Shivamogga Caste Census ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿಗಣತಿ ಕಾರ್ಯವು ಜಿಲ್ಲೆಯಲ್ಲಿ ಬಿರುಸಿನಿಂದ ಸಾಗುತ್ತಿದೆ. ಈ ಕುರಿತು ಜಿಲ್ಲೆಯಲ್ಲಿ ಜಾತಿಗಣತಿ ಹೇಗೆ ನಡೆಯುತ್ತಿದೆ, ಇದುವರೆಗೂ ಎಷ್ಟುಮನೆಗಳ ಜಾತಿಗಣತಿ ಪೂರ್ಣಗೊಂಡಿದೆ ಎಂಬುವುದರ ಬಗ್ಗೆ ಇಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದು ನಗರದಲ್ಲಿ ಜಾತಿಗಣತಿ ಟಾರ್ಗೆಟ್ನ್ನು ಅವಧಿಗೂ ಮೊದಲೇ ಪೂರ್ಣಗೊಳಿಸಿದ ಶಿಕ್ಷಕರಿಗೆ ಸನ್ಮಾನಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು 4.90 ಲಕ್ಷ ಮನೆಗಳನ್ನು ಜಾತಿಗಣತಿ ಮಾಡಬೇಕೆಂದು ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ ನಮ್ಮ ಗಣತಿದಾರರು 1.70 ಲಕ್ಷ ಮನೆಗಳ ಗಣತಿಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಇಂದು ಸಂಜೆಯೊಳಗೆ ಒಟ್ಟು 2.20 ಲಕ್ಷ ಮನೆಗಳ ಜನಗಣತಿಯನ್ನು ಪೂರ್ಣಗೊಳಿಸುತ್ತೇವೆ ಎಂದರು.
Shivamogga Caste Census ಸರ್ವರ್ ಸಮಸ್ಯೆ ಇಲ್ಲ, ಪ್ರತಿದಿನ 53 ಸಾವಿರ ಗಣತಿ
ಜಾತಿಗಣತಿ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 4,500 ಶಿಕ್ಷಕರನ್ನು ನೇಮಿಸಲಾಗಿದೆ. ಇವರು ಪ್ರತಿದಿನ ಜಿಲ್ಲೆಯಲ್ಲಿ 50 ಸಾವಿರದಿಂದ 53 ಸಾವಿರದ ವರೆಗೆ ಗಣತಿಯನ್ನು ನಡೆಸುತ್ತಿದ್ದಾರೆ. ಅನೇಕ ಕಡೆ ‘ಸರ್ವರ್ ಸಮಸ್ಯೆ ಆಗುತ್ತಿದೆ’ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ, ವಾಸ್ತವದಲ್ಲಿ ಯಾವುದೇ ಸರ್ವರ್ ಸಮಸ್ಯೆ ಆಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಗಣತಿ ವೇಳೆ ಕೆಲವರು ಭಯಪಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಸಿ ಅವರು, ಗಣತಿದಾರರು ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಓಟಿಪಿ ಕೇಳಿದಾಗ ಯಾರೂ ಹೆದರುವ ಅವಶ್ಯಕತೆ ಇಲ್ಲ. ಗಣತಿದಾರರು ಮನೆಗೆ ಬಂದಾಗ ಅವರ ಬಳಿ ಇರುವ ಗುರುತು ಚೀಟಿಯನ್ನು (ಐಡಿ ಕಾರ್ಡ್) ಪರಿಶೀಲಿಸಬಹುದು ಎಂದರು.
ಈಗಾಗಲೇ ಜಿಲ್ಲೆಯಲ್ಲಿ 55 ರಿಂದ 60 ಜನರು ಜಾತಿಗಣತಿಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ. “ನಾವು ಯಾರನ್ನೂ ಸಹ ಒತ್ತಾಯ ಮಾಡುತ್ತಿಲ್ಲ. ಅನೇಕ ಸಮಾಜದ ಶ್ರೀಗಳು ಜಾತಿಗಣತಿಯಲ್ಲಿ ಭಾಗವಹಿಸಿ ಎಂದು ಕರೆ ನೀಡಿದ್ದಾರೆ. ಹಾಗಾಗಿ ಎಲ್ಲರೂ ಈ ಗಣತಿಯಲ್ಲಿ ಭಾಗವಹಿಸಬೇಕು” ಎಂದು ಅವರು ಮನವಿ ಮಾಡಿದರು.

