ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮೊರೆ ಹೋದ ಶರಾವತಿ ಸಂತ್ರಸ್ತರು/ ದೇವರಿಗೆ ಮನವಿ ಸಲ್ಲಿಸಿ ಪೂಜೆ/ ಕೋರಿಕೆ

ಕುಟುಂಬಗಳು ಬೆಳೆದಂತೆ ಸಮೀಪದಲ್ಲಿಯೇ ಇದ್ದ ಕಂದಾಯ ಭೂಮಿಯಲ್ಲಿ ಹೊಟ್ಟೆಪಾಡಿಗೆ ಹೆಚ್ಚುವರಿ ಸಾಗುವಳಿ ಮಾಡಿಕೊಂಡು ಜೀವನ ನಡೆಸಿಕೊಂಡು ಬಂದರು. ಎರಡು ತಲೆಮಾರಿನ ಹಿಂದೆ ಆದ ಪುನರ್ವಸತಿ ಯೋಜನೆ ಸಮರ್ಪಕ ಜಾರಿಯಾಗದೆ ನಾವಿಂದು ಸಂಕಷ್ಟದಲ್ಲಿದ್ದೇವೆ.

ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮೊರೆ ಹೋದ ಶರಾವತಿ ಸಂತ್ರಸ್ತರು/ ದೇವರಿಗೆ ಮನವಿ ಸಲ್ಲಿಸಿ ಪೂಜೆ/ ಕೋರಿಕೆ

ಶಿವಮೊಗ್ಗ ಜಿಲ್ಲೆಯ ಶರಾವತಿ ಮುಳುಗಡೆ ಸಂತ್ರಸ್ತರು ತಮಗೆ ನ್ಯಾಯ ಬೇಕು ಎಂದು ಧರ್ಮಸ್ಥಳ ಮಂಜುನಾಥ ಸ್ವಾಮಿಯ ಬಳಿಗೆ ತೆರಳಿ, ಸ್ವಾಮಿಯ ಮುಂದೆ ಅಲವತ್ತುಕೊಂಡಿದ್ಧಾರೆ. 1960 ರಿಂದ ನಿರಾಶ್ರಿತರಾದ ತಮಗೆ ಇದುವರೆಗೂ ಸಮರ್ಪಕ ಪರಿಹಾರ, ಭೂಮಿ ಸಿಕ್ಕಿಲ್ಲ ಎಂದು ಸಂತ್ರಸ್ತರು ಮಂಜುನಾಥ ಸ್ವಾಮಿಯ ಮುಂದೆ ಪ್ರಾರ್ಥಿಸಿದ್ರು. ಅಷ್ಟೆ ಅಲ್ಲದೆ ಮನವಿ ಪತ್ರವೊಂದನ್ನು ಮಂಜುನಾಥ ಸ್ವಾಮಿಯ ಮುಂದಿಟ್ಟು ವಿಶೇಷ ಪೂಜೆ ಸಲ್ಲಿಸಿದ್ಧಾರೆ. 

ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್

ಹೌದು.  ಸಾಗರ ಶಾಸಕ ಹರತಾಳು ಹಾಲಪ್ಪರವರ ನೇತೃತ್ವದ ಬಿಜೆಪಿ ಬೆಂಬಲಿತ ಶರಾವತಿ ಸಂತ್ರಸ್ತರು ಈ ಭಾನುವಾರ ಧರ್ಮಸ್ಥಳಕ್ಕೆ ಹೋಗಿ ಬಂದಿದ್ಧಾರೆ. ಅಲ್ಲದೆ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಸಂತ್ರಸ್ತರು,  ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನೂ ಸಹ ಭೇಟಿ ಮಾಡಿದ್ದಾರೆ. ದೇವರ ಸನ್ನಿಧಾನದಲ್ಲಿ ಮನವಿ ಪತ್ರ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಸಂತ್ರಸ್ತೆರು ಸನ್ನಿಧಿಯಲ್ಲಿ ಸಲ್ಲಿಸಿದ ಮನವಿ ಪತ್ರದಲ್ಲಿ ಏನಿದೆ ಎಂಬುದರ ಪೂರ್ಣ ವಿವರ ಇಲ್ಲಿದೆ ಓದಿ 

ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ - ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

 ನಮ್ಮ ಸೋಶಿಯಲ್​ ಮೀಡಿಯಾ :   ಟ್ವಿಟ್ಟರ್ : ಫೇಸ್​ಬಕ್  : ಇನ್​ಸ್ಟಾಗ್ರಾಮ್  : ಟೆಲಿಗ್ರಾಂ : ವಾಟ್ಸ್ಯಾಪ್​

ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು

ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ

ಮಾನ್ಯರೆ,

 ವಿಷಯ: ಶಿವಮೊಗ್ಗ ಜಿಲ್ಲೆಯ ಸಮಸ್ತ ಶರಾವತಿ ಮುಳುಗಡೆ ಸಂತ್ರಸ್ತರು ಮಾಡಿಕೊಂಡ ಭಿನ್ನಹ

ಪೂಜ್ಯರೆ,

       ನಾವೊಂದು ಭಿನ್ನ ಸಮಸ್ಯೆಯನ್ನು ತಮ್ಮ ಸನ್ನಿಧಾನದಲ್ಲಿ ಅರಿಕೆ ಮಾಡಿಕೊಂಡು ಶ್ರೀ ಮಂಜುನಾಥ ಸ್ವಾಮಿಯೇ ನಮಗೆ ನ್ಯಾಯ ಕರುಣಿಸಬೇಕೆಂದು ಬೇಡಿಕೊಳ್ಳಲು ಭಗವಂತನ ಪುಣ್ಯಕ್ಷೇತ್ರಕ್ಕೆ ಬಂದಿದ್ದೇವೆ.

ನಾಡಿಗೆ ಬೆಳಕು ಕೊಡುವ ಉದ್ದೇಶದಿಂದ 1959 ರಲ್ಲಿ  ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಲಿಂಗನಮಕ್ಕಿಯಲ್ಲಿ ಶರಾವತಿ ನದಿಗೆ ಅಣೆಕಟ್ಟಯನ್ನು ನಿರ್ಮಿಸಲಾಯಿತು. ಜಲವಿದ್ಯುತ್ ಉತ್ಪಾದನೆಯ ಉದ್ದೇಶದಿಂದ ನಿರ್ಮಾಣಗೊಂಡ ಮಹತ್ತರ ಯೋಜನೆಯಿಂದ ರಾಜ್ಯ ಹಾಗೂ ದೇಶಕ್ಕೆ ಬೆಳಕು ನೀಡಲಾಯಿತು. ಯೋಜನೆಯು ನಾಡಿನ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದೆ ಇದು ತಮಗೂ ತಿಳಿದ ವಿಚಾರ.

  ಬೃಹತ್ ಅಣೆಕಟ್ಟು ನಿರ್ಮಾಣ ಮಾಡಿದ ಸಂದರ್ಭ ಸಾಗರ ತಾಲೂಕಿನ ಕರೂರು, ಬಾರಂಗಿ ಹೋಬಳಿಯಲ್ಲಿ ವಾಸವಾಗಿದ್ದ ಸುಮಾರು ಆರು ಸಾವಿರ ಕುಟುಂಬಗಳಿಗೆ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪುನರ್ವಸತಿ ಕಲ್ಪಿಸಲಾಯಿತು. ಅಂದರೆ ಅಂದು ಸರಕಾರವೇ ನಾಡಿಗೆ ಬೆಳಕು ಕೊಡುವ ಉದ್ದೇಶದಿಂದ ನಮ್ಮ ಪೂರ್ವಿಕರನ್ನು ಲಾರಿಯಲ್ಲಿ ಜನ ಮತ್ತು ಜಾನುವಾರು ಸಮೇತ ತುಂಬಿಕೊಂಡು ಕಾಡಿನಲ್ಲಿ ಬಿಡಲಾಯಿತು.

 ವಿದ್ಯಾಭ್ಯಾಸ ಇಲ್ಲದ ನಮ್ಮ ಪೂರ್ವಿಕರು ಸರಕಾರ ಕೊಟ್ಟ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. 1980 ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಮುನ್ನ ಆಗಿರುವ ಅಂದರೆ 1960 ದಶಕದಲ್ಲಿ ಆದ ಯೋಜನೆಯಲ್ಲಿ ನಿರಾಶ್ರಿತರಾದ ನಮ್ಮ ಕುಟುಂಬಗಳು ಬೆಳೆದಂತೆ ಸಮೀಪದಲ್ಲಿಯೇ ಇದ್ದ ಕಂದಾಯ ಭೂಮಿಯಲ್ಲಿ ಹೊಟ್ಟೆಪಾಡಿಗೆ ಹೆಚ್ಚುವರಿ ಸಾಗುವಳಿ ಮಾಡಿಕೊಂಡು ಜೀವನ ನಡೆಸಿಕೊಂಡು ಬಂದರು. ಎರಡು ತಲೆಮಾರಿನ ಹಿಂದೆ ಆದ ಪುನರ್ವಸತಿ ಯೋಜನೆ ಸಮರ್ಪಕ ಜಾರಿಯಾಗದೆ ನಾವಿಂದು ಸಂಕಷ್ಟದಲ್ಲಿದ್ದೇವೆ.

ಬದಲಾದ ಕಾನೂನು ಮತ್ತು ನ್ಯಾಯಾಲಯದ ಆದೇಶಗಳ ಹಿನ್ನೆಲೆಯಲ್ಲಿ ಅಂದು ನಮ್ಮ ಪೂರ್ವಿಕರಿಗೆ ಬಿಡುಗಡೆಯಾಗಿದ್ದ ಭೂಮಿ ಅಂದರೆ, ನಾವಿಂದು ನೆಲೆ ನಿಂತ ಜಾಗಗಳಿಗೆ ಆಗಿದ್ದ ಸುಮಾರು 56 ಅಧಿಸೂಚನೆಗಳನ್ನು ಸರಕಾರ ರದ್ದು ಮಾಡಿರುವುದರಿಂದ ನಾವಿರುವ ಭೂಮಿ ಈಗ ನಮ್ಮದಲ್ಲವಾಗಿದೆ. ಶರಾವತಿ ಸಂತ್ರಸ್ತರಿಗೆ ಸರಕಾರವೇ ಕೊಟ್ಟ ಭೂಮಿಯನ್ನು ಮತ್ತೆ ಅರಣ್ಯ ಇಲಾಖೆಗೆ ಸೇರಿಸಲಾಗಿದೆ. ಸಂಗತಿ ಅನುಭವಕ್ಕೆ ಬಂದ ಮೇಲೆ 2015-16 ರಲ್ಲಿ ಅಂದಿನ ಸರಕಾರ ಡಿನೋಟಿಫಿಕೇಷನ್ ಮಾಡಲಾಗಿತ್ತು. ಆದರೆ ಈಗ ಆದೇಶಗಳನ್ನು ಈಗ ರದ್ದು ಮಾಡಲಾಗಿದೆ. ಇದಕ್ಕೆ ಗಿರೀಶ್ ಆಚಾರ್ಯ ಎಂಬ ಪರಿಸರ ಕಾರ್ಯಕರ್ತರು ನ್ಯಾಯಾಲಯಕ್ಕೆ ಹೋಗಿರುವುದೇ ಕಾರಣವಾಗಿದೆ

 ಆರು ದಶಕಗಳಿಂದ ನಮ್ಮ ಸಮಸ್ಯೆ ಹೀಗೆಯೇ ಇದೆ. ಈಗಿನ ಸರಕಾರ 23-09-2021 ರಂದು ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಶರಾವತಿ ಸಂತ್ರಸ್ತರ ಭೂಮಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಶೇಷ ಜಿಲ್ಲಾಧಿಕಾರಿ ಮತ್ತು ಹತ್ತಕ್ಕೂ ಹೆಚ್ಚು ಸಿಬ್ಬಂದಿ ನೇಮಿಸಲು ತೀರ್ಮಾನ ಮಾಡಲಾಗಿತ್ತು. ಆದರೆ ಅದು ಅನುಷ್ಠಾನಗೊಳ್ಳಲಿಲ್ಲ. ನ್ಯಾಯಾಲಯದ ಆದೇಶ ಮತ್ತು ಅದನ್ನು ಅನುಸರಿಸಿದ ಸರಕಾರದ ಆದೇಶಗಳಿಂದ ಶಿವಮೊಗ್ಗ ಜಿಲ್ಲೆಯ ಸುಮಾರು ೨೫ ಸಾವಿರ ಬಡ ಕೃಷಿ ಕುಟುಂಬಗಳು ಮುಂದಿನ ದಾರಿ ಕಾಣದೆ ಕಂಗೆಟ್ಟಿದ್ದೇವೆ.

 ಎರಡು ತಲೆಮಾರಿನ ಹಿಂದೆ ಆಗಿದ್ದ ಯೋಜನೆಯಲ್ಲಿ ಕೇವಲ 9200 ಎಕರೆ ಭೂಮಿಯನ್ನು ಬಿಡುಗಡೆ ಮಾಡಲಾಗಿತ್ತು. ಈಗ ವಿಭಕ್ತ ಕುಟುಂಬಗಳಾಗಿದ್ದು, ಎರಡು ತಲೆಮಾರಿನ ನಂತರ ವಾಣಿಜ್ಯ ಉದ್ದೇಶವಿಲ್ಲದೆ, ಜೀವನೋಪಾಯಕ್ಕೆ 1,2,3 ನಾಲ್ಕು ಹೆಚ್ಚೆಂದರೆ ಒಂದು ಕುಟುಂಬ 5 ಎಕರೆ ಜಮೀನು ಸಾಗುವಳಿ ಮಾಡಿಕೊಂಡಿರಬಹುದು. ಈಗ ಅಂದಾಜು ೨೫ ಸಾವಿರ ಕುಟುಂಬಗಳು ಪ್ರಭುತ್ವದ ತಪ್ಪು ನಡೆಗಳಿಂದಾಗಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಆತಂಕದಲ್ಲಿದ್ದೇವೆ.

ಕಾಲಾಂತರಿಂದ ಎಲ್ಲಾ ಕುಟುಂಬಗಳು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಗೆ ನಡೆದುಕೊಳ್ಳುತ್ತ ಬಂದ ಮುಗ್ಧ ಜನರದ್ದಾಗಿವೆ. ನಮ್ಮ ಸಮಸ್ಯೆಗೆ ಯಾರು ಕಾರಣ, ಯಾವ ಕೈಗಳು ನಮ್ಮ ಸಮಸ್ಯೆಗೆ ಮೂಲವಾಗಿವೆ ಎಂಬುದೇ ನಮಗೆ ಅರ್ಥವಾಗುತ್ತಿಲ್ಲ.ಜಗತ್ತಿಗೆ ಬೆಳಕು ಕೊಡಲು ಕಣ್ಣು ಕಳೆದುಕೊಂಡ ನಾವು ವಾಸಿಸುವ ಮನೆ ಮತ್ತು ಉಳುವ ಭೂಮಿಯನ್ನು ಹೇಗಿದೆಯೊ ಹಾಗೆ ಮಂಜೂರು ಮಾಡಿಕೊಡುವ ಇಚ್ಚಾಶಕ್ತಿಯನ್ನು ಸರಕಾರಗಳು ತೋರುತ್ತಿಲ್ಲ. ಇದಕ್ಕೆ ಯಾರು ಮತ್ತು ಯಾಕೆ ಅಡ್ಡಿಯಾಗಿದ್ದಾರೆ ಎಂಬುದು ಚಿದಂಬರ ರಹಸ್ಯವಾಗಿ ಉಳಿದಿದೆ.

 ನಾವು ಮುಗ್ಧ ಜನ ನಮಗೆ ದೇವರ ಮೇಲೆ ನಂಬಿಕೆ ಇದೆ. ಶ್ರೀ ಮಂಜುನಾಥ ಸ್ವಾಮಿಯ ಒಕ್ಕಲುಗಳೇ ಎಂದು ನಮ್ಮನ್ನು ನಾವು ಭಾವಿಸಿಕೊಂಡಿದ್ದೇವೆ. ನಮಗೆ ಸರಕಾರ, ನ್ಯಾಯಾಲಯ ಎಲ್ಲಿಯೂ ಈವರೆಗೆ ನ್ಯಾಯ ಸಿಕ್ಕಿಲ್ಲ. ಆದ್ದರಿಂದ ನಂಬಿದ ದೇವರ ಸನ್ನಿಧಾನಕ್ಕೆ ಬಂದು ನಮ್ಮ ಸಂಕಷ್ಟಗಳನ್ನು ಹೇಳಿಕೊಂಡಿದ್ದೇವೆ. ಮಲೆನಾಡಿನ ಪ್ರತಿ ಮನೆಯಲ್ಲಿಯೂ ಮಂಜುನಾಥ ಸ್ವಾಮಿಯ ಮತ್ತು ಧರ್ಮಾಧಿಕಾರಿಗಳಾದ ನಿಮ್ಮ ಫೋಟೊಗಳಿವೆ. ನಿತ್ಯ ಪೂಜೆ ಮಾಡುವ ಭಗವಂತನಲ್ಲಿ ಮತ್ತು ಪೂಜ್ಯರಾದ ನಿಮ್ಮಲ್ಲಿ ಬಂದು ನೋವು ತೋಡಿಕೊಂಡರೆ ಜೀವ ಹಗುರವಾಗುತ್ತದೆ ಎಂದು ಬಂದಿದ್ದೇವೆ. ಸಮಸ್ತ ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಸ್ವಾಮಿಯಲ್ಲಿ ನಮಗೆ ಬೆಳಕು ಕೊಡು, ನಾವು ಉಳುವ ಭೂಮಿಗೆ ಒಡೆತನ ಕೊಡು ಎಂದು ಭಕ್ತಪೂರ್ವಕವಾಗಿ ಪ್ರಾರ್ಥಿಸುತ್ತಿದ್ದೇವೆ.

 ಶ್ರೀ ಸ್ವಾಮಿಯ ಭಕ್ತರು…..

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link