SHIVAMOGGA | Jan 22, 2024 | ಅಯೋಧ್ಯೆಯಲ್ಲಿ ಶ್ರೀರಾಮಚಂದ್ರರ ಪ್ರಾಣ ಪ್ರತಿಷ್ಟಾಪನೆ ಹಿನ್ನೆಲೆಯಲ್ಲಿ ಇವತ್ತು ಸಂಭ್ರಮ ಆಚರಣೆ ಕೈಗೊಂಡು ಸಿಹಿಹಂಚಿದ ಬಳಿಕ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಿದರು..
ಈ ವೇಳೆ ಮಾಧ್ಯಮಗಳ ಪ್ರಶ್ನೆ ಉತ್ತರಿಸುತ್ತಾ ಮಾತನಾಡಿದ ಅವರು, 500 ವರ್ಷದ ದೇಶದ ಹಿಂದುಗಳ ಕನಸು ಇಂದು ನನಸಾಗಿದೆ. ವಿದೇಶಿ ಬಾಬರ್ ಭಾರತಕ್ಕೆ ಬಂದು ದಾಳಿ ನಡೆಸಿ ಮಸೀದಿ ನಿರ್ಮಿಸಿದ್ದ. ಅಲ್ಲಿಗ ಭವ್ಯವಾದ ರಾಮಮಂದಿರ ತಲೆ ಎತ್ತಿ ಇರುವುದು ಸಂತಸ ತಂದಿದೆ ಎಂದರು
ಶಿವಪ್ಪನಾಯಕ ವೃತ್ತದಲ್ಲಿ ಮಹಿಳೆಯ ಘೋಷಣೆ
ಇದೇ ವೇಳೆ ಶಿವಪ್ಪನಾಯಕ ವೃತ್ತದಲ್ಲಿ ನಡೆದ ಘಟನೆ ಬಗ್ಗೆ ಮಾತನಾಡಿದ ಅವರು ಅಲ್ಲಿ ಮುಸ್ಲಿಮ್ ಮಹಿಳೆ ಕೂಗಿದ ಘೋಷಣೆ ವಿಚಾರ ಬೇಸರ ತಂದಿದೆ ಎಂದಿದ್ದಾರೆ. ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಮುಸ್ಲಿಂ ಮಹಿಳೆ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ್ದಾಳೆ, ಅಲ್ಲದೆ ನರೇಂದ್ರ ಮೋದಿ ವಿರೋಧಿ ಹೇಳಿಕೆ ನೀಡಿದ್ದಾಳೆ. ಆದರೆ ಆ ಮಹಿಳೆ ಮಾನಸಿಕ ಸಮಸ್ಯೆ ಹೊಂದಿದ್ದಾರೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ಅವರ ಜೊತೆಗೂ ಮಾತನಾಡಿದ್ದೇನೆ. ನೀವು ಹೇಗೆ ಆಕೆಯನ್ನು ಮಾನಸಿಕ ಅಸ್ವಸ್ಥೆ ಎಂದು ತೀರ್ಮಾನಿಸುತ್ತೀರಾ ಎಂದು ಕೇಳಿದ್ದೇನೆ. ಆಗವರು ಆಕೆಯ ತಂದೆ ಹೇಳಿದ್ದಾರೆ ಎಂದು ತಿಳಿಸಿದ್ದಾರೆ ಎಂದರು.

ಸೂಕ್ತ ತನಿಖೆ ನಡೆಸಿ
ಹಾಗಾದರೆ ಆಕೆ ಟೂ ವ್ಹೀಲರ್ ನಲ್ಲಿ ಬಂದು ಮೊಬೈಲ್ ನಲ್ಲಿ ಶೂಟಿಂಗ್ ಮಾಡಿದ್ದಾಳೆ. ಅದು ಹೇಗೆ ಸಾಧ್ಯವಾಯ್ತು ಎಂದು ಪ್ರಶ್ನಿಸಿದ್ರು. ಅಲ್ಲದೆ ಇದರ ಹಿಂದೆ ಷಡ್ಯಂತ್ರ ಇರುವ ಸಾಧ್ಯತೆ ಇದೆ .ಹಾಗಾಗಿ ಸೂಕ್ತ ತನಿಖೆ ನಡೆಸುವಂತೆ ಶಿವಮೊಗ್ಗ ಎಸ್ಪಿ ಯವರನ್ನ ಕೋರಿರುವುದಾಗಿ ತಿಳಿಸಿದರು.
ಘಟನೆ ಬೇಸರ ಮೂಡಿಸಿದೆ
ಇಡೀ ಶಿವಮೊಗ್ಗ ರಾಮ ಮಂದಿರ ಉದ್ಘಾಟನೆ ಸಂಭ್ರಮದಲ್ಲಿರುವಾಗ ಈ ಘಟನೆ ನಡೆದಿದೆ. ಇದು ಬೇಸರ ಮೂಡಿಸಿದೆ. ಮಹಿಳೆಯ ಹಿಂದೆ ಯಾರಾದರೂ ಇರಬಹುದು, ಪ್ರಚೋದನೆ ನೀಡಿರಬಹುದು . ಶಾಂತವಾಗಿರುವ ಶಿವಮೊಗ್ಗದಲ್ಲಿ ಗಲಭೆ ಸೃಷ್ಟಿಸುವ ಪ್ರಯತ್ನ ನಡೆಸಿರಬಹುದು ಎಂದು ಅನುಮಾನಿಸಿದರು.

