ರೋಡ್​ ಹಂಪ್ಸ್​ ಜೀವ ತೆಗೆಯುತ್ತೆ ಜಾಗ್ರತೆ! ಇಲ್ಲಿದೆ ನೋಡಿ ಸಿಸಿ ಕ್ಯಾಮರಾದ ಸಾಕ್ಷಿ! ಸಾಗರ ರಸ್ತೆಯಲ್ಲಿಬೈಕ್ ಸವಾರ ಸಾವು!

The incident was caught on CCTV camera when the bike skidded off the road humps on Shivamogga Sagar Road and the rider died.ಶಿವಮೊಗ್ಗ ಸಾಗರ ರಸ್ತೆಯಲ್ಲಿ ರೋಡ್ ಹಂಪ್ಸ್​ನಲ್ಲಿ ಬೈಕ್​ ಸ್ಕಿಡ್ ಆಗಿ, ಸವಾರ ಸಾವನ್ನಪ್ಪಿದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ರೋಡ್​ ಹಂಪ್ಸ್​ ಜೀವ ತೆಗೆಯುತ್ತೆ ಜಾಗ್ರತೆ! ಇಲ್ಲಿದೆ ನೋಡಿ ಸಿಸಿ ಕ್ಯಾಮರಾದ ಸಾಕ್ಷಿ! ಸಾಗರ ರಸ್ತೆಯಲ್ಲಿಬೈಕ್ ಸವಾರ ಸಾವು!

KARNATAKA NEWS/ ONLINE / Malenadu today/ Aug 7, 2023 SHIVAMOGGA NEWS

ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿ  ರೋಡ್​ ಹಂಪ್​ ಗಮನಿಸದ ಪರಿಣಾಮ ಬೈಕ್​ವೊಂದು ಸ್ಕಿಡ್ ಆಗಿ ಬಿದ್ದು, ಸವಾರ ಮೃತಪಟ್ಟಿರುವ ಘಟನೆಯ ಬಗ್ಗೆ ವರದಿಯಾಗಿದೆ. 

ಹೇಗಾಯ್ತು ಘಟನೆ  

ಚಿಕ್ಕಲ್‌ ಸಿದ್ದೇ‍ಶ್ವರ ನಗರದ ಮಾಲತೇಶ್‌ (37) ಮೃತ ವ್ಯಕ್ತಿ.  ಪೇಪರ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಇವರು,  ಸಹೋದ್ಯೋಗಿಯೊಬ್ಬರ ಮಗಳ ನಾಮಕರಣ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಆಗುತ್ತಿದ್ದರು. ಸಾಗರ ರೋಡ್​ನಲ್ಲಿರುವ ಹೋಟೆಲ್​ವೊಂದರಲ್ಲಿ ಕಾರ್ಯಕ್ರಮ ನಡೆದಿತ್ತು. ಅಲ್ಲಿಂದ ವಾಪಸ್ ಆಗುತ್ತಿದ್ದ ವೇಳೆ  ಶ್ರೀರಾಮಪುರದ ಬಳಿ ಘಟನೆ ಸಂಭವಿಸಿದೆ. 

ರೋಡ್​ ಹಂಪ್‌ನಲ್ಲಿ (Road Hump) ಬೈಕ್‌ ನಿಯಂತ್ರಣಕ್ಕೆ ಸಿಗದೇ, ಸ್ಕಿಡ್ ಆಗಿ ಬೈಕ್ ಹಾರಿದೆ. ಅಲ್ಲದೆ ವೇಗದಲ್ಲಿದ್ದ ಬೈಕ್​ 20 ಅಡಿಗೂ ದೂರ ಎಳೆದುಕೊಂಡು ಹೋಗಿದೆ. ಪರಿಣಾಮ ಬೈಕ್​ನಿಂದ ಬಿದ್ದ  ಮಾಲತೇಶ್‌ಗೆ ಗಂಭೀರವಾಗಿ ಪೆಟ್ಟು ಬಿದ್ದಿತ್ತು. ಸ್ಥಳೀಯರು ಅವರನ್ನ ಸ್ಥಳೀಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು.  ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಘಟನೆಯ ದೃಶ್ಯಾವಳಿಗಳು ಘಟನಾ ಸ್ಥಳದಲ್ಲಿರುವ ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ಪೂರ್ಣ ಚಿತ್ರಣ ಕಾಣುತ್ತಿದೆ. ತುಂಗಾ ನಗರ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ತೀರ್ಥಹಳ್ಳಿಯಲ್ಲಿ ನಡೆದ ಶಿಕಾರಿ ಶೂಟ್ ಪ್ರಕರಣ! ಪೊಲೀಸ್ ಪ್ರಕಟಣೆಯಲ್ಲಿ ಏನಿದೆ ಗೊತ್ತಾ?

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು, ಆರಗದ ಸಮೀಪ ನಡೆದ ಶಿಕಾರಿ ಶೂಟ್ ಪ್ರಕರಣ  ಸಂಬಂಧ ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದ್ದು, ಘಟನೆಯ ವಿವರಗಳನ್ನು ನೀಡಿದೆ. 

ಪ್ರಕಟಣೆಯಲ್ಲಿ ಏನಿದೆ?₹

ದಿನಾಂಕಃ 04-08-2023  ರಂದು ರಾತ್ರಿ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಗದ್ದೆ – ಹಿರೆಗದ್ದೆ ಗ್ರಾಮದ ವಾಸಿಗಳಾದ ರಾಕೇಶ್‌, 30 ವರ್ಷ ಮತ್ತು ರಾಜೇಶ್  ರವರು ಪರವಾನಿಗೆ ಇಲ್ಲದ ನಾಡ ಬಂದೂಕುಗಳನ್ನು ತೆಗೆದುಕೊಂಡು ಊರಿನ ಹತ್ತಿರದ ಕಾಡಿನಲ್ಲಿ ಹಂದಿ ಬೇಟೆಗೆಂದು ಹೋಗಿದ್ದು, ಈ ಸಂದರ್ಭದಲ್ಲಿ ಹಂದಿಗೆ ಹೊಡೆಯಲು ರಾಜೇಶನು ತನ್ನ ಬಂದೂಕಿನಿಂದ ಹಾರಿಸಿದ ಗುಂಡು ರಾಕೇಶನ ಎಡಗಾಲಿನ ಮೊಣಕಾಲಿಗೆ  ತಗುಲಿ ತೀವ್ರ ರಕ್ತ ಗಾಯವಾಗಿದ್ದು, ಈ ಬಗ್ಗೆ ಗುನ್ನೆ ಸಂಖ್ಯೆ 0141/2023 ಕಲಂ 326 ಐಪಿಸಿ ಮತ್ತು 25, 27 Arms Act ರೀತ್ಯಾ ಪ್ರಕರಣ  ದಾಖಲಿಸಿಕೊಳ್ಳಲಾಗಿರುತ್ತದೆ. 

ಸದರಿ ಪ್ರಕರಣದ ಆರೋಪಿತರ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜೆ .ಕೆ. ಐಪಿಎಸ್ ಮಾನ್ಯ ಪೊಲೀಸ್  ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜೆಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಗಜಾನನ ವಾಮನ ಸುತಾರ ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪವಿಭಾಗರವರ ಮೇಲ್ವಿಚಾರಣೆಯಲ್ಲಿ ಮತ್ತು  ಶ್ರೀ ಅಶ್ವತ್ಥ ಗೌಡ ಪೊಲೀಸ್ ನಿರೀಕ್ಷಕರು, ತೀರ್ಥಹಳ್ಳಿ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ,  ಪಿಎಸ್ಐ ರವರಾದ ಶ್ರೀ ಸಾಗರ್ ಅತ್ತರವಾಲ, ಶ್ರೀ ಗಾದಿಲಿಂಗಪ್ಪ, ಎಎಸ್ಐ ಲೋಕೇಶ್ ಮತ್ತು  ಸಿಬ್ಬಂದಿಗಳಾದ ಪುನೀತ್, ಸುಧಾಕರ್, ದಿವಾಕರ, ಪರಮೇಶ್ವರ ನಾಯ್ಕ ಕುಮಾರ್, ರವಿ, ದೀಪಕ್, ಪ್ರದೀಪ್, ಹಾಗೂ ಚಾಲಕರಾದ ಅವಿನಾಶ್ ಹಾಗೂ ವಿಜಯ್ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ. 

ಸದರಿ ತನಿಖಾ ತಂಡವು ದಿನಾಂಕಃ 06-08-2023  ರಂದು ಪ್ರಕರಣದ ಆರೋಪಿತನಾದ ರಾಜೇಶ 30 ವರ್ಷ, ವಾಸ ದಾಸನಗದ್ದೆ, ತೀರ್ಥಹಳ್ಳಿ ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಪರವಾನಿಗೆ ಇಲ್ಲದ ಒಂದು ನಾಡ ಬಂದೂಕನ್ನು ಅಮಾನತ್ತು  ಪಡಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ  ಒಪ್ಪಿಸಲಾಗಿರುತ್ತದೆ.


ಸಾರ್ವಜನಿಕರ ಗಮನಕ್ಕೆ ನಾಳೆ ಶಿವಮೊಗ್ಗದ ಈ ಪ್ರದೇಶಗಳಲ್ಲಿ ಇರೋದಿಲ್ಲ ವಿದ್ಯುತ್​

ಶಿವಮೊಗ್ಗ ಉಪ ವಿಭಾಗ - 02 ರ ಘಟಕ - 6 ರ ವ್ಯಾಪ್ತಿಯಲ್ಲಿನ ಮಂಡ್ಲಿ ಭಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 11 ಕೆವಿ ನಿರ್ವಹಣೆ ಕಾಮಗಾರಿ ಇರುವ ಕಾರಣ ಆ.08 ರ ಬೆಳಗ್ಗೆ 09:00 ರಿಂದ ಸಂಜೆ 06:00 ಗಂಟೆಯವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಇಲಿಯಾಜ್ ನಗರ 01 ನೇ ಕ್ರಾಸ್ ನಿಂದ 19 ನೇ ಕ್ರಾಸ್ ವರೆಗೆ, ಕೆ.ಇ.ಬಿ ವಸತಿ ಗೃಹಗಳು, ತುಂಗಾ ನಗರ ಚಾನಲ್, ಕಾಮತ್ ಲೇಔಟ್, ನ್ಯೂ ಮಂಡ್ಲಿ, ಮಂಡ್ಲಿ ವೃತ್ತ, ಇಲಿಯಾಜ್ ನಗರ 100 ಅಡಿ ರಸ್ತೆ, ಫಾರೂಕ್ಯ ಶಾದಿಮಹಲ್, ಕೆಎ 14 ಕಾರ್ ವಾಷ್, ಆಯುಷ್ ಇಂಜಿನೀರಿಂಗ್ ವರ್ಕ್ಸ್ ಹಾಗೂ   ಸುತ್ತಮುತ್ತಲಿನ  ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.


ಪತ್ರಕರ್ತ ಮತ್ತು ಆತನ ಮಗನ ಮೇಲೆ ಹಲ್ಲೆ ! ಪೋಕ್ಸೋ ಸೇರಿ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಕೇಸ್! ಸ್ಟೇಷನ್​ ಬಳಿ ಪೊಲೀಸರಿಗೂ ತೋರಿದ್ರಾ ಅಗೌರವ ?

ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಲ್ಲಿ ನಿನ್ನೆ ಪತ್ರಕರ್ತ ಹಾಗೂ ಅವರ ಮಗನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ  IPC 1860 (U/s-143,147,323,324,504,506,149), PROTECTION OF CHILDREN FROM SEXUAL OFFENCES ACT 2012 (U/s-12) ಅಡಿಯಲ್ಲಿ ಕೇಸ್ ದಾಖಲಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು ಈ ಬಗ್ಗೆ ಪೊಲೀಸ್ ಇಲಾಖೆಯು ಸಹ ಕಠಿಣ ಕ್ರಮಕ್ಕೆ ಮುಂದಾಗಿದೆ. 

ನಿನ್ನೆ ಸಂಜೆ ಪತ್ರಕರ್ತ ಮುದಾಸಿರ್​ ಎಂಬವರ ಮಗ ಸ್ಥಳೀಯ ಮಸೀದಿಯೊಂದರ ಬಳಿ ಇರುವ ಅಂಗಡಿಯೊಂದಕ್ಕೆ ತೆರಳಿದ್ದಾನೆ. ಈ ವೇಳೆ ಅಲ್ಲಿದ್ದ ಆರೋಪಿಗಳು ಬಾಲಕನನ್ನ ಚುಡಾಯಿಸಿ ಆತನಿಗೆ ಲೈಂಗಿಕ ಶೋಷಣೆ ನೀಡಿದ್ದಾರೆ. ಈ ವೇಳೆ ಬಾಲಕ ಕಿರುಚಿಕೊಂಡಿದ್ದಾನೆ. ತಕ್ಷಣವೇ ವಿಚಾರ ತಿಳಿದು ತಂದೆಯಾಗಿ ಮುದಾಸಿರ್ ಅಲ್ಲಿಗೆ ಬಂದು ವಿಚಾರಿಸಿದ್ದಾರೆ. ಈ ವೇಳೆ ಅವರ ಮೇಲೂ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಅಷ್ಟೊತ್ತಿಗೆ ಸ್ಥಳಕ್ಕೆ ಬಂದ, ಮುದಾಸಿರ್ ರವರ ಸ್ನೇಹಿತರು ತಂದೆ ಹಾಗೂ ಮಗನನ್ನು ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಈ ಮಧ್ಯೆ ಪುನಃ ಮುದಾಸಿರ್​ರವರನ್ನ ಕರೆಮಾಡಿ ಮಾತನಾಡಬೇಕು ಎಂದು ಕರೆಸಿಕೊಂಡ ದುಷ್ಕರ್ಮಿಗಳು, ಅವರ ಮೇಲೆ ಮತ್ತೆ ಹಲ್ಲೆ ಮಾಡಿದ್ದಾರೆ. ಇದೇ ವಿಚಾರವಾಗಿ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ಕಾಂಪೌಂಡ್​ನೊಳಗೆ ಆರೋಪಿಗಳು ಮತ್ತವರ ಕಡೆಯವರು ಪೊಲೀಸರಿಗೂ ಗೌರವ ತೋರದೆ ಕಿರುಚಾಡಿದ್ದಾರೆ ಎಂಬ ಆರೋಪಗಳು ಸಹ ಕೇಳಿಬಂದಿದೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ನಡೆದ ಘಟನೆಗಳ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ.   


ಇನ್ನಷ್ಟು ಸುದ್ದಿಗಳು 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು