SHIVAMOGGA | Jan 17, 2024 | ರಾಜ್ಯ ನಿಗಮ ಮಂಡಳಿಗೆ ಹಾಗೂ ಹೀಗೂ ಬಹುತೇಕ 75-76 ಮಂದಿ ಪಟ್ಟಿ ಫೈನಲ್ ಆಗಿದ್ದು, ಅಷ್ಟು ಜನರ ಹೆಸರಿಗೆ ಕಾಂಗ್ರೆಸ್ ಹೈಕಮಾಂಡ್ ಅಸ್ತು ಎಂದಿದೆ. ಈ ಸಂಬಂದ ಕೊನೆಕ್ಷಣದ ಬದಲಾವಣೆಯೊಂದಕ್ಕಾಗಿ ಪಾರ್ಟಿಯಲ್ಲಿ ಜಟಾಪಟಿ ನಡೆಯುತ್ತಿದ್ದು, ಅದರ ನಂತರ ಪಟ್ಟಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.
ಅಂದುಕೊಂಡಂತೆ ಆಗಿದ್ದರೆ ನಿನ್ನೆಯೇ ಪಟ್ಟಿ ಬಿಡುಗಡೆ ಆಗಬೇಕಿತ್ತು. ಆದರೆ ಕೆಲವು ಹೆಸರಿಗೆ ವಿರೋಧ ವ್ಯಕ್ತವಾಗಿದ್ದರಿಂದ ಹೈಕಮಾಂಡ್ ಎದುರು ಶಿಫಾರಸ್ಸಿನ ವ್ಯವಹಾರ ನಡೆದು ಪಟ್ಟಿ ಬಿಡುಗಡೆ ತಡವಾಗಿದೆ ಎನ್ನಲಾಗಿದೆ.ನಿನ್ನೆ ರಾತ್ರಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಹೆಸರು ಫೈನಲ್ ಆಗಿ ಪಟ್ಟಿ ಕೆಪಿಸಿಸಿ ಕಚೇರಿ ತಲುಪಿದೆ.
ಅಲ್ಲದೆ ಕಾರ್ಯಕರ್ತರಿಗೂ ಈ ಸಂಬಂಧ ಮಾಹಿತಿ ನೀಡಲಾಗಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, 75 ಮಂದಿಗೆ ಸ್ಥಾನ ಸಿಗಲಿದೆ. ಅದರಲ್ಲಿ ಶಾಸಕರಿಗಿಂತಲೂ ಕಾರ್ಯಕರ್ತರಿಗೆ ಹೆಚ್ಚಿನ ಸ್ಥಾನಮಾನ ನೀಡಲಾಗಿದೆಯಂತೆ. 37 ಶಾಸಕರು ಹಾಗೂ 39 ಕಾರ್ಯಕರ್ತರಿಗೆ ಅವಕಾಶ ದೊರಕಿದೆ ಎನ್ನಲಾಗುತ್ತಿದೆ.
ಶಿವಮೊಗ್ಗದ ವಿಚಾರಕ್ಕೆ ಬರುವುದಾದರೆ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ KRIDL ಅಧ್ಯಕ್ಷ ಸ್ಥಾನ ಬಹುತೇಕ ಪಕ್ಕಾ ಆಗುವ ಸಾಧ್ಯತೆ ಇದೆ.
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ರವರಿಗೆ ಎಂಎಸ್ಐಎಲ್ ಅಥವಾ ಅರಣ್ಯ ಇಲಾಖೆಗೆ ಸಂಬಂಧಿಸಿದ ನಿಗಮ ಸಿಗುವ ಸಾಧ್ಯತೆ ಇದೆ.
ಇಬ್ಬರು ಶಾಸಕರಷ್ಟೆ ಅಲ್ಲದೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್ ರವರಿಗೂ ನಿಗಮ ಮಂಡಳಿ ಸ್ಥಾನಮಾನ ಸಿಗಲಿದೆ ಎಂದು ಹೇಳಲಾಗಿದೆ.
ಇನ್ನೂ ಆರ್ ಎಂ ಮಂಜುನಾಥ್ ಗೌಡರ ಹೆಸರು ಸಹ ಇವತ್ತು ಬಹುತೇಕ ಬಿಡುಗಡೆಯಾಗಲಿರುವ ನಿಗಮ ಮಂಡಳಿ ಸ್ಥಾನಮಾನದ ಪಟ್ಟಿಯಲ್ಲಿ ಇರಲಿದೆ ಎನ್ನಲಾಗುತ್ತಿದೆ.
ಅಚ್ಚರಿಯ ಬೆಳವಣಿಗೆಯಲ್ಲಿ ಕಾರ್ಯಕರ್ತರ ಲಿಸ್ಟ್ ನಲ್ಲಿ ಪಲ್ಲವಿ ಜಿ ಯವರ ಹೆಸರು ಕೇಳಿಬರುತ್ತಿದ್ದು ಅವರಿಗೂ ಸ್ಥಾನಮಾನ ಸಿಗುವುದು ಫೈನಲ್ ಆಗಿದೆ ಎನ್ನಲಾಗಿದೆ.
