ಬಾಂಬ್​ ಹಿಡಿದಿರಲಿಲ್ಲ ಭಾವುಟ ಹಿಡಿದುಕೊಂಡು ಹೋಗಿದ್ದೆವು! ಯುವ ಮೋರ್ಚಾ ವಿರುದ್ಧ ಕೇಸ್​ ಹಾಕಿದ್ದಕ್ಕೆ ಪೊಲೀಸ್ ಇಲಾಖೆ ವಿರುದ್ಧ ಬಿಜೆಪಿ ಆಕ್ರೋಶ

BJP slams police department for filing case against Yuva Morcha ಯುವ ಮೋರ್ಚಾ ವಿರುದ್ಧ ಕೇಸ್​ ಹಾಕಿದ್ದಕ್ಕೆ ಪೊಲೀಸ್ ಇಲಾಖೆ ವಿರುದ್ಧ ಬಿಜೆಪಿ ಆಕ್ರೋಶ

ಬಾಂಬ್​ ಹಿಡಿದಿರಲಿಲ್ಲ ಭಾವುಟ ಹಿಡಿದುಕೊಂಡು ಹೋಗಿದ್ದೆವು! ಯುವ ಮೋರ್ಚಾ ವಿರುದ್ಧ ಕೇಸ್​ ಹಾಕಿದ್ದಕ್ಕೆ ಪೊಲೀಸ್ ಇಲಾಖೆ ವಿರುದ್ಧ  ಬಿಜೆಪಿ ಆಕ್ರೋಶ

KARNATAKA NEWS/ ONLINE / Malenadu today/ Aug 2, 2023 SHIVAMOGGA NEWS

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಯೇ ಕಪ್ಪು ಪಟ್ಟಿ ತೋರಿ ಪ್ರತಿಭಟಿಸಿದ ಸಂಬಂಧ ಶಿವಮೊಗ್ಗ ನಗರದ ಜಯನಗರ ಪೊಲೀಸ್ ಸ್ಟೇಷನ್​ನಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರ ವಿರುದ್ದ ಎಫ್​ಐಆರ್ ದಾಖಲಾಗಿದೆ. 

ನಾವೇನು ಬಾಂಬ್ ಹಿಡಿದುಕೊಂಡು ಹೋಗಿರಲಿಲ್ಲ

ಈ ಸಂಬಂಧ ಕೇಸ್ ದಾಖಲಾಗುತ್ತಲೇ ಶಿವಮೊಗ್ಗ ಜಿಲ್ಲಾ ಬಿಜೆಪಿ ಆಕ್ರೋಶ ಹೊರಹಾಕಿದೆ. ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದೆ. ಮೇಲಾಗಿ ಜಿಲ್ಲಾಧಿಕಾರಿ ಡಾ.ಆರ್​ ಸೆಲ್ವಮಣಿ ಹಾಗೂ ಎಸ್​ಪಿ ಮಿಥುನ್ ಕುಮಾರ್​ ರವರಿಗೆ ಮನವಿ ಸಲ್ಲಿಸಿದ್ದು, ಎಫ್​ಐಆರ್ ಹಾಕಿದ ನಡೆ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬಿಜೆಪಿ ಹಿರಿಯ ಮುಖಂಡ ಭಾನು ಪ್ರಕಾಶ್​, ಶಿವಮೊಗ್ಗ ಶಾಸಕ ಎಸ್​ಎನ್ ಚನ್ನಬಸಪ್ಪ, ಪರಿಷತ್​ ಸದಸ್ಯ ಡಿಎಸ್​ ಅರುಣ್​, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್​ ಸೇರಿದಂತೆ ಬಿಜೆಪಿಯ ನಿಯೋಗ ಎಸ್​ಪಿ ಹಾಗೂ ಜಿಲ್ಲಾಧಿಕಾರಿಯವರನ್ನ ಭೇಟಿ ಮಾಡಿ ವಿಷಯದ ಕುರಿತಾಗಿ ಚರ್ಚೆ ನಡೆಸಿದೆ. ಈ ವೇಳೆ ಮಾತನಾಡಿದ ಭಾನುಪ್ರಕಾಶ್​ ರವರು ನಮ್ಮ ಯುವ ಮೋರ್ಚಾ ಕಾರ್ಯಕರ್ತರು ಭಾವುಟ ಹಿಡಿದುಕೊಂಡು ಹೋಗಿದ್ದರು. ಬಾಂಬ್ ಹಿಡಿದುಕೊಂಡು ಹೋಗಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶ ಇದೆ ಎಂದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಸೆಲ್ವಮಣಿಯವರು ಪ್ರತಿಭಟನೆಗೆ ಮೊದಲೇ ಅನುಮತಿ ಕೇಳಿದ್ದರೇ ನೀಡಲಾಗುತ್ತಿತ್ತು. ಏಕಾಯೇಕಿ ಪ್ರತಿಭಟನೆ ಮಾಡಿ ನಡೆಯತ್ತಿದ್ದ ಸಭೆಯೊಳಗೆ ಪ್ರವೇಶ ಮಾಡಿದ್ದು ಸರಿಯಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಭಾನುಪ್ರಕಾಶ್​ರವರು, ಸಚಿವರಿಗೆ ಭದ್ರತೆ ಕೊಡುವುದು ನಿಮ್ಮ ಡ್ಯೂಟಿ, ಅದೇ ರೀತಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಚಿವರಿಗೆ ಬಿಸಿ ಮುಟ್ಟಿಸುವುದು ನಮ್ಮ ಕರ್ತವ್ಯ ಎಂದರು. ಅಲ್ಲದೆ ಅನುಮತಿಯಿಲ್ಲದೇ ಪ್ರತಿಭಟಿಸುವ ಅವಕಾಶ ವ್ಯವಸ್ಥೆಯಲ್ಲಿದೆ, ರಾಜ್ಯಪಾಲರ ಭಾಷಣದ ವೇಳೆ ನಡೆದ ಪ್ರತಿಭಟನೆ ಸಂಬಂಧ ಏಕೆ ಕ್ರಮ ಕೈಗೊಂಡಿಲ್ಲವೆಂದು ಪ್ರಶ್ನಿಸಿದ್ರು. 

ರಾಜ್ಯಪಾಲರ ಭಾಷಣದ ವೇಳೆ ಪ್ರತಿಭಟಿಸಿದವರ ವಿರುದ್ಧ ಕ್ರಮವೇಕಿಲ್ಲ

ಈ ಹಿಂದೆ ಕುವೆಂಪು ವಿವಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲರ ಭಾಷಣದ ವೇಳೇ ಎನ್ ಎಸ್ ಯು ಐ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸಿತ್ತು. ಆದರೆ  ಆ ಬಗ್ಗೆ ದೂರು ದಾಖಲಾಗಿಲ್ಲ.ಕಪ್ಪು ಭಾವುಟ ಪ್ರದರ್ಶನ ಮಾಡಿದ್ದಕ್ಕೆ ಸುಮೊಟೋ ಕೇಸ್ ದಾಖಲಾಗಿದೆ. ಇದ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಮುಖಂಡರು ಆರೋಪಿಸಿದ್ದಾರೆ. 

ನಮ್ಮಿಂದ ಹಾನಿಯಾಗಿಲ್ಲ.

ಪ್ರತಿಭಟನೆ ವೇಳೆಯಲ್ಲಿ ಹಲ್ಲೆಯಾಗಿಲ್ಲ, ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ, ಕಾನೂನ ಬಾಹಿರವಾಗಿ ನಡೆದುಕೊಂಡಿಲ್ಲ. ರಾಜ್ಯಪಾಲರ ಭಾಷಣದ ವೇಳೆ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಆಗದ ಕೇಸ್, ಸಚಿವರ ವಿಚಾರದಲ್ಲಿ ಕೇಸ್ ದಾಖಲಾಗಿದ್ದು ಏಕೆ. ಇದು ತಾರತಮ್ಯ ಅಲ್ಲವೇ ಎಂದು ಆರೋಪಿಸಿದ ಬಿಜೆಪಿ ಮುಖಂಡರು, ಇಲಾಖೆಯ ಕ್ರಮವನ್ನು ಖಂಡಿಸಿದರು. 

ಶಾಸಕರನ್ನು ಹೊರಗಿರಿ ಎಂದು ಪೊಲೀಸರು ಹೇಳಿದರೇ?

ಇನ್ನೂ ಶಾಸಕರು ಜಯನಗರ ಪೊಲೀಸ್ ಸ್ಟೇಷನ್​ಗೆ ಬಂದಾಗ ಅವರಿಗೆ ಒಂದು ಕುರ್ಚಿಯನ್ನು ಸಹ ನೀಡದೇ ಅಗೌರವ ತೋರಲಾಗಿದೆ. ಯುವಮೋರ್ಚಾ ಕಾರ್ಯಕರ್ತರನ್ನ ವಶಕ್ಕೆ ಪಡೆದಿರುವುದನ್ನ ಪ್ರಶ್ನಿಸಿ ಜಯನಗರ ಪೊಲೀಸ್ ಸ್ಟೇಷನ್​ಗೆ ಹೋಗಿದ್ದಾಗ, ಅಲ್ಲಿ ಶಾಸಕರನ್ನ ಹೊರಗಡೆಯೇ ಇರಿ, ಕಾರ್ಯಕರ್ತರನ್ನು ಕಳುಹಿಸಿಕೊಡುತ್ತೇವೆ ಎಂದಿದ್ದರು ಎಂದು ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಯವರ ಬಳಿಯಲ್ಲಿ ಆರೋಪಿಸಿದರು. ಇದೇ ವೇಳೆ,  ಪೊಲೀಸ್ ಸ್ಟೇಷನ್​ನಲ್ಲಿ ಶಾಸಕರನ್ನ ಒಳಗೆ ಕರೆಯಲಾಗದಷ್ಟು ಬದಲಾವಣೆಯಾಗಿದೆಯಾ ಎಂದು ಭಾನುಪ್ರಕಾಶ್ ಜಿಲ್ಲಾಧಿಕಾರಿಯವರನ್ನ ಪ್ರಶ್ನಿಸಿದ್ರು. ಅಲ್ಲದೆ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕಲ್ಲವೇ ಎಂದರು. 

ದೂರು ಕೊಡಿ ಪರಿಶೀಲಿಸುತ್ತೇನೆ 

ಇನ್ನೂ ಬಿಜೆಪಿ ಮುಖಂಡರ ಆರೋಪಕ್ಕೆ ಉತ್ತರಿಸಿದ ಡಿಸಿ ಸೆಲ್ವಮಣಿಯವರು, ಈ ಸಂಬಂಧ ಲಿಖಿತ ದೂರನ್ನ ನೀಡಿದರೆ, ಆ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ. ಒಟ್ಟಾರೆ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಯವರ ಬಳಿ, ಶಾಸಕರಿಗೆ ಅಗೌರವ ತೋರಿದ್ದು ಹಾಗೂ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್ ಹಾಕಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ. 

ಇನ್ನಷ್ಟು ಸುದ್ದಿಗಳು 



 ​