SHIVAMOGGA| MALENADUTODAY NEWS | ಮಲೆನಾಡು ಟುಡೆ Mar 15, 2025
ಜೋಗ ಜಲಪಾತದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿ ಹಿನ್ನೆಲೆಯಲ್ಲಿ ಜೋಗದ ಮುಖ್ಯಧ್ವಾರದಲ್ಲಿ ಪ್ರವಾಸಿಗರಿಗೆ ಈಗಾಗಲೇ ಪ್ರವೇಶ ನಿರ್ಬಂಧ ವಿಧಿಸಿ ಆದೇಶ ಮಾಡಲಾಗಿತ್ತು. ಇದೀಗ ಈ ಆದೇಶವನ್ನು ಮುಂದಿನ ಏಪ್ರಿಲ್ 30 ರ ವರೆಗೂ ವಿಸ್ತರಣೆ ಮಾಡಲಾಗಿದೆ. ಈ ಸಂಬಂಧ ಪ್ರಕಟಣೆಯನ್ನು ನೀಡಿಲಾಗಿದ್ದು, ವಿಶ್ವವಿಖ್ಯಾತ ಜೋಗ ಜಲಪಾತದ ಮುಖ್ಯ ದ್ವಾರದ ನವೀಕರಣ ಸೇರಿದಂತೆ ಸಮಗ್ರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದರಿಂದ ಏಪ್ರಿಲ್ 30 ರವರೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಪ್ರವೇಶವನ್ನು ಮುಚ್ಚಲಾಗುವುದು ಎಂದು ತಿಳಿಸಲಾಗಿದೆ.
ಜೋಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ನಿರ್ಮಾಣ ಕಾರ್ಯಕ್ಕೆ ಅನುಕೂಲವಾಗುವಂತೆ ಜನವರಿ 1 ರಿಂದ ಮಾರ್ಚ್ 15 ರವರೆಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಈ ಸಂಬಂಧ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ನೀಡಿದ್ದರು. ಮೇಲಾಗಿ ನಿಗದಿತ ಅವಧಿಯೊಳಗೆ ಕೆಲಸ ಪೂರ್ತಿ ಮಾಡಬೇಕು ಎಂದು ಸೂಚಿಸಿದ್ದರು. ಆದರೆ ಕೆಲಸ ಅಪೂರ್ಣವಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಗೊಳ್ಳಲು ಇನ್ನಷ್ಟು ದಿನಗಳ ಅಗತ್ಯವಿರುವ ಹಿನ್ನೆಲೆಯಲ್ಲಿ, ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನನುಕೂಲ ಹಾಗೂ ಅನಗತ್ಯ ಅಪಾಯ ಸಂಭವಿಸದೆ ಇರಲಿ ಎನ್ನುವ ಕಾರಣಕ್ಕೆ ಜೋಗಕ್ಕೆ ಮುಂದಿನ ಏಪ್ರಿಲ್ 30 ರವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಈ ಸಂಬಂಧ ಜೋಗ ನಿರ್ವಹಣಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿಯು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆ ಸಾರ್ವಜನಿಕರ ಸಹಕಾರವನ್ನು ಕೋರಿದ್ದಾರೆ ಮತ್ತು ಸಂದರ್ಶಕರು ನಿರ್ಬಂಧಿತ ಅವಧಿಯ ನಂತರ ತಮ್ಮ ಸಮಯಕ್ಕೆ ಅನುಗುಣವಾಗಿ ಯೋಜನೆ ರೂಪಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ, ಜನರು 08182-251444 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ