಸಲ್ಲಿಸಿದ್ದಾರೆ.ರಾಜ್ಯಾದ್ಯಂತ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಮೂರು ತಿಂಗಳನಿಂದ ಸಂಬಳ ಆಗಿಲ್ಲ. ಇದನ್ನು ಖಂಡಿಸಿ ಇಲ್ಲಿನ ಹೊಳೆಹೊನ್ನೂರು ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ವಿಶೇಷ ರೀತಿ ಮನವಿ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
“ಮಾನ್ಯ ಘನ ಸರಕಾರ ಕಳೆದ ಮೂರು ತಿಂಗಳಿನಿಂದ ಬಡ, ನಿರ್ಗತಿಕ ಅತಿಥಿ ಉಪನ್ಯಾಸಕರಿಗೆ ಬರಬೇಕಾದ ಗೌರವ ಧನವನ್ನು ತಡೆ ಹಿಡಿದಿದ್ದು ಇದರಿಂದ ನಮ್ಮನ್ನು ನಂಬಿಕೊಂಡಿರುವ ಕುಟುಂಬ ವರ್ಗದವರು ಉಪವಾಸದಿಂದ ನರಳುವಂತಾಗಿದೆ. ಸರಕಾರ ನಮ್ಮ ಗೌರವ ಧನವನ್ನು ಬಿಡುಗಡೆ ಮಾಡುವವರೆಗೂ ನಮಗೆ ಅಗತ್ಯವಿರುವ ಈ ಕೆಳಕಂಡ ದಿನಸಿ ವಸ್ತುಗಳನ್ನು ಪೂರೈಸಬೇಕೆಂದು ತಮ್ಮ ವಿನಂತಿ ವಿನಿಂತಿಸಿಕೊಳ್ಳುತ್ತಿದ್ದೇನೆ” ಎಂದು ಜತೆಗೆ ಅಗತ್ಯವಿರುವ ವಸ್ತುಗಳ ಪಟ್ಟಿ ಹಾಕಿದ್ದಾರೆ. 25 ಕೆ.ಜಿಯ ಅಕ್ಕಿ, 5 ಕೆ.ಜಿ ಟೊಮೇಟೋ, 10 ಕೆ.ಜಿ ಈರುಳ್ಳಿ, 1 ಕೆ.ಜಿ. ಒಣಮೆಣಸು, 2 ಕೆ.ಜಿ. ಹಸಿ ಮೆಣಸು, 2 ಕೆ.ಜಿ ತೊಗರಿಬೇಳೆ, ಅರ್ಧ ಕೆ,ಜಿ ಬೆಳ್ಳುಳ್ಳಿ, ಕಾಲು ಕೆ.ಜಿ ಶುಂಠಿ, ಅಗತ್ಯವಿರುವಷ್ಟು ಹಾಲು, ಮೊಸರು, 1 ಎಲ್‌ಪಿಜಿ ಸಿಲಿಂಡರ್ ಕೊಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಬಾಯಿ ತಪ್ಪಿ ಆಡಿದ ಮಾತು! ಖರ್ಗೆ, ಖಂಡ್ರೆ ಬಗ್ಗೆ ಅಪಾರ ಗೌರವವಿದೆ ಎಂದರು ಮಾಜಿ ಗೃಹಸಚಿವ!
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ಕಾಂಗ್ರೆಸ್ ಸರ್ಕಾರದ ಸಚಿವರು ನೀಡಿದ ಹೇಳಿಕೆ ವಿರೋಧಿಸಿ ನಡೆದ ಪ್ರತಿಭಟನೆಯೊಂದರಲ್ಲಿ ಆಡಿದ ಮಾತು ವಿರೋಧಕ್ಕೆ ಕಾರಣವಾಗಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರ ಬಗ್ಗೆ ಆರಗ ಜ್ಞಾನೇಂದ್ರರವರು ಆಡಿದ ಮಾತು ವಿವಾದವನ್ನ ಎಬ್ಬಿಸಿತ್ತು. ಈ ಸಂಬಂಧ ಕಾಂಗ್ರೆಸ್ ಪಕ್ಷ ತನ್ನ ಟ್ವೀಟ್ನಲ್ಲಿ ಆರಗರವರನ್ನು ಟೀಕಿಸಿತ್ತು. ಈ ಮಧ್ಯೆ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ತಮ್ಮ ಮಾತಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆರವರ ಕುರಿತು ಅಪಾರ ಗೌರವವಿದೆ ಎಂದು ಸ್ಪಷ್ಟಪಡಿಸಿರುವ ಆರಗ ಜ್ಞಾನೇಂದ್ರರವರು, ಮಲೆನಾಡಿಗರಿಗೆ ಶಾಪವಾಗಿರುವ ಕಸ್ತೂರಿ ರಂಗನ್ ವಿಚಾರಕ್ಕೆ ಸಂಬಂಧಿಸಿದಂತೆ ಆಡಿದ ಭಾಷಣದ ವೇಳೆ, ಮಾತಿನ ಬರದಲ್ಲಿ ಬಾಯಿ ತಪ್ಪಿನಿಂದ ಈ ರೀತಿ ಆಗಿಯೇ ಹೊರತು, ಖಂಡ್ರೆ ಅವರಿಗಾಗಲಿ, ಖರ್ಗೆ ಅವರಿಗಾಗಲಿ ಅವರ ಗೌರವಕ್ಕೆ ಧಕ್ಕೆ ಆಗುವಂತಹ ಮಾತುಗಳನ್ನು ಆಡಿಲ್ಲ ಎಂದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹಿರಿತನದ ಬಗ್ಗೆ ಹಾಗೂ ಅವರ ಮೇಲೆ ಅಪಾರವಾದ ಗೌರವವಿದೆ ಎಂದಿದ್ದು, ಕೆಲವರು ಅನಗತ್ಯವಾಗಿ ಈ ಕುರಿತು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದಿದ್ಧಾರೆ.
ಪ್ರತಿಭಟನೆ ಸಂದರ್ಭದಲ್ಲಿ ಆರಗ ಜ್ಞಾನೇಂದ್ರರವರು ಆಡಿದ ಮಾತು ವಿವಾದಕ್ಕೆ ಕಾರಣವಾಯ್ತಾ?
ತೀರ್ಥಹಳ್ಳಿ ಪೇಟೆಯಲ್ಲಿ ಬೈಕ್ ರೇಸಿಂಗ್ ನಡೆಸಿದ ಇಬ್ಬರಿಗೆ ತೀರ್ಥಹಳ್ಳಿ ಕೋರ್ಟ್ 5 ಸಾವಿರ ರೂಪಾಯಿ ದಂಡ ವಿಧಿಸಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ರು. ದಿನಾಂಕಃ 01-08-2023 ರಂದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಬೈಲಿನ ಹೆಗ್ಡೆ ಪೆಟ್ರೋಲ್ ಬಂಕ್ ನ ಹತ್ತಿರ 02 ಯಮಹಾ ಬೈಕ್ ಗಳಲ್ಲಿ ಸವಾರರಿಬ್ಬರು ರೇಸಿಂಗ್ ಮಾಡುತ್ತಿದ್ದರು. ಇದನ್ನ ಇನ್ನೊಂದು ಬೈಕ್ನ ಹಿಂಬದಿಯಲ್ಲಿ ಹಿಮ್ಮುಖವಾಗಿ ಕುಳಿತಿದ್ದ ಸವಾರ ವಿಡಿಯೋ ಮಾಡುತ್ತಿದ್ದ. ಇದನ್ನ ಗಮನಿಸಿದ ಪೊಲೀಸ್ ಉಪಾಧೀಕ್ಷಕ , ಗಜಾನನ ವಾಮನ ಸುತಾರರವರು, ಬೈಕ್ಗಳನ್ನ ತಡೆದು ನಿಲ್ಲಿಸಿ ಕೇಸ್ ದಾಖಲಿಸಿದ್ದರು. ಈ ಕೇಸ್ಗೆ ಸಂಬಂಧಿಸಿದಂತೆ, ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್.ಸಿ ನ್ಯಾಯಾಲಯ ಬೈಕ್ ಸವಾರರುಗಳಾದ 1) ಸೌರವ್, 21 ವರ್ಷ, ಸೀಬಿನ ಕೆರೆ ತೀರ್ಥಹಳ್ಳಿ ಮತ್ತು 2) ಶಂಕರ್, 21 ವರ್ಷ, ತೀರ್ಥಹಳ್ಳಿ ರವರುಗಳಿಗೆ ತಲಾ 5,000/- ರೂ ದಂಡ ವಿಧಿಸಿದ್ದಾರೆ.
ಸೊರಬದ ಚಂದ್ರಗುತ್ತಿ ರೇಣುಕಾಂಬ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನ!?
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಚಂದ್ರಗುತ್ತಿಯಲ್ಲಿರುವ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಾಲಯದಲ್ಲಿ(Chandragutti Renukamba Temple) ಕಳ್ಳತನಕ್ಕೆ ಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹುಣ್ಣಿಮೆ ಹಿನ್ನೆಲೆಯಲ್ಲಿ ಭಕ್ತರ ದಂಡೆ ಹರಿದುಬಂದಿತ್ತು. ಇದರ ಬೆನ್ನಲ್ಲೆ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಶಂಕೆ ಎದುರಾಗಿದೆ. .ದೇವಾಲಯ ಹಾಗೂ ಗರ್ಭಗುಡಿಯ ಬಾಗಿಲನ್ನು ಮುರಿದಿರುವ ದುಷ್ಕರ್ಮಿಗಳು ಮೂರ್ತಿಯನ್ನ ಕೆಳಕ್ಕೆ ಬಿಸಾಡಿದ್ದಾರೆ. ಆದರೆ ದೇಗುಳದ ಹುಂಡಿಗಳು ಭದ್ರವಾಗಿದೆ. ಇನ್ನೂ ಘಟನೆ ಬೆನ್ನಲ್ಲೆ ದೇವಾಲಯದ ಬಳಿ ಜಮಾಯಿಸಿದ ಸ್ಥಳೀಯರು ದೇಗುಲಕ್ಕೆ ಸೂಕ್ತ ಭದ್ರತೆ ಇಲ್ಲ. ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಆಗ್ರಹಿಸಿದ್ರು. ಘಟನೆ ಬೆನ್ನಲ್ಲೆ ತಹಶೀಲ್ದಾರ್ ಹುಸೇನ್ ಸರಕಾವತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಹಿಳೆಯ ಕೈ ಹಿಡಿದು ಎಳೆದಾಡಿದ್ದಕ್ಕೆ ಕೋರ್ಟ್ ಕೊಟ್ಟ ಶಿಕ್ಷೆ ಏನು ಗೊತ್ತಾ?
ಮಹಿಳೆಯೊಬ್ಬರ ಕೈ ಹಿಡಿದು ಎಳೆದಾಡಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಕೋರ್ಟ್ ಆರೋಪಿಗೆ 2 ವರ್ಷ ಆರು ತಿಂಗಳು ಸಜೆ ನೀಡಿದೆ. ಶಿವಮೊಗ್ಗ ನಗರದ ಎಪಿಎಂಸಿಯಲ್ಲಿ ಸ್ವಚ್ಛತಾ ಕರ್ಮಿಯಾಗಿ ಕೆಲಸ ಮಾಡುತ್ತಿದ್ದ, 33 ವರ್ಷದ ಮಹಿಳೆಯೊಬ್ಬರ ಕೈ ಹಿಡಿದು ಎಳದಾಡಿದ ಘಟನೆ ಸಂಬಂಧ ದಿನಾಂಕಃ 04-04-2019 ರಂದು ಬೆಳಗ್ಗೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಚಂದ್ರಪ್ಪ ಎಂಬವನ ವಿರುದ್ಧ ದಾಖಲಾದ ದೂರಿನ ಜೊತೆಗೆ ಅವರ ಮಗ ಜಾತಿ ನಿಂದನೆ ಮಾಡಿದ ಆರೋಪವೂ ಕೇಳಿಬಂದಿತ್ತು. ಈ ಸಂಬಂಧ ಠಾಣೆಯಲ್ಲಿಐಪಿಸಿ 354(B), 504, 506 ಸಹಿತ 34 ಐಪಿಸಿ ಮತ್ತು 3(1)(s), 3(1)(w)(i)(ii), 3(2)(va) The SC & ST (PA) Ac ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಇದರ ತನಿಖೆಯನ್ನ ಕೈಗೊಂಡು, ಅಂದಿನ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್ ಶಿವಮೊಗ್ಗ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಪ್ರಕರಣ ಸಂಬಂಧ ಸರ್ಕಾರಿ ಅಭಿಯೋಜಕಿ ಪುಷ್ಪಾ ವಾದ ಮಂಡಿಸಿದ್ದರು. ಸದ್ಯ ಈ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಧೀಶರಾದ ಬಿ.ಆರ್ ಪಲ್ಲವಿ ರವರು ದಿನಾಂಕಃ- 02-08-2023 ರಂದು ಆರೋಪಿ ಚಂದ್ರಪ್ಪರಿಗೆ 02 ವರ್ಷ 06 ತಿಂಗಳು ವರ್ಷ ಸಾಧಾ ಕಾರಾವಾಸ ಶಿಕ್ಷೆ ಮತ್ತು 30,000/- ರೂ ದಂಡ, ದಂಡವನ್ನು ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿಯಾಗಿ 05 ತಿಂಗಳು ಸಾದಾ ಕಾರವಾಸ ಶಿಕ್ಷೆ ವಿಧಿಸಿ ಆದೇಶ ನೀಡಿರುತ್ತಾರೆ.
ಇನ್ನಷ್ಟು ಸುದ್ದಿಗಳು