ಶಿವಮೊಗ್ಗದಲ್ಲಿ ವಿಜ್ರಂಭಣೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ/ ಶಿವಮೊಗ್ಗಕ್ಕೆ ಬರಲಿದ್ದಾರೆ ಡಾಲಿ ಧನಂಜಯ್! ಅಧಿತಿ ಪ್ರಭುದೇವ

Sri Veerabhadreswara Swami Jayantyotsava of Vijrambhane in Shimoga/ Dolly Dhananjay will come to Shimoga! Aditi Prabhudevaಶಿವಮೊಗ್ಗದಲ್ಲಿ ವಿಜ್ರಂಭಣೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ/ ಶಿವಮೊಗ್ಗಕ್ಕೆ ಬರಲಿದ್ದಾರೆ ಡಾಲಿ ಧನಂಜಯ್! ಅಧಿತಿ ಪ್ರಭುದೇವ

ಶಿವಮೊಗ್ಗದಲ್ಲಿ ವಿಜ್ರಂಭಣೆಯ  ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ/ ಶಿವಮೊಗ್ಗಕ್ಕೆ ಬರಲಿದ್ದಾರೆ ಡಾಲಿ ಧನಂಜಯ್! ಅಧಿತಿ ಪ್ರಭುದೇವ

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’



ವೀರಭದ್ರ ಸ್ವಾಮಿಯ ಅದ್ಧೂರಿ ಜಯಂತ್ಯೋತ್ಸವಕ್ಕೆ ಶಿವವಮೊಗ್ಗ ಸಜ್ಜಾಗಿದೆ. ಇದೇ ಸೆಪ್ಟೆಂಬರ್‌ 23 ರಂದು ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯು ಅದ್ಧೂರಿಯಾಗಿ ಸಂಗೀತಯುಕ್ತ ಇಷ್ಟಲಿಂಗ ಪೂಜೆ  ಹಾಗೂ ಧರ್ಮಸಭೆಯೊಂದಿಗೆ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವವನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಲೋಕೋದ್ಧಾರಕನಾದ ಶ್ರೀ ವೀರಭದ್ರೇಶ್ವರ ಸ್ವಾಮಿಯು ಜನ್ಮತಳೆದ ಬಗೆಯನ್ನು ತಿಳಿಸುವ ಈ ಲೇಖನ ಭಕ್ತ ಸಮೂಹಕ್ಕಾಗಿ.

ಶ್ರೀ ವೀರಭದ್ರ ಸ್ವಾಮಿಯ ಚರಿತ್ರೆ

ಹಿಂದೆ ದಕ್ಷ ಮಹಾರಾಜನು ತನಗೆ ಇಷ್ಟವಿಲ್ಲದಿದ್ದರೂ ತನ್ನ ಮಗಳಾದ ಸತಿಯ ಅಪೇಕ್ಷೆಯಂತೆ ಪರಶಿವನಿಗೆ ಧಾರೆ ಎರೆದು ವೈಭೋಗದೊಂದಿಗೆ ವಿವಾಹ ಮಾಡುತ್ತಾನೆ. ಪರಶಿವನು ಸತಿಗೆ ಜ್ಞಾನದ ಮಾರ್ಗ  ಮತ್ತು ಭಕ್ತಿಯ ಮಾರ್ಗದ ಬಗ್ಗೆ ಬೋಧಿಸುತ್ತಾನೆ. ಒಮ್ಮೆ ದಕ್ಷ ಮಹಾರಾಜನು ಲೋಕಕಲ್ಯಾಣಾರ್ಥ ದೊಡ್ಡ ಪ್ರಯಾಗದಲ್ಲಿ ಹೋಮ, ಹವನಗಳನ್ನು ಆಯೋಜಿಸಿದ್ದನು. ಆ ಒಂದು ದೊಡ್ಡ ಯಾಗದಲ್ಲಿ ಬ್ರಹ್ಮ, ವಿಷ್ಣು ಮತ್ತು ಎಲ್ಲ ದೇವಾನುದೇವತೆಗಳು, ಋಷಿ ಮುನಿಗಳನ್ನು ವಿಶೇಷವಾಗಿ ಆಹ್ವಾನಿಸಿದ್ದನು. ಆದರೆ, ಪರಶಿವನನ್ನು ಮಾತ್ರ ಆಹ್ವಾನಿಸಿರಲಿಲ್ಲ. ಇದನ್ನು ತಿಳಿದ ಸತಿಯು ಕೋಪಗೊಂಡು ತನ್ನ ತಂದೆ ದಕ್ಷ ಮಹಾರಾಜನು, ತನ್ನ ಪತಿ ಶಿವನನ್ನು ಇಂತಹ ಲೋಕ ಕಲ್ಯಾಣದ ಮಹಾಕಾರ್ಯಕ್ಕೆ ಕರೆಯದೇ ಅವಮಾನಮಾನಿಸಿದ್ದಾರೆ. ಈ ರೀತಿ ಕೆಟ್ಟದಾಗಿ ನಡೆದುಕೊಂಡ ತನ್ನ ತಂದೆ ದಕ್ಷ ಮಹಾರಾಜನನ್ನು ಈ ವಿಚಾರವಾಗಿ ಕೇಳಲು, ಪರಶಿವನ ಅನುಮತಿಯನ್ನು ಪಡೆದು ಶಿವನ ಅಂಗ ರಕ್ಷಕರು, ಋಷಿಗಳು ಮತ್ತು ನಂದೀಶ್ವರರ ಸಮೇತವಾಗಿ ಅಲ್ಲಿಗೆ ಬರುತ್ತಾಳೆ. ದಕ್ಷ ಮಹಾರಾಜನಿಗೆ ಕೈ ಮುಗಿದು ಸತಿಯು ತನ್ನ ಪತಿಯಾದ ಪರಶಿವನನ್ನು ಮಹಾಕಾರ್ಯಕ್ಕೆ ಆಹ್ವಾನಿಸಿಲ್ಲವೇಕೆ ಎಂದು ಪ್ರಶ್ನಿಸುತ್ತಾಳೆ. ಆ ಸಂದರ್ಭ ದಕ್ಷ ಮಹಾರಾಜನು ಕೋಪದಿಂದ ಶಿವನನ್ನು ಹೀಗಳೆದು, ಅವಹೇಳನದ ಮಾತುಗಳನ್ನಾಡಿ ಎಲ್ಲರೆ ದುರು ಸತಿಯನ್ನು ಅವಮಾನಿಸುತ್ತಾನೆ. ಅವಮಾನಿತಳಾದ ಸತಿಯು ತಂದೆ ದಕ್ಷ ಮಹಾರಾಜನಿಗೆ ನೀನು ನರಕಕ್ಕೆ ಹೋಗು ಎಂದು ಶಾಪವಿತ್ತು  ಉರಿಯುತ್ತಿದ್ದ ಹೋಮಕ್ಕೆ ಹಾರಿ ಅಗ್ನಿಗೆ ಪ್ರವೇಶಿಸಿ ತನ್ನ ದೇಹವನ್ನು ತ್ಯಾಗ ಮಾಡುತ್ತಾಳೆ. ಇದರಿಂದ ಕೋಪಗೊಂಡು ಸತಿಯ ಅಂಗರಕ್ಷಕರು ಮತ್ತು ಋಷಿಗಳು ದಕ್ಷನ ಸೈನಿಕರ ಮೇಲೆ ಹೋರಾಟಕ್ಕಿಳಿಯುತ್ತಾರೆ. ಇದನ್ನು ನೋಡುತ್ತಿದ್ದ ಬ್ರುಹು ಮಹರ್ಷಿಯು  ಹೋಮಕ್ಕೆ ಹವೀಸ್‌ನ್ನು ಸುರಿದಿದ್ದರಿಂದ ಸಾವಿರಾರು ಸೈನಿಕರು ಜನ್ಮ ತಳೆದು ಶಿವನ ಅಂಗ ರಕ್ಷಕರ ಮೇಲೆರಗುತ್ತಾರೆ. 

ಅಲ್ಲಿಂದ ತಪ್ಪಿಸಿಕೊಂಡ ಬಂದ ಅಂಗ ರಕ್ಷಕರು ಮತ್ತು ಋಷಿಗಳು, ಕೈಲಾಸಕ್ಕೆ ತೆರಳಿ ನಡೆದ ಘಟನೆಯನ್ನು ಪರಶಿವನಲ್ಲಿ ಹೇಳಿಕೊಳ್ಳುತ್ತಾರೆ. ಇದರಿಂದ ಕೋಪಗೊಂಡ ರೌದ್ರ ತಾಂಡವನಾಡುತ್ತಾ ಶಿವನು ತನ್ನ ತಲೆಯಲ್ಲಿ ಕಟ್ಟಿದ್ದ ಮುಡಿಯನ್ನು ಬಿಚ್ಚಿ ಶಿಖರದ ತುದಿಗೆ ಜೋರಾಗಿ ಬಡಿಯುತ್ತಾನೆ, ಆಗ ಇಡೀ ಲೋಕವೆಲ್ಲಾ ನಡುಗಿ ಭಯಾನಕ ಶಬ್ದದೊಂದಿಗೆ ಶಿಖರವು ಇಬ್ಬಾಗವಾಗುತ್ತದೆ, ಒಂದು ಭಾಗದಿಂದ ಶ್ರೀ ವೀರಭದ್ರನು, ಇನ್ನೊಂದು ಭಾಗದಿಂದ ಶ್ರೀ ಮಹಾಕಾಳಿಯು ಜನ್ಮ ತಾಳುತ್ತಾರೆ. ಶ್ರೀ ವೀರಭದ್ರನು ಶಿವನ ಮುಂದೆ  ನಮಿಸುತ್ತಾ ಶಿರ ಭಾಗಿ ನಿಂತುಕೊಳ್ಳುತ್ತಾನೆ, ಆಗ ಶಿವನು ಎಲೈ ವೀರಭದ್ರನೇ, ಈಗಿಂದೀಗಲೇ ಹೋಗಿ ದಕ್ಷನನ್ನು ಸಂಹಾರ ಮಾಡಿ ಬಾ ಎಂದು ಆಜ್ಞೆಯನ್ನು ಮಾಡುತ್ತಾನೆ, ಶ್ರೀ ವೀರಭದ್ರನು , ಮಹಾಕಾಳಿ ಹಾಗೂ ತನ್ನ ದೊಡ್ಡ ಸೈನ್ಯದೊಂದಿಗೆ ಸೇರಿ ದಕ್ಷನ ವಿರುದ್ಧ ಯುದ್ಧವನ್ನು ಮಾಡುತ್ತಾರೆ, ದಕ್ಷನ ಸೈನ್ಯವು ಸೋತು ಶರಣಾಗುತ್ತದೆ, ಹೇಗೋ ತಪ್ಪಿಸಿಕೊಂಡ ದಕ್ಷನು ವಿಷ್ಣುವಿನ ಬಳಿ ಬಂದು ತನ್ನನ್ನು ಕಾಪಾಡುವಂತೆ ಬೇಡಿಕೊಡಾಗ ವಿಷ್ಣುವು ದಕ್ಷನನ್ನು ರಕ್ಷಣೆ ಮಾಡುತ್ತೇನೆಂದು ಹೇಳುತ್ತಾನೆ. ಇದರಿಂದ ವಿಷ್ಣು ಮತ್ತು ವೀರಭದ್ರನ ನಡುವೆ ಭೀಕರವಾದ ಮಹಾಕಾಳಗವೇ ನಡೆದು ಹೋಗಿ ಬಿಡುತ್ತದೆ. ಆಗ ವೀರಭದ್ರನ ಕೈ ಮೇಲಾಗಿ ವಿಷ್ಣು ಸೋಲುವ ಹಂತಕ್ಕೆ ಬಂದಾಗ ಮಾಯವಾಗಿ ಬಿಡುತ್ತಾನೆ, ಆನಂತರ ವೀರಭದ್ರನು ಜಿಂಕೆಯ ರೂಪ ತಾಳಿ, ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ದಕ್ಷನನ್ನು ಹಿಡಿದು ದಕ್ಷನ ಶಿರಶ್ಚೇದ ಮಾಡಿ ಶಿರವನ್ನು ಹೋಮದ ಅಗ್ನಿಗೆ ಎಸೆಯುತ್ತಾನೆ. ದಕ್ಷನ ತಲೆಯು ಹೋಮದಲ್ಲಿ ಉರಿದು ಬೂದಿಯಾಗುತ್ತದೆ. ಶ್ರೀ ವೀರಭದ್ರನಿಂದ ದಕ್ಷ ಮಹಾರಾಜನ ಸಂಹಾರವಾದ ನಂತರ ಬ್ರಹ್ಮ, ವಿಷ್ಣು ಮತ್ತು ಎಲ್ಲ ದೇವಾನು ದೇವತೆಗಳು  ಕೈಲಾಸಕ್ಕೆ ಬಂದು ದಕ್ಷನ ತಪ್ಪನ್ನು ಮನ್ನಿಸುವಂತೆ ಪರಶಿವನನ್ನು ಪ್ರಾರ್ಥಿಸಿದರು. ಇದರಿಂದ ಸಂತುಷ್ಠಗೊಂಡ ಕರುಣಾಮೂರ್ತಿ ಶಿವನು ದಕ್ಷನ ಶಿರವಿಲ್ಲದ ದೇಹಕ್ಕೆ ಕುರಿಯ ಶಿರವನ್ನು ಇಟ್ಟು ಜೀವದಾನ ಮಾಡುತ್ತಾನೆ.  ಬದುಕಿ ಬಂದ ದಕ್ಷನು ಶಿವನಿಗೆ ಶಿರಬಾಗಿ ನಮಿಸಿ, ತಾನು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸುತ್ತಾನೆ. ಶಿವನು ದಕ್ಷನನ್ನು ಕ್ಷಮಿಸಿ, ಕೈಲಾಸಕ್ಕೆ ತೆರಳುತ್ತಾನೆ, ಮುಂದೆ ಸತಿಯು ಪರ್ವತ ರಾಜನ ಮಗಳಾಗಿ ಜನಿಸಿ, ಪಾರ್ವತಿ ಎನಿಸಿಕೊಳ್ಳುತ್ತಾಳೆ. ಶಿವನ ಕೈ ಹಿಡಿದು, ಕೈಲಾಸ ಪುರವನ್ನು ಸೇರುತ್ತಾಳೆ. ಶಿವ ಪಾರ್ವತಿಯರು, ಒಂದಾಗಿ ಲೋಕ ಕಲ್ಯಾಣದಲ್ಲಿ ನಿರತರಾಗುತ್ತಾರೆ. ಶಿವನಿಗೆ ಸಹಾಯ ಮಾಡಿದ ಶಿವನ ಅಂಶಿಜನಾದ ಶ್ರೀ ವೀರಭದ್ರೇಶ್ವರ ಸ್ವಾಮಿಯು ಭುವಿಯಲ್ಲಿ ಪೂಜಿಸಲ್ಪಡುತ್ತಿದ್ದಾನೆ. ಶಿವ ಭಕ್ತರ ಇಷ್ಟಾರ್ಥ, ಕೋರಿಕೆಗಳನ್ನು ಈಡೇರಿಸುತ್ತಿದ್ದಾನೆ. 

ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗೋಣ. 

ಗುಗ್ಗಳ  ಪ್ರಿಯ  ಶ್ರೀ ವೀರಭದ್ರ 



ಶ್ರೀ ವೀರಭದ್ರ ಸ್ವಾಮಿಯ ಮಹಿಮೆಯನ್ನು ಸಾರುವ ಗುಗ್ಗಳ, ಶರಭಿ ಗುಗ್ಗಳ, ವೀರಗಾಸೆ. ಕೆಂಡಾದರ್ಚನೆ, ಅರ್ಚನೆ ಹೀಗೆ ಹಲವು ಬಗೆಯಲ್ಲಿ ಶ್ರೀ ವಿರಭದ್ರೇಶ್ವರ ಸ್ವಾಮಿಯ ಮಹಿಮೆ, ಪವಾಡ, ಚರಿತ್ರೆಯನ್ನು ಭಕ್ತರಿಗೆ ಒಡಪುಗಳ ಮೂಲಕ ಸಮಾಳ ಭಾರಿಸುತ್ತಾ, ಪುರುವಂತರು ಹೆಜ್ಜೆ ಹಾಕುತ್ತ ಹೇಳುತ್ತಿದ್ದರೆ ನೆರೆದವರ ಮೈಮನ ನವಿರೇಳುತ್ತದೆ. ಮಣ್ಣಿನ ಕೊಡ ಹಾಗೂ ಬಿಳಿ ಹುಲ್ಲಿನಲ್ಲಿ ಅತ್ಯಂತ ಕಲಾತ್ಮಕವಾಗಿ ಹೆಣೆದು ಗುಗ್ಗಳ ಕೊಡಗಳನ್ನು ಕಟ್ಟುವುದು ಅತ್ಯಂತ ವಿಶೇಷ. ಬಾಯಿ, ನಾಲಗೆಗೆ ಶಸ್ತ್ರಗಳನ್ನು ಹಾಕಿಸಿಕೊಳ್ಳುವ ಮೂಲಕ ಭಕ್ತರು ಅತ್ಯಂತ ಮಡಿಯಿಂದ ಹರಕೆಗಳನ್ನು ತೀರಿಸುವುದು ಇಂದಿಗೂ ಕಟ್ಟು ನಿಟ್ಟಾಗಿ ನಡೆಯುತ್ತಿದೆ. ಹಾಗೆಯೇ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಅಮಾವಾಸ್ಯೆ ಹಾಗೂ ಹುಣ್ಣಿಮೆ, ಪ್ರತಿ ಮಂಗಳವಾರದಂದು ವಿಶೇಷ ಅಲಂಕಾರದೊಂದಿಗೆ ಪೂಜೆ, ಪ್ರಸಾದ ವಿತರಣೆ ನಡೆಯುತ್ತದೆ. 

–—–

ಹಲವೆಡೆ ಶ್ರೀ ವೀರಭದ್ರೇಶ್ವರ ದೇವಸ್ಥಾನಗಳು

ಶಿವಮೊಗ್ಗ ಚೌಕಿ ಮಠದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನವು ಅಪಾರ ಭಕ್ತ ವೃಂದವನ್ನು ಹೊಂದಿದೆ. ಈ ದೇವಸ್ಥಾನಕ್ಕೆ ಶಿವಮೊಗ್ಗ , ಚಿಕ್ಕಮಗಳೂರು, ದಾವಣಗೆರೆ ಹಾಗೂ ಬೆಂಗಳೂರು, ಮೈಸೂರು ಭಾಗದಿಂದಲೂ ಭಕ್ತರು ಆಗಮಿಸುತ್ತಾರೆ. ಹಾಗೆಯೇ ನಗರದ ಹಳೇ ಮಂಡ್ಲಿಯಲ್ಲಿಯೂ ಪುರಾತನ ಕಾಲದ ಶ್ರೀ ವೀರಭದ್ರೇಶ್ವರ, ಜಟ್‌ಪಟ್‌ ನಗರ, ಗಾಡಿಕೊಪ್ಪ, ಮಲ್ಲಿಗೇನಹಳ್ಳಿ ಯಲ್ಲಿ ಶ್ರೀ ವೀರಭದ್ರ ಸ್ವಾಮಿಯ ದೇವಸ್ಥಾನಗಳಿವೆ. ಇನ್ನು ರಾಜ್ಯದ ರಾಚೋಟೇಶ್ವರ ಶ್ರೀ ವೀರಭದ್ರೇಶ್ವರ ಸ್ವಾಮಿ, ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಶ್ರೀ ವೀರಭದ್ರಸ್ವಾಮಿ, ಬೆಳಗಾಂನ ಗೊಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನಗಳು ಅಪಾರ ಸಂಖ್ಯೆಯ ಭಕ್ತ ಸಮೂಹವನ್ನು ಹೊಂದಿವೆ. 

–—–

ಸೆ. 23 ರಂದು ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ

ಶಿವಮೊಗ್ಗ :  ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯು ಪ್ರಪ್ರಥಮ ಬಾರಿಗೆ ವಿಶ್ವದಾದ್ಯಂತ ಆಚರಣೆಗೆ ತಂದ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವವನ್ನು ಸೆ. 23 ರಂದು ಶ್ರೀ ವೀರಶೈವ ಕಲ್ಯಾಣ ಮಂದಿರ ಹಿಂಭಾಗದ ಚೌಕಿಮಠದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಬೆಳಗ್ಗೆ 7ಗಂಟೆಗೆ ಕೇದಾರ ಪೀಠದ ಶ್ರೀ ಹಿಮವತ್ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಕೇದಾರನಾಥ ರಾವಲ್‌ ಪದವಿ ಭೂಷಿತ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರಿಂದ ಸಂಗೀತಯುಕ್ತ ಇಷ್ಟಲಿಂಗ ಪೂಜೆ ಹಾಗೂ 11 ರಿಂದ ಧರ್ಮಸಭೆಯೊಂದಿಗೆ  ಆಯೋಜಿಸಲಾಗಿದೆ. 

ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಉತ್ತರಾಖಂಡ ಕೇದಾರ ಪೀಠದ ಶ್ರೀ ಹಿಮವತ್ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಕೇದಾರನಾಥ ರಾವಲ್‌ ಪದವಿ ಭೂಷಿತ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯ ವಹಿಸುವರು.

 ಜಗಳೂರು ಕಣ್ಣುಕುಪ್ಪೆಯ ಶ್ರೀ ಷ. ಬ್ರ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಚನ್ನಗಿರಿ ಹಿರೇಮಠದ ಶಿವಾಚಾರ್ಯ ಸ್ವಾಮಿಗಳು, ಮಳಲಿ ಸಂಸ್ಥಾನ ಮಠ ರಂಭಾಪುರಿ ಶಾಖಾ ಮಠದ  ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಬಿಳಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ತೊಗರ್ಸಿ ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮಿಗಳು ನೇತೃತ್ವ ವಹಿಸುವರು. 

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್‌.ಯಡಿಯೂರಪ್ಪ  ಅವರು ನೆರವೇರಿಸುವರು. ಲಿಂಗಾಯತ ಸಂಘಟನಾ ವೇದಿಕೆಯಅಧ್ಯಕ್ಷರಾದ ಜಿ.ಶಿವರಾಜ್‌ ಅಧ್ಯಕ್ಷತೆ ವಹಿಸುವರು. ಸೂಡಾ ಮಾಜಿ ಅಧ್ಯಕ್ಷರಾದ ಎಸ್‌.ಎಸ್‌. ಜ್ಯೋತಿಪ್ರಕಾಶ್‌ ಪ್ರಾಸ್ತಾವಿಕ ಮಾತನಾಡುವರು. ಕಾರ್ಯಕ್ರಮ ಉಸ್ತುವಾರಿಗಳು ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವೈದ್ಯಕೀಯ ಘಟಕದ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ.ಧನಂಜಯ ಸರ್ಜಿ ಅವರು ಭಾಗವಹಿಸುವರು. 

ಸಂಸದರಾದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್‌ ಶಾಸಕರಾದ ಎಸ್‌.ರುದ್ರೇಗೌಡ್ರು, ಭದ್ರಾವತಿ ಶಾಸಕರಾದ ಬಿ.ಕೆ.ಸಂಗಮೇಶ್‌,  ಶಿಕಾರಿಪುರ ಶಾಸಕರಾದ ಬಿ.ವೈ. ವಿಜಯೇಂದ್ರ, ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾದ ಚನ್ನಬಸಪ್ಪ, ವಿಧಾನ ಪರಿಷತ್‌ ಮಾಜಿ ಶಾಸಕರಾದ ಆಯನೂರು ಮಂಜುನಾಥ್‌, ಮಾಜಿ ಶಾಸಕರಾದ ಹೆಚ್‌. ಎಂ. ಚಂದ್ರಶೇಖರಪ್ಪ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್‌. ಷಡಾಕ್ಷರಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರದೀಪ್‌ ಕಂಕಣವಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ರಾಜೇಶ್‌ ಸುರಗಿಹಳ್ಳಿ, ಮಧ್ಯ ಕರ್ನಾಟಕ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷರಾದ ಸಿ.ಪಿ. ಈರೇಶ್‌ ಗೌಡ್ರು, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಗೌರಮ್ಮ ಷಡಕ್ಷರಿ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗಹಿಸುವರು.

 ವಿಶೇಷ ಆಹ್ವಾನಿತರಾಗಿ ಖ್ಯಾತ ಚಲನಚಿತ್ರ ನಟ ಡಾಲಿ ಧನಂಜಯ್‌, ನಟಿ ಅಧಿತಿ ಪ್ರಭುದೇವ್‌ ಭಾಗವಹಿಸುವರು.  ವೀರಶೈವ ಕಲ್ಯಾಣ ಮಂದಿರದ ಗೌರವ ಕಾರ್ಯದರ್ಶಿ ಎನ್‌.ಜೆ, ರಾಜಶೇಖರ್‌ (ಸುಭಾಷ್‌), ಪದವೀಧರರ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್‌. ಪಿ. ದಿನೇಶ್‌, ಮಹಾನಗರ ಪಾಲಿಕೆ ಸದಸ್ಯರಾದ ಹೆಚ್‌.ಸಿ. ಯೋಗೀಶ್‌, ಇ.ವಿಶ್ವಾಸ್‌, ಅನಿತಾ ರವಿಶಂಕರ್‌, ಎಸ್‌.ಮಂಜುನಾಥ್‌, ಶ್ರೀ ಗುರುಕರಿಬಸವೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಹೆಚ್‌.ವಿ. ಮಹೇಶ್ವರಪ್ಪ, ಸಾಗರ ವೀರಶೈವ ಸಮಾಜದ ಉಪಾಧ್ಯಕ್ಷರಾದ ಕೆ.ಎಚ್‌.ಜ್ಞಾನೇಶ್ವರಪ್ಪ, ಶ್ರೀ ಬಸವೇಶ್ವರಸ್ವಾಮಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ರುದ್ರಣ್ಣ, ವೇ.ಮೂ. ಚಂದ್ರಶೇಖರ ಶಾಸಿ್ತ್ರ ಹಿರೇಮಠ್‌, ವೇ.ಮೂ. ಚಂದ್ರಶೇಖರ ಶಾಸಿ್ತ್ರ ಕೋಡಿಕೊಪ್ಪಲು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ರುದ್ರಮುನಿ ಎನ್‌.ಸಜ್ಜನ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

 ಕಾರ್ಯಕ್ರಮದ ನಂತರ ಪ್ರಸಾದ ವಿನಿಯೋಗವಿರುತ್ತದೆ. ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯು ಕೋರಿದೆ. 

ಪತ್ರಿಕಾಗೋಷ್ಟಿಯಲ್ಲಿ ಲಿಂಗಾಯತ ಸಂಘಟನಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಬಿ.ಶಿವರಾಜ್‌, ಸೂಡಾ ಮಾಜಿ ಅಧ್ಯಕ್ಷರಾದ ಎಸ್‌.ಎಸ್‌. ಜ್ಯೋತಿಪ್ರಕಾಶ್‌, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವೈದ್ಯಕೀಯ ಘಟಕದ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ.ಧನಂಜಯ ಸರ್ಜಿ, ವೀರಶೈವ ಕಲ್ಯಾಣ ಮಂದಿರದ ಗೌರವ ಕಾರ್ಯದರ್ಶಿ ಎನ್‌.ಜೆ, ರಾಜಶೇಖರ್‌ (ಸುಭಾಷ್‌), ಪದವೀಧರರ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್‌. ಪಿ. ದಿನೇಶ್‌,  ವೀರಶೈವ ಸಮಾಜದ ನಿರ್ದೇಶಕರಾದ ಎಸ್‌.ಎನ್‌. ಮಹಾಲಿಂಗಯ್ಯ ಶಾಸಿ್ತ್ರ, ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ಉಮೇಶ್‌,ಉಮೇಶ್‌ ಹಿರೇಮಠ್‌,ತಾಲ್ಲೂಕು ಅಧ್ಯಕ್ಷ ಧನರಾಜ್‌, ಪ್ರಧಾನ ಕಾರ್ಯದರ್ಶಿ ರಾಜಶೇಖರ್‌, ನಗರಾಧ್ಯಕ್ಷ ಅವಿನಾಶ್‌, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ್‌ ಕಾಣೂರು ಮತ್ತಿತರರು ಹಾಜರಿದ್ದರು.  

––

ನಡೆದಾಡುವ ದೇವರು 

ಉತ್ತರಾಖಂಡ್‌ ಕೇದಾರಪೀಠದ ಶ್ರೀ ಹಿಮವತ್ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಕೇದಾರನಾಥ ರಾವಲ್‌ ಪದವೀ ಭೂಷಿತ ಭೀಮಶಂಕರಲಿಂಗ ಶಿವಾಚಾರ್ಯ ಭಗವಾತ್ಪಾದರು ನಡೆದಾಡುವ ದೇವರೆಂದೇ ಜನಜನಿತ.  ಜಗದ್ಗುರುಗಳು ಇಷ್ಟಲಿಂಗ ಪೂಜೆ ನೆರವೇರಿಸುವರು. ವಿಶೇಷವೆಂದರೆ ಡಿಸೆಂಬರ್‌ ನಂತರ  ಹಿಮ ಬೀಳುವ ಸಂದರ್ಭ ದೇವಸ್ಥಾನ ಮುಚ್ಚಿದ ಆರು ತಿಂಗಳು ಶ್ರೀ ಕೇದಾರನಾಥೇಶ್ವರ ತಲೆಯ ಮೇಲಿರುವ ಬಂಗಾರದ ಕಿರೀಟವು ಜಗದ್ಗುರುಗಳ ತಲೆಯ ಮೇಲೆ ಇನ್ನಾರು ತಿಂಗಳು ಜಗದ್ಗುರುಗಳ ಮೇಲಿದ್ದು ಪೂಜಿಸಲ್ಪಡುತ್ತದೆ. ಹಾಗಾಗಿ ಜಗದುರುಗಳನ್ನು ಸಾಕ್ಷಾತ್‌ ನಡೆದಾಡುವ ದೇವರೆಂದು ಹೇಳಲಾಗುತ್ತಿದೆ. ಇಷ್ಟಲಿಂಗ ಪೂಜೆಯು  ವೈವಿಧ್ಯಮಯ ಭಕ್ತ ಕಲಾ ತಂಡಗಳೊಂದಿಗೆ ಒಂದೊಂದು ಪೂಜೆ ಒಂದು ರೀತಿಯ ಸಂಗೀತದೊಂದಿಗೆ ನೆರವೇರಲಿದೆ. ವೇದಘೋಷ, ಆರತಿ ಇರುತ್ತದೆ. ರುದ್ರ ಪಾರಾಯಣ ಜೊತೆಗೆ, ಶಿವನ ಶ್ಲೋಕ, ಶಿವ ನಾಮಸ್ಮರಣೆ, ಮಂತ್ರಘೋಷ ಹಾಗೂ ಪ್ರಾರ್ಥನೆ ನಡೆಯಲಿದೆ.  ಇಂತಹ ವಿಶೇಷ ಪೂಜೆಯನ್ನು ಸಾವಿರಾರು ವರ್ಷಗಳ ಇತಿಹಾಸವಿರುವ ರಾಜಮನೆತನ ಮೂಲದ ಹಾಗೂ ಶ್ರೀ ಭೀಮಶಂಕರಲಿಂಗ ಶಿವಾಚಾರ್ಯ ಭಗವಾತ್ಪಾದರು ಕರ್ನಾಟಕದವರೇ ಆಗಿರುವುದು ಮತ್ತೊಂದು ವಿಶೇಷ.


ಇನ್ನಷ್ಟು ಸುದ್ದಿಗಳು