ಅವರಿಬ್ಬರ ಹದಿಹರೆಯದ ಪ್ರೀತಿಗೆ ಆ ಹಳ್ಳಿಯೇ ಸಾಕ್ಷಿಯಾಗಿತ್ತು.ನಾನು ಬಡವ.., ನೀನು ಬಡವಿ ನಮ್ಮ ಪ್ರೀತಿಗೆ ಬಡತನವಿಲ್ಲ ಎಂದು ಪ್ರೇಮಾಂಗಣದಲ್ಲಿ ವಿಹರಿಸುತ್ತಿದ್ದರು ಆ ಪ್ರೇಮಿಗಳು.ಆದರೆ ಅವರಿಬ್ಬರ ಪ್ರೇಮ ಪಯಣ ಸುಗಮದ ಹಾದಿಯಾಗಿರಲಿಲ್ಲ .ಜಾತಿ ಒಂದೇ ಆದ್ರೂ ಕುಲ ಅವರನ್ನು ಒಟ್ಟಿಗೆ ಬಾಳಲು ಬಿಡಲಿಲ್ಲ.ಹೊರ ಜಗತ್ತಿಗೆ ಅವರು ಪ್ರೇಮಿಗಳಾಗಿದ್ರೂ…..ಜಾತಿಯಲ್ಲಿ ಅವರು ಅಣ್ಣ ತಂಗಿಯಾಗಿದ್ದಾದ್ರೂ ಹೇಗೆ….ಕುಲವನ್ನು ದಿಕ್ಕರಿಸಿ ಮದುವೆಯಾದ ಪ್ರೇಮಿಗಳು ಮುಂದೆ ತೆಗೆದುಕೊಂಡಿದ್ದು ಎಂತಹಾ ನಿರ್ಧಾರ ಗೊತ್ತಾ! ಪ್ರೀತಿಯ ಓದುಗರೆ, ಪ್ರೇಮಿಗಳ ದಿನದಂದು ಅಪ್ರತಿಮ ಪ್ರೇಮದ ಕಥೆಗಳನ್ನ ಕೇಳಿರುತ್ತೀರಿ. ಆದರೆ ನಾವಿಲ್ಲಿ ಪ್ರೇಮಿಗಳ ಬದುಕಲ್ಲಿ ಏನೇನು ನಡೆಯಬಹುದು ಎನ್ನುವುದಕ್ಕೆ ಸಾಕ್ಷಿಯಾದಂತಹ ರಿಯಲ್ ಕಥೆಗಳನ್ನು ಹೇಳಲು ಹೊರಟಿದ್ದೇವೆ. ಉದ್ದೇಶ ಇಷ್ಟೆ. ಪ್ರೀತಿಸುವ ಮನಸ್ಸುಗಳು ಪರಸ್ಪರ ಎದೆಬಡಿತ ಕೇಳಿಸಿಕೊಳ್ಳುವ ವರ್ತಮಾನದಲ್ಲಿ ಅವರ ಭವಿಷ್ಯದ ಬಡಿತ ನಿಲ್ಲದಿರಲಿ ಎಂಬುದುಷ್ಟೆ.. ಮುಂದಿನದು ರಿಯಲ್ ಸ್ಟೋರಿಯ ಕಥೆ.. ಇದು ನಿಮ್ಮ ಪ್ರೀತಿಯ ಜೆಪಿ ಬರೆಯುತ್ತಿರುವ ವಿಶೇಷ ವರದಿ…
ಯಾರ ಮಾತು ಕೇಳಿ ನೀ ಪ್ರೀತಿ ಮಾಡಿದೆ…
ಮನಸ ಮಾತು ಕೇಳಿ ನಾ ಪ್ರೀತಿ ಮಾಡಿದೆ…
ಅಂದುಕೊಂಡ ಹಾಗೇ ಇಲ್ಲಿಲ್ಲ…
ಪ್ರೀಯ ಓದುಗರೆ ಈ ಹಾಡನ್ನು ಕೇಳ್ತಿದ್ರೆ…ಪ್ರೀತಿ ಮಾಡು ತಪ್ಪೇನಿಲ್ಲಾ. ಅನ್ನೋದು ಗೊತ್ತಾಗುತ್ತೆ..ಆದ್ರೆ ಪ್ರೀತಿಯ ಪ್ರಪಂಚ ನಾವು ಅನ್ಕೊಂಡ ಹಾಗೆ ಇಲ್ಲ ಅನ್ನೋದು ಎಲ್ಲಾ ಪ್ರೇಮಿಗಳ ಅರಿವಿಗೂ ಬಂದಿರೋದಿರೋದಿಲ್ಲ…ಮನಸಿನ ಮಾತು ಕೇಳಿ ಪ್ರೀತಿ ಮಾಡ್ದೆ ಅನ್ನೋ ಸಾಲಿನ ಸಾರಾಂಶವೇ ಸಾಕು ಪ್ರೀತಿಯ ದುರಂತ ಅಂತ್ಯದ ಕಥೆ ಹೇಳೋದಕ್ಕೆ …ಹೌದು ಅಂತಹ ದುರಂತ ಸ್ಟೋರಿಯೊಂದು ನಮ್ಮ ಕಣ್ಣಮುಂದೆ ನಡೆದುಹೋಗಿತ್ತು.
ಪ್ರೇಮಕಥೆಗಳಲ್ಲಿ ಎಲ್ಲಾ ಪ್ರೇಮಿಗಳು ದಡ ಸೇರುತ್ತಾರೆಂದು ಹೇಳಲು ಸಾಧ್ಯವಿಲ್ಲ.ಪ್ರೇಮಕಥೆಗೆ ಮೆರಗು ನೀಡಿ ಉತ್ತುಂಗ ಸ್ಥಾನದಲ್ಲಿ ಅದಕ್ಕೆ ಪವಿತ್ರ ಸ್ಥಾನ ನೀಡಿದವರು ದುರಂತ ಪ್ರೇಮಿಗಳು ಎಂಬುದು ಗಮನಾರ್ಹ.ರೋಮಿಯೋ ಜ್ಯೂಲಿಯೇಟ್. ಪಿರಮಸ್ ಅಂಡ್ ಥಿಸ್ಬೆ. ಸಲೀಂ ಅನಾರ್ಕಲಿ, ಲೈಲಾ ಮಜನು ಪ್ರೇಮ ಕಥೆಗಳು ಇದಕ್ಕೆ ಸಾಕ್ಷಿಯಾಗಿದೆ.ಮದುವೆಯ ಮೂಲಕ ಒಂದಾಗೋ ಜೋಡಿಗಳು ದಾಂಪತ್ಯಕ್ಕೆ ಕಾಲಿಡುತ್ತಿದ್ದಂತೆ ಅವರು ಗಂಡ-ಹೆಂಡಿರೇ ಹೊರತು ಪ್ರೇಮಿಗಳಂತೆ ಕಾಣೋದು ವಿರಳಾತಿ ವಿರಳ.ಅಂದರೆ ಪ್ರೀತಿಯಲ್ಲಿ ತ್ಯಾಗಕ್ಕೆ ಪ್ರಥಮ ಸ್ಥಾನ ಅನ್ನೋದನ್ನು ಪ್ರೇಮಿಗಳು ಜಗಜ್ಜಾಹಿರು ಮಾಡಿದ್ದಾರೆ. ಅಂತಹ ಪ್ರೇಮ ಜೋಡಿಗಳ ಕಥೆಯು 08-09-17 ರಂದು ಶಿವಮೊಗ್ಗ ಹೊರವಲಯದಲ್ಲಿ ಕಾಣ ಸಿಕ್ಕಿತ್ತು.
ಅವತ್ತು ಅಲ್ಲಿನ ಗ್ರಾಮವೊಂದರಲ್ಲಿ ಎಲ್ಲರೂ ಜಮೀನು ಕೆಲಸ ಮುಗಿಸಿಕೊಂಡು ಹಾಯಾಗಿ ಮನೆ ಸೇರ್ಕೊಂಡಿದ್ರು…ನೆಮ್ಮದಿಯಾಗಿ ಮನೆ ಮುಂದಿನ ಜಗಲಿ ಬಳಿ ಟಿ ಕಾಫಿ ಕುಡಿಯುತ್ತಾ, ಊರ ಪಂಚಾಯಿತಿ ಮಾತಾಡ್ತಿದ್ದರು. ಅಷ್ಟೊತ್ತಿಗೆ ಆ ಊರಿನ ಎದೆ ನಡುಗಿಸೋ ಸುದ್ದಿಯೊಂದು ಕವಿಗೆ ಬಡಿದುಬಿಡ್ತು…ನಾಯಕ್ರೆ…ನಮ್ಮೂರ್ ಹುಡಗ ರಾಜು ಮತ್ತು ರಾಣಿ ( ಹೆಸರು ಬದಲಿಸಿದೆ) ಇಬ್ರೂ ಮನೆಯಲ್ಲಿ ನೇಣ್ ಹಾಕೊಂಡಿದರಣ್ಣ…ಬನ್ನಿ ಹೋಗ್ ನೋಡೋಣ ಅಂತಾ ಒಬ್ಬೊಬ್ರೋ ಬೊಬ್ಬೆ ಹಾಕಿಕೊಂಡು ಹಟ್ಟಿಕಡೆ ಓಡ್ತಿರಾ ಬೇಕಾದ್ರೆ. ಜಗಲಿಯಲ್ಲಿದ್ದ ಜನ್ರು ಕೂಡ ಅದೇನ್ ಆಗಿದೇ ನೋಡೋಣ ಬರ್ರೋ ಅಂತಾ ಎಲ್ಲರೂ ಆ ಮನೆಯತ್ತ ಜಮಾಯಿಸಿದ್ರು…ಒಳಗೆ ಬಾಗಿಲ ಚಿಲಕ ಹಾಕೊಂಡಿದ್ರಿಂದ ಗ್ರಾಮಸ್ಥರಿಗೆ ತಕ್ಷಣಕ್ಕೆ ನುಗ್ಗೋದಕ್ಕೆ ಸಾಧ್ಯವಾಗ್ಲಿಲ್ಲ…ಆದ್ರೆ ಜೋರಾಗಿ ಬಾಗಿಲು ಬಡಿದು ಕದ ತೆಗೆದಾಗ…ರಾಜು ಮತ್ತು ರಾಣಿ ಒಂದೇ ತೊಲೆಗೆ ಒಟ್ಟಿಗೆ ನೇಣು ಹಾಕಿಕೊಂಡಿದ್ದನ್ನು ನೋಡಿ ಕುಟುಂಬಸ್ಥರು ಗ್ರಾಮಸ್ಥರು ಕಂಗಾಲಾಗಿ ಹೋದ್ರು…
ರಾಜ ರಾಣಿ ಇಬ್ಬರು ಸಾವನ್ನಪ್ಪಿದ್ದೇಕೆ ಗೊತ್ತಾ?
ಹೆತ್ತೊಡಲಿನ ಕಣ್ಣೀರು ಕೋಡಿಯಾಗಿ ಹರಿದು ಹೋಯ್ತು…ಬೆಳಿಗ್ಗೆವರೆಗೂ ಗ್ರಾಮದಲ್ಲಿ ಓಡಾಡ್ಕೊಂಡು ಚೆನ್ನಾಗಿದ್ರಲ್ಲೋ…ಇದ್ದಕ್ಕಿದ್ದಂತೆ ಯಾಕೆ ಹಿಂಗ್ ಮಾಡ್ಕೊಂಡ್ವು ಮಕ್ಕಳು ಅಂತಾ ಹಿರಿತಲೆಗಳು ಮಾತಾಡೋದಕ್ಕೆ ಶುರು ಮಾಡಿದ್ರು…ಸುತ್ತಮುತ್ತಲ ಜನರೆಲ್ಲಾ ಆ ಮನೆಯತ್ತ ಜಮಾಯಿಸಿದ್ರು….ಬೇಡ ಬೇಡ ಅಂದ್ರೂ ಕೇಳಿಲ್ಲ…ಪ್ರೀತಿ ಮಾಡೋದನ್ನ ಮುಂದುವರೆಸಿದ್ವು..ಈಗ ನೇಣು ಹಾಕೊಂಡು ಆತ್ಮಹತ್ಯೆ ಮಾಡ್ಕೊಂಡಿದಾರೆ ಅಂತಾ ಬಿಕ್ಕಿಬಿಕ್ಕಿ ಅತ್ತರು. ಆ ಗ್ರಾಮದ ರಾಜು ಪಕ್ಕದ ಮನೆಯ ರಾಣಿ ಎಂಬ ಯುವತಿಯನ್ನು ಪ್ರೀತಿಸ್ತಿದ್ದ. ರಾಜುಗೆ 24 ವರ್ಷ ವಯಸ್ಸು. ರಾಣಿಗೆ 18 ವರ್ಷ ತುಂಬಿತ್ತು.ಇಬ್ಬರೂ ಕೂಡ ಒಂದೇ ಸಮುದಾಯದವರಾಗಿದ್ರು. ರಾಜು ಹೆಚ್ಚಿಗೆ ಓದಿಕೊಂಡವನಲ್ಲ…ಕೂಲಿ ನಾಲಿ ಮಾಡ್ಕೊಂಡು ಜೀವನ ಸಾಗಿಸ್ತಿದ್ದ.ಸ್ವಲ್ಪ ಕುಡಿಯೋ ಚಟವಿತ್ತು. ಅಪ್ಪನ ಜೊತೆ ಸಣ್ ಕಿರಿಕ್ ಮಾಡ್ಕೊಂಡು ಮನೆಪಕ್ಕದಲ್ಲಿಯೇ ಬೇರೆ ಮನೆ ಮಾಡ್ಕೊಂಡು ವಾಸವಾಗಿದ್ದ..ರಾಣಿ ಎಸ್.ಎಸ್.ಎಲ್.ಸಿ ವರೆಗೂ ಓದಿಕೊಂಡು ಮನೆಕೆಲಸ ಮಾಡ್ಕೊಂಡಿದ್ದ ಹುಡುಗಿ..ನೋಡೋದಕ್ಕೂ ಲಕ್ಷಣವಾಗಿರೋ ರಾಣಿ ..ಮೇಲೆ ರಾಜುಗೆ ಲವ್ ಶುರುವಾಯಿತು…ರಾಜು ಮತ್ತು ರಾಣಿ ಬಗ್ಗೆ ಗ್ರಾಮದಲ್ಲಿ ಕೂಡ ಒಳ್ಳೆಯ ಅಭಿಪ್ರಾಯವಿತ್ತು..ಇಬ್ಬರೂ ಎಲ್ಲಿಯೂ ಹೆಸರು ಕೆಡಿಸಿಕೊಂಡವರಲ್ಲ.ಹೀಗಾಗಿ ರಾಜು ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ರಾಣಿ ಕೂಡ ಪ್ರೀತಿಯ ಸುಳಿಗೆ ಸಿಕ್ಕಿಹಾಕಿಕೊಂಡು ಬಿಟ್ಲು. 2017 ರಲ್ಲಿ ಘಟನೆ ನಡೆಯುವುದಕ್ಕೂ ಕೇವಲ ಎಂಟು ತಿಂಗಳ ಹಿಂದಷ್ಟೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು.ಇವರಿಬ್ಬರ ಆರಂಭದ ಪ್ರೀತಿ ಗ್ರಾಮಸ್ಥರಿಗೆ ಗೊತ್ತಿರಲಿಲ್ಲ. ಕೇರಿಮನೆಯಲ್ಲಿ ಹುಡುಗ ಹುಡುಗಿ ಮಾತಾಡಿದ್ರೆ…ಒಟ್ಟಿಗೆ ಓಡಾಡಿದ್ರೆ..ಅದಕ್ಕೆಲ್ಲಾ ಅಪಾರ್ಥ ಮಾಡಿಕೊಳ್ಳಕಾಗುತ್ತಾ ಅಂತಾ ಗ್ರಾಮದ ಹಿರಿಕ್ರೂ ಕೂಡ ಸುಮ್ಮನಿದ್ರು..ಅವರಿಬ್ಬರ ಕುಚುಕು ಲವ್ ನಲ್ಲಿ ಪ್ರೀತಿಯ ಬೆಸುಗೆ ಗಟ್ಟಿಯಾಯಿತೇ ವಿನಾಃ ಅದು ಕಾಮದವರೆಗೂ ಕೊಂಡೊಯ್ಯಲಿಲ್ಲ. ಯಾಕೆಂದ್ರೆ ರಾಣಿ ಪ್ರೀತಿಗೆ ಪವಿತ್ರ ಸ್ಥಾನ ನೀಡಿದ್ಲು.ಅದಕ್ಕೆ ರಾಜು ಕೂಡ ಒಪ್ಪಿಗೆ ನೀಡಿದ್ದ.
ಹಳೆ ಕಾಲದ ಸಿನಿಮಾಗಳಲ್ಲಿ ಹಿರೋ ಹಿರೋಯಿನ್ ಮಾರುದ್ದ ದೂರ, ಕೊರೊನಾ ಡಿಸ್ಟೆನ್ಸ್ ರೀತಿಯಲ್ಲಿ ನಿಂತುಕೊಂಡೇ ಡಾನ್ಸ್ ಮಾಡುವ ಹಾಗೆ..ರಾಜು ಮತ್ತು ರಾಣಿ ಸ್ನೇಹಿತರ ಮನೆಯಲ್ಲಿ ಭೇಟಿಯಾಗ್ತಿದ್ರು,…ಗಂಟೆಗಟ್ಟಲೆ ಮಾತಾಡ್ತಿದ್ರು…ದಿನವಿಡಿ ಎದುರುಬದುರು ಕೂತ್ರೂ ಇವರಿಬ್ಬರ ನಡುವೆ ಮೌನವೇ ಮಾತಾಡ್ತಿತ್ತು. ಕಣ್ಣಂಚಿನ ಪ್ರೇಮಕ್ಕೆ ಸುತ್ತಲ ಪರಿಸರವೇ ಸಾಕ್ಷಿಯಾಗಿತ್ತು. ದಿನಕ್ಕೆ ಒಮ್ಮೆಯಾದ್ರೂ ಭೇಟಿಯಾಗಬೇಕೆನ್ನುವ ತವಕ ಇಬ್ರಲ್ಲೂ ಇತ್ತು…ಇವರ ಪ್ರೀತಿ ಪ್ರೇಮದ ಪವಿತ್ರತೆಗೆ ನಾಲ್ಕು ಗೋಡೆಗಳೇ ಸಾಕ್ಷಿಯಾಗಿತ್ತು. ನಿಸ್ವಾರ್ಥವಾಗಿ ಪ್ರೀತಿಸಿದ ಪ್ರೇಮಿಗಳಿಗೆ ಮುಂದೆ ನಾವು ಮದುವೆಯಾಗ್ತಿವಿ ಅನ್ನೋ ನಂಬಿಕೆಯಿತ್ತು. ಗ್ರಾಮದಲ್ಲಿ ಎಲ್ಲರೂ ಪರಿಚಿತರೇ…ಜಾತಿಯೂ ಒಂದೇ ನಮ್ಮಿಬ್ಬರ ಪ್ರೀತಿಗೆ ಯಾರು ಅಡ್ಡಿಪಡಿಸೋದಿಲ್ಲ ಎಂಬ ವಿಶ್ವಾಸವಿತ್ತು…ಆದ್ರೆ..ಅದೇ ವಿಶ್ವಾಸವೇ ಮುಂದೊಂದು ದಿನ ನಮಗೆ ಮುಳುವಾಗುತ್ತೆ ಅನ್ನೋದು ಈ ಮುಗ್ದ ಪ್ರೇಮಿಗಳಿಗೆ ಗೊತ್ತಿರಲಿಲ್ಲ. ಹಾಗಂತ ಗ್ರಾಮಸ್ಥರು ಯಾರು ಇವರ ಪ್ರೀತಿಯನ್ನು ನಿಷ್ಠೂರವಾಗಿ ಕಂಡಿಲ್ಲ.ಆದ್ರೆ…ಜಾತಿಯ ಧರ್ಮಸಂಕಟ ಅನ್ನೋದಿದೆಯಲ್ಲಾ…ಅದು ಯುವ ಪ್ರೇಮಿಗಳ ಪಾಲಿಗೆ ಶಾಪವಾಗಿ ಪರಿಣಮಿಸಿಬಿಡ್ತು….
ಮೀನು ಹಿಡಿಯಲು ಬಂದವರ ಮೇಲೆ ಜೇನುನೊಣಗಳ ದಾಳಿ! 6 ಜನರಿಗೆ ಗಂಭೀರ ಪೆಟ್ಟು!
ಜಾತಿ ಒಂದೇ ಇದೆ..ಕುಲ ಒಂದೇ ಇದೆ..
ಪ್ರೇಮಿಗಳು ಸಂಬಂಧದಲ್ಲಾದ್ರೂ ಅಣ್ಣತಂಗಿ.
ಹೌದು ಇದು ರಾಜು ಮತ್ತು ರಾಣಿ ಪ್ರೇಮಕ್ಕೆ ಮೊದಲ ಸೆಟ್ ಬ್ಯಾಕ್ ಆಗಿದ್ದೆ.. ಆ ಸಮುದಾಯದಲ್ಲಿರುವ ಆ ಪದ್ಧತಿ..ಬಂಜಾರ ಸಮುದಾಯದಲ್ಲಿ ಜಾತ್ ಮತ್ತು ಬುಕ್ಯಾ ಎಂಬ ಪಂಗಡಗಳಿವೆ. ಹುಡುಗ ಅಥವಾ ಹುಡುಗಿ ಜಾತ್ ಸಮುದಾಯದಲ್ಲಿದ್ದರೆ..ಸಂಬಂಧ ಬೆಳೆಸುವಾಗ ಬುಕ್ಯಾ ಸಮುದಾಯದ ಹುಡುಗ ಅಥವಾ ಹುಡುಗಿಯನ್ನು ತರಬೇಕು..ಜಾತ್ ಬುಕ್ಯ ಸಮುದಾಯದಲ್ಲೇ ಸಂಬಂಧಗಳನ್ನು ಮಾಡಬೇಕು…ಜಾತ್ ಜಾತ್ ಸಮುದಾಯದಲ್ಲೇ ಮದುವೆಯಾದ್ರೆ…ಅದನ್ನು ಸಂಬಂಧದಲ್ಲಿ ಸಹೋದರತ್ವಕ್ಕೆ ಹೋಲಿಸಲಾಗುತ್ತೆ. ಈ ಸಂಬಂಧದಲ್ಲಿ ಹುಡುಗ ಹುಡುಗಿಯನ್ನು ಅಣ್ಣ ತಂಗಿಯೋ…ಅಕ್ಕ ತಮ್ಮನೋ ಎಂದು ಭಾವಿಸಲಾಗುತ್ತದೆ. ಈ ರೀತಿಯ ಸಂಬಂಧಗಳಿಗೆ ಬಂಜಾರ ಸಮುದಾಯದಲ್ಲಿ ಮಾನ್ಯತೆಯಿಲ್ಲ. ಅದು ಜಾತಿ ವಿರೋಧಿಯಾಗುತ್ತದೆ..ಇದು ತಲತಲಾಂತರದಿಂದ ನಡೆದುಕೊಂಡ ಬಂದ ಪದ್ಧತಿ..ಈ ಪದ್ಧತಿಯನ್ನು ಎಲ್ಲರೂ ಒಪ್ಪಿಕೊಂಡೇ ಸಂಬಂಧ ಬೆಳೆಸುತ್ತಿದ್ದಾರೆ. ಈ ಪದ್ಧತಿಯೇ ರಾಜು ರಾಣಿ ಪ್ರೇಮಕ್ಕೆ ಮುಳುವಾಗಿದ್ದು…ಮೊದಲೇ ಹೇಳಿದ ಹಾಗೆ ಇವರಿಬ್ಬರು ಒಟ್ಟಿಗೆ ಓಡಾಡಿಕೊಂಡಿದ್ರೂ…ಆ ಗ್ರಾಮದಲ್ಲಿ ಯಾರು ತಲೆಕೆಡಿಸಿಕೊಂಡಿರ್ಲಿಲ್ಲ ಅಂತಾ ಹೇಳಿದ್ದು ಇದೇ ಕಾರಣಕ್ಕೆ..ರಾಜು ಜಾತ್ ಸಮುದಾಯದವನೇ ರಾಣಿ ಕೂಡ ಜಾತ್ ಸಮುದಾಯದವಳೇ ಆಗಿದ್ಲೂ..ಜಾತಿಯಲ್ಲಿ ಒಂದೇ ಕುಲದಲ್ಲಿಯೂ ಒಂದೇ ಆಗಿದ್ರು..ಹೀಗಾಗಿ ಆ ಗ್ರಾಮದಲ್ಲಿ ರಾಜು ಮತ್ತು ರಾಣಿ ಒಟ್ಟಿಗೆ ಓಡಾಡ್ಕೊಂಡಿದ್ರೂ…ಇವರಿಬ್ಬರು ಅಣ್ಣತಂಗಿ ಅಂತನೇ ಗ್ರಾಮಸ್ಥರು ಭಾವಿಸಿದ್ರು….ಹಾಗಂತನೇ ಇವರಿಬ್ಬರ ಸ್ನೇಹಕ್ಕೆ ಯಾರು ಅಡ್ಡಿಪಡಿಸಿರಲಿಲ್ಲ
ಜಾತ್ ಅಂತಾ ಗೊತ್ತಿದ್ರೂ ಪ್ರೀತಿಯ ಆಳಕ್ಕಿಳಿದ್ರು ಪ್ರೇಮಿಗಳು.
ಬಿಟ್ಟಿರಲಾರದ ಸ್ಥಿತಿ ಬಂದಾಗ ಆತ್ಮಹತ್ಯೆ ಮಾಡಿಕೊಂಡರು.
ರಾಜು ಮತ್ತು ರಾಣಿ ಬಂಜಾರ ಸಮುದಾಯದ ಜಾತ್ ಪಂಗಡಕ್ಕೆ ಸೇರಿದವರಾಗಿದ್ರು…ನಮ್ಮದು ಒಂದೇ ಕುಲ…ಅನ್ನೋದು ಇಬ್ಬರಿಗೂ ಗೊತ್ತಿತ್ತು ..ಗೊತ್ತಿದ್ದು ಗೊತ್ತಿದ್ದು ಪ್ರೀತಿಯ ಸುಳಿಗೆ ಸಿಲುಕಿಕೊಂಡ ಈ ಪ್ರೇಮಿಗಳಿಗೆ ನಂತರ ಇದರಿಂದ ವಾಪಸ್ಸು ಬರೋದಕ್ಕೆ ಸಾಧ್ಯವಾಗ್ಲೇ ಇಲ್ಲ. ಈ ಪ್ರೇಮ ಕಥೆಯಲ್ಲಿ ಎಂತಹ ವಿಪರ್ಯಾಸವಿದೆ ಎಂದ್ರೆ…ಇವರಿಬ್ಬರೂ ಜಾತ್ ಸಮುದಾಯಕ್ಕೆ ಸೇರಿದವರಾಗಿದ್ರಿಂದ ಗ್ರಾಮಸ್ಥರಿಗೆ ಇವರಿಬ್ಬರೂ ಒಟ್ಟಿಗೆ ಓಡಾಡ್ಕೊಂಡಿದ್ರೂ ಪ್ರೇಮಿಗಳಾಗಿ ಕಾಣಲಿಲ್ಲ. ಅಣ್ಣ ತಂಗಿ ತರನೇ ಕಾಣುವಂತೆ ಮಾಡ್ತು ಸಂಬಂಧ.ಆದ್ರೆ…ರಾಜು ಮತ್ತು ರಾಣಿ ಮಾತ್ರ..ಗ್ರಾಮಸ್ಥರನ್ನು ಹಾಗು ಜಾತಿಯಲ್ಲಿನ ಪದ್ಧತಿಯನ್ನು ವಿರೋಧಿಸೋದಕ್ಕೆ ಸಾಧ್ಯವಾಗ್ಲೆ ಇಲ್ಲ..ಸಮುದಾಯದ ಪದ್ಥತಿಗೆ ವಿರುದ್ಧವಾಗಿ ಹೋಗೋದಕ್ಕೂ ಸಾಧ್ಯವಾಗ್ಲಿಲ್ಲ.ಇವರಿಬ್ಬರೂ ಪ್ರೀತಿಸ್ತಿದ್ರೂ ಅಂತಾನೂ ಗ್ರಾಮದ ಬಹುತೇಕರಿಗೆ ಗೊತ್ತೆ ಇರ್ಲಿಲ್ಲ. ಇಬ್ಬರು ತಮ್ಮ ಪೋಷಕರ ಬಳಿಯಾಗ್ಲಿ ಪರಸ್ಪರ ಪ್ರೀತಿಸ್ತಿದಿವಿ ಅಂತಾ ಹೇಳೋ ಗೋಜಿಗೂ ಹೋಗಲಿಲ್ಲ…ಮನಸ್ಸಿನ ಆಳದ ಪ್ರೀತಿಯನ್ನು ಮನಸ್ಸಿನಲ್ಲಿಯೇ ಕೊಂದು ಬಿಡಬೇಕೆನ್ನುನು ತೀರ್ಮಾನಕ್ಕೆ ಬಂದು ಬಿಟ್ಟಿದ್ದರು ..ಗ್ರಾಮಸ್ಥರು ವಿರೋಧಿಸಿಲ್ಲ.ಪೋಷಕರಿಗೆ ವಿಷಯ ಗೊತ್ತಿಲ್ಲ. ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿ ಹೋಗೋದಕ್ಕೆ ಮನಸ್ಸಿಲ್ಲ…ಇಂತಹ ಧರ್ಮ ಸಂಕಟದಲ್ಲಿ ಸಿಲುಕಿಕೊಂಡ ರಾಜ ಮತ್ತು ರಾಣಿ ಕೊನೆಗೊಂದು ಗಟ್ಟಿ ನಿರ್ಧಾರ ತಳೆದುಬಿಟ್ರು..
ಆಗ ರಾಣಿ ನಾವು ಪ್ರೀತಿಸಿದ್ದು ನಿಜ…ಒಟ್ಟಾಗಿ ಬಾಳಬೇಕೆಂದು ಅನ್ಕೊಂಡಿದ್ದೂ ನಿಜ…ಕುಲ ಒಂದೇ ಅಂತಾ ಗೊತ್ತಿದ್ದು ಪ್ರೀತಿಸಿದ್ದು ಮಾತ್ರ ತಪ್ಪು ಅನಿಸ್ತಿದೆ ರಾಜ..ಈ ಸಮಾಜ…,ನಮ್ ಜನ್ರ ನಂಬಿಕೆಯನ್ನು ನಾವು ಹುಸಿಗೊಳಿಸೋದು ಬೇಡ…ನಾವಿಬ್ರೂ ಈ ಜಗತ್ತನ್ನೇ ಬಿಟ್ಟು ಹೋಗೋಣ ಅಂತಾ ರಾಜು ಮುಂದೆ ಹೇಳ್ತಾಳೆ…ರಾಜುಗೂ ಪ್ರೇಯಸಿಯ ಮಾತು ಸರಿ ಅನಿಸುತ್ತೆ…ಆಗ ಅವರಿಬ್ಬರೂ ಒಟ್ಟಿಗೆ ಸಾಯುವ ನಿರ್ಧಾರ ಮಾಡಿ ಬಿಡ್ತಾರೆ.
JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!
ಸಾಯೋಕು ಮುನ್ನ ತಾಳಿಕಟ್ಟಿಸಿಕೊಂಡ ಪ್ರೇಯಸಿ.
ಅರಿಶಿಣ ಕೊಂಬಿನ ತಾಳಿ ಕಟ್ಟಿದ ಪ್ರಿಯಕರ.
ನಿಜಕ್ಕೂ ಈ ಲವ್ ಸ್ಟೋರಿಯ ಟ್ರಾಜಿಡಿ ಎಂಡ್ ಇರೋದೆ ಇಲ್ಲಿ,.ಕೆ.ಬಾಲಚಂದರ್ ನಿರ್ದೇಶನದ ಕ್ಲೈಮ್ಯಾಕ್ಸ್ ಸೀನಿನಂತಿದೆ ಈ ದುರಂತ ಪ್ರೇಮದ ಕಥೆ. ಇಲ್ಲಿ ರಾಜ ಮತ್ತು ರಾಣಿ ಒಂದು ಕುಲ ಎಂಬ ಕಾರಣಕ್ಕೆ ಸಮಾಜವನ್ನು ಫೇಸ್ ಮಾಡಲು ಸಿದ್ದವಿರಲಿಲ್ಲ.ಇದಕ್ಕೆ ಕಾರಣ ನಮ್ಮನ್ನು ಒಪ್ಪಿಕೊಂಡ ಸಮುದಾಯದ ಮುಂದೆ ಎರಡು ಕುಟುಂಬಗಳು ತಲೆತಗ್ಗಿಸಬಾರದೆಂಬ ಭಾವನೆ ಅವರಲ್ಲಿತ್ತು…ನಮ್ಮಿಬ್ಬರ ಪ್ರೇಮ ಪ್ರಕರಣದಿಂದ ಗ್ರಾಮದಲ್ಲಿ ಶಾಂತಿ ಹಾಳಾಗಬಾರದು ಎಂಬ ತುಡಿತವಿತ್ತು…ಹಾಗಂತ ನಾವು ಪ್ರೀತಿಸಿದ್ವಿ ಅನ್ನೋದು ಗೊತ್ತಾಗಬೇಕು ಅದು ನಮ್ಮ ಸಾವಿನ ನಂತರ ಅನ್ನೋ ಭಾವನೆ ರಾಣಿಯಲ್ಲಿತ್ತು. ಹೀಗಾಗಿ ರಾಜ ರಾಣಿ ಆತ್ಮಹತ್ಯೆ ಮಾಡಿಕೊಳ್ಳೋ ಮುನ್ನ ಒಂದು ನಿರ್ಧಾರ ತಳೆದು ಬಿಟ್ರು…ನಾವು ಆತ್ಮಹತ್ಯೆ ಮಾಡಿಕೊಳ್ಳೋದಕ್ಕೂ ಮುನ್ನ…ರಾಜು ನೀನು ನನಗೆ ತಾಳಿ ಕಟ್ಟಬೇಕು..ನಾನು ನಿನ್ನ ಕೈಯಿಂದ ತಾಳಿಕಟ್ಟಿಸಿಕೊಂಡ ನಂತ್ರನೇ ಪ್ರಾಣ ಬಿಡೋದು ಅಂತಾ ಹೇಳ್ತಾಳೆ,…ಅದಕ್ಕೆ ಪ್ಲಾನ್ ಕೂಡ ಮಾಡ್ಕೊತಾರೆ.
ಹೇಗಿದ್ರೂ ಗ್ರಾಮದಲ್ಲಿ ಇಬ್ಬರು ಭೇಟಿಯಾಗ್ತಿದ್ದ ಸ್ನೇಹಿತನ ಮನೆಯೊಂದಿತ್ತು.ಆ ಮನೆಗೆ ನಾಳೆ ನಾವಿಬ್ರು ಸೇರೋಣ..ಅಲ್ಲೇ ನೀನು ನನಗೆ ತಾಳಿಕಟ್ಟು ನಂತ್ರ ಒಟ್ಟಿಗೆ ಪ್ರಾಣ ಬಿಡೋಣ ಅಂತಾ ರಾಣಿ ಹೇಳ್ದಾಗ..ರಾಜ ನಾಳೆ ನಮ್ ಮನೆಲಿ ಯಾರು ಇರೋದಿಲ್ಲ.ನಮ್ ಮನೆಗೆ ಬಂದು ಬಿಡು ಅಂತಾ ಹೇಳ್ತಾನೆ…ಅಂದುಕೊಂಡಂತೆ ಆ ದಿನ ಮದ್ಯಾಹ್ನ ಆ ಗ್ರಾಮದಲ್ಲಿ ಎಲ್ಲರೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಸಂದರ್ಭದಲ್ಲಿ ರಾಜ ಅಂದು ಮನೆಯಲ್ಲಿಯೇ ಇರ್ತಾರೆ. ರಾಜ ಅರಿಶಿಣ ಕೊಂಬಿನ ತಾಳಿಯನ್ನು ರೆಡಿಮಾಡಿಕೊಂಡಿರ್ತಾನೆ..ನಂತ್ರ ರಾಣಿ ಕೂಡ ಮನೆಯನ್ನು ಸೇರಿಕೊಳ್ತಾಳೆ.ಯಾರಿಗೂ ಅನುಮಾನ ಬಾರದಂತೆ ರಾಜ ಮನೆ ಮುಂದೆ ಬೀಗ ಹಾಕಿ ಹಿಂಬಾಗಿಲಿನಿಂದ ಮನೆಯೊಳಗೆ ಸೇರಿಕೊಂಡು ಲಾಕ್ ಮಾಡ್ಕೊತಾನೆ. ಇದು ನಮ್ಮ ಬದುಕಿನ ಕೊನೆ ಕ್ಷಣ ಅಂತಾ ಗೊತ್ತಿದ್ದ ರಾಜ ಮತ್ತು ರಾಣಿ ಒಟ್ಟಿಗೆ ಕಣ್ಣೀರು ಹಾಕ್ತಾರೆ ರಾಣಿ ಆಶಯದಂತೆ ರಾಜ ಅರಿಶಿಣ ಕೊಂಬಿನ ತಾಳಿಯನ್ನು ಕೊರಳಿಗೆ ಕಟ್ತಾನೆ..ಇಹಲೋಕದಲ್ಲಿ ನಾವು ಸತಿಪತಿಗಳಾಗದಿದ್ರೂ…ಪರಲೋಕದಲ್ಲಾದರೂ ಒಂದಾಗೋಣ ಅಂತಾನೇ…ಮೊದಲೇ ತಂದಿದ್ದ ಹಗ್ಗದಿಂದ ಇಬ್ಬರ ಒಟ್ಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ತಾರೆ. ರಾಜು ತಂದೆ ಮನೆಗೆ ಬಂದು ನೋಡಿದ್ರೆ ಮನೆ ಬೀಗ ಹಾಕಿರುತ್ತೆ. ಮನೆ ಮುಂದೆ ಬಹಳ ಹೊತ್ತು ಕೂತು ನಂತ್ರ ರಾಜ ಎಲ್ಲಿಗೋದ ಅಂತಾ ಕಿರಿಮಗನಿಗೆ ಹುಡುಕೋದಕ್ಕೆ ಹೇಳ್ತಾರೆ. ಆಗ ಎಲ್ಲೂ ರಾಜ ಕಾಣೋದಿಲ್ಲ.ಮನೆಯೊಳಗೆ ಇನ್ನೊಂದು ಕೀ ಇದೆ ತಗೊಂಡು ಬಾ ಅಂತ ತಂದೆ ಕಿರಿಮಗನಿಗೆ ಹೇಳ್ದಾಗ ಆತ ಹಂಚು ತೆಗೆಯೋದಕ್ಕೆ ಅಣಿಯಾಗ್ತಾನೆ..ಆಗ ರಾಜ ಮತ್ತು ರಾಣಿ ಒಂದೇ ತೊಲೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬರುತ್ತದೆ. ಯಾವಾಗ ರಾಜ ಮತ್ತು ರಾಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋ ವಿಷಯ ಗ್ರಾಮಸ್ಥರಿಗೆ ಗೊತ್ತಾಗುತ್ತೋ ಆಗ ಎಲ್ಲರೂ ಮನೆಯತ್ತ ಜಮಾಯಿಸಿ ಕಣ್ಣೀರು ಹಾಕುತ್ತಾರೆ…ನೀವಿಬ್ರೂ ಒಟ್ಟಿಗಿದ್ರೂ…ನೀವು ಪ್ರೀತಿ ಮಾಡ್ತಿದಿರಿ ಅಂತಾ ಗೊತ್ತಾಗ್ಲಿಲ್ವೋ ಅಂತಾ ಗೋಗರೆಯುತ್ತಾರೆ…
.ಕುಲ ಒಂದು ಅಂತಾ ಗೊತ್ತಿದ್ದೂ ತಪ್ಪು ಮಾಡಿದ ಈ ಪ್ರೇಮಿಗಳಿಗೆ ಏನೂ ಹೇಳಬೇಕು..ಇವರ ಪ್ರೀತಿಗೆ ಗ್ರಾಮಸ್ಥರು ವಿರೋಧಿಸಿಲ್ಲ,.ಕುಟುಂಬಸ್ಥರಿಗೆ ವಿಷಯ ಗೊತ್ತಿಲ್ಲ….ಯಾರ ವಿರೋಧವಿಲ್ಲದೆ ಮನಸ್ಸಿನ ಮಾತು ಕೇಳಿ ಪ್ರೀತಿಸಿದ ಪ್ರೇಮಿಗಳು, ಬದುಕಿಗೆ ವಿದಾಯ ಹೇಳಿದ್ದೇ ಒಂದು ವಿಪರ್ಯಾಸ,ಯಾವ ಪ್ರೇಮ ಪ್ರಕರಣಗಳು ಹೀಗಾಗದಿರಲಿ ಎಂಬುದು ಮಲೆನಾಡು ಟುಡೆಯ ಆಶಯ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com