ನವದೆಹಲಿ |ಕೃತಕ ಬುದ್ಧಿಮತ್ತೆ (AI) ಬಳಸಿ ವಿಡಿಯೋ ಅಥವಾ ಆಡಿಯೋ ತಯಾರಿಸಿ ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡುವವರಿಗೆ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸಿದೆ. ಐಟಿ ನಿಯಮಗಳು-2021ಕ್ಕೆ ಮಹತ್ವದ ತಿದ್ದುಪಡಿ ತಂದಿರುವ ಸರ್ಕಾರ, ಫೆಬ್ರವರಿ 20ರಿಂದ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಇನ್ಮೇಲೆ ಎಐ ಮೂಲಕ ಸೃಷ್ಟಿಸಿದ ಯಾವುದೇ ಕಂಟೆಂಟ್ ಇದ್ದರೂ ಅದರ ಮೇಲೆ AI ಎಂಬ ಲೇಬಲ್ ಅಥವಾ ಗುರುತು ಇರುವುದು ಕಡ್ಡಾಯ. ಬಳಕೆದಾರರನ್ನು ದಾರಿ ತಪ್ಪಿಸುವ ಅಥವಾ ಸುಳ್ಳು ಮಾಹಿತಿ ಹರಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಹೊಸ ನಿಯಮದ ಪ್ರಕಾರ, ಕೋರ್ಟ್ ಅಥವಾ ಸರ್ಕಾರಿ ಸಂಸ್ಥೆಗಳು ಯಾವುದಾದರೂ ಪೋಸ್ಟ್ ಅನ್ನು ನಿಷಿದ್ಧ ಎಂದು ಘೋಷಿಸಿದರೆ, ಅಂತಹ ವಿಡಿಯೋಗಳನ್ನು ಎಕ್ಸ್ (ಟ್ವಿಟರ್), ಇನ್‌ಸ್ಟಾಗ್ರಾಂನಂತಹ ವೇದಿಕೆಗಳು ಕೇವಲ 3 ಗಂಟೆಯ ಒಳಗೆ ತೆಗೆದುಹಾಕಬೇಕು. ಈ ಮೊದಲು ಇದಕ್ಕೆ 36 ಗಂಟೆಗಳ ಕಾಲಾವಕಾಶವಿತ್ತು. ಅಲ್ಲದೆ, ಲೈಂಗಿಕ ಶೋಷಣೆ, ಮಕ್ಕಳ ಮೇಲಿನ ದೌರ್ಜನ್ಯ ಅಥವಾ ಸ್ಫೋಟಕಗಳಿಗೆ ಸಂಬಂಧಿಸಿದ ಎಐ ವಿಡಿಯೋಗಳನ್ನು ತಡೆಯಲು ಸೋಷಿಯಲ್ ಮೀಡಿಯಾ ಸಂಸ್ಥೆಗಳೇ ಸ್ವಯಂಚಾಲಿತ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ.
ಸಾಮಾನ್ಯ ಎಡಿಟಿಂಗ್ ಅಥವಾ ಶೈಕ್ಷಣಿಕ ಕೆಲಸಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದ್ದರೂ, ಮುಖ ಬದಲಿಸುವ ಅಥವಾ ಧ್ವನಿ ಬದಲಿಸುವ (Deepfake) ತಂತ್ರಜ್ಞಾನ ಬಳಸುವವರು ಇನ್ಮೇಲೆ ಎಚ್ಚರದಿಂದ ಇರಲೇಬೇಕು. ಒಂದು ಬಾರಿ ಎಐ ಲೇಬಲ್ ಹಾಕಿದ ನಂತರ ಅದನ್ನು ತೆಗೆಯಲು ಮಧ್ಯವರ್ತಿಗಳಿಗೆ ಅವಕಾಶವಿರುವುದಿಲ್ಲ. ಫೆಬ್ರವರಿ 20ರ ನಂತರ ಈ ನಿಯಮಗಳನ್ನು ಪಾಲಿಸದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.
New IT Rules 2026 Mandatory AI Labels

