ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಗರ್ತಿಕೆರೆಯಲ್ಲಿ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆಯಲ್ಲಿ ಕಾಣುವ ಲಕ್ಷಣಗಳು ಕಂಡುಬಂದಿದೆ. ಆದರೆ ಆರ್ಟಿಪಿಸಿಆರ್ ಟೆಸ್ಟ್ನಲ್ಲಿ ಫಲಿತಾಂಶ ನೆಗಟಿವ್ ಬಂದಿದೆ. igm elisa test ನಲ್ಲಿ ಸಸ್ಪೆಕ್ಟೆಡ್ ಎಂದು ಬಂದಿದೆ ಎಂದು. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ನಿರಂತರ ನಿಗಾವಹಿಸಿದೆ. ಆರ್ಟಿಪಿಸಿಆರ್ನ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಮಾತ್ರವಷ್ಟೆ ಮಂಗನಕಾಯಿಲೆ ಸೋಂಕಿನ ಪ್ರಕರಣ ಎಂದು ಪರಿಗಣಿಸಲಾಗುತ್ತದೆ.
ಜಿಲ್ಲಾ ಆರೋಗ್ಯ ಇಲಾಖೆ ಹೇಳಿದ್ದೇನು?
ಇನ್ನು ಈ ಬಗ್ಗೆ ಮಲೆನಾಡು ಟುಡೇ ತಂಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿಯವರನ್ನು ಸಂಪರ್ಕಿಸಿದಾಗ ಸಾರ್ವಜನಿಕರಿಗೆ ಉಪಯುಕ್ತವಾಗಬಲ್ಲ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ, ಸದ್ಯ ಕಳೆದ ಡಿಸೆಂಬರ್ ನಿಂದ ಜನವರಿ ತಿಂಗಳಿನವರೆಗೂ 1500 ಮಂದಿಗೆ ಪರೀಕ್ಷೆ ಮಾಡಲಾಗಿದ್ದು, ಯಾವುದೇ ಸೋಂಕಿತ ಪ್ರಕರಣ ಕಂಡು ಬಂದಿಲ್ಲ ಎಂದು ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.
ಮುಂದಿನ ಆರು ವಾರ ಮಹತ್ವದ್ದು
ಇನ್ನೂ ಮುಂದಿನ ಆರು ವಾರಗಳ ಕಾಲ, ಮಂಗನ ಕಾಯಿಲೆ ಮತ್ತು ರೋಗ ಲಕ್ಷಣ ಹಾಗೂ ಜ್ವರದಿಂದ ಬಳಲುವವರ ಬಗ್ಗೆ ಹೆಚ್ಚಿನ ಗಮನ ವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಜೊತೆಯಲ್ಲಿ ಈ ಹಿಂದೇ ಸೋಂಕು ಕಂಡು ಬಂದ ಪ್ರದೇಶಗಳಲ್ಲಿ ಹೆಚ್ಚಿನ ಜಾಗ್ರತೆ ಮತ್ತು ಜಾಗೃತಿ ವಹಿಸಲು ಮುಂದಾಗಿದೆ. ಸಾಮಾನ್ಯವಾಗಿ ಡಿಸೆಂಬರ್ನಲ್ಲಿ ಕಾಣಿಸಿಕೊಳ್ಳುವ ಮಂಗನ ಕಾಯಿಲೆ ಸೋಂಕು ಜನವರಿಯಲ್ಲಿಯು ಈ ಸಲ ಕಾಣಿಸಿಲ್ಲ. ಜನವರಿ ಹಾಗೂ ಫೆಬ್ರವರಿ ಸೋಂಕಿನ ಲಕ್ಷಣ ಹೆಚ್ಚು ಕಂಡುಬರುವ ಸಮಯವಾಗಿದ್ದು, ಮಾರ್ಚ್ ಹೊತ್ತಿಗೆ ತೀವ್ರಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಆರು ವಾರಗಳ ಹೆಚ್ಚಿನ ನಿಗಾವಹಿಸಲು ಆರೋಗ್ಯ ಇಲಾಖೆ ಮುಂದಾಗಿದ್ದು, ವರ್ಷದ ಕೆಎಫ್ಡಿ ಆತಂಕದಿಂದ ಮುಕ್ತವಾಗಲು ಸಮರ ಸಿದ್ಧತೆ ನಡೆಸಿದೆ.
ಒಂದು ಜಿಲ್ಲೆ ಎರಡು ಸರ್ಕಾರಿ ಲ್ಯಾಬ್ ! 24 ಗಂಟೆಯಲ್ಲಿ ಟೆಸ್ಟ್ ರಿಪೋರ್ಟ್!
ಸದ್ಯ ಸಾಗರ ಹಾಗೂ ಶಿವಮೊಗ್ಗ ಎರಡು ಕಡೆಗಳಲ್ಲಿಯು ಸರ್ಕಾರಿ ಲ್ಯಾಬ್ಗಳಿದ್ದು, ಕೇವಲ 24 ಗಂಟೆಗಳಲ್ಲಿ ಸೋಂಕು ಪತ್ತೆ ಪರೀಕ್ಷೆಯ ಫಲಿತಾಂಶ ಸಿಗಲಿದೆ. ಒಂದು ಜಿಲ್ಲೆಯಲ್ಲಿ ಎರಡು ಕಡೆ ಸರ್ಕಾರಿ ಲ್ಯಾಬ್ಗಳಿರುವುದು ಶಿವಮೊಗ್ಗದಲ್ಲಿ ಮಾತ್ರ ಎಂಬುದು ವಿಶೇಷ. ಮೇಲಾಗಿ ಸಾಗರ ಹೊಸನಗರ ಮತ್ತು ತೀರ್ಥಹಳ್ಳಿಯಲ್ಲಿ ಆರೊಗ್ಯ ಸಿಬ್ಬಂದಿಯನ್ನ ಅಲರ್ಟ್ ಮಾಡಲಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಗ್ರೌಂಡ್ ಲೆವಲ್ ಸಿಬ್ಬಂದಿಗಳಿಂದ ವಿವರಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪಡೆದುಕೊಳ್ಳುತ್ತಿದ್ದು, ಖಾಸಗಿ ಆಸ್ಪತ್ರೆಗಳಿಂದಲು ಮಾಹಿತಿ ಕಲೆಹಾಕಲಾಗುತ್ತಿದೆ.
ಶಿವಮೊಗ್ಗ, ಸಾಗರ, ತೀರ್ಥಹಳ್ಳಿ ಆಸ್ಪತ್ರೆಗಳಲ್ಲಿ ವಿಶೇಷ ವ್ಯವಸ್ಥೆ
ಬೂಸ್ಟರ್ ಡೋಸ್ ಲಭ್ಯವಾಗುತ್ತಲೇ ವಿತರಣೆಗೆ ಆರೊಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎಂದಿರುವ ಆರೋಗ್ಯಾಧಿಕಾರಿ ಸಾಗರ ಮತ್ತು ಶಿವಮೊಗ್ಗ ಮತ್ತು ತೀರ್ಥಹಳ್ಳಿ ಆಸ್ಪತ್ರೆಗಳಲ್ಲಿ ವೈರಲ್ ಫೀವರ್ಗಳಿಗೆ ಸಂಬಂಧಿಸಿದಂತೆ ವಿಶೇಷ ವ್ಯವಸ್ಥೆಯನ್ನು ಕಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ, ಅನಾರೋಗ್ಯಕ್ಕೆ ಈಡಾಗಿ ಜ್ವರದಿಂದ ಬಳಲುತ್ತಿದ್ದು 24 ಗಂಟೆಯು ಜ್ವರ ಕಡಿಮೆಯಾಗದಿದ್ದರೇ ಅಂತಹವರು ವೈದ್ಯರ ಬಳಿ ತಕ್ಷಣವೇ ಚಿಕಿತ್ಸೆ ಪಡೆಯಬೇಕು ಜ್ವರ ಬಂದ 2 ದಿನಗಳೊಳಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆದು ದೇಹದಲ್ಲಿ ನೀರಿನ ಅಂಶವನ್ನು ಕಾಪಾಡಿಕೊಳ್ಳುವುದರಿಂದ ಅನಾರೋಗ್ಯ ಉಲ್ಭಣಗೊಳ್ಳುವ ಸಾಧ್ಯತೆ ಕಡಿಮೆ. ಜ್ವರ ಬಂದ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದರೇ, ಸೋಂಕಿನ ಆತಂಕ ಕಡಿಮೆ ಮಾಡಬಹುದು. ಜ್ವರದ ಲಕ್ಷಣಗಳು ಕಂಡು ಬಂದಾಗ ನಿರ್ಲಕ್ಷ್ಯವಹಿಸದೇ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ನೀಡಿದರೇ, ಆರೋಗ್ಯ ಇಲಾಖೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎನ್ನುತ್ತಾರೆ ಡಾ.ರಾಜೇಶ್ ಸುರಗಿಹಳ್ಳಿ..