Dharmasthala ಶಿವಮೊಗ್ಗ : ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಹಾಗೂ ಹೆಗ್ಗಡೆ ಕುಟುಂಬಕ್ಕೆ ಕಳಂಕ ತರಲು ಒಳಸಂಚು ನಡೆಸುತ್ತಿರುವವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನಾ ಮೆರವಣಿಗೆಯು ಸೀನಪ್ಪ ಶೆಟ್ಟಿ ವೃತ್ತದಿಂದ ಆರಂಭಗೊಂಡು ಜಿಲ್ಲಾಧಿಕಾರಿ ಕಚೇರಿ ಆವರಣದವರೆಗೆ ಸಾಗಿತು. ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ವೀರೇಂದ್ರ ಹೆಗ್ಗಡೆಯವರ ಭಾವಚಿತ್ರಗಳನ್ನು ಹಿಡಿದು, ಕೇಸರಿ ಬಾವುಟಗಳನ್ನು ಹಾರಿಸಿ, ಸಂಚು ರೂಪಿಸಿದವರನ್ನು ಬಂಧಿಸಿ ಎಂದು ಘೋಷಣೆಗಳನ್ನು ಕೂಗಿದರು.
Dharmasthala ದೇವಸ್ಥಾನವನ್ನು ವಶಕ್ಕೆ ಪಡೆಯಲು ಯತ್ನಿಸಿದರೆ, ಆ ಸರ್ಕಾರವೇ ಇರುವುದಿಲ್ಲ : ಕೆ ಎಸ್ ಈಶ್ವರಪ್ಪ
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಅರಣ್ಯ ಇಲಾಖೆ ಭೂಮಿಯಲ್ಲಿ ಶವ ಹೂತಿರುವುದಾಗಿ ಹೇಳುತ್ತಿರುವ ವ್ಯಕ್ತಿಯನ್ನು ಇನ್ನೂ ಬಂಧಿಸಲಿಲ್ಲ. ಇದು ಅರಣ್ಯ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು. ಸರ್ಕಾರ ಹಿಂದೂ ಸಮಾಜವನ್ನು ಕಡೆಗಣಿಸುತ್ತಿದೆ. ಮಂಜುನಾಥನ ಭಕ್ತರು ಈಗ ಜಾಗೃತರಾಗಿದ್ದಾರೆ. ಸರ್ಕಾರ ದೇವಸ್ಥಾನವನ್ನು ವಶಕ್ಕೆ ಪಡೆಯಲು ಯತ್ನಿಸಿದರೆ, ಆ ಸರ್ಕಾರವೇ ಇರುವುದಿಲ್ಲ” ಎಂದು ಎಚ್ಚರಿಸಿದರು.
ಎಡಪಂಥೀಯರು ದೇವಸ್ಥಾನವನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ. ಆದರೆ ವೀರೇಂದ್ರ ಹೆಗ್ಗಡೆಯವರು ಹಲವಾರು ಸಮಾಜಸೇವೆಗಳನ್ನು ಮಾಡುತ್ತಿದ್ದಾರೆ. ಬಡವರ ಮತಾಂತರವನ್ನು ತಡೆದಿದ್ದಾರೆ, ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದ್ದಾರೆ, ಕೆರೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಅವರಿಗೆ ಸಹಿಸಲಾಗುತ್ತಿಲ್ಲ. ಕೂಡಲೇ ಎಸ್ಐಟಿ ತನಿಖೆ ನಿಲ್ಲಿಸಿ,ಎಂದರು.
Dharmasthala ಅನಾಮಿಕ ವ್ಯಕ್ತಿಗೆ ಮಂಪರು ಪರೀಕ್ಷೆ ನಡೆಸಿ : ಕೆ.ಬಿ. ಪ್ರಸನ್ನಕುಮಾರ್
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, “ಧರ್ಮಸ್ಥಳ ಮಂಜುನಾಥ ಸ್ವಾಮಿ ನಮ್ಮ ಆರಾಧ್ಯ ದೈವ. ಆದರೆ ಕಳೆದ ಎರಡು ತಿಂಗಳಿಂದ ಅನಾಮಿಕ ವ್ಯಕ್ತಿಯೊಬ್ಬರು ಆಡುತ್ತಿರುವ ಆಟ ಮಿತಿಮೀರಿದೆ. ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಈ ಬಗ್ಗೆ ಮಧ್ಯಂತರ ಹೇಳಿಕೆ ನೀಡಬೇಕಿತ್ತು. ಅನಾಮಿಕ ವ್ಯಕ್ತಿಗೆ ಮಂಪರು ಪರೀಕ್ಷೆ ನಡೆಸಿ ನಂತರ ತನಿಖೆ ಮುಂದುವರಿಸಬೇಕು. ವೀರೇಂದ್ರ ಹೆಗ್ಗಡೆ ಕುಟುಂಬಕ್ಕೆ ತೊಂದರೆ ನೀಡುತ್ತಿರುವವರ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ವೇದಿಕೆಯ ಪ್ರಮುಖರಾದ ಶಾಂತ ಸುರೇಂದ್ರ ಅವರು ಮಾತನಾಡಿ, “ಧರ್ಮಸ್ಥಳದ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ‘ಮೂಳೆ ಸಿಗುತ್ತದೆ’ ಎಂದು ಹೇಳಿ ರಾಜ್ಯ ಸರ್ಕಾರದ ಎಸ್ಐಟಿ ತನಿಖೆಗೆ ಪ್ರತಿ ದಿನ 1.5 ಲಕ್ಷ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ಇದು ನಮ್ಮ ತೆರಿಗೆ ಹಣದ ದುರುಪಯೋಗ. ಅಂತಹ ಪಿತೂರಿ ನಡೆಸುತ್ತಿರುವವರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಪ್ರತಿಭಟನೆಗೆ ಹುಂಚದ ಶ್ರೀ ಹೊಂಬುಜ ಜೈನ ಮಠ, ಶಿವಮೊಗ್ಗ ಜೈನ ಮಿಲನ್ ಮತ್ತು ದಿಗಂಬರ ಜೈನ ಸಂಘ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿದವು. ಪ್ರತಿಭಟನಾಕಾರರು ಯೂಟ್ಯೂಬರ್‌ಗಳು ಸೇರಿದಂತೆ ಅನಾಮಿಕ ವ್ಯಕ್ತಿ, ಗಿರೀಶ್ ಮಟ್ಟಣ್ಣನವರ್ ಮತ್ತು ಮಹೇಶ್ ತಿಮರೋಡಿ ವಿರುದ್ಧ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು . ಈ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಸೇರಿದಂತೆ ಹಲವು ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.



