special Action Force : ಕೋಮು ಗಲಭೆ ತಡೆಗೆ ವಿಶೇಷ ಕಾರ್ಯಪಡೆ ರಚನೆ | ಹೇಗಿರಲಿದೆ ಅದರ ಕಾರ್ಯವೈಖರಿ ? ಇಲ್ಲಿದೆ ಡಿಟೈಲ್
special Action Force : ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ವಿಶೇಷ ಕಾರ್ಯಪಡೆಯನ್ನು (Special Action Force) ಸ್ಥಾಪಿಸುವ ಕುರಿತು ಪೊಲೀಸ್ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು ಸರ್ಕಾರಕ್ಕೆ ಬರೆದ ಪತ್ರಕ್ಕೆ ಪೂರಕ ಸ್ಪಂದನೆ ವ್ಯಕ್ತವಾಗಿದೆ. ಮಂಗಳೂರು ಉಡುಪಿ ಶಿವಮೊಗ್ಗ ಜಿಲ್ಲೆಗಳನ್ನು ಕೋಮು ಸೂಕ್ಷ್ಮ ಜಿಲ್ಲೆಗಳೆಂದು ಗುರುತಿಸಲಾಗಿದೆ. ಈ ಜಿಲ್ಲೆಗಳು ಉನ್ನತ ಮಟ್ಟದ ಶಿಕ್ಷಣ ಮತ್ತು ಸಾಕ್ಷರತೆಯೊಂದಿಗೆ ಸ್ಥಿರವಾದ ಆರ್ಥಿಕ ಪ್ರಗತಿಯನ್ನು ಕಂಡಿದ್ದರೂ ಸಹ ಮತೀಯವಾಗಿ ಅತ್ಯಂತ ಸೂಕ್ಷ್ಮ ಜಿಲ್ಲೆಗಳಾಗಿವೆ. ಪ್ರಸ್ತುತ ಕೋಮು ಸಂವೇದನೆಗಳು ಹೆಚ್ಚಾಗುತ್ತಿದ್ದು ಸಣ್ಣ ಘಟನೆಗಳು ಸಹ ಪ್ರಮುಖ ಕಾನೂನು ಮತ್ತು ಸುವ್ಯವಸ್ಥೆಯ ಸವಾಲುಗಳಾಗಿ ತ್ವರಿತವಾಗಿ ಉಲ್ಬಣಗೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಈ ಜಿಲ್ಲೆಗಳಲ್ಲಿ ಕೋಮು ಹತ್ಯೆಗಳು, ದ್ವೇಷ ಭಾಷಣ, ಹಿಂಸಾಚಾರ ಮುಂತಾದ ಪುನರಾವರ್ತಿತ ಘಟನೆಗಳಿಗೆ ಸಾಕ್ಷಿಯಾಗಿದೆ.
ಈ ಕೃತ್ಯಗಳು ದಕ್ಷಿಣ ಕನ್ನಡ ಪ್ರದೇಶವನ್ನು ಕೋಮು ಮತ್ತು ಆಡಳಿತಾತ್ಮಕ ದೃಷ್ಟಿಕೋನದಿಂದ ಹೆಚ್ಚು ಸೂಕ್ಷ್ಮವಾಗಿಸುತ್ತಿದ್ದು ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಸ್ಥಗಿತಗೊಳಿಸುತ್ತಿರುವುದರಿಂದ ಶಾಂತಿ, ಸಾಮಾಜಿಕ ಒಗ್ಗಟ್ಟು ಮತ್ತು ಕಾನೂನಿನ ನಿಯಮವನ್ನು ತರುವ ನಿಟ್ಟಿನಲ್ಲಿ ಪೂರ್ವಭಾವಿ ಮತ್ತು ನಿರಂತರ ಪ್ರಯತ್ನಗಳು ಅತ್ಯಗತ್ಯವಾಗಿರುತ್ತವೆ. ಸರ್ವೋಚ್ಚ ನ್ಯಾಯಾಲಯವು ವಿವಿಧ ಪ್ರಕರಣಗಳಲ್ಲಿನ ತೀರ್ಪುಗಳಲ್ಲಿ ನೈತಿಕ ಪೊಲೀಸ್ ಗಿರಿ, ದ್ವೇಷ ಭಾಷಣಗಳು, ಹಿಂಸಾಚಾರ ಮುಂತಾದ ಪ್ರಕರಣಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿ, ಹಲವಾರು ಮಾರ್ಗಸೂಚಿಗಳನ್ನು ಒದಗಿಸಿರುತ್ತದೆಂದು ಡಿಜಿ ಮತ್ತು ಐಜಿಯವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರದ ಆದೇಶ ದಿನಾಂಕ: 21/05/2005ರನ್ನಯ ಸೃಜಿಸಲಾಗಿರುವ Anti Naxal Force (ANF)ರಲ್ಲಿ ಪ್ರಸ್ತುತ ದಿನಾಂಕ: 12/05/2025ರಂತೆ ಇರುವ ಅಧಿಕಾರಿ/ಸಿಬ್ಬಂದಿಗಳ ಮಂಜೂರಾತಿ ಬಲ, ಕಾರ್ಯನಿರ್ವಹಣೆಯ ಬಲ ಮತ್ತು ಖಾಲಿ ಹುದ್ದೆಗಳ ಬಲದ ಆದಾರದಲ್ಲಿ ಹಾಲಿ ನಕ್ಸಲ್ ನಿಗ್ರಹ ಪಡೆಯಲ್ಲಿರುವ ಅಧಿಕಾರಿ ಸಿಬ್ಬಂದಿಗಳನ್ನು ವಿಶೇಷ ಕಾರ್ಯಪಡೆಗೆ ಸೇರಿಸಿಕೊಳ್ಳಲು ತೀರ್ಮಾನಿಸವಾಗಿದೆ.
ಹೊಸದಾಗಿ ಸ್ಥಾಪನೆಯಾಗುವ ವಿಶೇಷ ಕಾರ್ಯಪಡೆಯು ಮೂರು ಕಂಪನಿಗಳನ್ನು ಹೊಂದಿರಲಿದ್ದು, ಈ ಕಂಪನಿಗಳನ್ನು ಉಡುಪಿ ಜಿಲ್ಲೆ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸ್ಥಾಪನೆಯಾಗಲಿದೆ.ಇದಕ್ಕೆ ಸಂಬಂಧಪಟ್ಟ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಈ ಪಡೆಗಳನ್ನು ನಿಯೋಜಿಸಲು ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಬೇಕು ಮತ್ತು ವಿಶೇಷ ಕಾರ್ಯಪಡೆಯು ವಲಯ ಐಜಿಪಿಯವರ ನಿಯಂತ್ರಣದಲ್ಲಿರುತ್ತದೆ. ಸದರಿ ವಿಶೇಷ ಕಾರ್ಯಪಡೆ (Special Action Force)ಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಕೆಳಕಂಡಂತೆ ಇರಲಿದೆ.

special Action Force : ವಿಶೇಷ ಕಾರ್ಯಪಡೆ (Special Action Force)ಯ ಕರ್ತವ್ಯಗಳು
- ದ್ವೇಷ ಭಾಷಣ, ಉದ್ರೇಕಕಾರಿ ಘಟನೆಗಳು ಮತ್ತು ಕೋಮು ಸಂಬಂಧಿತ ಘಟನೆಗಳಿಗಾಗಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಮತ್ತು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ತಾಂತ್ರಿಕ ಕೋಶವನ್ನು ಒಳಗೊಂಡ ಗುಪ್ತಚರ ಘಟಕವನ್ನು ಹೊಂದುವುದು.
- ಸಂಭಾವ್ಯ ಕೋಮು ಹಿಂಸಾಚಾರದ ಬಗ್ಗೆ ಕಣ್ಣಾವಲು ಮತ್ತು ಮಾನವ ಗುಪ್ತಚರ ಮೂಲಕ ಎಚ್ಚರಿಕೆ ವ್ಯವಸ್ಥೆಯನ್ನು ರಚಿಸುವುದು.
- ಪ್ರಾಬಲ್ಯದ ಮೂಲಕ ವಿಶ್ವಾಸ ವೃದ್ಧಿ ಕ್ರಮಗಳನ್ನು ಕೈಗೊಳ್ಳುವುದು.
- ಮೂಲಭೂತೀಕರಣವನ್ನು ಗುರುತಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕ್ರಮಗಳನ್ನು ಕೈಗೊಳ್ಳುವುದು.
- ವಲಯ ಐಜಿಪಿರವರು ಕೋಮು ಗಲಭೆಯ ಸಂದರ್ಭಗಳಲ್ಲಿ ವಿಶೇಷ ಕಾರ್ಯಪಡೆ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸಲು ಕ್ರಮಕೈಗೊಳ್ಳುವುದು.