mahendra singh dhoni :  ಸಾಕು ತಂಡ ಕಟ್ಟು, ನೀನು ಇನ್ನೆಷ್ಟು ದಿನ ಆಡ್ತಿಯಾ..?

prathapa thirthahalli
Prathapa thirthahalli - content producer

mahendra singh dhoni : ವಯಸ್ಸು 44 ಆಯ್ತು.. ಇನ್ನೂ ಆಡಬೇಕು ಎಂದು ಮನಸ್ಸು ಹೇಳ್ತಾ ಇದೆ. ಆದ್ರೆ ದೇಹ ಸ್ಪಂದಿಸಬೇಕಲ್ವಾ..? ನೋಡೋಣ.. ಮುಂದಿನ ಏಳೆಂಟು ತಿಂಗಳಲ್ಲಿ ಏನೇನು ಆಗುತ್ತೆ ಅಂತ.. ಆಮೇಲೆ ನಿರ್ಧಾರ ತಗೊಂಡ್ರೆ ಆಯ್ತು.. ಅಂದ ಮೇಲೆ  ಧೋನಿ ಮುಂದಿನ ಐಪಿಎಲ್‌ನಲ್ಲೂ ಆಡುವುದು ಬಹುತೇಕ ಖಚಿತ.

ನಿಜ, ಐಪಿಎಲ್​ ನಲ್ಲಿ ಮಹೇಂದ್ರ ಸಿಂಗ್ ಧೋನಿ ಪ್ರಶ್ನಾತೀತ ಆಟಗಾರ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಧೋನಿಯೇ ಜೀವಾಳ. ಧೋನಿ ಇಲ್ಲದಿದ್ರೆ ಸಿಎಸ್‌ಕೆ ತಂಡವನ್ನು ಊಹಿಸಿಕೊಳ್ಳುವುದು ಕೂಡ ಕಷ್ಟ. ಯಲ್ಲೋ ಆರ್ಮಿಯ ಅಭಿಮಾನಿಗಳಿಗೆ ಧೋನಿಯೇ ತಲೈವಾ. ಧೋನಿ ಅಂದ್ರೆ ಸಿಎಸ್‌ಕೆ.. ಸಿಎಸ್‌ಕೆ ಅಂದ್ರೆ ಧೋನಿ. ಅಷ್ಟರ ಮಟ್ಟಿಗೆ ಧೋನಿ ಸಿಎಸ್‌ಕೆ ತಂಡವನ್ನು ಆವರಿಸಿಕೊಂಡುಬಿಟ್ಟಿದ್ದಾರೆ. ಆದ್ರೆ ಧೋನಿಯ ಬ್ಯಾಟಿಂಗ್ ಅಬ್ಬರ ಮುಂಚಿನ ರೀತಿಯಲ್ಲಿ ಇಲ್ಲ. ಅದನ್ನು ಒಪ್ಪಿಕೊಳ್ಳಲೇಬೇಕು. ಕೊನೆಯ ಓವರ ಕೊನೆಯ ಎಸೆತದವರೆಗೆ ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸುತ್ತಿದ್ದ ಧೋನಿಯ ಆ ದಿನಗಳು ಮುಗಿದು ಹೋಗಿದೆ. ಅದರಲ್ಲಿ ಎರಡು ಮಾತಿಲ್ಲ. ಐಪಿಎಲ್ ಟೂರ್ನಿಯ 20ನೇ ಓವರಲ್ಲಿ 244 ಸೈಕ್ ರೇಟ್‌ನಲ್ಲಿ 844 ರನ್ ದಾಖಲಿಸಿರುವ ಧೋನಿಯ ಬ್ಯಾಟಿಂಗ್ ತಾಕತ್ತು ಎಂತಹುದ್ದು ಎಂಬುದು ಗೊತ್ತಿಲ್ಲದ ವಿಚಾರವೇನು ಅಲ್ಲ.

- Advertisement -

mahendra singh dhoni : ಆದ್ರೆ ಈಗ ಟಿ-20 ಕ್ರಿಕೆಟ್‌ನ ವೇಗದ ಆಟಕ್ಕೆ ಒಗ್ಗಿಕೊಳ್ಳುವುದು ಮಹಿಗೆ ಸ್ವಲ್ಪ ಕಷ್ಟವಾಗುತ್ತಿದೆ. ಹಾಗಾಗಿ ಧೋನಿಯ ಬ್ಯಾಟ್ ನಿಂದ ರನ್‌ಗಳು ಹರಿದು ಬರುತ್ತಿಲ್ಲ. ಇದು ಸಹಜವಾಗಿ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡುತ್ತಿದೆ. ಹಾಗೇ ಕ್ರಿಕೆಟ್ ಪಂಡಿತರು ಕೂಡ ಧೋನಿಯ ಬ್ಯಾಟಿಂಗ್ ಬಗ್ಗೆ ತುಸು ಕೋಪದಿಂದಲೇ ಟೀಕೆ ಮಾಡ್ತಾ ಇದ್ದಾರೆ. ಆದ್ರೆ ವಿಕೆಟ್ ಹಿಂದುಗಡೆಯ ಕೌಶಲ್ಯ ಇದೆಯಲ್ವಾ ಅದು ಎಲ್ಲವನ್ನು ಮರೆ ಮಾಚುವಂತೆ ಮಾಡುತ್ತಿದೆ. ಗೂಟ ರಕ್ಷಕನಾಗಿ ಧೋನಿಯನ್ನು ಮೀರಿಸುವ ಇನ್ನೊಬ್ಬ ಯುವ ಆಟಗಾರ ಇನ್ನೂ ಬಂದಿಲ್ಲ. ಹಾಗಾಗಿ ವಿಕೆಟ್ ಕೀಪರ್ ಆಗಿ ಧೋನಿ ಸಿಎಸ್‌ಕೆ ತಂಡಕ್ಕೆ ಸೇಫ್ ಆಗಿದ್ದಾರೆ.

Mahendra singh dhoni : ಸಿಎಸ್​ಕೆ ತಂಡಕ್ಕೆ ಧೋನಿಯೇ ಆಧಾರ ಸ್ತಂಭ

ಅಂದ ಹಾಗೇ ಸಿಎಸ್‌ಕೆ ತಂಡಕ್ಕೆ ಧೋನಿಯೇ ಆಧಾರ ಸ್ತಂಭ. ಧೋನಿ ಇಲ್ಲದಿದ್ರೆ ಸಿಎಸ್‌ಕೆ ತಂಡದ ಮಾರ್ಕೆಟಿಂಗ್ ವ್ಯಾಲ್ಯೂ ಕಮ್ಮಿಯಾಗುತ್ತದೆ. ಹೇಗೆ ಆರ್ಸಿಬಿಗೆ ವಿರಾಟ್ ಕೊಹ್ಲಿ ಅನಿವಾರ್ಯನೋ ಹಾಗೇ ಸಿಎಸ್‌ಕೆಗೆ ಧೋನಿ ಕೂಡ ಅನಿವಾರ್ಯ. ಮ್ಯಾನೇಜ್‌ಮೆಂಟ್‌ನ ಹಣ ಮತ್ತು ಬ್ರಾಂಡ್ ವ್ಯಾಲ್ಯೂ ಲೆಕ್ಕಚಾರದ ಪ್ರಕಾರ ಧೋನಿ ಇನ್ನೇರಡು ವರ್ಷ ಆಡಿದ್ರೂ ಅಚ್ಚರಿ ಏನಿಲ್ಲ. ಅದು ಏನೇ ಇರಲಿ, ಧೋನಿಯ ನಿರ್ಧಾರವನ್ನು ಪ್ರಶ್ನೆ ಮಾಡುವ ಹಾಗಿಲ್ಲ. ಸ್ವತಃ ಧೋನಿ ಹೇಳುವಂತೆ ಸಿಎಸ್‌ ತಂಡ ನನ್ನದು. ಆಡುವುದು ಯಾವಾಗ ಬೇಡ ಅನ್ನಿಸುತ್ತದೆಯೋ ಆವತ್ತು ನಿವೃತ್ತಿಯಾಗುತ್ತೇನೆ ಎಂದು ಹೇಳಿದ ಮೇಲೆ ಧೋನಿಯ ನಿವೃತ್ತಿಯ ಮೇಲೆ ಒತ್ತಡ ಹೇರುವ ರೈಟ್ಸ್ ನಮಗಿಲ್ಲ. ಅಷ್ಟಕ್ಕೂ ಧೋನಿ ಸಿಎಸ್‌ ತಂಡವನ್ನು ಐದು ಬಾರಿ ಚಾಂಪಿಯನ್ಸ್ ಪಟ್ಟಕ್ಕೇರಿಸಿದ್ದ ಕ್ಯಾಪ್ಟನ್. ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಸಿಎಸ್‌ಕೆ ಮುಂಚೂಣಿಯಲ್ಲಿದೆ. ಆದ್ರೆ ಧೋನಿಯ ನಂತ್ರ ಮುಂದಿನ ಉತ್ತರಾಧಿಕಾರಿ ಯಾರು ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಧೋನಿ ನಾಯಕತ್ವ ಕೆಳಗಿಳಿದ ನಂತ್ರ ರವೀಂದ್ರ ಜಡೇಜಾ ನಾಯಕತ್ವ ವಹಿಸಿದ್ರೂ ಕೊನೆ ಕ್ಷಣದಲ್ಲಿ ಧೋನಿಯೇ ನಾಯಕತ್ವ ವಹಿಸಿಕೊಳ್ಳಬೇಕಾಯ್ತು. ಹಾಗೇ ಋತುರಾಜ್‌ ಗಾಯಕ್ವಾಡ್ ಅಂತೂ ಧೋನಿಯ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗಿತ್ತು. ಇದೀಗ ಮತ್ತೆ ಸಿಎಸ್‌ಕೆ ತಂಡವನ್ನು ಧೋನಿಯೇ ಮುನ್ನಡೆಸಬೇಕಾಯ್ತು.

ಅಷ್ಟಕ್ಕೂ ಧೋನಿ ಇಲ್ಲದಿದ್ರೆ ಸಿಎಸ್‌ಕೆ ತಂಡವೇ ಇಲ್ಲ. ಕ್ರಿಕೆಟ್ ಜಗತ್ತಿನಲ್ಲಿ ಪಂದ್ಯ ಗೆಲ್ಲಲು ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿದ್ದ ಧೋನಿ ತನ್ನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಯಾಕೆ ವಿಫಲರಾಗುತ್ತಿದ್ದಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

mahendra singh dhoni :  ಒಂದಂತೂ ಸತ್ಯ.. ಸಿಎಸ್‌ ತಂಡ ತನ್ನ ಭವಿಷ್ಯದ ಬಗ್ಗೆ ಚಿಂತೆ ಮಾಡ್ತಾ ಇಲ್ಲ. ಧೋನಿಯಂತೆ ಸುದೀರ್ಘ ನಾಯಕತ್ವ ನೀಡುವ ಯೋಚನೆಯನ್ನು ಕೂಡ ಮಾಡ್ತಾ ಇಲ್ಲ. ಟೂರ್ನಿಯ ಮಧ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಿಕೊಳ್ಳುವ ಪರಿಪಾಠವನ್ನು ಸಿಎಸ್‌ಕೆ ಯಾಕೆ ಮಾಡ್ತಾ ಇದೆ. ಧೋನಿ ಬಿಟ್ಟು ತಂಡದಲ್ಲಿ ಬೇರೆ ಯಾರಿಗೂ ನಾಯಕತ್ವದ ಗುಣಗಳು ಇಲ್ವಾ..? ಟೀಮ್ ಇಂಡಿಯಾದ ಭವಿಷ್ಯದ ಬಗ್ಗೆ ಯೋಚನೆ ಮಾಡಿದ್ದ ಧೋನಿ ಸಿಎಸ್‌ಕೆ ತಂಡದ ಭವಿಷ್ಯದ ಬಗ್ಗೆ ಯಾಕೆ ಯೋಚನೆ ಮಾಡ್ತಾ ಇಲ್ಲ…?

 

                                                                                                                                                                                                                                                                                                        ಸನತ್ ರೈ

Share This Article
Leave a Comment

Leave a Reply

Your email address will not be published. Required fields are marked *