ಮಹಿಳಾ ಬೋಗಿಯಲ್ಲಿ ಅನ್ನಪೂರ್ಣ ಕೊಲೆ? ರಾಜ್ಯದ ಮೊದಲ ಕೇಸ್ನಲ್ಲಿ ಕುಟುಂಬಸ್ಥರನ್ನು ಕಾಡುತ್ತಿರೋದೇನು?
Annapurna's murder in women's compartment? What is bothering the family in the first case in the state?
Shivamogga | Feb 6, 2024 | ಶಿವಮೊಗ್ಗ ಶಾಂತಮ್ಮ ಲೇಔಟ್ ನಿವಾಸಿಯಾಗಿದ್ದ, ಶಿವಮೊಗ್ಗ ನಗರದಲ್ಲಿ ಹಲವರ ಪರಿಚಯಸ್ಥರಾಗಿದ್ದ, ವಿವಿಧ ಚಟುವಟಿಕೆಗಳ ಸಂಘಟನೆಗಳಿಗೆ ಆತ್ಮೀಯರಾಗಿದ್ದ ಅರಣ್ಯ ಇಲಾಖೆ ಉದ್ಯೋಗಿ ಅನ್ನಪೂರ್ಣ ರವರ ಸಾವಿಗೆ ನ್ಯಾಯ ಸಿಗಬೇಕಿದೆ.
ಶಿವಮೊಗ್ಗದಿಂದ ಬೆಂಗಳೂರುಗೆ ಹೊರಟ್ಟಿದ್ದ ಅವರು ಶಿವಮೊಗ್ಗ-ಯಶವಂತಪುರ ಟ್ರೈನ್ನಲ್ಲಿ ಪ್ರಯಾಣಿಸ್ತಿದ್ದರು. ಮಹಿಳಾ ಬೋಗಿಯಲ್ಲಿ ಪ್ರಯಾಣಿಸಿದ್ದ ಅವರು ಬೆಳಗ್ಗೆ ಬೆಂಗಳೂರು ತಲುಪಿರಲಿಲ್ಲ. ತುಮಕೂರಿನ ಹಿರೇಹಳ್ಳಿ ಬಳಿ ಶವವಾಗಿ ಪತ್ತೆಯಾಗಿದ್ದರು. ಅವರನ್ನ ಟ್ರೈನ್ನಲ್ಲಿ ದರೋಡೆ ಮಾಡಲಾಗಿದೆ ಎಂಬ ಅನುಮಾನವನ್ನ ರೈಲ್ವೆ ಪೊಲೀಸ್ ಇಲಾಖೆಯ ಮೂಲಗಳೇ ಹೇಳುತ್ತಿದೆ. ಆದರೆ ಪ್ರಕರಣದಲ್ಲಿ ಆರೋಪಿಗಳಿನ್ನೂ ಅರೆಸ್ಟ್ ಆಗಿಲ್ಲ.
ವಿಧಿಯಾಟದ ನೋವುಗಳ ನಡುವೆ ಜೀವನೋತ್ಸಾಹ ಕೊರತೆಯಾಗದಂತೆ ಬದುಕಿದ್ದ ಅನ್ನಪೂರ್ಣರನ್ನು ಯಾರೋ ದುಷ್ಕರ್ಮಿಗಳು ಅವರ ಸ್ವಾರ್ಥಕ್ಕಾಗಿ ಕೊಂದಿದ್ದಾರೆ. ಸಾವಿನಲ್ಲೂ ನೋವಿನ, ಯಾತನೀಯ ಸಾವನ್ನ ಅನ್ನಪೂರ್ಣರಿಗೆ ನೀಡಿದ್ದಾರೆ. ಅವರನ್ನ ಹಿಡಿಯದಿದ್ದರೇ ರೈಲ್ವೆ ಇಲಾಖೆಗೆ ಕೆಟ್ಟಹೆಸರು.
ಆ ನಿಟ್ಟಿನಲ್ಲಿ ರೈಲ್ವೆ ಪೊಲೀಸ್ ಇಲಾಖೆ ಗಮನಹರಿಸಬೇಕಿದೆ. ರಾಜ್ಯಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಪೊಲೀಸ್ ಇಲಾಖೆಯು ಪ್ರಕರಣವನ್ನು ಗಮನಿಸಬೇಕಿದೆ. ಇದಕ್ಕಾಗಿ ಅನ್ನಪೂರ್ಣರವರನ್ನು ಬಲ್ಲವರು, ಪರಿಚಯದವರು, ಆತ್ಮೀಯರು, ಸ್ನೇಹಿತರು, ಬಂಧುಗಳು ಜಸ್ಟೀಸ್ ಫಾರ್ ಅನ್ನಪೂರ್ಣ ಅಭಿಯಾನ ಆರಂಭಿಸಿದ್ದಾರೆ. ಪ್ರಕರಣದಲ್ಲಿ ತಾರ್ಕಿಕ ಅಂತ್ಯ ಹಾಗೂ ನೋಂದ ಜೀವಗಳಿಗೆ ನ್ಯಾಯ ಸಿಗುವವರೆಗೂ ಈ ಅಭಿಯಾನ ಮುಂದುವರಿಯಲಿದೆ. ಅಭಿಯಾನದಲ್ಲಿ ಶಿವಮೊಗ್ಗದ ಜನಪ್ರತಿನಿಧಿಗಳು ಸೇರಿದಂತೆ ಹಲವರು ‘ಕೈಜೋಡಿಸುತ್ತಿದ್ದಾರೆ ಇನ್ನೂ ಅನ್ನಪೂರ್ಣರವರ ಕುಟುಂಬಸ್ಥರು ನಡೆದ ಘಟನೆ ಹಾಗೂ ಎದುರಿರುವ ಅನುಮಾನದ ಜೊತೆ ನ್ಯಾಯದ ಆಗ್ರಹಕ್ಕಾಗಿ ಫೇಸ್ಬುಕ್ ನಲ್ಲಿ ಈ ಬಗ್ಗೆ ವಿಸ್ತೃತವಾಗಿ ಬರೆದಿದ್ಧಾರೆ. ಅದರ ಪೂರ್ಣ ರೂಪ ಇಲ್ಲಿದೆ
ಅಪರಾಧಿ ನಾನಲ್ಲ , ಅಪರಾಧ ಎನಗಿಲ್ಲ , ಕಪಟ ಸೂತ್ರಧಾರಿ ಯಾರು ...? ನೀವೇನಾದರೂ ಬಲ್ಲಿರಾ ..?
ಜನವರಿ ೩೧, ೨೦೨೪, ಬುಧವಾರ ಬೆಳಗ್ಗೆ ಸುಮಾರು ಒಂಬತ್ತು ಗಂಟೆಗೆ ಹುಬ್ಬಳ್ಳಿಯಲ್ಲಿರುವ ನಾನು ಎಂದಿನಂತೆ ಕೆಲಸದ ನಿಮಿತ್ತ ನನ್ನ ಕಾರಿನಲ್ಲಿ ನಮ್ಮ ಮನೆಯಿಂದ ನಿರ್ಗಮಿಸಿದೆ. ಎಂದಿನಂತೆ ಶಿವಮೊಗ್ಗೆಯ ನನ್ನ ಅಮ್ಮನಿಗೆ ದೂರವಾಣಿ ಕರೆ ಮಾಡಿದೆ. ನಿತ್ಯ ತಿಂಡಿ - ಕುಶಲೋಪರಿ ಮಾತನಾಡುತ್ತಿದ್ದ ನಾವುಗಳು ಅಂದು ಅದೇನನ್ನು ಮಾತನಾಡಲಿಲ್ಲ .. ಕಾರಣ ನನ್ನ ಸೋದರತ್ತೆ ಅನ್ನಪೂರ್ಣ ರಾನಡೆ ಕಾಣೆಯಾಗಿದ್ದಾರೆಂಬ ಸುದ್ದಿ. ಸೋಮವಾರ , ಜನವರಿ ೩೦ರ ರಾತ್ರಿ ಶಿವಮೊಗ್ಗದಿಂದ ಬೆಂಗಳೂರಿಗೆ ಮಹಿಳಾ ಬೋಗಿಯಲ್ಲಿ ರೈಲಿನಲ್ಲಿ ಪ್ರಯಾಣಿಸಿದ ಆಕೆ ಬೆಳಗ್ಗೆ ೪.೩೦ ಕ್ಕೆ ಯಶವಂತಪುರ ರೈಲು ನಿಲ್ದಾಣದಲ್ಲಿ ಇಳಿಯಲಿಲ್ಲ ... ಮಲ್ಲೇಶ್ವರಂನ ತನ್ನ ಮನೆಯನ್ನೂ ತಲುಪಲಿಲ್ಲ .. !
ನನ್ನ ಚಿಕ್ಕಪ್ಪ ಅಂದರೆ ಅನ್ನಪೂರ್ಣಳ ಅಣ್ಣನೊಬ್ಬರು ಅದೇ ರೈಲಿನಲ್ಲಿ ಸ್ಲೀಪರ್ ಕೋಚ್ನಲ್ಲಿ ಪ್ರಯಾಣಿಸಿದ್ದು, ಅಣ್ಣ- ತಂಗಿ ಜೊತೆಯಲ್ಲಿಯೇ ಪ್ರಯಾಣ ಬೆಳೆಸಿದರು. ಅತ್ತೆಯ ಬಳಿ ಕಾಯ್ದಿರಿಸಿದ ಟಿಕೆಟ್ ಇರಲಿಲ್ಲ .. ಜನರಲ್ ಟಿಕೆಟ್ ಇದ್ದ ಕಾರಣ ಆಕೆ ಮಹಿಳೆಯರಿಗಾಗೇ ಕಾಯ್ದಿರಿಸಿದ ಮಹಿಳಾ ಬೋಗಿಯಲ್ಲಿ ಪ್ರಯಾಣಿಸಲು ಹಿಂಜರಿಯಲಿಲ್ಲ. ಆಕೆ ಹಿಂದೆ ಬಹಳ ಸಲ ಈ ಬೋಗಿಯಲ್ಲಿ ಪ್ರಯಾಣಿಸಿದ್ದಳು, ಜೊತೆಗೆ ತನ್ನ ಬೆಂಗಳೂರಿನ ಮನೆ ಸೇಫಾಗಿ ಸೇರಿದ್ದಳು. ಅಣ್ಣನ ಒತ್ತಾಯಕ್ಕೆ ಮಣಿಯದೆ ಪ್ರಾಮಾಣಿಕವಾಗಿ ಲೇಡೀಸ್ ಬೋಗಿಯನ್ನೇ ಆಯ್ಕೆ ಮಾಡಿಕೊಂಡಳು. ‘ಆಕೆ ಆರಾಮವಾಗಿ ಮಲಗಬಹುದು.. ನಾಳೆಯ ಕಚೇರಿ ಕೆಲಸ ಸುಲಭವಾಗುತ್ತದೆ'ಎಂದು ತನ್ನ ಅಣ್ಣನನ್ನು ಒಪ್ಪಿಸಿದಳು . ರಾತ್ರಿ ಸುಮಾರು ೧೧.೪೫ ಕ್ಕೆ ತನ್ನ ಅಣ್ಣನಿಗೆ ಫೋನಿಸಿ ‘ಗುಡ್ ನೈಟ್ ‘- ಇಲಿ ಎಲ್ಲವು ಆರಾಮವಾಗಿದೆ.. ನಾನು ನಿದ್ರಿಸುತ್ತೇನೆ’ ಎಂದಳು. ರಿಸರ್ವೇಶನ್ ಕೋಚ್ ನಲ್ಲಿದ್ದ ಅಣ್ಣನೂ , ಮಹಿಳಾ ಬೋಗಿಯಲ್ಲಿದ್ದ ತಂಗಿಯು ನಿದ್ರೆಗೆ ಜಾರಿದರು.
೪.೩೦ಗೆ ರೈಲುಗಾಡಿ ಯಶವಂತಪುರ ತಲುಪಿದಾಗ, ಮಹಿಳಾ ಬೋಗಿಯಲ್ಲಿ ಅವರ ತಂಗಿ ಇರುವುದಿಲ್ಲ, ಬ್ಯಾಗ್ಗಳೂ ಇರಿವುದಿಲ್ಲ. ಆಗ ಅನ್ನಪೂರ್ಣಗೆ ಫೋನಿಸಿದರೆ ಆಕೆ ಕರೆ ಸ್ವೀಕರಿಸುತ್ತಿರಲಿಲ್ಲ. ತನ್ನ ತಂಗಿ ಬೆಳಗ್ಗೆ ಕೆಲಸಕ್ಕೆ ಹೋಗಲು ತಡವಾಗುತ್ತದೆ ಎಂದು ರೈಲು ನಿಂತ ಕೂಡಲೇ ಮನೆಗೆ ನಿರ್ಗಮಿಸಿರಬೇಕೆಂದು ಭಾವಿಸಿ ತಾನು ಕತ್ರಿಗುಪ್ಪೆಯಲ್ಲಿರುವ ಇನ್ನೊಂದು ಅಕ್ಕನ ಮನೆಗೆ ತೆರಳಿದರು. ಅಂದು ಅವರಿಗೆ ತಮ್ಮ ಆಪ್ತರೊಬ್ಬರ ವೈಕುಂಠ ಕ್ಕೆ ಬಸವನಗುಡಿಗೆ ಹೋಗಬೇಕಿತ್ತು . ಗಂಟೆ ಎಂಟಾಯಿತು .. ಅನ್ನಪೂರ್ಣ ಮಗ ಪ್ರಣವ್ ಚಿಕ್ಕಪ್ಪನಿಗೆ ಫೋನಿಸಿ ‘ ಅಮ್ಮ ಇನ್ನು ಮನೆಗೆ ಬಂದಿಲ್ಲ ‘ ಎಂದ. ಆಕೆಗಾಗಿ ಮಗ ಪ್ರೀತಿಯಿಂದ ತಯಾರಿಸಿದ ಪುಳಿಯೋಗರೆಯು ಕಾಯುತ್ತಿತ್ತು.
ಚಿಕ್ಕಪ್ಪ, ಅತ್ತೆಯ ಮಗ ಪ್ರಣವ್ ಮತ್ತೆ ಕೆಲವು ಸಂಬಂಧಿಕರ ಹುಡುಗರು ಕೂಡಲೇ ರೈಲುನಿಲ್ದಾಣಕ್ಕೆ ಧಾವಿಸಿ ಪೊಲೀಸರಿಗೆ ವಿಷಯ ತಿಳಿಸಿದರು. ರೈಲು ಆಗಲೇ ಶಿವಮೊಗ್ಗದ ಕಡೆ ಹೊರಟಾಗಿತ್ತು. ಎಲ್ಲ ಸಂಬಂಧಿಕರಿಗೆ ’ಅನ್ನಪೂರ್ಣತ್ತೆ ’ ಮಿಸ್ಸಿಂಗ್ ಎಂದು ಸುದ್ದಿ ಮುಟ್ಟಿತು. ಎಲ್ಲರು ಮೊಬೈಲ್ ಫೋನ್ ಗೆ ಕರೆ ಮಾಡಿದರೆ , ರಿಂಗ್ ಆಗುತ್ತಿತ್ತು .. ಯಾರು ಉತ್ತರಿಸುತ್ತಿರಲಿಲ್ಲ ... !
ಸ್ವಲ್ಪ ಹೊತ್ತಿನಲ್ಲಿ ಪೊಲೀಸರು ‘ ಈಗಷ್ಟೇ ತುಮಕೂರು ಸಮೀಪದ ಹಿರೇಹಳ್ಳಿಯ ರೈಲುಮಾರ್ಗದ ಬಳಿ ಒಂದು ಶವ ಪತ್ತೆಯಾಗಿದೆ, ನೋಡಿ ‘ ಎಂದು ಭಾವಚಿತ್ರ ತೋರಿಸಲು ನನ್ನ ಚಿಕ್ಕಪ್ಪ ಮತ್ತು ಆಕೆಯ ಮಗ ತಬ್ಬಿಬ್ಬಾದರು .. ಮಾತು ಬರಲಿಲ್ಲ .. ಭಾವನೆಗಳು ಬತ್ತಿದವು .. ಒಂದಷ್ಟು ದುಃಖ , ಸಂಕಟ ಉಮ್ಮಳಿಸಿ ಬಂದು ಸಾವಿರ ಪ್ರಶ್ನೆಯ ನಡುವೆ ಮನಸ್ಸು ಮಮ್ಮಲ ಮರುಗಿತು.. ಜರ್ಜರಿತವಾಯಿತು .. ವಾಸ್ತವವೋ - ಕಾಲ್ಪನಿಕವೋ ತಿಳಿಯದಾಯಿತು !
‘ಅನ್ನಪೂರ್ಣ' ಸತ್ಯವಾಗಿಯೂ ಅನ್ನಪೂರ್ಣೆ . ಬೆಂಗಳೂರಿನ ಮಲ್ಲೇಶ್ವರಂನಲ್ಲಿ ’ಅರಣ್ಯ ಭವನ’ ದಲ್ಲಿ stenographer . ಜೀವನದ ಮೇಲೆ ಅಗಾಧ ಪ್ರೀತಿ. ಆಕೆ ಮಹತ್ವಾಕಾಂಕ್ಷಿ . ಪ್ರಾಣಿ- ಪಕ್ಷಿ , ಬಂಧು - ಬಳಗವೆಂದರೆ ವಿಪರೀತ ಪ್ರೀತಿ.. . ಮದುವೆಯು ಆಕೆಯ ಜೀವನದಲ್ಲಿ ಒಂದು mishap ..
ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಗಂಡನನ್ನು ಕಳೆದುಕೊಂಡು ‘ವಿಧವೆ ’ ಎಂದು ಸಮಾಜದಲ್ಲಿ ಹಂಗಿಸಲ್ಪಟ್ಟಳು. ಅಣ್ಣ- ಅತ್ತಿಗೆ, ಅಕ್ಕ- ಭಾವ, ಮುಖ್ಯವಾಗಿ ಅನ್ನಪೂರ್ಣಳ ಅಮ್ಮ ಕಮಲಾ ರಾನಡೆಯವರ ನೈತಿಕ ಬೆಂಬಲದಿಂದ ತನ್ನ ಜೀವನವನ್ನು ತಾನೇ ಸುಭದ್ರಗೊಳಿಸಿಕೊಂಡಳು. ಸಂಗೀತ, ಕವನ ಬರಹ, ಭಾಷಣ, ಯೋಗ ಹೀಗೆ ಹತ್ತು ಹಲವಾರು ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಳಲ್ಲದೆ ಮಗನ ಶಿಕ್ಷಣಕ್ಕೆ , ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದಳು . ಒಬ್ಬಳೇ ಸಮಾಜವನ್ನು ಎದುರಿಸುವಷ್ಟು , ಇನ್ನೊಬ್ಬ ಅಸಹಾಯಕಿಗೆ ಧೈರ್ಯ ತುಂಬುವಷ್ಟು ಎತ್ತರಕ್ಕೆ ಬೆಳೆದಳು. ಈಗ ಕೆಲವು ವರ್ಷಗಳಿಂದ ರಾಷ್ಟೀಯ ಕೇರಂ ಸ್ಪರ್ಧೆಗಲ್ಲಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡು ಸಂಭ್ರಮಿಸಿದ್ದಳು. ಎಷ್ಟೋ ಅವಳಂಥ ಕಷ್ಟಪಡುವ ಜೀವಿಗಳಿಗೆ, ಅಶಕ್ತ ಹೆಂಗಸರಿಗೆ ಸ್ಫೂರ್ತಿಯಾಗಿದ್ದಳು. ಮಗ ಇಂಜಿನಿಯರಿಂಗ್ ಪದವಿಯ ಕೊನೆಯ ವರ್ಷದಲ್ಲಿದ್ದು ಇತ್ತೀಚಿಗೆ ಇಂಟರ್ನ್ಶಿಪ್ ಕೂಡ ಸಿಕ್ಕಿತ್ತು. ಒಂದು ವಾರದ ಹಿಂದಷ್ಟೇ ತನ್ನ ಮಗನ ಹುಟ್ಟು ಹಬ್ಬದ ಸಂಭ್ರಮವನ್ನು ಆಚರಿಸಿದ್ದಳು. ಜೀವನವೇ ಆಕೆಯನ್ನು ಅಷ್ಟು ಪ್ರೀತಿಸುತಿತ್ತು. ಶಿಮೊಗ್ಗದಲ್ಲಿ ತಾನು shorthand ಮತ್ತು ಟೈಪಿಂಗ್ ಕಲಿತ ಶಾಲೆಯಲ್ಲಿ ತನಗೆ dictation ಎಕ್ಸಾಮಿನರ್ ಆಗುವ ಅವಕಾಶ ಸಿಕ್ಕಾಗ ಅನ್ನಪೂರ್ಣ ಅದೊಂದು ಹೆಮ್ಮೆಯ ವಿಷಯವೆಂದು ಭಾವಿಸಿ ಬೆಂಗಳೂರಿ೦ದ ಶಿವಮೊಗ್ಗೆಗೆ ಬಸ್ಸಿನಲ್ಲಿ ಪ್ರಯಾಣಿಸಿದಳು. ಆಕೆಯ ಬಳಿ ಬ್ಯಾಂಕ್ ಲಾಕರ ಇಲ್ಲದ ಕಾರಣ ಸಾಮಾನ್ಯವಾಗಿ ತನ್ನ ಬಳಿ ಇರುವ ಒಡವೆಯನ್ನು ಧರಿಸುತ್ತುದ್ದಳು ಇಲ್ಲವೇ ಬ್ಯಾಗ್ನಲ್ಲಿ ಕೊಡೊಯ್ಯುತ್ತಿದಳು. ಇದು ಆಕೆಗೆ ರೂಟೀನ್. ಶಿವಮೊಗ್ಗದಲ್ಲಿರುವ ತನ್ನ ಅಣ್ಣ- ಅತ್ತಿಗೆ ಮನೆಯಲ್ಲಿ ಅವರನ್ನು ಭೇಟಿಯಾಗಿ, ಇನ್ನೊಬ್ಬ ಕೊನೆಯ ಅಣ್ಣನ ಮನೆಗೆ ಧಾವಿಸಿ ಕೆಲಸಕ್ಕೆ ಅಲ್ಲಿಂದಲೇ ತೆರಳಿದಳು. ಸಂಜೆ ಮಾತನಾಡುವಾಗ ನನ್ನ ಚಿಕ್ಕಪ್ಪ ‘ನಾನು ನಾಳೆ ಒಬ್ಬರ ವೈಕುಂಠಕ್ಕೆ ಬೆಂಗಳೂರಿಗೆ ಹೋಗಬೇಕಾಗಿದೆ , ಇವತ್ತು ರಾತ್ರಿ ೧೧.೩೦ರ ರೈಲು ಬುಕ್ ಆಗಿದೆ ‘ಎಂದು ಹೇಳಿರುತ್ತಾರೆ. ಅನ್ನಪೂರ್ಣ ನಾನು ಅದೇ ರೈಲಿನಲ್ಲಿ ಬರುತ್ತೇನೆ.. ನನ್ನ ಟಿಕೆಟ್ ನಾಳೆ ರಾತ್ರಿಗೆ ಕಾಯ್ದಿರಿಸಿದೆ, ಆದರೆ ಶಿವಮೊಗ್ಗದಲ್ಲೂ ನನ್ನ ಕೆಲಸ ಮುಗಿದಿದ್ದು ನನ್ನ ಮಗನಿಗೆ ನಾಡಿದ್ದಿನಿಂದ ಇಂಜಿನಿಯರಿಂಗ್ಏಳನೇ ಸೆಮಿಸ್ಟರ್ ಪರೀಕ್ಷೆಗಳಿವೆ .. ಅವನಲ್ಲಿ ಒಬ್ಬನೇ ಇದ್ದಾನೆ .. ನಾನು ಒಂದು ದಿನ ಬೇಗ ಹೋದರೆ ಅವನಿಗೆ ಸಹಾಯವಾಗುತ್ತದೆ ’ಎಂದರು. ಅಣ್ಣ- ತಂಗಿ ಒಂದೇ ರೈಲಿನಲ್ಲಿ ಪ್ರಾಯಾಣಿಸಲು ನಿರ್ಧರಿಸಿ ಅನ್ನಪೂರ್ಣ ಜನರಲ್ ಟಿಕೆಟ್ ಪಡೆದು ರೈಲು ಹತ್ತುವಾಗ ನಿರ್ಜನವಾಗಿದ್ದ ಲೇಡೀಸ್ ಬೋಗಿಯನ್ನು ಹತ್ತುತ್ತಾಳೆ . ಆಕೆಯ ಅಣ್ಣ ಅವಳ ಮೂರೂ ಬ್ಯಾಗ್ಗಳನ್ನು ಅಲ್ಲೇ ಇಟ್ಟುಕೊಟ್ಟು , ತಾವು ಕಾಯ್ದಿರಿಸಿದ ಬೋಗಿಗೆ ತೆರಳುತ್ತಾರೆ.
ಜೀವನದ ಮೇಲೆ ಅಗಾಧ ಪ್ರೀತಿ ಹೊಂದಿದ್ದ ಅನ್ನಪೂರ್ಣ ಮರು ದಿನ ಹಿರೇಹಳ್ಳಿಯ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಶವವಾಗಿ ಅಂಗಾತ ಮಲಗಿದ್ದಾಳೆ. ಅರ್ಧದಷ್ಟು ಮೆದುಳು ಹೊರಬಂದಿದೆ. ಒಂದು ಕಯ್ಯಲ್ಲಿ ಉದ್ದ ಕೂದಲ ಎಳೆಗಳು ಗಟ್ಟಿಯಾಗಿ ಹಿಡಿದಿದ್ದಾಳೆ .. ದೇಹದ ಮೇಲೆ ಬಹಳಷ್ಟು ರಕ್ತದ ಕಲೆಗಳು.. ಗಾಯಗಳಿವೆ. ನಕಲಿ ಬಳೆ ಒಂದು ಕೈಯ್ಯಲ್ಲಿದೆ. ಬೆಳ್ಳಿ ಕಾಲುಂಗರ ಮೂಕ ಸಾಕ್ಷಿಯಂತೆ ಆಕೆಯ ಜೊತೆಗಿದೆ.
ಆಕೆಯ ದೇಹ ದೊರೆತ ೨೦ ಕಿಮೀ ದೂರದಲ್ಲಿ ಆಕೆ ಕೊಂಡೊಯ್ಯುತ್ತಿದ್ದ ಎರಡು ಬ್ಯಾಗ್ಗಳು ಸಿಕ್ಕಿದ್ದು , ಅವು ಖಾಲಿಯಾಗಿದೆ. ಮೂರನೇ ಬ್ಯಾಗ್ ನಾಪತ್ತೆಯಾಗಿದೆ. ಪರ್ಸ್ , ೧೦ ರೂಪಾಯಿ ಹಣ, ಏಟಿಎಂ ಕಾರ್ಡ್, ಮೊಬೈಲ್ ಫೋನ್ ಕೂಡ ಅಲ್ಲೇ ಸಿಕ್ಕಿದೆ.
ನಮ್ಮನ್ನು ಕಾಡುತ್ತಿರುವ ಪ್ರಶ್ನೆಗಳು
-
೧.ಪರ್ಸ್ - ಮೊಬೈಲ್ , ಬಾಗ್ ಗಳನ್ನು ೨೦ km ನಂತರ ಎಸೆದವರು ಯಾರು..? ಈ ಕಪಟಿ ಯಾರು?
-
೨. ಕೈಯ್ಯಲ್ಲಿ ಗಟ್ಟಿ ಹಿಡಿದಿರುವ ಕೂದಲು ನೈಜವೋ / ಅಥವಾ ವಿಗ್ ನದ್ದೋ - ಒಬ್ಬ ಪುರುಷ ಮಹಿಳೆಯ ವೇಷದಲ್ಲಿ ಈ ಕೃತ್ಯ ಎಸಗಿದನೇ ?ಮಹಿಳೆಯೇ ಈ ಕೃತ್ಯ ಮಾಡಿದರೆ ?
-
೩. ಕೈಯಲ್ಲಿದ್ದ ಕೂದಲು ಯಾರದ್ದು?
-
೪. ಸಿಸಿಟಿವಿ ದೃಶ್ಯಗಳಿಂದ ಏನಾದರೂ ಕ್ಲೂ ಸಿಗಬಹುದಲ್ಲವೇ ?
ನನ್ನ ಅತ್ತೆಯ ದುರಂತ ಜೀವನದ ಅಧ್ಯಾಯ ‘ರಾಮ ರಾಜ್ಯ’ದ ಹೊಸ್ತಿಲ್ಲಲ್ಲಿದ್ದ ‘ರಾವಣ -ರಾವಣಿಯರ’ ದುರಾಸೆ, ನಿರ್ದಯೆ , ರಾಕ್ಷಸೀ ಪ್ರವೃತ್ತಿಗೆ ಅನ್ಯಾಯವಾಗಿ ಅಂತ್ಯಕಂಡಿದೆ. ಆಕೆ ಇಷ್ಟು ವರ್ಷ ಪಟ್ಟ ಕಷ್ಟಕ್ಕೆ ಯಾವ ನ್ಯಾಯವು ಸಿಗದಂತಾಗಿದೆ.
ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಿದ್ದ ನನ್ನತ್ತೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ .. ಪಾತಕ ಶಕ್ತಿಗಳೆದುರು ತಲೆ ತಗ್ಗಿಸುವಷ್ಟು ಅಬಲೆಯಲ್ಲ ... ಒಬ್ಬಳೇ ದೇಶಾದ್ಯಂತ ಸಾಕಷ್ಟು ಪ್ರಯಾಣವನ್ನು ಮಾಡಿದ ಗಟ್ಟಿಗಿತ್ತಿ , ವಿದ್ಯಾವಂತೆ, ಬುದ್ಧಿವಂತೆ. ಯಾವಾಗಲೂ ಪ್ರಾಮಾಣಿಕತೆಯನ್ನು , ನಿಷ್ಠೆಯನ್ನು , ಭಗವಂತನನ್ನು, ಸತ್ಯವನ್ನು ನಂಬಿದ್ದವಳು.
ಬಾಗ್ನಲ್ಲಿದ್ದ ಆಕೆಯ ಒಡವೆಯನ್ನು ಕಪಟಿ ದೋಚಲು ಬಂದಾಗ ಆಕೆ ಪ್ರತಿಭಟಿಸಿ , ಸೋತು, ಬಲಿಯಾಗಿದ್ದಾಳೆ . ನಮ್ಮ ದೇಶದ ರೈಲ್ವೆ ಸುರಕ್ಷತೆಯನ್ನು ನಂಬಿ ತನ್ನ ಜೀವ ಕಳೆದುಕೊಂಡಿದ್ದಾಳೆ . ನಮ್ಮ ದೇಶ ಹೆಣ್ಣು ಮಕ್ಕಳಿಗೆ ಸುರಕ್ಷತೆ ಒದಗಿಸಲು ಎಲ್ಲ ಪ್ರಯತ್ನ ಮಾಡುತ್ತದೆ ಎಂದು ನಂಬಿ ಮೋಸ ಹೋಗಿದ್ದಾಳೆ.
ಬದುಕಿರುವಾಗ..
ಆಕೆ ಅಪರಾಧಿಯಲ್ಲ..!ಸುಭದ್ರ ಬದುಕನ್ನು ಏಕಾಂಗಿಯಾಗಿ ಕಟ್ಟಿಕೊಳ್ಳಲು ಹೋರಾಟ ನಡೆಸಿದ ವೀರ ವನಿತೆ
ಅಪರಾಧ ಆಕೆಯದಲ್ಲ ...! ಮಗನಿಗಾಗಿ ನಿರಂತರ ಜೀವ ಸವೆಸಿ ಸಮಾಜವನ್ನು ಸಮರ್ಥವಾಗಿ ಎದುರಿಸಿದ ಧೈರ್ಯವಂತೆ ....
ಕಪಟ ಸೂತ್ರಧಾರಿ ಯಾರುಯಾರು ?- ಆಕೆಯ ಸಾವಿಗೆ ಕಾರಣ ಯಾರು ?
ರೈಲ್ವೆ ಇಲಾಖೆಯ ಪೊಲೀಸರಿಗೆ , ನಮ್ಮ ದೇಶದ ಭದ್ರತಾ ವ್ಯವಸ್ಥೆಗೆ , ಎಲ್ಲ ಬುದ್ಧಿಜೀವಿಗಳಿಗೆ , ದೇಶದ ಎಲ್ಲ ಐಪಿಎಸ್ ಅಧಿಕಾರಿಗಳಿಗೆ , ಸಮಾಜ ಸುಧಾರಣೆ ಮಾಡುವ ಎಲ್ಲ ರಾಜಕೀಯ ಮುತ್ಸದ್ದಿಗಳಿಗೆ ನನ್ನ ನೇರ ಪ್ರಶ್ನೆ..
ದಯವಿಟ್ಟು ಉತ್ತರಿಸಿ
ನಮಗೆ ನ್ಯಾಯ ಕೊಡಿಸಿ
‘ರೈಟ್ ಟು ಲಿವ್ ’ ಎಂಬುದನ್ನು ಪ್ರತಿಪಾದಿಸಿ
ನನ್ನ ಅನ್ನಪೂರ್ಣಳ ಜೀವನ ಹೋರಾಟಕ್ಕೆ ಸತ್ತ ನಂತರವಾದರೂ ಅರ್ಥ ಕೊಡಿಸಿ