ಶಿವಮೊಗ್ಗ : ಅರಣ್ಯ ಸಂರಕ್ಷಣೆಯಲ್ಲಿ ಮಾವುತ ಮತ್ತು ಆನೆಯ ಪಾತ್ರ ಎಷ್ಟು ದೊಡ್ಡದು ಎಂಬ ಕಥಾಹಂದರ ಹೊಂದಿರುವ ಮಾವುತ ಚಿತ್ರವು ಇದೇ ಜನವರಿ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ.ಚಿತ್ರದ ನಾಯಕ ನಟ ಹಾಗೂ ನಿರ್ಮಾಪಕ ಲಕ್ಷ್ಮೀಪತಿ ಬಾಲಾಜಿ ಮಾತನಾಡಿ, ಕಾಡಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ಮಾವುತ ಮತ್ತು ಆನೆ ಹೇಗೆ ಎದುರಿಸುತ್ತಾರೆ ಹಾಗೂ ಅರಣ್ಯ ರಕ್ಷಣೆಯಲ್ಲಿ ಅವರ ಕೊಡುಗೆ ಏನು ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಪ್ರತಿಯೊಂದು ಜೀವಿಗೂ ಅಗತ್ಯವಿರುವ ಕಾಡನ್ನು ಉಳಿಸಿ ಬೆಳೆಸಿ ಎಂಬ ಸಂದೇಶವೇ ಚಿತ್ರದ ಜೀವಾಳವಾಗಿದೆ. ವಿಶೇಷವಾಗಿ ಸಕ್ರೆಬೈಲಿನ ‘ಸಾಗರ್’ ಎಂಬ ಆನೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ನಿರ್ದೇಶಕ ರವಿಶಂಕರ್ ನಾಗ್ ಅವರು ಕಥೆಯ ಹುಟ್ಟಿನ ಬಗ್ಗೆ ವಿವರಿಸುತ್ತಾ, ಮೈಸೂರು ದಸರಾದಲ್ಲಿ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಯ ಸಾವು ಮತ್ತು ಆ ಸಂದರ್ಭದಲ್ಲಿ ಮಾವುತ ವಿನು ಪಟ್ಟ ವೇದನೆ ಈ ಚಿತ್ರಕಥೆಗೆ ಪ್ರೇರಣೆ ನೀಡಿತು. ಆನೆ ಮತ್ತು ಮಾವುತನ ನಡುವಿನ ಅವಿನಾಭಾವ ಸಂಬಂಧ ಹಾಗೂ ಅರಣ್ಯ ಸಂರಕ್ಷಣೆಯಲ್ಲಿ ಅವರ ಪಾತ್ರದ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ರೂಪಿಸಲಾಗಿದೆ. ಈ ಚಿತ್ರದಲ್ಲಿ ಸಕ್ರೆಬೈಲಿನ ಸಾಗರ್ ಆನೆಗೆ ಅರ್ಜುನ ಎಂದು ಹೆಸರಿಟ್ಟಿದ್ದು , ಇದನ್ನು ಚಿತ್ರದಲ್ಲಿ ಪೂರ್ಣಪ್ರಮಾಣದಲ್ಲಿ ಬಳಸಿಕೊಂಡಿದ್ದೇವೆ, ಚಿತ್ರದ ಬಹುಪಾಲು ಚಿತ್ರೀಕರಣ ಸಕ್ರೆಬೈಲಿನಲ್ಲಿ ನಡೆದಿದೆ ಎಂದರು.

ಚಿತ್ರದಲ್ಲಿ ಮಹಾಲಕ್ಷ್ಮಿ ನಾಯಕಿಯಾಗಿ ನಟಿಸಿದ್ದು, ಥ್ರಿಲ್ಲರ್ ಮಂಜು, ಪದ್ಮಾವಾಸಂತಿ, ಲಯಕೋಕಿಲ ಹಾಗೂ ಮಿಮಿಕ್ರಿ ಮಂಜು ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ವಿನು ಮನಸು ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಸ್ವತಃ ಲಕ್ಷ್ಮೀಪತಿ ಬಾಲಾಜಿ ಬಂಡವಾಳ ಹೂಡಿದ್ದಾರೆ.

Mavutha Movie Sakrebailu Sagar Elephant as Arjuna

