ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವಾಹನಗಳಿಗೆ ಭಯಂಕರ ಕಳ್ಳರ ಕಾಟ

ಲಾರಿಯೊಂದರಿಂದ ಸುಮಾರು 150 ಲೀ ಡೀಸೆಲ್ ಕದ್ದೋಯ್ದಿದ್ದಾರೆ ಎನ್ನಲಾಗಿದೆ. ಇನ್ನೂ ಇದೇ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದೆ.

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವಾಹನಗಳಿಗೆ ಭಯಂಕರ ಕಳ್ಳರ ಕಾಟ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವಾಹನಗಳಿಗೆ ಕಳ್ಳರ ಕಾಟ ಜೋರಾಗಿದೆ. ಒಂಟಿ ಮನೆಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೆ, ಇತ್ತ ವಾಹನಗಳ ಡೀಸೆಲ್​​ ಕದಿಯುವ ಹಾಗೂ ಕಾರನ್ನೇ ಕದಿಯುವಂತಹ ಪ್ರಯತ್ನಗಳು ನಡೆಯುತ್ತಿದೆ. ಎಳ್ಳಮಾವಾಸ್ಯೆ ಜಾತ್ರೆ ಹಿನ್ನೆಲೆ ಹಾಗೂ ಅಡಿಕೆ ಕೊಯ್ಲು ಹಿನ್ನೆಲೆಯಲ್ಲಿ ಹೊರಭಾಗಗಳಿಂದ ತೀರ್ಥಹಳ್ಳಿ ಬಹಳಷ್ಟು ಮಂದಿ ಬರುತ್ತಿದ್ದಾರೆ. ಇದರ ನಡುವೆಯೇ ಕಳ್ಳತನಗಳು ಸಹ ಹೆಚ್ಚಾಗುತ್ತಿದೆ.
ಪ್ರಕರಣ ಒಂದು : ಕಾರು ಕಳ್ಳತನಕ್ಕೆ ಯತ್ನ : ಇತ್ತೀಚೆಗೆ ಕುಶಾವತಿಯ ಆಂಜನೇಯ ದೇವಸ್ಥಾನದ ಸಮೀಪ ಮನೆಯ ಎದುರು ನಿಲ್ಲಿಸಿದ್ದ  ಹೊಂಡಾಯ್ ಕಾರನ್ನು ಕದಿಯಲು ವಿಫಲ ಯತ್ನ ನಡೆಸಲಾಗಿದೆ.  ಬಾನೆಟ್ ಬಿಚ್ಚಿ ಕೀ ಡೈರೆಕ್ಟ್ ಮಾಡಿ ಕಾರು ಕದಿಯಲು ನೋಡಿದ್ದಾರೆ. ಆದರೆ ಹರಸಾಹಸ ಪಟ್ಟರೂ ಕಳ್ಳತನ ಸಾಧ್ಯವಾಗದೇ ವಾಪಸ್​ ಹೋಗಿದ್ಧಾರೆ. ಈ ನಡುವೆ ಕಾರಿಗೆ ಸುಮಾರು 35-45 ಸಾವಿರ ಲಾಸ್ ಮಾಡಿಟ್ಟಿದ್ದಾರೆ. ಈ ಘಟನೆ ಬೆನ್ನಲ್ಲೆ ಸಮೀಪದ ಗ್ಯಾರೇಜ್​ ಒಂದರಲ್ಲಿ ಮಾರುತಿ 800 ಕಾರೊಂದು ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ. 
ಪ್ರಕರಣ ಎರಡು : ಡೀಸೆಲ್​​ ಕಳ್ಳತನ : ಕಾರು ಕಳ್ಳತನದ ನಡುವೆ ಡೀಸೆಲ್​ ಕಳ್ಳತನ ಕೂಡ ಹೆಚ್ಚಳವಾಗಿದೆ. ಇತ್ತೀಚೆಗೆ ಯಡೇಹಳ್ಳಿಕೆರೆ ಸಮೀಪದಲ್ಲಿ ಲಾರಿಯೊಂದರಿಂದ ಸುಮಾರು 150 ಲೀ ಡೀಸೆಲ್ ಕದ್ದೋಯ್ದಿದ್ದಾರೆ ಎನ್ನಲಾಗಿದೆ. ಇನ್ನೂ ಇದೇ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದೆ. 
ಪ್ರಕರಣ ಮೂರು : ಸಿಕ್ಕಿಬಿದ್ದ ಡೀಸೆಲ್​ ಕಳ್ಳರು : ಈ ಮಧ್ಯೆ ತೀರ್ಥಹಳ್ಳಿ ಭಾಗಗಳಲ್ಲಿ ನಿಲ್ಲಿಸ್ತಿದ್ದ ವಾಹನಗಳ ಡೀಸೆಲ್​ ಕದಿಯುತ್ತಿದ್ದವರನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರಸ್ತೆಯಲ್ಲಿ ನಿಲ್ಲಿಸ್ತಿದ್ದ ವಾಹನಗಳ ಡೀಸೆಲ್​ ಕದ್ದು ಕಳ್ಳರು ಪರಾರಿಯಾಗುತ್ತಿದ್ದರು. ಇವರನ್ನ ಮಾಸ್ತಿಕಟ್ಟೆಯ ಬಳಿ ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link