Agumbe ghat : ಶಿವಮೊಗ್ಗ : ನಿನ್ನೆ ಸಂಜೆ ಆಗುಂಬೆ ಘಾಟಿಯ 6ನೇ ತಿರುವಿನಲ್ಲಿ ಭೂಕುಸಿತ ಸಂಭವಿಸಿದ್ದರಿಂದ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಇದೀಗ ಘಾಟಿ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ನಿನ್ನೆ ರಾತ್ರಿ ಧರೆ ಕುಸಿದಿದ್ದರಿಂದ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆಗೆ ಹಿನ್ನಡೆಯಾಗಿತ್ತು. ಇಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ಮಣ್ಣು ಮತ್ತು ಮರ ತೆರವುಗೊಳಿಸುವ ಕಾರ್ಯಕ್ಕೆ ಸಿದ್ಧತೆ ನಡೆಸಲಾಯಿತು. ಬೆಳಿಗ್ಗೆ ಆರಂಭವಾದ ಈ ಕಾರ್ಯಾಚರಣೆ ಸಂಜೆ 7 ಗಂಟೆಯವರೆಗೆ ನಡೆಯಿತು. ಇದೀಗ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಈ ವರ್ಷ ಸುರಿದ ಭಾರೀ ಮಳೆಯಿಂದಾಗಿ ಆಗುಂಬೆ ಘಾಟಿಯಲ್ಲಿ ಅಲ್ಲಲ್ಲಿ ಭೂಕುಸಿತಗಳು ಸಂಭವಿಸಿದ್ದವು. ನಿನ್ನೆಯ ಘಟನೆ ದೊಡ್ಡ ಪ್ರಮಾಣದಲ್ಲಿ ಇದ್ದ ಕಾರಣ, ಮತ್ತಷ್ಟು ಭೂಕುಸಿತವಾಗುವ ಸಾಧ್ಯತೆಯನ್ನು ಪರಿಗಣಿಸಿ ರಾತ್ರಿ ವೇಳೆ ಕಾರ್ಯಾಚರಣೆಯನ್ನು ಕೈಗೊಂಡಿರಲಿಲ್ಲ.
