ಅಡಿಕೆ ಧಾರಣೆ ನಾಗಾಲೋಟ, ರೇಟ್​ ಹೆಚ್ಚಳಕ್ಕೆ ಕಾರಣವೇನು

prathapa thirthahalli
Prathapa thirthahalli - content producer

Areca Nut Price Hike : ಅಯ್ಯೋ ಏನೋ ಇದು ಹಿಂಗ್ ಏರ್ತಾ ಇದೇ, ಹಿಂಗ್ ಏರ್ತಾ ಇದ್ಯಾಲ ಇದು ಹಿಂಗೆ ಇರ್ತದಾ ಅತ್ವಾ ಇಳಿತದನಾ, ಈ ಟೈಮಲ್ ಈತರ ಏರ್ಸದ್ರೆ ಕಥೆ ಎಂತದಾ ಇದು ಪ್ರಸ್ತುತ ಮಲೆನಾಡು ಭಾಗದಲ್ಲಿ ರೈತರ ಬಾಯಲ್ಲಿ ಕೇಳಿ ಬರುತ್ತಿರುವ ಮಾತು. ಅದಕ್ಕೆ ಕಾರಣ  ಕುದರೆಯ ವೇಗದಲ್ಲಿ ಏರುತ್ತಿರುವ ಅಡಿಕೆ ರೇಟು.

ಹೌದು, ಕಳೆದ ಎಲ್ಲಾ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅಡಿಕೆ ಧಾರಣೆಯು ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ. ಎಲೆಚುಕ್ಕೆ ರೋಗ, ಅತಿಯಾದ ಮಳೆ ಸೇರಿದಂತೆ ಅಡಿಕೆಗೆ ಬಾಧಿಸುವ ಕೊಳೆ ರೋಗದಂತಹ ಸಮಸ್ಯೆಗಳ ನಡುವೆ ಫಸಲು ಗಣನೀಯವಾಗಿ ಕಡಿಮೆಯಾದ ಕಾರಣ ಬೆಲೆ ಹೆಚ್ಚಳವಾಗಿದೆ. ಯಾವಾಗ ಪೂರೈಕೆ ಕಡಿಮೆಯಾಗುತ್ತದೆಯೋ, ಆಗ ಬೇಡಿಕೆ ಹೆಚ್ಚಾಗುತ್ತದೆ  ಎಂಬ ಅರ್ಥಶಾಸ್ತ್ರದ ನಿಯಮದಂತೆ ಅಡಿಕೆಯ ಮಾರುಕಟ್ಟೆಯಲ್ಲಿಯೂ ಇದೇ ನಿಯಮ ಮುಂದುವರಿದಿದ್ದು, ಪೂರೈಕೆ ಕೊರತೆಯಿಂದ ಬೆಲೆ ಗಣನೀಯವಾಗಿ ಏರಿಕೆ ಕಂಡಿದೆ.

- Advertisement -

Areca Nut Price Hike ಅಡಿಕೆ ಬೆಲೆ ಹೆಚ್ಚಳಕ್ಕೆ ಕಾರಣವೇನು

ಅಡಿಕೆಗೆ ಬೆಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಏರಿಕೆಗೆ ಕಾರಣವೇನು ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡಿದೆ. ಇದಕ್ಕೆ ಪ್ರಮುಖ ಕಾರಣ, ಅಡಿಕೆ ಮಂಡಿಗಳಲ್ಲಿ ಅಡಿಕೆ ದಾಸ್ತಾನು ಇಲ್ಲದಿರುವುದು. ಮಂಡಿ ಮಾಲೀಕರ ಪ್ರಕಾರ, ಸಾಮಾನ್ಯವಾಗಿ ಪ್ರತಿ ವರ್ಷ ಪ್ರತಿ ಮಂಡಿಯಲ್ಲಿ ಕನಿಷ್ಠ ಎಂದರೂ 20,000 ರಿಂದ 25,000 ಕ್ವಿಂಟಾಲ್ ಅಡಿಕೆ ಶೇಖರಣೆಯಾಗುತ್ತದೆ. ಆದರೆ, ಈ ಬಾರಿ 1,000 ಕ್ವಿಂಟಾಲ್ ಅಡಿಕೆ ಸಹ ಶೇಖರಣೆಯಾಗಿಲ್ಲ.

ಇದಕ್ಕೆ ಮುಖ್ಯ ಕಾರಣ, ಈ ಬಾರಿ ಅಡಿಕೆಗೆ ಬಾಧಿಸಿರುವ ರೋಗಗಳು. ಹೌದು, ಕೊಳೆ ರೋಗ ಸೇರಿದಂತೆ ಇತರ ರೋಗಗಳಿಂದಾಗಿ ಅಡಿಕೆ ಇಳುವರಿ ಬಹಳಷ್ಟು ಕಡಿಮೆಯಾಗಿದೆ. ಮೊದಲೇ ಅಡಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ರೈತರು, ರೋಗದ ಕಾರಣದಿಂದ ಮತ್ತು ಸಾಲದ ಸುಳಿಗೆ ಸಿಲುಕಿ, ಅನಿವಾರ್ಯ ಕಮಿಟ್‌ಮೆಂಟ್‌ಗಳಿಂದಾಗಿ ಮೊದಲೇ ಸಿಕ್ಕಿದ ರೇಟ್‌ಗೆ ಅಡಿಕೆಯನ್ನೆಲ್ಲಾ ಮಾರಾಟ ಮಾಡಿಬಿಟ್ಟಿದ್ದರು. ಹಾಗೆಯೇ, ಹೆಚ್ಚು ಅಡಿಕೆ ಬೆಳೆಯುವ ದೊಡ್ಡ ಬೆಳೆಗಾರರು, ದರ ಮತ್ತಷ್ಟು ಹೆಚ್ಚಾಗಬಹುದು ಎಂಬ ಕಾರಣದಿಂದ ತಮ್ಮ ಅಡಿಕೆಯನ್ನು ಮನೆಯಲ್ಲಿಯೇ ದಾಸ್ತಾನು ಮಾಡಿ ಇಟ್ಟಿದ್ದಾರೆ. ಈ ಎಲ್ಲ ಕಾರಣಗಳಿಂದ ಮಂಡಿಗಳಿಗೆ ಅಡಿಕೆಯ ಆವಕ ಕಡಿಮೆಯಾಗಿದೆ.ಆದರೆ, ಈಗ ಏರುತ್ತಿರುವ ರೇಟಿನಿಂದಾಗಿ ಈಗಾಗಲೇ ಅಡಿಕೆಯನ್ನು ಕಡಿಮೆ ಬೆಲೆಗೆ ಮಾರಿದ ರೈತರು ಕೈ ಕೈ ಹಿಸುಕಿಕೊಳ್ಳುತ್ತಿದ್ದರೆ, ದಾಸ್ತಾನು ಇಟ್ಟ ರೈತರಿಗೆ ಇದು ಅನುಕೂಲ ತಂದಿದೆ.

ಈ ಸಂದರ್ಭದಲ್ಲಿ ಅಡಿಕೆ ದರ ಏರಿಕೆಯಾಗುತ್ತಿರುವುದು ಮಲೆನಾಡು ಸೇರಿದಂತೆ ಅನೇಕ ಭಾಗಗಳ ರೈತರಿಗೆ ಸಂತೋಷದೊಂದಿಗೆ ಆಕ್ರೋಶಕ್ಕೂ ಕ ಕಾರಣವಾಗಿದೆ ಎಂದು ಹೇಳಬಹುದು. ಏಕೆಂದರೆ, ಅನೇಕ ಪ್ರದೇಶಗಳಲ್ಲಿ ಈಗ ತಾನೇ ಮೊದಲ ಕೊಯ್ಲು ಪ್ರಾರಂಭವಾಗಿದೆ. ರೈತರು ಆ ಅಡಿಕೆಯನ್ನು ಸಂಸ್ಕರಿಸಿ ಮಾರುಕಟ್ಟೆಗೆ ಮಾರಾಟ ಮಾಡಲು ಇನ್ನೂ ಅನೇಕ ದಿನಗಳು ಬೇಕಾಗುತ್ತವೆ. ಆದರೆ, ಈಗ ಅಡಿಕೆ ಈ ರೀತಿ ಗರಿಷ್ಠ ದರದಲ್ಲಿ ಇರುವುದರಿಂದ, ರೈತರು ಮಾರಾಟ ಮಾಡುವ ಸಮಯದಲ್ಲಿ ಈಗ ಇರುವ ದರ ಕಡಿಮೆಯಾಗುವ ಸಂಭವವಿರುತ್ತದೆ. ಇದರಿಂದಾಗಿ, ಈಗಿನ ದರ ಏರಿಕೆಯು ಅವೈಜ್ಞಾನಿಕ ಎಂಬುದು ಅನೇಕ ಬೆಳೆಗಾರರ ಅಭಿಪ್ರಾಯವಾಗಿದೆ.

Areca Nut Price Hike ಈ ಬಾರಿಯ ಅಡಿಕೆ ದರದ ವಿವರ

2025ರ ಆರಂಭದ ಜನವರಿ ತಿಂಗಳಿನಲ್ಲಿ ರಾಶಿ ಅಡಿಕೆಯ ಬೆಲೆ ಕ್ವಿಂಟಾಲ್‌ಗೆ 35,000 ದಿಂದ 51,000 ರೂಪಾಯಿಗಳ ವರೆಗೆ ಇತ್ತು.

ಫೆಬ್ರವರಿ ತಿಂಗಳಿನಲ್ಲಿ ದರವು 52,000 ರೂಪಾಯಿಗಳ ಗಡಿಯನ್ನು ದಾಟಿತು.

ಮಾರ್ಚ್ ತಿಂಗಳಿನಲ್ಲಿ ಮತ್ತೆ 2,000 ರೂಪಾಯಿ ಇಳಿಕೆ ಕಂಡು, 50,000 ರೂಪಾಯಿಗಳ ಆಸುಪಾಸಿನಲ್ಲಿ ಅಡಿಕೆ ದರ ಸ್ಥಿರವಾಯಿತು.

ಏಪ್ರಿಲ್ ಕೊನೆಯಲ್ಲಿ ಕ್ವಿಂಟಾಲ್ ಅಡಿಕೆ ದರ 58,000 ರೂಪಾಯಿಗಳನ್ನು ದಾಟಿತು.

ಮೇ ತಿಂಗಳಿನಲ್ಲೂ ಅದೇ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿತು.

ಆದರೆ, ಜೂನ್ ತಿಂಗಳ ಕೊನೆಯಲ್ಲಿ ಮತ್ತೆ 1,000 ರೂಪಾಯಿ ಇಳಿಕೆ ಕಂಡು, ಕ್ವಿಂಟಾಲ್ ರಾಶಿ ಅಡಿಕೆಯ ಧಾರಣೆ 57,000 ರೂಪಾಯಿಗಳಿಗೆ ಬಂದು ನಿಂತಿತು.

ಜುಲೈ ತಿಂಗಳಾಂತ್ಯದಲ್ಲೂ ಬೆಲೆಯಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಆಗಲಿಲ್ಲ.

ಆಗಸ್ಟ್ ತಿಂಗಳಿನಲ್ಲಿ ಅಲ್ಪ ಚೇತರಿಕೆ ಕಂಡ ಅಡಿಕೆಯ ಧಾರಣೆ, 60,000 ರೂಪಾಯಿಗಳ ಗಡಿಯನ್ನು ದಾಟುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತು.

ಸೆಪ್ಟೆಂಬರ್ ತಿಂಗಳಿನಲ್ಲಿ ಮತ್ತೆ ಏರಿಕೆ ದಾಖಲಿಸಿ, ಕ್ವಿಂಟಾಲ್ ಅಡಿಕೆ ದರ 64,699 ರೂಪಾಯಿ ತಲುಪಿತು.

ಇಂದಿನ ಶಿವಮೊಗ್ಗದ ರಾಶಿ ಅಡಿಕೆಯ ದರ ₹47,099 – ₹67,000 ವರೆಗೆ ಇದೆ

Share This Article
Leave a Comment

Leave a Reply

Your email address will not be published. Required fields are marked *