Shivamogga | Feb 1, 2024 | ಶಿವಮೊಗ್ಗದಲ್ಲಿ ನಡೆದ ಡಿಎಆರ್ ಪರೀಕ್ಷೆ ಮೇಲ್ವಿಚಾರಕಿಯಾಗಿ ಕೆಲಸ ಮಾಡಿ ವಾಪಸ್ ಬೆಂಗಳೂರು ಟ್ರೈನ್ನಲ್ಲಿ ಹೋಗುತ್ತಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಮೂಲದ ಮಹಿಳೆಯೊಬ್ಬರ ಸಾವು ಇದೀಗ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಬೆಂಗಳೂರಲ್ಲಿರುವ ಅರಣ್ಯ ಭವನದ ಸಿಬ್ಬಂದಿಯಾಗಿರುವ ಮಹಿಳೆ ಮೃತದೇಹ ತುಮಕೂರು ಸಮೀಪ ರೈಲ್ವೆ ಹಳಿ ಬಳಿ ಬಿದ್ದಿದೆ.
ತುಮಕೂರು ಸಮೀಪದ ಹಿರೇಹಳ್ಳಿ ಬಳಿ ಮಹಿಳೆಯ ಶವ ಪತ್ತೆಯಾಗಿದೆ. ಮೃತ ಮಹಿಳೆಯ ಹೆಸರು ಅನ್ನಪೂರ್ಣ, ವಯಸ್ಸು 50 . ಮೂಲತಃ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನವರು. ಬೆಂಗಳೂರು ಅರಣ್ಯ ಭವನದಲ್ಲಿ ಕೆಲಸ. ಶಿವಮೊಗ್ಗದಲ್ಲಿ ನಡೆದ ಡಿಎಅರ್ ಪರೀಕ್ಷೆಯ ಮೇಲ್ವಿಚಾರಕಿಯಾಗಿ ಕೆಲಸ ನಿರ್ವಹಿಸಿ ವಾಪಸ್ ಶಿವಮೊಗ್ಗ-ಬೆಂಗಳೂರು ಟ್ರೈನ್ ನಲ್ಲಿ (Shivamogga-Bengaluru train) ತೆರಳುತ್ತಿದ್ದರು
ಬೆಂಗಳೂರು ಮಲ್ಲೇಶ್ವರಂ ನಲ್ಲಿ ವಾಸವಿದ್ದ ಇವರು ಜನವರಿ 30 ರಂದು ಬೆಂಗಳೂರುಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಅವರ ಸಹೋದರ ಕೂಡ ಟ್ರೈನ್ನಲ್ಲಿದ್ದರು. ಸಹೋದರ ರಿಸರ್ವೇಶನ್ ಭೋಗಿಯಲ್ಲಿದ್ದರು. ಮೃತ ಅನ್ನಪೂರ್ಣರವರು ಜನರಲ್ ಕಂಪಾರ್ಟ್ಮೆಂಟ್ನಲ್ಲಿ ಪ್ರಯಾಣಿಸುತ್ತಿದ್ದರು. ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಸಹೋದರ ಇಳಿದು ಅನ್ನಪೂರ್ಣ ರಿಗಾಗಿ ಹುಡುಕಾಟ ನಡೆಸಿದ್ದಾರೆ. ಅವರು ಕಾಣದೆ ಇದ್ದಾಗ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರೈಲ್ವೆ ಪೊಲೀಸರು ಪ್ರತಿ ಸ್ಟೇಷನ್ನ ಸಿಸಿ ಕ್ಯಾಮರಾ ಪರಿಶೀಲಿಸಿದಾಗಲೂ ಯಾವುದೇ ವಿಷಯ ಪತ್ತೆಯಾಗಿಲ್ಲ. ಆ ಬಳಿಕ ರೈಲ್ವೆ ಹಳಿಗಳ ಬಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಿರೇಹಳ್ಳಿ ಸಮೀಪ ಅನ್ನಪೂರ್ಣರವರ ಮೃತದೇಹ ಪತ್ತೆಯಾಗಿದ್ದು, ಅಲ್ಲಿಯೇ ಸಮೀಪದಲ್ಲಿ ಅವರ ಬ್ಯಾಗ್ ಸಹ ಪತ್ತೆಯಾಗಿದೆ.
ಅನ್ನಪೂರ್ಣರವರು ರೈಲಿನಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಆಕಸ್ಮಿಕವಾಗಿ ಕೆಳಕ್ಕೆ ಬಿದ್ದರೋ ಅಥವಾ ಅವರನ್ನ ರೈಲಿನಿಂದ ತಳ್ಳಲಾಗಿದೆಯೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. ಈ ಸಂಬಂಧ ಕುಟುಂಬಸ್ಥರು ಅನುಮಾನವನ್ನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಸ್ಟೇಷನ್ನಲ್ಲಿ ಪ್ರಕರಣ ದಾಖಲಾಗಿದೆ.