ವಿಮಾನ ನಿಲ್ದಾಣಕ್ಕೆ ನಾನೂರು ಕೋಟಿಗೂ ಅಧಿಕ ಹಣ ವ್ಯಯಿಸಲು ಸರ್ಕಾರದ ಬೊಕ್ಕಸದಲ್ಲಿ ಹಣವಿರುವಾಗ, ಭೂಮಿ ತ್ಯಾಗ ಮಾಡಿದ ಸಂತ್ರಸ್ಥ ರೈತರಿಗೆ ಪರಿಹಾರ ಕೊಡಲು ಹಣ ಸಾಲದಾಯಿತೇ? ಹೀಗೊಂದು ಚರ್ಚೆ ವಿಮಾನ ನಿಲ್ದಾಣ ಉದ್ಘಾಟನೆ ದಿನಾಂಕ ಸನಿಹವಾಗುತ್ತಿದ್ದಂತೆ ಮಾರ್ಧನಿಸುತ್ತಿದೆ.
ಹೌದು ಮುಂಬರುವ ವಿಧಾನಸಭೆ ಚುನಾವಣೆ ಮೇಲೆ ಕಣ್ಣು ನೆಟ್ಟು, ಶಿವಮೊಗ್ಗ ಜಿಲ್ಲೆಯ ಜನತೆಯ ಮತ ಬ್ಯಾಂಕ್ ಗಟ್ಟಿಗೊಳಿಸುವಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಪ್ರಮುಖ ಪಾತ್ರವಹಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ವಿಮಾನ ನಿಲ್ದಾಣಕ್ಕಾಗಿ ಭೂಮಿ ತ್ಯಾಗ ಮಾಡಿದ ಸೋಗಾನೆ ಸಂತ್ರಸ್ಥ ರೈತರಿಗೆ ಅಂದು ನೀಡಿದ ಭರವಸೆಯನ್ನು ಜಿಲ್ಲಾಡಳಿತ ಈವರೆಗೂ ನೆರವೇರಿಸಿಲ್ಲ. ರಾಜಕೀಯ ನಾಯಕರು ಕೊಟ್ಟ ಭರವಸೆಯನ್ನು ಉಳಿಸಿಕೊಂಡಿಲ್ಲ. ಹೀಗಾಗಿ ಸಂತ್ರಸ್ತ ರೈತರ ಹೋರಾಟ ಈಗ ತೀವ್ರಗೊಂಡಿದೆ.

ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹಸಿರು ನಿಶಾನೆ ತೋರಿದ್ದರು. ಮುಖ್ಯಮಂತ್ರಿಯಾದ ಸಂತರ ಕಾಮಗಾರಿಗೆ ಚುರುಕು ಮುಟ್ಟಿಸಿದ್ರು. 2007 ಜೂನ್ 23 ರಂದು ಉಪ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರ ಸಮ್ಮುಖದಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ಬಗರ್ಹುಕುಂ ಸಾಗುವಳಿ ಮಾಡುತ್ತಿದ್ದ ರೈತರಿಗೆ ಭೂಮಿ ಬಿಟ್ಟುಕೊಡಲು ಎಕರೆಗೆ ಎರಡು ಲಕ್ಷ ಪರಿಹಾರ ನೀಡಲು ತೀರ್ಮಾನ ಕೈಗೊಳ್ಳಲಾಗಿತ್ತು. ತೋಟ, ಪಂಪ್ಸೆಟ್, ಮನೆಗಳಿಗೆ ಪ್ರತ್ಯೇಕ ಪರಿಹಾರವನ್ನು ಕೊಡಲು ಘೋಷಣೆ ಮಾಡಿದ್ದರು. ಇದರ ಜೊತೆಗೆ ಭೂಮಿ ಕಳೆದುಕೊಂಡ ರೈತರಿಗೆ ನಿಧಿಗೆ ಸಮೀಪ 40*60 ಅಡಿ ನಿವೇಶನ, ಅರ್ಹ ವ್ಯಕ್ತಿಗಳಿಗೆ ವೃದ್ದಾಪ್ಯ, ಅಂಗವಿಕಲ, ವಿಧವ ವೇತನ, ಮನೆಗೊಂದು ಉದ್ಯೋಗ ಕೊಡುವ ಭರವಸೆ ನೀಡಿದ್ದರು. ಆದರೇ ಇಂದಿಗೂ ಕೂಡ ಅವು ಗಗನ ಕುಸುಮವಾಗೆ ಉಳಿದಿವೆ
ಅದರಂತೆ ಶಿವಮೊಗ್ಗ ಹೊರವಲಯದ ಸೋಗಾನೆ ಬಳಿ 168.12 ಎಕರೆ ಖಾಸಗಿ ಭೂಮಿ ಮತ್ತು 611.10 ಎಕರೆ ಬಗರುಹುಕುಂ ಭೂಮಿಯನ್ನು ರೈತರಿಂದ ವಶಪಡಿಸಿಕೊಳ್ಳಲಾಗಿತ್ತು. ರನ್ ವೇ ಗೆ ಹೆಚ್ಚುವರಿಯಾಗಿ 129 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು.ಆದರೆ ಅಂದು ಸರ್ಕಾರ ರೈತರಿಗೆ ನೀಡಿದ ಭರವಸೆಗಳಲ್ಲಿ ಇನ್ನು ಕೆಲವು ಭರವಸೆಗಳು ಮರಿಚೀಕೆಯಾಗೆ ಉಳಿದಿವೆ. ಜ್ಯೋತಿನಗರ ಗ್ರಾಮದ ಸರ್ವೆ ನಂಬರ್ 120 ರಲ್ಲಿ ವಿಮಾನ ನಿಲ್ದಾಣ ಮಾಡಲು ಸುಮಾರು 302 ಜನ ರೈತರಿಂದ 530 ಎಕರೆ ಜಮೀನನ್ನು ಸ್ವಾದೀನ ಪಡಿಸಿಕೊಳ್ಳಲಾಗಿತ್ತು. ಈ ವೇಳೆ ಜಮೀನು ಕಳೆದುಕೊಂಡ ರೈತರಿಗೆ ನಿದಿಗೆ ಸಮೀಪ 60.40 ಅಡಿ ನಿವೇಶನ ನೀಡುವುದಾಗಿ ಭರವಸೆ ನೀಡಲಾಗಿತ್ತು. ನಿದಿಗೆ ಸಮೀಪ ಈ ರೈತರಿಗೆ ನಿವೇಶನ ನೀಡಲು 60 ಎಕರೆ 21 ಗುಂಟೆ ಜಾಗವನ್ನು ಮೀಸಲು ಇಡಲಾಗಿತ್ತು. ಅದರಲ್ಲಿ 34.9 ಗುಂಟೆ ಜಾಗದಲ್ಲಿ ನಿವೇಶನ ಸಿದ್ದಪಡಿಸಿ ಹೌಸಿಂಗ್ ಬೋರ್ಡನವರು 90 ಜನ ಫಲಾನುಭವಿಗಳಿಗೆ ಮನೆಗಳನ್ನು ಕಟ್ಟಿಕೊಟ್ಟಿತ್ತು. ಆದರೆ ಇನ್ನುಳಿದ ರೈತರಿಗೆ ನಿವೇಶನ ನೀಡಲು ಜಿಲ್ಲಾಡಳಿತ ಮೀನಾ ಮೇಷ ಎಣಿಸುತ್ತಿದ್ದು,ಇದು ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡ ರೈತರ ಆಕ್ರೋಶಕ್ಕೆ ಕಾರಣವಾಗಿತ್ತು.

ಖಾತೆದಾರ ರೈತರಿಗೂ ಪರಿಹಾರ ಇಲ್ಲ.
ವಿಮಾನ ನಿಲ್ದಾಣದೊಳಗೆ 24 ಎಕರೆ ಖಾತೆ ಜಮೀನು ಹೊಂದಿದ ರೈತರಿಗೂ ಈವರೆಗೆ ಪರಿಹಾರ ಸಿಕ್ಕಿಲ್ಲ. ಅವರಿಗೂ ಕೋರ್ಟ್ಗೆ ಹೋಗದಂತೆ ಮನವಿ ಮಾಡಿ, ಆ ಜಮೀನಿನಲ್ಲಿ ಕಾಮಗಾರಿಯನ್ನೇ ಪೂರ್ಣಗೊಳಿಸಲಾಗಿದೆ. ಆ ಖಾತೆದಾರ ರೈತರು ಕೂಡ ಪರಿಹಾರದ ಹಣಕ್ಕಾಗಿ ಅಲೆದಾಡುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಬಳಿ ಭೀಕರ ಅಪಘಾತ! ಭದ್ರಾವತಿಯ ಯುವತಿ ಸಾವು
ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ
ಅಂದು ಜಿಲ್ಲಾಡಳಿತ ಮಾತುಕೊಟ್ಟ ರೀತಿ ರೈತರ ಜೊತೆ ನಡೆದುಕೊಳ್ಳಲಿಲ್ಲ. ಲಕ್ಷ್ಮಿನಾರಾಯಣ್ ಹೌಸಿಂಗ್ ಬೋರ್ಡ್ ಕಮಿಷನರ್ ಆದ ಸಂದರ್ಭದಲ್ಲಿ ಜಮೀನು ಕಳೆದುಕೊಂಡವರಿಗೆ ನಿವೇಶನ ನೀಡುವುದು ಬೇಡ, ಮನೆ ಕಳೆದುಕೊಂಡವರಿಗೆ ಮಾತ್ರ ಸಣ್ಣ 50 ಮನೆಗಳನ್ನು ಕಟ್ಟುವುದು, ಉಳಿದ ನಿವೇಶನಗಳನ್ನು ಬಹಿರಂಗ ಹರಾಜು ಹಾಕಲು ತೀರ್ಮಾನಿಸಲಾಗಿತ್ತು. ಇದರ ವಿರುದ್ದ ಸಂತ್ರಸ್ಥ ರೈತರು ಪ್ರತಿಭಟನೆಗೆ ಮುಂದಾದಾಗ ರೈತರ ವಿರುದ್ಧ ಕೇಸ್ ಹಾಕಲಾಯಿತು.
ಜಾಮೀನು ಪಡೆದ ರೈತರು ಜಿಲ್ಲಾಡಳಿತದ ನಿಲುವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದರು. ಆಗ ಹೈಕೋರ್ಟ್ ಜಿಲ್ಲಾಡಳಿತ ಕ್ರಮಕ್ಕೆ ತಡೆಯಾಜ್ಞೆ ನೀಡಿತು. ರೈತರ ಸಮಸ್ಯೆಯನ್ನು ಬಗೆಹರಿಸಿ, ಮಂದಿನ ಹೆಜ್ಜೆ ಇಡುವಂತೆ ಶಿವಮೊಗ್ಗದ ಡಿಸಿಗೆ ಹಾಗು ಹೌಸಿಂಗ್ ಬೋರ್ಡ್ಗೆ ಆದೇಶ ನೀಡಿತ್ತು. ರೈತರು ಮತ್ತು ಜಿಲ್ಲಾಡಳಿತದ ನಿರಂತರ ಹೋರಾಟದಲ್ಲಿ ಕಾಲಕ್ರಮೇಣ ಒಂದು ಆದೇಶ ಕೂಡ ಆಯಿತು, ಸೈಟು ಕಳೆದುಕೊಂಡವರಿಗೆ ನಿವೇಶನ ನೀಡಬೇಕು. ನಂತರ ಉಳಿದ ನಿವೇಶನಗಳನ್ನು ಹರಾಜು ಹಾಕಬೇಕು ಎಂದು ಹೈಕೋರ್ಟ್ ಆದೇಶ ಮಾಡಿತು. ಹೈಕೋರ್ಟ್ ಆದೇಶ ಜಿಲ್ಲಾಡಳಿತಕ್ಕೆ ಹಿನ್ನಡೆಯನ್ನಂಟುಮಾಡಿತ್ತು.
ನಿವೇಶನ ನೀಡುವ ಸಂದರ್ಭದಲ್ಲಿ ದಾಖಲೆಗಳನ್ನು ಕೇಳುವಾಗ ನಿರಾಶ್ರಿತರು ಅನ್ನೋದಕ್ಕೆ ಎಲ್ಲಿದೆ ಪ್ರೂಫ್ ಅನ್ನೋ ವಿಷಯದವರೆಗೂ ಕಗ್ಗಂಟು ಎಳೆದುಕೊಂಡು ಬಂತು. ನೆಲೆ ಕಳೆದುಕೊಂಡ ಮೇಲೆ ಜಮೀನು ಕಳೆದುಕೊಂಡ ಮೇಲೆ ನಿರಾಶ್ರೀತರಲ್ಲವೇ ಸ್ವಾಮಿ..ಅದಕ್ಕೆಲ್ಲಿ ದಾಖಲೆ ನೀಡೋದು ಅಂತಾ ರೈತರು ಅಂದಿನ ಡಿಸಿಯವರಿಗೆ ರಿಪ್ಲೆ ಕೋಟ್ರು. ಅದಕ್ಕೆ ಜಿಲ್ಲಾಡಳಿತ ಹಾಗು ಹೌಸಿಂಗ್ ಬೋರ್ಡ್ ಹಾಗೆಲ್ಲಾ ನಿವೇಶನ ನೀಡಲು ಬರೋದಿಲ್ಲ ಅಂತಾ ಮತ್ತೊಂದು ಪ್ರೊಸಿಡಿಂಗ್ ಮಾಡಿಕೊಂಡು ರೈತರ ವಿರುದ್ಧ ಕಾನೂನು ಅಸ್ತ್ರ ಪ್ರಯೋಗಿಸಿತು. ಆಗ ಮತ್ತೆ ರೈತರು ಹೈಕೋರ್ಟ್ ಮೆಟ್ಟಿಲೇರಿದರು.
ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಡಿಸಿ ಮತ್ತು ಹೌಸಿಂಗ್ ಬೋರ್ಡ್ ನವರು ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿ, ರೈತರು ಪುನಃ ಹೈಕೋರ್ಟ್ ಮೆಟ್ಟಿಲೇರಿದರು. ರೈತರನ್ನು ಪದೇಪದೇ ಕೋರ್ಟ್ ಗೆ ಅಲೆಯುವಂತೆ ಮಾಡಿದ ಅಧಿಕಾರಿಗಳ ಕ್ರಮಕ್ಕೆ ಹೈಕೋರ್ಟ್ ಕೂಡ ಅಸಮಧಾನ ವ್ಯಕ್ತಪಡಿಸಿ, ಪರ್ಮನೆಂಟ್ ಸ್ಟೇ ಆರ್ಡರ್ ನೀಡಿತು. ರೈತರಿಗೆ ಪರಿಹಾರ ನೀಡದ ಹೊರತು ವಿಮಾನ ನಿಲ್ದಾಣದ ಯಾವುದೇ ಕಾಮಗಾರಿ ಆರಂಭಿಸಬಾರದೆಂಬ ಆದೇಶ ಜಿಲ್ಲಾಡಳಿತಕ್ಕೆ ಮುಳುವಾಯ್ತು.
ವಿಮಾನ ನಿಲ್ದಾಣದ ಕಾಮಗಾರಿ ಆರಂಭಿಸಲು ಬಂದ ಅಧಿಕಾರಿಗಳಿಗೆ ರೈತರು ತಡೆಯೊಡ್ಡಿದಾಗ, ಹೈಕೋರ್ಟ್ ಆದೇಶದಂತೆ ನಡೆದುಕೊಳ್ಳಲಾಗುವುದು, ನಿಮಗೆ 40.60 ನಿವೇಶನ ನೀಡುತ್ತವೆ. ಮನೆ ಕೊಡುತ್ತೇವೆ..ಅಭಿವೃದ್ಧಿ ಕಾಮಗಾರಿಗೆ ಯಾವುದೇ ತೊಂದರೆ ಮಾಡಬೇಡಿ ಎಂದು ಮನವಿ ಮಾಡಿದರು. ಒಂದೆಡೆ ವಿಮಾನ ನಿಲ್ದಾಣದ ಕಾಮಗಾರಿಗಳು ಪ್ರಗತಿಯಲ್ಲಿ ಸಾಗುತ್ತಿದ್ದರೆ, ಇತ್ತ ರೈತರು ನಿವೇಶನಕ್ಕಾಗಿ ಕಾಯುವುದು ತಪ್ಪಲಿಲ್ಲ. ಕಾಲಕಾಲದಲ್ಲಿ ಪ್ರತಿಭಟನೆ ಮಾಡುವುದು ನಿಲ್ಲಲಿಲ್ಲ. ಅಂತಿಮವಾಗಿ ರಾಜಕೀಯ ನಾಯಕರು ನಿಮಗೆ ನಿವೇಶನ ನೀಡಿಯೇ…ನಾವು ವಿಮಾನ ನಿಲ್ದಾಣ ಉದ್ಘಾಟನೆ ಮಾಡುವುದಾಗಿ ಭರವಸೆ ನೀಡಿದ್ರು.
ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ದಿನಾಂಕ ನಿಗದಿಯಾಗಿದ್ರೂ, ಅಷ್ಟರೊಳಗೆ ರೈತರಿಗೆ ಸೈಟು ನೀಡುವ ಬಗ್ಗೆ ಯಾರು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.ಹೀಗಾಗಿ ರೈತರು ಫೆಬ್ರವರಿ 21 ರೊಳಗೆ ಸಂತ್ರಸ್ಥ ರೈತರಿಗೆ ನಿವೇಶನ ನೀಡ್ತಿವಿ ಅಂತಾ ಜನಪ್ರತಿನಿಧಿಗಳು ಹೇಳಿದ ಮಾತಿಗೆ ರೈತರು ಜಾತಕ ಪಕ್ಷಿಯಂತೆ ಕಾದಿದ್ದಾರೆ. ಒಂದು ಸರ್ಕಾರಕ್ಕೆ ನಿವೇಶನ ನೀಡುವುದು ಒಂದು ನಿಮಿಷದ ಕೆಲಸ. ಹೌಸಿಂಗ್ ಬೋರ್ಡ್ ಡೆವಲಪ್ ಮಾಡಿರುವ ನಿವೇಶನದ ಖರ್ಚು ಒಟ್ಟಾರೆಯಾಗಿ 34 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಸರ್ಕಾರ ಈ ಮೊತ್ತವನ್ನು ಹೌಸಿಂಗ್ ಬೋರ್ಡ್ಗೆ ಪಾವತಿಸಿದರೆ, ರೈತರಿಗೆ ನಿವೇಶನ ನೀಡುವುದು ಕಷ್ಟವೇನಿಲ್ಲ. ಸರ್ಕಾರ ಮತ್ತು ಹೌಸಿಂಗ್ ಬೋರ್ಡ್ ನಡುವಿನ ಹಣಕಾಸಿನ ಲೆಕ್ಕಚಾರಗಳು ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ. ಆರಂಭದಲ್ಲಿ ನೂರು ಕೋಟಿ ಗಡಿ ದಾಟದ ವಿಮಾನ ನಿಲ್ದಾಣ ಕಾಮಗಾರಿ 450 ಕೋಟಿ ಗಡಿ ದಾಟಿದಾಗಲೂ ಸರ್ಕಾರಕ್ಕೆ ಸಮಸ್ಯೆಯಾಗಲಿಲ್ಲ. ಆದ್ರೆ ಕೇವಲ 34 ಕೋಟಿ ರೂಪಾಯಿ ಸಂದಾಯಕ್ಕೆ ಮೀನಾಮೇಷ ಎಣಿಸುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
