ಶಿವಮೊಗ್ಗ: 2026ರ ಹೊಸ ವರ್ಷದ ಸ್ವಾಗತಕ್ಕೆ ಜಿಲ್ಲೆ ಸಜ್ಜಾಗುತ್ತಿರುವ ಬೆನ್ನಲ್ಲೇ, ಸಾರ್ವಜನಿಕ ಸುರಕ್ಷತೆಗಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಅತ್ಯಂತ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಹೋಟೆಲ್, ರೆಸಾರ್ಟ್ ಹಾಗೂ ಹೋಂ ಸ್ಟೇ ಆಯೋಜಕರೊಂದಿಗೆ ಸಭೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಜಿ.ಕೆ. ಮಿಥುನ್ ಕುಮಾರ್ ಅವರು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಶಿವಮೊಗ್ಗ : ಮನೆಯಂಗಳದಲ್ಲಿ ನಿಲ್ಲಿಸಿದ್ದ 18 ಲಕ್ಷದ ಎಕ್ಸ್‌ಯುವಿ 700 ನಾಪತ್ತೆ!
Shivamogga SP ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್ ಅವರು, ಆಯೋಜಕರು ಲಾಭದ ಉದ್ದೇಶದಿಂದ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಸೇರಿಸುವಂತಿಲ್ಲ. 100 ಜನರಿಗೆ ಅವಕಾಶವಿರುವ ಕಡೆ 500 ಜನರನ್ನು ಸೇರಿಸಿ ಅವಾಂತರ ಸೃಷ್ಟಿಸಿದರೆ ಆಯೋಜಕರನ್ನೇ ಹೊಣೆ ಮಾಡಲಾಗುವುದು. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಹಾಗೂ ಅತಿಥಿಗಳ ಮಾಹಿತಿ ಮತ್ತು ಭದ್ರತೆಯ ದೃಷ್ಟಿಯಿಂದ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ವಿಶೇಷವಾಗಿ, ಅಗ್ನಿ ಅವಘಡಗಳ ತಡೆಗೆ ‘ಹೀಲಿಯಂ ಬಲೂನ್’ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮಾದಕ ವಸ್ತುಗಳ (Drugs) ಬಳಕೆ ಮತ್ತು ಮಾರಾಟದ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಅಂತಹ ಪ್ರಕರಣ ಕಂಡುಬಂದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದನ್ನು ತಡೆಯಲು ಆಯೋಜಕರೇ ವಾಹನ ವ್ಯವಸ್ಥೆ ಮಾಡುವುದು ಸೂಕ್ತ. ಧ್ವನಿವರ್ಧಕಗಳ ಬಳಕೆಯಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲಿಸಬೇಕು ಹಾಗೂ ಜನವರಿ 1ರ ಮುಂಜಾನೆ 1:00 ಗಂಟೆಗೆ ಸಂಭ್ರಮಾಚರಣೆಯನ್ನು ಕಡ್ಡಾಯವಾಗಿ ಕೊನೆಗೊಳಿಸಬೇಕು ಎಂದು ಆದೇಶಿಸಲಾಗಿದೆ.
ಸಂಚಾರ ದಟ್ಟಣೆ ತಡೆಯಲು ಪಾರ್ಕಿಂಗ್ ವ್ಯವಸ್ಥೆ ಸಮರ್ಪಕವಾಗಿರಲಿ ಮತ್ತು ಯಾವುದೇ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು 112 ಸಹಾಯವಾಣಿಗೆ ಕರೆ ಮಾಡಬಹುದು. ಸಾರ್ವಜನಿಕರ ಹಿತದೃಷ್ಟಿಯಿಂದ ಜಾರಿಗೊಳಿಸಲಾದ ಈ ನಿಯಮಗಳನ್ನು ಉಲ್ಲಂಘಿಸಿದರೆ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.