ಶಿವಮೊಗ್ಗ:ದೇಶಾದ್ಯಂತ ರಾಷ್ಟ್ರೀಕೃತ ಬ್ಯಾಂಕ್ ನೌಕರರು ಇತ್ತಿಚೆಗೆ ಹೋರಾಟ ನಡೆಸಿದ್ದು. ಈ ಹಿನ್ನೆಲೆ ಸರ್ಕಾರ ನೌಕರರ ಒಂದು ದಿನದ ಸಂಬಳವನ್ನು ಕಡಿತಗೊಳಿಸಬೇಕೆಂದು ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಬೇಕು ಎಂಬ ಬ್ಯಾಂಕ್ ನೌಕರರ ಬೇಡಿಕೆ ಸಮರ್ಥನೀಯವಲ್ಲ. ಈಗಾಗಲೇ ಅವರಿಗೆ ಎರಡನೇ ಮತ್ತು ನಾಲ್ಕನೇ ಶನಿವಾರದ ರಜೆ ಹಾಗೂ ಬಸವ ಜಯಂತಿ, ಕನಕ ಜಯಂತಿ ಸೇರಿದಂತೆ ರಾಜ್ಯ ಸರ್ಕಾರದ ಎಲ್ಲಾ ರಜೆ ಸೌಲಭ್ಯಗಳು ಸಿಗುತ್ತಿವೆ. ಲಕ್ಷಾಂತರ ರೂಪಾಯಿ ಸಂಬಳ, ಸೇವಾ ಭದ್ರತೆ ಮತ್ತು ಅನುಕಂಪದ ಆಧಾರದ ಉದ್ಯೋಗದಂತಹ ಸೌಲಭ್ಯಗಳಿದ್ದರೂ ಸಹ ಕೆಲಸದ ಅವಧಿ ಕಡಿತಕ್ಕೆ ಒತ್ತಾಯಿಸುವುದು ಅತಾರ್ಕಿಕ ಎಂದು ಅವರು ಕಿಡಿಕಾರಿದರು.
ದೇಶದಲ್ಲಿ ರೈತರು, ಕಟ್ಟಡ ಕಾರ್ಮಿಕರು, ಮತ್ತು ಬೀದಿ ಬದಿ ವ್ಯಾಪಾರಿಗಳು ಯಾವುದೇ ಭದ್ರತೆ ಇಲ್ಲದೆ ಹಗಲು ರಾತ್ರಿ ಬೆವರು ಸುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಕಲ ಸೌಲಭ್ಯ ಹೊಂದಿರುವ ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿರುವುದು ಜನಸಾಮಾನ್ಯರಿಗೆ ಮಾಡುತ್ತಿರುವ ದ್ರೋಹವಾಗಿದೆ. ಜನವರಿ 27 ರಂದು ನಡೆದ ಮುಷ್ಕರದಿಂದಾಗಿ ದೇಶಾದ್ಯಂತ ಸುಮಾರು 8 ಲಕ್ಷ ಕೋಟಿ ರೂಪಾಯಿ ವ್ಯವಹಾರ ಸ್ಥಗಿತಗೊಂಡಿದೆ. ಇದರಿಂದ ಅಮಾಯಕರು ಮತ್ತು ಅನಕ್ಷರಸ್ಥರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮೇಘರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೌಕರರ ಈ ಬೇಡಿಕೆಗಳನ್ನು ಸಾರಸಗಟಾಗಿ ತಿರಸ್ಕರಿಸಬೇಕು. ಒಂದು ವೇಳೆ ಬ್ಯಾಂಕ್ ನೌಕರರು ಇದೇ ರೀತಿ ಹಠಮಾರಿ ಧೋರಣೆ ಮುಂದುವರಿಸಿದರೆ, ಅವರ ವಿರುದ್ಧ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
Kallur Megharaj Slams Bank Strike in Shivamogga


