KARNATAKA NEWS/ ONLINE / Malenadu today/ Aug 2, 2023 SHIVAMOGGA NEWS
ಇದು ಜೆಪಿ ಎಕ್ಸ್ಕ್ಲ್ಯೂಸಿವ್ ವರದಿ!
ಕಳೆದ ಜೂನ್ ತಿಂಗಳಿನಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದಿದ್ದ ಹನಿಟ್ರ್ಯಾಪ್ ಕೇಸ್ ದಾಖಲಾಗಿತ್ತು. ಕಳೆದ ಒಂದು ತಿಂಗಳ ಅವಧಿಯಲ್ಲಿ ಈ ಹನಿಟ್ರ್ಯಾಪ್ ಪ್ರಕರಣ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಅದರ ವಿವರವನ್ನು ಕೆಳಿದರೇ ಒಂದು ಕ್ಷಣ ದೇವ್ರೆ ಎಂದು ಉದ್ಘಾರ ತೆಗೆಯುವುದು ಗ್ಯಾರಂಟಿ. ತೀರ್ಥಹಳ್ಳಿಯಲ್ಲಿ ನಡೆದಿದ್ದ ಹನಿಟ್ರ್ಯಾಪ್ ಕೇವಲ ಕಾಡಿನ ಜಾಗಕ್ಕಾಗಿ ನಡೆದಿತ್ತು ಎಂದು ಈ ಮೊದಲು ಹೇಳಲಾಗಿತ್ತು. ಪ್ರಕರಣದ ತನಿಖೆಯು ಅದೇ ದಿಕ್ಕಿನಲ್ಲಿ ಸಾಗಿತ್ತು. ಆದರೆ ಅಸಲಿ ಸತ್ಯ ಬಯಲಾದಾಗ ಕಂಡಿದ್ದೆ ಬೇರೆ.
ತೀರ್ಥಹಳ್ಳಿಯಲ್ಲಿದೆ ಹನಿಟ್ರ್ಯಾಪ್ ಟೀಂ
ಮಲೆನಾಡು ಟುಡೆ ತಂಡಕ್ಕೆ ಸಿಕ್ಕ ಮಾಹಿತಿ ಪ್ರಕಾರ, ಅಂದು ಕಾಡಿನ ಜಾಗಕ್ಕಷ್ಟೆ ಸೀಮಿತವಾಗಿ ಅರಣ್ಯ ಅಧಿಕಾರಿಯನ್ನು ಹನಿಟ್ರ್ಯಾಪ್ ಮಾಡಿರಲಿಲ್ಲ. ಆ ಪ್ರಕರಣದಲ್ಲಿ ಸಿಕ್ಕ ಟೀಂನ ಕಸುಬೇ ಹನಿಟ್ರ್ಯಾಪ್ ಆಗಿತ್ತು. ಹೀಗೊಂದು ಅಂಶ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಅಷ್ಟೆಅಲ್ಲದೆ ಇದೇ ಕೇಸ್ನಲ್ಲಿ ಅರೆಸ್ಟ್ ಆದ ಆರೋಪಿಯೊಬ್ಬನ ಮೊಬೈಲ್ನಲ್ಲಿ ಸಿಕ್ಕಿರುವ ವಿಡಿಯೋ ಡೇಟಾಗಳು ಪೊಲೀಸ್ ಇಲಾಖೆಯನ್ನ ಬೆಚ್ಚಿ ಬೀಳುವಂತೆ ಮಾಡಿದೆ.
ಮನವೊಲಿಸಬೇಕಿದೆ ಪೊಲೀಸ್ ಇಲಾಖೆ
ಒಂದು ಎಫ್ಐಆರ್ನಿಂದ ತೀರ್ಥಹಳ್ಳಿ ಪೊಲೀಸರಿಗೆ ದೊಡ್ಡಮಟ್ಟದ ಲೀಡ್ ಸಿಕ್ಕಿದೆ. ಇದರ ಹಿಂದೆ ಶಿವಮೊಗ್ಗ ಪೊಲೀಸ್ ಇಲಾಖೆಯ ವರಿಷ್ಟಾಧಿಕಾರಿಗಳು ಶ್ರಮವೂ ಇದೆ. ಹಾಗೊಂದು ವೇಳೆ ಪೊಲೀಸ್ ಇಲಾಖೆ ಉದ್ಯಮಿಗಳ ಮನವೊಲಿಸಿ ದೂರು ಕೊಡಿಸುವಲ್ಲಿ ಸಫಲರಾದರೆ, ಈ ಪ್ರಕರಣ ರಾಜ್ಯವೇ ಕಂಡು ಕೇಳರಿಯದಂತಹ ಹನಿಟ್ರ್ಯಾಪ್ ಕೇಸ್ ಇದಾಗುವ ಸಾಧ್ಯತೆ ಇದೆ. ಅಲ್ಲದೆ ಮಲೆನಾಡು ಜಿಲ್ಲೆಗಳಲ್ಲಿ ಈ ಟೀಂನಿಂದ ಶೋಷಣೆಗೆ ಒಳಗಾಗಿರುವ ಉದ್ಯಮಿಗಳು, ಎಸ್ಟೇಟ್ ಮಾಲೀಕರು, ದೊಡ್ಡ ಕೃಷಿಕರು, ಅಧಿಕಾರಿಗಳನ್ನು ಬಚಾವ್ ಮಾಡಬಹುದಾಗಿದೆ. ಮರ್ಯಾದೆಗೆ ಅಂಜಿ ಬಹಳಷ್ಟು ಮಂದಿ ಈ ಸಂಬಂಧ ಕಂಪ್ಲೆಂಟ್ ಕೊಡಲು ಸಿದ್ದರಿಲ್ಲ. ಹಾಗಾಗಿ ಈ ಸಂಬಂಧ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ರವರೇ ಖುದ್ದು ಇವರಿಂದ ಶೋಷಿತರಾದ ಸಿರಿವಂತರ ಮನವೊಲಿಸಬೇಕಿದೆ. ಶೋಷಣೆಗೆ ಒಳಗಾದವರ ಮನವೊಲಿಸಿ, ಅಕ್ರಮ ಕೂಟ ನಡೆಸ್ತಿರುವ ಹನಿ ದಂಧೆಯನ್ನು ನಿಲ್ಲಿಸಬೇಕಿದೆ.
4 ಹೆಣ್ಣಾಳು, 8 ಗಂಡಾಳು
ಅರಣ್ಯ ಅಧಿಕಾರಿಯೊಬ್ಬರನ್ನ ಸುಲಿಗೆ ಮಾಡಿ ಅಂದರ್ ಆಗಿರುವ ತೀರ್ಥಹಳ್ಳಿ ಹನಿಟ್ರ್ಯಾಪ್ ಟೀಂನಲ್ಲಿ ಇನ್ನೂ ಕೆಲವರು ಸಿಕ್ಕಿಲ್ಲ. ಆ ಪೈಕಿ ಪೊಲೀಸರ ಬಲೆಗೆ ಬಿದ್ದ ಆರೋಪಿ ಮೊಬೈಲ್ನಲ್ಲಿ ಹಲವು ವಿಐಪಿಗಳ ವಿಡಿಯೋಗಳು ಸಿಕ್ಕಿವೆ. ಇನ್ನೂ ಈ ಹನಿಟ್ರ್ಯಾಪ್ ನಲ್ಲಿ ಇದುವರೆಗೆ ಸಿಕ್ಕ ಲೆಕ್ಕದ ಪ್ರಕಾರ, ನಾಲ್ಕು ಹೆಣ್ಣಾಳು, 8 ಗಂಡಾಳು ಇದ್ಧಾರಂತೆ. ತೀರ್ಥಹಳ್ಳಿಯನ್ನ ಕೇಂದ್ರಿಕರಿಸಿಕೊಂಡು ಉದ್ಯಮಿಗಳನ್ನು ಬುಟ್ಟಿಗೆ ಹಾಕಿಕೊಂಡು ಸುಲಿಗೆ ಮಾಡುವ ಈ ತಂಡ ಕೋಟಿ ಮೀರಿದ ಹಣದ ಫಸಲು ತೆಗೆದಿದೆ ಎನ್ನಲಾಗಿದೆ.
ಮಲೆನಾಡಿನಾದ್ಯಂತ ದೋಖಾ
ಚಿಕ್ಕಮಗಳೂರು, ಕೊಪ್ಪ, ತೀರ್ಥಹಳ್ಳಿ, ಸಾಗರ, ಬಾಳೆಹೊನ್ನೂರು ಹೀಗೆ ಮಲೆನಾಡಿನ ಮೂಲೆ ಮೂಲೆಯಲ್ಲಿ ಹಣವಂತರನ್ನ ತಾಗಿರುವ ಈ ತಂಡ, ಹೆಣ್ಣುಮಕ್ಕಳನ್ನು ತೋರಿಸಿ, ಸರಿಸುಮಾರು 25 ಮಂದಿಯಿಂದ ದುಡ್ಡು ಚಿನ್ನ ದೋಚಿದೆ ಎಂಬ ಮಾಹಿತಿ ಇದೆ. ಒಂದು ಪ್ರಕರಣದಲ್ಲಿ ಬರೋಬ್ಬರಿ ನೂರು ಗ್ರಾಂ ಗೋಲ್ಡ್ ಪೀಕಿದ್ದಾರೆ ಎನ್ನಲಾಗಿದೆ.
ಎಚ್ಚೆತ್ತುಕೊಳ್ಳಬೇಕಿದೆ
ತೀರ್ಥಹಳ್ಳಿಯ ಈ ಹನಿ ಟೀಂನ ಬಲೆಗೆ ಇನ್ನೂ ಯಾರ್ಯಾರು ಸಿಕ್ಕಿಬಿದ್ದಿದ್ಧಾರೆ ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಬೇಕಿದೆ. ಆದರೆ ಮರ್ಯಾದೆಗೆ ಅಂಜಿ ದೂರು ಕೊಡದೇ ಇರುವುದು ಸರಿಯಲ್ಲ. ಸುಲಿಗೆಗೊಳಗಾದವರು ನೇರವಾಗಿ ಎಸ್ಪಿ ಅಥವಾ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಹೇಳಿಕೊಳ್ಳಬಹುದು. ಇಲ್ಲವಾದಲ್ಲಿ ಅಶ್ಲೀಲತೆಯನ್ನೆ ಬಂಡವಾಳ ಮಾಡಿಕೊಳ್ಳುವ ಇಂತಹ ಟೀಂನ ಕಳ್ಳಾಟಕ್ಕೆ ಬ್ರೇಕ್ ಬೀಳುವುದಿಲ್ಲ. ಇವತ್ತು ಒಬ್ಬರಾದರೆ, ನಾಳೆ ಇನ್ನೊಬ್ಬರು ಸಿಕ್ಕಿ ಬಿದ್ದು ಒದ್ದಾಡುತ್ತಾರೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ವಂಚಿತರು ಮಾಹಿತಿ ನೀಡಿದರೆ ಸುಲಿಗೆಕೋರರಿಂದ ಸೇಫ್ ಆಗಬಹುದಾಗಿದೆ.
