SHIVAMOGGA | MALENADUTODAY NEWS | ಮಲೆನಾಡು ಟುಡೆ Nov 12, 2024
ಶೆಟ್ಟಿಹಳ್ಳಿ ಕಾಡಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಹಿಮ್ಮೆಟ್ಟಿಸುವುದಕ್ಕಿಂತ ಸೆರೆ ಹಿಡಿಯುವುದೇ ಲೇಸು..ಯಾಕಂತಿರಾ ಜೆಪಿ ಬರೆಯುತ್ತಾರೆ.
ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಿರುವ ಶೆಟ್ಟಿ ಹಳ್ಳಿ ಅಭಯಾರಣ್ಯದಲ್ಲಿ ಇತ್ತಿಚ್ಚಿನ ವರ್ಷಗಳಲ್ಲಿ ಕಾಡಾನೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಅದರಲ್ಲೂ ಸಕ್ರೆಬೈಲು ಕಾಡಿನ ತುಂಗಾ ನದಿ ಕಾಡಾನೆಗಳ ದಾಟುವಿಕೆಗೆ ಮೆಗಾ ಕಾರಿಡಾರ್ ಆಗಿದೆ.


ಭದ್ರಾ ಅಭಯಾರಣ್ಯದಿಂದ ಇತ್ತಿಚ್ಚಿನ ವರ್ಷಗಳಲ್ಲಿ ತುಂಗಾ ನದಿ ದಾಟಿಕೊಂಡು ಶೆಟ್ಟಿಹಳ್ಳಿ ಕಾಡು ಸೇರಿರುವ ಕಾಡಾನೆಗಳ ಸಂಖ್ಯೆ 25 ಕ್ಕೂ ಹೆಚ್ಚು ಎನ್ನತ್ತಾರೆ ನಿವೃತ್ತ ಡಿಸಿಎಫ್ ನಾಗರಾಜ್. ತಮ್ಮ ಅಧಿಕಾರವಧಿಯಲ್ಲಿ ಇದ್ದ ಸಂದರ್ಭದಲ್ಲಿಯೇ ಈ ಮಾತನ್ನು ಅವರು ಮಾದ್ಯಮಗಳಿಗೆ ಹೇಳಿದ್ದರು. ಶೆಟ್ಟಿಹಳ್ಳಿ ಕಾಡಿನಲ್ಲಿ ಕೇವಲ ಮೂರು ಆನೆಗಳಿದ್ದವು. ಆದರೆ ಇತ್ತಿಚ್ಚೆಗೆ ಅವುಗಳ ಸಂಖ್ಯೆ 26 ಕ್ಕೆ ಏರಿದೆ ಎಂದರೆ, ಭದ್ರ ಕಾಡಿನಲ್ಲಿ ಆಹಾರದ ಸಮಸ್ಯೆ ಎದುರಾಗಿರಬಹುದು. ಅಥವಾ ಗುಂಪಿನಿಂದ ಬೇರ್ಪಟ್ಟ ಆನೆ ದಾರಿಯನ್ನರಸಿ ಬಂದಿರಬಹುದು.
ಈ ಕಾಡಾನೆಗಳಿಂದ ಜನರಿಗೆ ತೊಂದರೆಯಿಲ್ಲದಿದ್ದರೂ. ಜನರಿಂದ ಈ ಕಾಡಾನೆಗಳಿಗೆ ತೊಂದರೆ ತಪ್ಪಿದ್ದಲ್ಲ. ಇದರಿಂದ ಆನೆಯ ಸಾವು ಕೂಡ ಸಂಭವಿಸಬಹುದು ಎಂದು ಭವಿಷ್ಯ ನುಡಿದಿದ್ದ ಡಿಸಿಎಫ್ ನಾಗರಾಜ್ ರವರ ಮಾತು ಈಗ ಅಕ್ಷರ ಸಹ ನಿಜವಾಗಿದೆ. ವನ್ಯಪ್ರಾಣಿಗಳ ಉಪಟಳ ತಪ್ಪಿಸುವುದಕ್ಕಾಗಿ ರೈತರು ತಮ್ಮ ಹೋಲ ತೋಟಗಳಿಗೆ ಅಳವಡಿಸಿರುವ ವಿದ್ಯುತ್ ಬೇಲಿ ಕಾಡಾನೆಗಳನ್ನು ಬಲಿ ಪಡೆಯುತ್ತಿದೆ.
ರೈತರು ರಾತ್ರಿ ಹೊತ್ತು ಹೊಲಗಳಿಗೆ ಹೈಬೆಕ್ಸ್ ವಿದ್ಯುತ್ ಅಳವಡಿಸುತ್ತಿದ್ದು, ವನ್ಯಪ್ರಾಣಿಗಳ ಜೀವಕ್ಕೆ ಸಂಚಕಾರವನ್ನುಂಟು ಮಾಡಿದೆ. ಕೇವಲ ಆನೆಸರ ವನ್ಯಜೀವಿ ವಲಯದಲ್ಲಿಯೇ ಕೇವಲ ಎರಡು ವರ್ಷದಲ್ಲಿ ಮೂರು ದೈತ್ಯ ಗಂಡು ಕಾಡಾನೆಗಳು ಸಾವನ್ನಪ್ಪಿದೆ. ಈ ವಲಯದಲ್ಲಿ ಹೆಚ್ಚಾಗಿ ಬಗರ್‌ಹುಕುಂ ರೈತರಿದ್ದು, ತಮ್ಮ ಹೋಲಗಳನ್ನು ಉಳಿಸಿಕೊಳ್ಳಲು ಅವರು ವಿದ್ಯುತ್ ಬೇಲಿ ಅಳವಡಿಸಿಕೊಂಡಿದ್ದಾರೆ.
ರೈತರಿಗೆ ಇಲ್ಲಿ ಕಾಡಾನೆಗಳು ಓಡಾಡುತ್ತವೆ ಎಂಬ ಅರಿವು ಕೂಡ ಇರಲಿಲ್ಲ. ಯಾವಾಗ 2022 ರಲ್ಲಿ ಆನೆಸರ ವೈಲ್ಡ್ ಲೈಫ್ ಏರಿಯಾದಲ್ಲಿ ಎರಡು ಕಾಡಾನೆಗಳು ವಿದ್ಯುತ್ ಸ್ಪರ್ಷಿಸಿ ಸಾವನ್ನಪ್ಪಿದ್ದವೋ ಆಗ ತೋಟದ ಮಾಲೀಕನೇ ಕಂಗಾಲಾಗಿದ್ದ. 2022 ರಲ್ಲಿ ಶೆಟ್ಟಿಹಳ್ಳಿ ಕಾಡಿನ ಆನೆಸರ ವನ್ಯಜೀವಿ ವಲಯದ ಕಾಡಂಚಿನ ತೋಟದ ಬೇಲಿಗೆ ಅಕ್ರಮವಾಗಿ ಅಳವಡಿಸಿದ್ದ, ವಿದ್ಯುತ್ ಸ್ಪರ್ಷಕ್ಕೆ ಸಿಲುಕಿ ಎರಡು ಗಂಡು ಕಾಡಾನೆಗಳು ಧಾರುಣ ಸಾವು ಕಂಡಿದ್ದವು.
ಚಂದ್ರನಾಯಕ್ ಎಂಬುವರ ಬಗರ್ ಹುಕುಂ ಹೊಲದಲ್ಲಿ ಅಳವಡಿಸಿದ್ದ ಅಕ್ರಮ ವಿದ್ಯುತ್ ಬೇಲಿ ಸಂಪರ್ಕಕ್ಕೆ ಸಿಲುಕಿ, ಎರಡು ಗಂಡು ಕಾಡಾನೆಗಳು ಸಾವು ಕಂಡಿದ್ದವು. ಜಮೀನು ಮಾಲೀಕ ಚಂದ್ರನಾಯಕ್ ಹಂದಿಗಳ ಭೇಟೆಗಾಗಿ ವಿದ್ಯುತ್ ನನ್ನು ರಾತ್ರಿ ಅಳವಡಿಸಿದ್ದ, ಆದರೆ ಮಾರನೇ ದಿನ ಬೆಳಗಾದ ಸಂದರ್ಭದಲ್ಲಿ ಹೊಲಕ್ಕೆ ಹೋದ ಚಂದ್ರನಾಯಕ್ ಎರಡು ಕಾಡಾನೆಗಳು ಸತ್ತು ಬಿದ್ದುಬಿದ್ದಿರುವುದನ್ನು ಕಂಡು ಕಂಗಾಲಾಗಿ ಹೋಗಿದ್ದ.
ನಂತರ ತಾನೇ ಖುದ್ದು ಕುಂಸಿ ಠಾಣೆಗೆ ಹೋಗಿ, ತನ್ನ ತಪ್ಪನ್ನು ಒಪ್ಪಿಕೊಂಡು ಶರಣಾಗಿದ್ದ. ಇಲ್ಲಿ ರೈತ ತಾನು ಆನೆ ಕೊಲ್ಲಬೇಕು ಎಂಬ ಉದ್ದೇಶ ಹೊಂದಿರಲಿಲ್ಲ. ಆದರೆ ದಾರಿತಪ್ಪಿ ಬಂದ ಕಾಡಾನೆಗೆ ವಿದ್ಯತ್ ಬೇಲಿಯೇ ಮುಳುವಾಗಿತ್ತು.
ಅದೇ ಆನೆಸರ ವೈಲ್ಡ್ ಲೈಫ್ ಏರಿಯಾದಲ್ಲಿ ಕಳೆದ ಮೂರು ದಿನದ ಹಿಂದೆ ಗಂಡು ಕಾಡಾನೆ ಪುನಃ ವಿದ್ಯುತ್ ಬೇಲಿಗೆ ಸಿಲುಕಿ ಸಾವನ್ನಪ್ಪಿದೆ. ಮೆಕ್ಕಜೋಳ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ಬೇಲಿಗೆ ಆನೆ ಸ್ಪರ್ಷಿಸಿ ಸಾವನ್ನಪ್ಪಿದೆ. ಈ ಸಾವಿಗೆ ರೈತನೇ ಕಾರಣನಾ ಎಂದು ಪ್ರಶ್ನಿಸಿದರೆ ಅದಕ್ಕೆ ಉತ್ತರವಿಲ್ಲ. ಆದರೆ ಕಾಡಾನೆಗಳ ರಕ್ಷಣೆಯ ಹೊಣೆ ಎಲ್ಲರ ಕರ್ತವ್ಯವಾಗಿದೆ.
ಈಗ ಶೆಟ್ಟಿಹಳ್ಳಿ ಕಾಡಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಹ್ಮಿಮೆಟ್ಟಿಸುವ ಕೆಲಸ ಅರಣ್ಯ ಇಲಾಖೆ ಮಾಡುತ್ತಿದೆ. ಇದೊಂದು ಕಣ್ಣೊರೆಸುವ ತಂತ್ರ ಬಿಟ್ಟರೆ ಮತ್ತೇನು ಅಲ್ಲ. ಶೆಟ್ಟಿಹಳ್ಳಿ ಕಾಡಿನ ಸುತ್ತಮುತ್ತಲು ಇಪಿಟಿ ಮಾಡಿರುವಾಗ ಹಿಮ್ಮೆಟ್ಟಿಸುವ ಕಾಡಾನೆಗಳು ಕಾಡನ್ನು ತೊರೆದು ಹೋಗಲು ಸಾಧ್ಯವಿಲ್ಲ. ಸ್ವಲ್ಪ ದೂರ ಸಾಗಿದಂತೆ ಮಾಡಿ ಮತ್ತೆಲ್ಲೋ ಘೀಳಿಡುತ್ತವೆ. ಪುನಃ ರೈತರ ತೋಟಗಳಿಗೆ ಲಗ್ಗೆ ಇಟ್ಟು ಬೆಳೆ ಹಾನಿ ಮಾಡುತ್ತವೆ. ಈಗಾಗಲೇ ಲಕ್ಷಾಂತರ ರೂಪಾಯಿ ರೈತರ ಬೆಳೆ ಹಾನಿಯಾಗಿದೆ.
ಆನೆಗೆ ಓರ್ವ ಬಲಿಯಾಗಿದ್ದಾನೆ. ಗ್ರಾಮಸ್ಥರು ಆನೆಗಳನ್ನು ಸೆರೆಹಿಡಿಯುವಂತೆ ಆಗ್ರಹಿಸುತ್ತಿದ್ದರೂ, ಅರಣ್ಯಾಧಿಕಾರಿಗಳು ಕೇವಲ ಹ್ಮಿಮೆಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಹೀಗೆ ಹಿಮ್ಮೆಟ್ಟಿಸುವಾಗಲೇ ಸಾಗಿದ ಕಾಡಾನೆಯೊಂದು ವಿದ್ಯು ಬೇಲಿಗೆ ತಗುಲಿ ಸಾವನ್ನಪ್ಪಿರಬಹುದು ಎಂದು ಸುತ್ತಮುತ್ತಲ ಗ್ರಾಮಸ್ಥರು ಶಂಕಿಸಿದ್ದಾರೆ. ಅದೇನೆ ಆಗಲಿ, ಶೆಟ್ಟಿ ಹಳ್ಳಿ ಕಾಡಿನಲ್ಲಿರುವ ದೈತ್ಯ ಕಾಡಾನೆಗಳನ್ನು ಸೆರೆಹಿಡಿಯುವುದರಿಂದ ಅವುಗಳ ಜೀವ ಉಳಿಸಿದಂತಾಗುತ್ತದೆ.ಇಲ್ಲವಾದಲ್ಲಿ ಬಗರ್ ಹುಕುಂ ಹೊಲಗಳಿಗೆ ಕಾಡಾನೆಗಳು ಲಗ್ಗೆ ಇಟ್ಟರೆ ಸಾವು ಕಟ್ಟಿಟ್ಟ ಬುತ್ತಿ.
ಆಯನೂರು ಚನ್ನಹಳ್ಳಿ ತಮ್ಮಡಿಹಳ್ಳಿ ಭಾಗದ ಕೆಲ ಬಗರ್ ಹುಕುಂ ಹೊಲಗಳಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಅಳವಡಿಸಲಾಗಿದೆ. ವನ್ಯಜೀವಿ ವಲಯದಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಹೊಂದಿರುವ ರೈತರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಈ ಹಿಂದೆ ಸಿಸಿಎಫ್ ಹನುಮಂತಪ್ಪ ಹೇಳಿದ್ದರು.ಅದರ ಜೊತೆಗೆ ರೈತರಿಗೆ ಅರಿವು ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ.ಅದೇ ರೀತಿ ಕಾಡಾನೆಗಳ ಸೆರೆಗೆ ಕಾನೂನು ಪ್ರಕ್ರೀಯೆಗೆ ಇಲಾಖೆ ಮುಂದಾಗಬೇಕಿದೆ..
SUMMARY | JP writes about the wild elephants of Shettihalli Sanctuary
KEYWORDS | JP writes about the wild elephants , Shettihalli Sanctuary