SHIVAMOGGA| MALENADUTODAY NEWS | ಮಲೆನಾಡು ಟುಡೆ Mar 18, 2025
ಕೆಲವೊಮ್ಮೆ ಪ್ರಕರಣಗಳು ವರದಿಯಾದ ಕೆಲದಿನಗಳ ಬಳಿಕ ಬೇರೆಯದ್ದೆ ತಿರುವುಪಡೆದುಕೊಳ್ಳುತ್ತದೆ. ಇದಕ್ಕೆ ಸಾಕ್ಷಿ ಎಂಬಂತಹ ವರದಿಯೊಂದು ನೆರೆಯ ಗೋವಾದಿಂದ ಬಂದಿದೆ. ಆ ಸುದ್ದಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುಗೆ ಸಂಬಂಧಿಸಿದೆ. ಕಳೆದ ವಾರ ಹೋಳಿ ವಿಶೇಷ ಹಿನ್ನೆಲೆಯಲ್ಲಿ ಲಿಕ್ಕರ್ ಮಾರಾಟಕ್ಕಾಗಿ ಗೋವಾದಿಂದ ಮದ್ಯವನ್ನು ತಮ್ಮ ಕಾರಿನಲ್ಲಿ ಸ್ಟಾಕ್ ಮಾಡಿಕೊಂಡು ವ್ಯಕ್ತಿಯೊಬ್ಬರು ಸ್ಮಶಾನವೊಂದರ ಬಳಿ ಕಾಯುತ್ತಿದ್ದರು. ಈ ವೇಳೆ ಅವರ ಮದ್ಯ ಖರೀದಿಸಬೇಕಿದ್ದ ವ್ಯಕ್ತಿ ಬರುವ ಬದಲು ಅಬಕಾರಿ ಅಧಿಕಾರಿಗಳು ಬಂದು ರೇಡ್ ಮಾಡಿ, ಆರೋಪಿಯನ್ನು ಅರೆಸ್ಟ್ ಮಾಡಿ ಕೇಸ್ ದಾಖಲಿಸಿದ್ದರು. 138.06 ಲೀಟರ್ ಗೋವಾ ಲಿಕ್ಕರ್ ಹಾಗೂ ಗೋವಾ ರಿಜಿಸ್ಟ್ರೇಷನ್ GA-08-F-3312 ನಂಬರ್ ನ ಕಾರು ಕೇಸ್‌ನಲ್ಲಿ ಸೀಜ್ ಆಗಿತ್ತು. ಅಲ್ಲದೆ ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 8, 11 ಮತ್ತು 15 ರ ಅಡಿಯಲ್ಲಿ ಮತ್ತು ಅದೇ ಕಾಯ್ದೆಯ ಸೆಕ್ಷನ್ 32 (ಎ), 38 (ಎ), ಮತ್ತು 43 (ಎ) ರ ಅಡಿಯಲ್ಲಿ ಕೇಸ್ ದರ್ಜ್ ಆಗಿತ್ತು.
ಇದಿಷ್ಟು ಪ್ರಾಥಮಿಕ ಹಂತದ ವಿವರ. ಇವತ್ತು ಬಂದ ಸುದ್ದಿ ಎಂದರೆ, ಹೀಗೆ ಗೋವಾ ರಿಜಿಸ್ಟ್ರೇಷನ್ ಕಾರಿನಲ್ಲಿ ಗೋವಾದಿಂದ ಸಾಗರಕ್ಕೆ ಅಕ್ರಮವಾಗಿ ಗೋವಾ ಲಿಕ್ಕರ್ ಸಾಗಿಸಿ, ಅಬಕಾರಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ ಗೋವಾದ ಅಬಕಾರಿ ಇನ್‌ಸ್ಪೆಕ್ಟರ್. ಹೌದು, ಕೆನಕೋನಾದಲ್ಲಿ ಗೋವಾ ಅಬಕಾರಿ ಇನ್‌ಸ್ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪ್ರಮೋದ್ ವಿಶ್ವನಾಥ್ ಜುವೇಕರ್, ಹೋಳಿ ಹಿನ್ನೆಲೆಯಲ್ಲಿ ಗೋವಾ ಲಿಕ್ಕರ್ ತಂದು ಕರ್ನಾಟಕದಲ್ಲಿ ಮಾರಾಟ ಮಾಡಿ ಲಾಭ ಪಡೆಯುವ ನಿಟ್ಟಿನಲ್ಲಿ ಈ ಕೃತ್ಯವೆಸಗಿದ್ದರು. ತಮ್ಮದೇ ಕಾರಿನಲ್ಲಿ ಗೋವಾ ಲಿಕ್ಕರ್ ತುಂಬಿಕೊಂಡು, ಸಾಗರದಲ್ಲಿ ಗ್ರಾಹಕನಿಗೆ ತಲುಪಿಸಲು ಕಾಯುತ್ತಿದ್ದರು. ಆದರೆ ಅಷ್ಟರಲ್ಲಿ ಕರ್ನಾಟಕ ಅಬಕಾರಿ ಇಲಾಖೆ, ಅಬಕಾರಿ ಉಪ ಅಧೀಕ್ಷಕಿ ಶೀಲಾ ದರ್ಜ್ಕರ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಭಾಗ್ಯಲಕ್ಷ್ಮಿ ಮತ್ತು ಅಬಕಾರಿ ಸಿಬ್ಬಂದಿಗಳಾದ ಸಂದೀಪ್ ಎಲ್‌ಸಿ, ಗುರುಮೂರ್ತಿ, ದೀಪಕ್, ಮಲ್ಲಿಕಾರ್ಜುನ್ ಮತ್ತು ಸಚಿನ್ ತಮಗೆ ಬಂದ ಮಾಹಿತಿ ಆಧರಿಸಿ ರೇಡ್ ನಡೆಸಿದ್ದರು.
ಅಧಿಕಾರಿಗಳೇ ನಡೆಸಿದ ರೇಡ್‌ನಲ್ಲಿ ನೆರೆರಾಜ್ಯದ ಅಬಕಾರಿ ಇನ್‌ಸ್ಪೆಕ್ಟರ್ ಆರೋಪಿಯಾಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಇವರ ವಿರುದ್ಧ ಕೇಸ್ ದಾಖಲಿಸಿದ ಅಬಕಾರಿ ಇಲಾಖೆ, ತೆಗೆದುಕೊಂಡ ಕ್ರಮದ ಬಗ್ಗೆ ಗೋವಾ ಅಬಕಾರಿ ಇಲಾಖೆಗೆ ವಿವರ ನೀಡಿದೆ. ನಿನ್ನೆ ಸೋಮವಾರ ಈ ಕುರಿತಾಗಿ ಮಾಹಿತಿ ಪಡೆದ ಗೋವಾ ಅಬಕಾರಿ ಆಯುಕ್ತ ಸರ್ಪ್ರೀತ್ ಸಿಂಗ್ ಗಿಲ್ ವಿಶ್ವನಾಥ್ ಜುವೇಕರ್‌ರನ್ನ ಸಸ್ಪೆಂಡ್ ಮಾಡಿದೆ. ಈ ಬಗ್ಗೆ ಗೋವಾದ ಪತ್ರಿಕೆ o heraldo ವರದಿ ಮಾಡಿದೆ.