KARNATAKA NEWS/ ONLINE / Malenadu today/ SHIVAMOGGA / Apr 23, 2023 GOOGLE
ಶಿವಮೊಗ್ಗ / #karnataka election 2023/ ರಾಜ್ಯ ರಾಜಕಾರಣದ ಶಕ್ತಿಕೇಂದ್ರ ಶಿವಮೊಗ್ಗ ಜಿಲ್ಲೆಯಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ ಘಟಾನುಘಟಿ ನಾಯಕರುಗಳೇ ಸೋಲನ್ನು ಕಂಡಿದ್ರು..ಸೋತು ಗೆದ್ದವರು ಯಾರು ಗೊತ್ತಾ? ಈ ವಾರದ ಪ್ಲ್ಯಾಶ್ ಬ್ಯಾಕ್ನಲ್ಲಿ 2008 ಚುನಾವಣಾ ಅಖಾಡವನ್ನು ವಿವರಿಸುವ ಪ್ರಯತ್ನ ಮಾಡುತ್ತೇವೆ.
2008 ರ ವಿಧಾನಸಭಾ ಚುನಾವಣೆ
ಶಿವಮೊಗ್ಗ ಜಿಲ್ಲೆಯಲ್ಲಿ 2008 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಿರಿಯ ರಾಜಕೀಯ ನಾಯಕರೇ ನೆಲಕಚ್ಚಿದ್ರು. ಅಂದಿನ, ಜನಾದೇಶಕ್ಕೆ ಅವರೆಲ್ಲಾ ತಲೆಬಾಗಿದ್ರು. ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಐದು ಸ್ಥಾನಗಳನ್ನು ಪಡೆದು ಜಯಭೇರಿ ಭಾರಿಸಿತ್ತು.
ದಿಗ್ಗಜರ ಸೋಲು
ಆದರೆ ರಾಜ್ಯರಾಜಕಾರಣದ ದಿಗ್ಗಜರು ಸೋಲನುಭವಿಸಿದ್ರು. ಸಾಗರದಲ್ಲಿ ಕಾಂಗ್ರೆಸ್ನಿಂದ ಕಾಗೋಡು ತಿಮ್ಮಪ್ಪ (kagodu timmappa),ತೀರ್ಥಹಳ್ಳಿಯಲ್ಲಿ ಬಿಜೆಪಿಯ ಆರಗ ಜ್ಞಾನೇಂದ್ರ (araga jnanendra), ಶಿಕಾರಿಪುರದಲ್ಲಿ ಸಮಾಜವಾದಿ ಪಾರ್ಟಿಯಿಂದ ಎಸ್.ಬಂಗಾರಪ್ಪ (S bangarappa) ಹಾಗು ಸೊರಬದಲ್ಲಿ ಕಾಂಗ್ರೆಸ್ನಿಂದ ಕುಮಾರ್ ಬಂಗಾರಪ್ಪ (kumar bangarappa )ಹಾಗು ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಮಧುಬಂಗಾರಪ್ಪ (madhu bangarappa),ಶಿವಮೊಗ್ಗ ಗ್ರಾಮಾಂತರ ಪ್ರದೇಶಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಕರಿಯಣ್ಣ (kariyanna ) ಸೋಲನುಭವಿಸಿದ್ದರು
ಬಿಎಸ್ವೈ ಎದುರು ಕಣಕ್ಕಿಳಿದಿದ್ದ ಎಸ್.ಬಂಗಾರಪ್ಪ
ಶಿಕಾರಿಪುರದಲ್ಲಿ ಬಿ.ಎಸ್ ಯಡಿಯೂರಪ್ಪರ ಎದರು ಸಮಾಜವಾದಿ ಪಕ್ಷದಿಂದ ಬಂಗಾರಪ್ಪ ಸ್ಪರ್ಧೆಗಿಳಿದ್ದರು. ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿತ್ತು. ಸಮಾಜವಾದಿ ಪಾರ್ಟಿಯ ಮುಲಾಯಂ ಸಿಂಗ್ ಯಾದವ್ (mulayam sing yadav) ಜಯಪ್ರದಾ ಸ್ಟಾರ್ ಪ್ರಚಾರಕರಾಗಿ ಆಗಮಿಸಿದ್ದರು.
ಬಂಗಾರಪ್ಪನವರಿಗೆ ಪೆಟ್ಟುಕೊಡಲು, ಬಿ.ಎಸ್ ಯಡಿಯೂರಪ್ಪ ರಣತಂತ್ರ ರೂಪಿಸಿದ್ರು. ಬಂಗಾರಪ್ಪರನ್ನು ಕಟ್ಟಿಹಾಕಲು ಅವರು ಆಯ್ಕೆ ಮಾಡಿಕೊಂಡ ಕ್ಷೇತ್ರಗಳಲ್ಲಿ ಸಾಗರ ಹಾಗು ಸೊರಬ ಪ್ರಮುಖವಾಗಿದ್ದವು.
ಶಿಷ್ಯಂದಿರಿಂದಲೇ ಚದುರಂಗದ ಆಟ
ಬಂಗಾರಪ್ಪನವರ ನೆರಳಲ್ಲೆ ರಾಜಕೀಯ ನೆಲೆಕಂಡಿದ್ದ ಸಾಗರದ ಬೇಳೂರು ಗೋಪಾಲಕೃಷ್ಣ ಹಾಗು ಸೊರಬದ ಹರತಾಳು ಹಾಲಪ್ಪನವರನ್ನು ಕ್ಷೇತ್ರಗಳಲ್ಲಿ ಗೆಲ್ಲಿಸಿಯೇ ತೀರುವುದಾಗಿ ಯಡಿಯೂರಪ್ಪ ಪಣತೊಟ್ಟಿದ್ದರು. ಬಂಗಾರಪ್ಪರವರ ನೆಚ್ಚಿನ ಶಿಷ್ಯರನ್ನೇ ಅಖಾಡಕ್ಕಿಳಿಸಿ ದೊಡ್ಡ ಚೆಕ್ ಮೇಟ್ ಇಟ್ಟಿದ್ರು.
ಮೊದಲೇ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಯಡಿಯೂರಪ್ಪರಿಗಾದ ಅನ್ಯಾಯದ ಅನುಕಂಪ ಕ್ಷೇತ್ರದ ಜನರಲ್ಲಿ ಹಸಿರಾಗಿ ಉಳಿದಿತ್ತು. ಮುಂದಿನ ಮುಖ್ಯಮಂತ್ರಿ ಎಂಬ ಟ್ಯಾಗ್ ಲೈನ್ ಯಡಿಯೂರಪ್ಪರ ಗೆಲುವಿಗೆ ಪೂರಕ ವಾತಾವರಣ ಸೃಷ್ಟಿಯಾಗಿತ್ತು.
ಎಸ್.ಬಂಗಾರಪ್ಪ ಕ್ಷೇತ್ರದಲ್ಲಿ ಮಿಂಚಿನ ಸಂಚಾರವನ್ನೇ ಮಾಡಿದರೂ ಸಹ ಶಿಕಾರಿಪುರದಲ್ಲಿ ಮತದಾರರು ಯಡಿಯೂರಪ್ಪರ ಮೇಲೆ ಅನುಕಂಪ ಹೊಂದಿದ್ದರು.
ಸೊರಬದಲ್ಲಿ ಗೆದ್ದ ಹಾಲಪ್ಪ
ಬಂಗಾರಪ್ಪರ ಶಿಕಾರಿಪುರದ ಸ್ಪರ್ದೆ ಸೊರಬದಲ್ಲಿ ಬಿಜೆಪಿ ಗೆಲುವುವಿಗೆ ಕಾರಣವಾಯಿತೆಂದೇ ಹೇಳಬಹುದು. ಸೊರಬದಲ್ಲಿ ಲಿಂಗಾಯಿತ ಮತಗಳು ಚಾಚುತಪ್ಪದೆ ಬಿಜೆಪಿಗೆ ಫಲಿಸಿತ್ತು. ಪರಿಣಾಮ ಹರತಾಳು ಹಾಲಪ್ಪ 21,053 ಮತಗಳ ಅಂತರದ ಗೆಲುವು ಸಾಧಿಸಿದ್ರು. ಅಪ್ಪ ಮಕ್ಕಳ ದ್ವೇಷ ರಾಜಕಾರಣದಿಂದ ಕ್ಷೇತ್ರದ ಮತದಾರರು ಬೇಸತ್ತಿದ್ದರು.
ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಕುಮಾರ್ ಬಂಗಾರಪ್ಪ 32,499 ಮತಗಳನ್ನು ಪಡೆದರೆ,ತಂದೆಯ ವರ್ಚಸ್ಸಿದ್ಯಾಗ್ಯೂ ಸಮಾಜವಾದಿಯಿಂದ ಸ್ಪರ್ಧಿಸಿದ್ದ ಮಧು ಬಂಗಾರಪ್ಪ 31,135 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ರು.
ಸಾಗರದಲ್ಲಿ ಮಾವನಿಗೆ ಸೋಲು, ಅಳಿಯನಿಗೆ ಗೆಲುವು
ಸಾಗರದಲ್ಲಿ ಕಾಗೋಡು ತಿಮ್ಮಪ್ಪ ತಮ್ಮ ಅಳಿಯ ಗೋಪಾಲಕೃಷ್ಣ ಬೇಳೂರು ಮುಂದೆ ಅಂದು ಎರಡನೇ ಬಾರಿ ಸೋಲನ್ನು ಕಾಣಬೇಕಾಯಿತು. ಅಂದು ನಡೆದ ಮತ ಎಣಿಕೆಯ.ಮೊದಲ 8 ಸುತ್ತುಗಳಲ್ಲಿ ಮುನ್ನಡೆಯಿದ್ದ ಕಾಗೋಡು ತಿಮ್ಮಪ್ಪ ನಂತರದ ಎಣಿಕೆ ಸುತ್ತುಗಳಲ್ಲಿ ಹಿನ್ನಡೆ ಅನುಭವಿಸಿದರು.
ನಂತರದ 6 ಸುತ್ತುಗಳಲ್ಲಿ ಬಿಜೆಪಿಯ ಗೋಪಾಲಕೃಷ್ಣ ಬೇಳೂರು ಮುನ್ನಡೆ ಸಾಧಿಸಿ 2,845 ಮತಗಳ ಅಂತರದಿಂದ ಗೆಲುವು ಕಂಡಿದ್ದರು.
ತೀರ್ಥಹಳ್ಳಿಯಲ್ಲಿ ಗೆದ್ದ ಕಿಮ್ಮನೆ
ತೀರ್ಥಹಳ್ಳಿ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿದ್ದ ಆರಗಜ್ಞಾನೇಂದ್ರ 2008 ರ ಚುನಾವಣೆಯಲ್ಲಿ ಸೋಲು ಕಂಡಿದ್ರು .ಸತತ ಮೂರು ಬಾರಿ ಗೆಲುವು ಕಂಡಿದ್ದ ಆರಗಾ ಜ್ಞಾನೇಂದ್ರ ರಿಂದ.ಜನ ಬದಲಾವಣೆ ಬಯಸಿದ್ರು.
ಸತತ ಸೋಲು ಕಂಡಿದ್ದ ಕಿಮ್ಮನೆ ರತ್ನಾಕರ್ ರಿಗೆ ,ಅನುಕಂಪದ ಅಲೆ ಸೃಷ್ಟಿಯಾಗಿತ್ತು. ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಕಿಮ್ಮನೆ ರತ್ನಾಕರ್ 3826 ಮತಗಳ ಅಂತರದಿಂದ ಗೆಲುವು ಸಾಧಿಸಿದ್ರು.
ಗ್ರಾಮಾಂತರದಲ್ಲಿ ಬಿಜೆಪಿ ಉದಯ
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದ ಕಾಂಗ್ರೆಸ್ನ ಕರಿಯಣ್ಣ ಅಂದು ಬಿಜೆಪಿ ಮುಂದೆ ಹೀನಾಯ ಸೋಲನ್ನು ಅನುಭವಿಸಿದ್ರು. ಬಿಜೆಪಿ ಪರ ಅಲೆ ಗ್ರಾಮೀಣ ಭಾಗದಲ್ಲಿದ್ದು ಬಿಜೆಪಿಯ ಕೆ.ಜಿ ಕುಮಾರಸ್ವಾಮಿ 24,265 ಮತಗಳ ಅಂತರದಿಂದ ಗೆಲವು ಕಂಡಿದ್ರು.
ಒಟ್ಟಿನಲ್ಲಿ ಜಿಲ್ಲೆಯಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳ ಪ್ರಮುಖ ನಾಯಕರು ಸೋಲನ್ನು ಕಂಡಿದ್ದು,ಅಚ್ಚರಿಯಾಗಿತ್ತು .
ಜನರ ತೀರ್ಮಾನವನ್ನು ಈ ಎಲ್ಲಾ ನಾಯಕರು ಮುಕ್ತ ಕಂಠದಿಂದ ಸ್ವಾಗತಿಸಿದ್ದು ಕೂಡ ವಿಶೇಷವಾಗಿತ್ತು .ಮತದಾರ ಪ್ರಭುವಿನ ತೀರ್ಮಾನ ಏನುಬೇಕಾದರೂ ಮಾಡಬಲ್ಲದು ಎಂಬುದಕ್ಕೆ ಅಂದಿನ ಫಲಿತಾಂಶ ಉತ್ತಮ ಉದಾಹರಣೆಯಾಗಿತ್ತು. .
Malenadutoday.com Social media
