Honnali Road Railway Overbridge : ಶಿವಮೊಗ್ಗ ನಗರದ ಹೊನ್ನಾಳಿ ರಸ್ತೆ ರೈಲ್ವೇ ಮೇಲ್ಸೇತುವೆ ಬಳಿ ರಸ್ತೆ ಅವ್ಯವಸ್ಥೆ ಮತ್ತು ಅರ್ಧಕ್ಕೆ ನಿಂತಿರುವ ಕಾಮಗಾರಿಯನ್ನು ವಿರೋಧಿಸಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಈ.ಕಾಂತೇಶ್ ಅವರ ನೇತೃತ್ವದಲ್ಲಿ ನವೆಂಬರ್ 04 ರಂದು ಬೆಳಿಗ್ಗೆ 10:00 ಗಂಟೆಗೆ ರಸ್ತೆ ತಡೆ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಾಷ್ಟ್ರಭಕ್ತ ಬಳಗ ಅವರು ಶಿವಮೊಗ್ಗ ನಗರದ ಹೊನ್ನಾಳಿ ರಸ್ತೆ ರೈಲ್ವೇ ಮೇಲ್ಸೇತುವೆ ಬಳಿಯ ರಸ್ತೆಯು ಪ್ರತಿ ವರ್ಷವೂ ಕಳಪೆ ಕಾಮಗಾರಿಯ ಕಾರಣದಿಂದಾಗಿ ದುರವಸ್ಥೆಗೆ ತಲುಪುತ್ತಿದ್ದು, ಈ ವರ್ಷವೂ ರಸ್ತೆಯ ಅವ್ಯವಸ್ಥೆ ಮುಂದುವರಿದಿದೆ. ಈ ಕಳಪೆ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದಿದ್ದು, ಬೇಸಿಗೆಯಲ್ಲಿ ದೂಳಿನ ಸಮಸ್ಯೆಯಿಂದ ಅಕ್ಕಪಕ್ಕದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದರೆ, ಮಳೆಗಾಲದಲ್ಲಿ ಈ ಗುಂಡಿಗಳು ಕೆಸರು ಗುಂಡಿಗಳಾಗಿ ಮಾರ್ಪಟ್ಟು ವಾಹನ ಸವಾರರು ಜೀವ ಭಯದಿಂದ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆ ಕಳೆದ ವರ್ಷ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾಗ ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪನವರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿದ್ದರು. ಅವರು ಅಧಿಕಾರಿಗಳೊಂದಿಗೆ ಚರ್ಚಿಸಿ ಆ ಭಾಗದ ರಸ್ತೆಯನ್ನು ಸರಿಪಡಿಸಲು ಕ್ರಮವಹಿಸುವಂತೆ ಸೂಚನೆಯನ್ನೂ ನೀಡಿದ್ದರು. ಅದರಂತೆ ರಸ್ತೆ ಕಾಮಗಾರಿಯನ್ನಂತೂ ಪ್ರಾರಂಭಿಸಲಾಯಿತು, ಆದರೆ ರಸ್ತೆ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಹಾಕಿ ತಿಂಗಳುಗಳೇ ಕಳೆದರೂ ಈ ಕೆಲಸ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದೆ. ಇದರಿಂದಾಗಿ ಸ್ಥಳೀಯರು ಮತ್ತು ವಾಹನ ಸವಾರರು ತೀವ್ರ ನರಕ ಯಾತನೆ ಅನುಭವಿಸುವಂತಾಗಿದೆ. ಆದ್ದರಿಂದ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಅರ್ಧಕ್ಕೆ ನಿಂತಿರುವ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಿ ಉತ್ತಮ ರೀತಿಯ ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ರಾಷ್ಟ್ರ ಭಕ್ತ ಬಳಗದಿಂದ ಹೊನ್ನಾಳಿ ರಸ್ತೆ ರೈಲ್ವೇ ಮೇಲ್ಸೇತುವೆ ಬಳಿ ರಸ್ತೆ ತಡೆ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆ.ಈ.ಕಾಂತೇಶ್ ಅವರು ತಿಳಿಸಿದ್ದಾರೆ.
https://malenadutoday.com/shivamogga-crime-news-black-magic-allegations/

