ಹನುಮಂತ ದೇವರ ರಥೋತ್ಸವಕ್ಕೆ ಪತ್ರೆ ಮರ ತರುವ ಪವಾಡ | ಈ ಸಲದ ಮಂಚಿ ಮಳೆ ಭವಿಷ್ಯವೇನು !?

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 8, 2025 ‌‌ 

ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಪ್ರಸಿದ್ದ ಮಂಚಿ ಹನುಮಂತ ದೇವರ ರಥೋತ್ಸವ ವಿಶೇಷವಾಗಿ ನಡೆಯುತ್ತಿದೆ. ಈ ನಡುವೆ ಕಾಡಿನಿಂದ ಮರ ತರುವ ಪವಾಡದಲ್ಲಿ ಹೊರಬಿದ್ದ ಭವಿಷ್ಯ ಕೂಡ ಸಾಕಷ್ಟು ಕುತೂಹಲವಾಗಿದೆ. 

ಸೊರಬ ತಾಲ್ಲೂಕಿನ ಮಂಚಿ ಗ್ರಾಮದಲ್ಲಿ ಐತಿಹಾಸಿಕ ಹನುಮಂತ ದೇವರ ದೇವಸ್ಥಾನವಿದೆ. ದೇವರ ಬ್ರಹ್ಮ ರಥೋತ್ಸವದ ಅಂಗವಾಗಿ ಬೇರು ಸಮೇತ ಮರ ಕಿತ್ತು ತರುವ ಪ್ರಕ್ರಿಯೆಯೊಂದು ಇಲ್ಲಿ ನಡೆಯುತ್ತದೆ. ಇದನ್ನು ಪವಾಡ ಎಂದು ಸಹ ಹೇಳಲಾಗುತ್ತದೆ. ಏಕೆಂದರೆ ಆಯ್ದ ವ್ಯಕ್ತಿಗಳು ತರುವ ಮರದ ಬೇರು ಮುಂದಿನ ಭವಿಷ್ಯ ತಿಳಿಸುತ್ತದೆ ಎಂಬ ನಂಬಿಕೆ ಇದೆ. 

ನಿನ್ನೆದಿನದ ಕಾಡಿಗೆ ಹೋಗಿ ಬೇರು ಕೂಡಿ ಮರ ತರುವ ಪ್ರಕ್ರಿಯೆ ನಡೆಯಿತು. ಇಲ್ಲಿನ ದಾಸ ಕುಟುಂಬದವರು ಮರ ಕಿತ್ತು ತಂದು ಮಳೆ ಭವಿಷ್ಯ ಸಾರುವ ಪವಾಡಕ್ಕೆ ಸಾಕ್ಷಿಯಾದರು. ದಾಸ ಕುಟುಂಬದ ಷಣ್ಮುಖಪ್ಪ, ಗುತ್ಯಪ್ಪ, ಸುಭಾಷಪ್ಪ, ಲಿಂಗರಾಜ, ವಾಸುದೇವ, ಪರಶುರಾಮ ಅವರು ಆರು ದಿಕ್ಕಿಗೆ  ಹೋಗಿ 6 ಮರಗಳನ್ನು ಕಿತ್ತು ತಂದರು.

ನಿನ್ನೆ ಬೆಳಗ್ಗೆ ಬೇರೆ ಬೇರೆ ದಿಕ್ಕಿಗೆ ಹೋದ ಆರು ಮಂದಿ ಸಂಜೆ ಹೊತ್ತಿಗೆ ಒಟ್ಟಿಗೆ ವಾಪಸ್ ಆಗಿದ್ದರು. ಇವರಿಗಾಗಿ ಇಡೀ ಊರು ಕಾಯುತ್ತಾ ನಿಂತಿತ್ತು. ಅವರುಗಳು ಬರುತ್ತಲೇ, ಅವರು ತಂದಿದ್ದ ಪತ್ರೆ ಮರವನ್ನು ದೇವಸ್ಥಾನದ ಬಾಗಿಲಿಗೆ ಕೊಂಡೊಯ್ದು ಮಳೆ ಭವಿಷ್ಯ ಅರಿಯಲಾಗುತ್ತದೆ. ಮರ ತಂದ ದಿಕ್ಕನ್ನು ಆಧರಿಸಿ ಮುಂದಿನ ಮಳೆಗಾಲ ಹೇಗಿರಲಿದೆ ಎಂದು ಹಿರಿಯರು ವಿವರಿಸುತ್ತಾರೆ. 

ಈ ಸಲ ಉತ್ತರ ದಿಕ್ಕಿನಿಂದ ತಂದ ಮರದ ಹಸಿರೆಲೆ ಚಿಗುರಿದ್ದು, ಉತ್ತಮ ಮಳೆಯ ಸೂಚಕ ಇದು ಎಂದು ಹೇಳಲಾಗುತ್ತಿದೆ.  

Share This Article