Shivamogga | Feb 5, 2024 | ಕ್ಯಾಸನೂರು ಫಾರೆಸ್ಟ್ ಡಿಸೀಸ್ ಅಥವಾ ಮಂಗನ ಕಾಯಿಲೆಯ ಬಗ್ಗೆ ತಡವಾಗಿಯಾದರೂ ಆರೋಗ್ಯ ಇಲಾಖೆ ಗಂಭೀರವಾಗಿ ಗಮನಿಸುತ್ತಿದೆ. ಇತ್ತೀಚೆಗೆ ಯುವತಿಯೊಬ್ಬಳು ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದರು. ಆನಂತರ ಶಿವಮೊಗ್ಗ ಜಿಲ್ಲಾ ಆರೋಗ್ಯ ಇಲಾಖೆ ಮಂಗನ ಕಾಯಿಲೆ ವಿಚಾರದಲ್ಲಿ ಸೀರಿಯಸ್ ಆಗಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು.
ಅಷ್ಟೆಅಲ್ಲದೆ ಈ ಸಂಬಂಧ ಪ್ರತಿಭಟನೆಗಳು ಸಹ ನಡೆದಿದ್ದವು. ಸಚಿವರಿಗೆ ಮನವಿ ಸಲ್ಲಿಕೆಯಾಗಿದ್ದವು. ವಕೀಲರು ಕೆ.ಪಿ.ಶ್ರೀಪಾಲ್ ಹಾಗೂ ಹಲವು ಮುಖಂಡರನ್ನ ಒಳಗೊಂಡ ಕೆಎಫ್ಡಿ ಜನಜಾಗೃತಿ ಒಕ್ಕೂಟ ಯುವತಿಯ ಸಾವು ಅಮಾನುಷ ಎಂದು ಗಂಭೀರವಾಗಿ ಆರೋಪಿಸಿತ್ತು. ಅಲ್ಲದೆ ರಿಪೋರ್ಟ್ಗಳನ್ನು ಮುಚ್ಚುಮರೆ ಮಾಡಿ ತಿದ್ದಲಾಗುತ್ತಿದೆ ಎಂಬ ಆರೋಪವನ್ನ ಮಾಡಿದ್ದ ಸಂಘಟನೆ ಈ ಸಂಬಂಧ ಆರೋಗ್ಯ ಇಲಾಖೆ ಆಯುಕ್ತರಾದ ಡಿ.ರಣದೀಪ್ ರವರಿಗೆ ಮನವಿಯನ್ನು ನೀಡಿತ್ತು.
ಇಷ್ಟೆಲ್ಲದರ ಬಳಿಕ ಆರೋಗ್ಯ ಇಲಾಖೆ ವಿಚಾರದಲ್ಲಿ ಗಂಭೀರತೆ ತೋರುತ್ತಿದೆ. ಇದಕ್ಕೆ ಪೂರಕವಾಗಿ ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ ಸಂಬಂದಿಸಿದಂತೆ ಹೆಲ್ತ್ ಬುಲೆಟನ್ ಬಿಡುಗಡೆ ಮಾಡಲಾಗಿದೆ.2024 ರ ಸಾಲಿನಿಂದ ಆರಂಭಗೊಂಡು ನಿನ್ನೆಯವರೆಗೂ ಮಂಗನ ಕಾಯಿಲೆಗೆ ಸಂಬಂಧಿಸಿದ ವಿವರಗಳನ್ನು ನೀಡಲಾಗಿದೆ.
ಇನ್ನೂ ಈ ಅಂಕಿಸಂಖ್ಯೆಗಳ ಪ್ರಕಾರ, ನಿನ್ನೆ ಶಿವಮೊಗ್ಗದಲ್ಲಿ 18 ಟೆಸ್ಟ್ ಗಳನ್ನು ಮಾಡಲಾಗಿದ್ದು ಈ ಪೈಕಿ 11 ಪ್ರಕರಣ ಪಾಸಿಟಿವ್ ಬಂದಿದೆ. ಇನ್ನೊಂದು ಪ್ರಕರಣ ಉತ್ತರಕನ್ನಡದಲ್ಲಿ ದಾಖಲಾಗಿದೆ. ಇದುವರೆಗೂ ಶಿವಮೊಗ್ಗದಲ್ಲಿ ಒಟ್ಟು 24 ಪಾಸಿಟಿವ್ ಕೇಸ್ ಬಂದಿದ್ದು, ಈ ಪೈಕಿ 13 ಆಕ್ಟೀವ್ ಕೇಸ್ ಇವೆ. ಮಂಗನ ಕಾಯಿಲೆಯಿಂದ ಇದುವರೆಗೂ ಓರ್ವರು ಮೃತಪಟ್ಟಿದ್ದಾರೆ.
ಉತ್ತರ ಕನ್ನಡದಲ್ಲಿ ಒಟ್ಟು ಇದುವರೆಗು 37 ಪಾಸಿಟಿವ್ ಕೇಸ್ ಇದ್ದು ಈ ಪೈಕಿ 22 ಆಕ್ಟೀವ್ ಕೇಸ್ಗಳಿವೆ. ಇನ್ನೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 2 ಆಕ್ಟೀಸ್ ಕೇಸ್ಗಳಿದ್ದು ಓರ್ವರು ಮೃತಪಟ್ಟಿದ್ದಾರೆ. ಒಟ್ಟು 37 ಆಕ್ಟೀವ್ ಕೇಸ್ಗಳಿದ್ದು 30ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಬ್ಬರು ಖಾಸಗಿ ಆಸ್ಪತ್ರೆಯ ಐಸಿಯು ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.