Pocket Picking Incident ಶಿವಮೊಗ್ಗ: ನಗರದ ನೆಹರು ರಸ್ತೆಯಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವ ವ್ಯಾಪಾರಿಯೊಬ್ಬರು ಸೂಡಾ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಅವರ ಹುಟ್ಟುಹಬ್ಬದ ಮೆರವಣಿಗೆಯಲ್ಲಿ ಭಾಗವಹಿಸಿದ್ದಾಗ, ನೂಕುನುಗ್ಗಲಿನಲ್ಲಿ ಅವರ ಜೇಬಿನಲ್ಲಿದ್ದ 45,000 ನಗದು ಕಳುವಾಗಿದೆ.
ದೂರುದಾರರು ಸೆಪ್ಟೆಂಬರ್ 17 ರಂದು ಬೆಳಗ್ಗೆ ಸುಮಾರು 11:30 ಗಂಟೆಗೆ ಸೂಡಾ ಅಧ್ಯಕ್ಷರ ಹುಟ್ಟುಹಬ್ಬದ ಕಾರ್ಯಕ್ರಮಕ್ಕಾಗಿ ಜುವೆಲ್ ರಾಕ್ ಹೋಟೆಲ್ ಹತ್ತಿರದ ಪಂಚಮುಖಿ ಆಂಜನೇಯ ದೇವಸ್ಥಾನದ ಬಳಿ ಬಂದಿದ್ದರು. ಅಲ್ಲಿಂದ ಆರಂಭವಾದ ಮೆರವಣಿಗೆಯಲ್ಲಿ ಭಾಗವಹಿಸಿ, ಜೈಲ್ ಸರ್ಕಲ್, ಲಕ್ಷ್ಮೀ ಟಾಕೀಸ್ ಸರ್ಕಲ್ ಮುಖಾಂತರ ಸಾಗಿದ್ದರು. ಮಧ್ಯಾಹ್ನ ಸುಮಾರು 1:00 ಗಂಟೆಗೆ ಪೊಲೀಸ್ ಚೌಕಿ ಬಳಿ ಬಂದಾಗ, ದೂರುದಾರರು ತಮ್ಮ ಜೇಬಿನಲ್ಲಿ 500 ಮುಖಬೆಲೆಯ ಒಟ್ಟು 45,000 ನಗದು ಹಣ ಇರುವುದನ್ನು ನೋಡಿಕೊಂಡಿದ್ದರು. ನಂತರ ಮೆರವಣಿಗೆಯಲ್ಲಿ ಸೂಡಾ ಅಧ್ಯಕ್ಷರಿಗೆ ಹಾರ ಹಾಕುವ ಸಂದರ್ಭದಲ್ಲಿ ದೂರುದಾರರಿಗೆ ಶಾಕ್ ಎದುರಾಗಿದೆ. ಅದೇನೆಂದರೆ ಮತ್ತೆ ಅವರು ತಮ್ಮ ಜೇಬನ್ನು ಪರೀಕ್ಷಿಸಿಕೊಂಡಾಗ, ಅದರಲ್ಲಿ ಹಣ ಇರಲಿಲ್ಲ. ಮೆರವಣಿಗೆಯ ಗದ್ದಲ ಹಾಗೂ ನೂಕುನುಗ್ಗಲಿನಲ್ಲಿ ಯಾರೋ ಕಳ್ಳರು ತಮ್ಮ ಹಣವನ್ನು ಕದ್ದಿದ್ದಾರೆ ಎಂದು ಅವರು ಆರೋಪಿಸಿ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

