SHIVAMOGGA| MALENADUTODAY NEWS | ಮಲೆನಾಡು ಟುಡೆ Mar 5, 2025
ಸಾಗರ ಸುದ್ದಿ | ಸಾಗರದಲ್ಲಿ ಹಿಂದೂ ದೇವಾಲಯಗಳ ಕೋಟ್ಯಾಂತರ ರೂಪಾಯಿ ನಿಧಿ ಲೂಟಿ ಮಾಡಿರುವ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ಮಂದಿರ ಮಹಾಸಂಘದ ಸ್ಥಳೀಯ ಶಾಖೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕೆಲವು ಅಧಿಕಾರಿಗಳು ದೇವಸ್ಥಾನಗಳಿಗೆ ಸೇರಬೇಕಾದ ಕೋಟ್ಯಾಂತರ ರೂಪಾಯಿ ಲೂಟಿ ಮಾಡುತ್ತಿದ್ದಾರೆ ಎನ್ನುವ ಚರ್ಚೆ ವ್ಯಾಪಕವಾಗಿದೆ. ಹಿಂದೂ ದೇವಾಲಯಗಳ ಕೋಟ್ಯಾಂತರ ರೂಪಾಯಿ ಆದಾಯ ಲೂಟಿ ಹೊಡೆದು ವಂಚಿಸುವ ಕೆಲಸ ಮಾಡುತ್ತಿರುವ ಅಧಿಕಾರಿಗಳ ಕ್ರಮವನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಶಿವಮೊಗ್ಗ ಸುದ್ದಿ | ಉದ್ಯೋಗದ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಇಟ್ಟುಕೊಂಡು ನಗರದ ಕೆ.ಇ.ಬಿ. ಸರ್ಕಲ್ ನಲ್ಲಿರುವ ಜಲ ಮಂಡಳಿ ಕಚೇರಿ ಮುಂಭಾಗ ಶಿವಮೊಗ್ಗ ಮಹಾನಗರಪಾಲಿಕೆ ಹೊರಗುತ್ತಿಗೆ ನೀರು ಸರಬರಾಜು ನೌಕರರ ಸಂಘದ ಸದಸ್ಯರು ಪ್ರತಿಭಟನೆ ನಡೆಸ್ತಿದ್ದಾರೆ. ಇವರ ಅನಿರ್ದೀಷ್ಟಾವಧಿ ಮುಷ್ಕರಕ್ಕೆಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಬೆಂಬಲ ಸೂಚಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅವರು, ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿ, ಪಾಲಿಕೆ ಅವುಗಳನ್ನು ಈಡೇರಿಸಬೇಕಿದೆ. ಈ ಬಗ್ಗೆ ಪಾಲಿಕೆ ಜತೆಗೆ ಮಾತುಕತೆ ನಡೆಸೋಣ ಎಂದು ಭರವಸೆ ನೀಡಿದರು. ಅಲ್ಲದೆ, ಇದೇ ವೇಳೆ ನೀರು ಸರಬರಾಜು ಅಧಿಕಾರಿಗಳಿಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ದೂರವಾಣಿ ಮೂಲಕ ಮಾತನಾಡಿ, ನೌಕರರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಶಿಕಾರಿಪುರ ಸುದ್ದಿ | ಶಿಕಾರಿಪುರ ತಾಲೂಕು ಚಿಕ್ಕಜೋಗಿಹಳ್ಳಿ ಗ್ರಾಮದ ಪರಿಶಿಷ್ಟ ಸಮುದಾಯದ ಮಹಿಳೆ ಸರೋಜಮ್ಮ ಎಂಬುವರನ್ನು ಬೆತ್ತಲೆಗೊಳಿಸಿ, ಅವಮಾನಿಸಿ, ಜಾತಿ ನಿಂದನೆ ಮಾಡಿ, ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಅಡಿಯಲ್ಲಿ ಆರೋಪಿಯನ್ನು ಬಂಧಿಸುವಂತೆ, ಶೋಷಿತ ಸಮುದಾಯದ ಒಕ್ಕೂಟ ಪ್ರತಿಭಟನೆ ನಡೆಸಿದೆ. ಶಿಕಾರಿಪುರದ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದ ಶೋಷಿತ ಸಮುದಾಯದ ಒಕ್ಕೂಟವು, ನಗರದ ಪ್ರಮುಖ ಬೀದಿಗಳಲ್ಲಿ ಮೇರವಣಿಗೆ ಸಾಗಿ ಆನಂತರ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಬಹಿರಂಗಸಭೆ ನಡೆಸಿತು. ಇದೇ ವೇಳೆ ಆರೋಪಿಯನ್ನು ಪೊಲೀಸರು ಬಂಧಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.