SHIVAMOGGA| MALENADUTODAY NEWS | ಮಲೆನಾಡು ಟುಡೆ Mar 14, 2025
ಹೋಳಿ ಹುಣ್ಣಿಮೆಯ ಪ್ರಯುಕ್ತ ಇಂದು ನಗರದ ದುರ್ಗಿ ಗುಡಿಯಲ್ಲಿರುವ ಶ್ರೀ ದುರ್ಗಮ್ಮ ಹಾಗೂ ಮರಿಯಮ್ಮ ರಥೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು. ಈ ವೇಳೆ ಶಿವಮೊಗ್ಗದ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತಾಧಿಗಳು ಈ ರಥೋತ್ಸವದಲ್ಲಿ ಭಾಗವಹಿಸಿದ್ದರು.
ಈ ದೇವಸ್ಥಾನದಲ್ಲಿ ಹಿಂದಿನಿಂದಲೂ ಈ ರಥೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಸಹ ಎಂದಿನಂತೆ ಹೋಳಿ ಹುಣ್ಣಿಮೆಯ ದಿನ ದೇವಾಲಯದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ರಥೋತ್ಸವ ದುರ್ಗಿಗುಡಿ ಶ್ರೀ ದುರ್ಗಮ್ಮ ಹಾಗೂ ಮರಿಯಮ್ಮ ದೇವಸ್ಥಾನದಿಂದ ದುರ್ಗಿಗುಡಿಯ ಮುಖ್ಯ ರಸ್ತೆಯವರೆಗೆ ಜರಗುತ್ತದೆ ನಂತರ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೇಲೆ ಕೂರಿಸಿ ಗಾಂಧಿ ಬಜಾರಿನ ರೇಣುಕಮ್ಮ ದೇವಾಲಯಕ್ಕೆ ಹೋಗಿ ವಾಪಸ್ ದುರ್ಗಿಗುಡಿಗೆ ಬರಲಾಗುತ್ತದೆ. ದುರ್ಗಮ್ಮನ ಬೀದಿಯ ಪ್ರತಿ ಮನೆಯಲ್ಲಿಯು ದೇವತೆಗಳಿಗೆ ಪೂಜೆ, ಆರತಿ, ಓಕುಳಿ ಮಾಡುತ್ತಾರೆ.
ವಿವಿಧ ಹೂವುಗಳಿಂದ ಅಲಂಕರಿಸಿದ ಪಲ್ಲಕ್ಕಿ ಹಾಗೂ ದೇವಿಯನ್ನು ನೋಡಲು ಅಲ್ಲಿ ಜನ ಸಾಗರವೇ ನೆರೆದಿತ್ತು. ಬೇರೆಲ್ಲಾ ದೇವಸ್ಥಾನದಲ್ಲಿ ರಥೋತ್ಸವವನ್ನು ಬೆಳಿಗ್ಗೆ ಅಥವಾ ರಾತ್ರಿ ಸಮಯದಲ್ಲಿ ನಡೆಸಿದರೆ ಈ ದೇವಾಲಯದಲ್ಲಿ ಮಧ್ಯಾಹ್ನದ ಬಿರು ಬಿಸಿಲಿನಲ್ಲಿಯೇ ನಡೆಸುವುದು ವಿಶೇಷ. ಆದರೆ ಅಂಥಹ ಸುಡು ಬಿಸಿಲಲ್ಲಿಯೂ ಸಹ ಜನರು ದೇವಿಗೆ ಮಡಿಲಕ್ಕಿ ತುಂಬಿ ಭಕ್ತಿ ಭಾವದಿಂದ ರಥೋತ್ಸವದಲ್ಲಿ ಪಾಲ್ಗೊಂಡರು. ಪ್ರತಿ ವರ್ಷ ನಗರದಲ್ಲಿ ಈ ಹುಣ್ಣಿಮೆ ದಿನ ದೇವಿಗೆ ಪೂಜೆ ಸಲ್ಲಿಸಿದ ನಂತರವೇ ಹೋಳಿ ಹಬ್ಬ ಆಚರಿಸುವುದು ವಾಡಿಕೆಯಾಗಿದೆ.
ದೇವಸ್ಥಾನದ ಹಿನ್ನಲೆ
ದುರ್ಗಮ್ಮ ಹಾಗೂ ಮರಿಯಮ್ಮ ದೇವಸ್ಥಾನಕ್ಕೆ ಸುಮಾರು ಸಾವಿರಾರು ವರ್ಷ ಇತಿಹಾಸವಿದೆ. ಈ ದೇವಾಲಯ ಇರುವುದರಿಂದಲೇ ಅಲ್ಲಿನ ಪ್ರದೇಶಕ್ಕೆ ದುರ್ಗಿಗುಡಿ ಎಂಬ ಹೆಸರು ಬಂದಿದೆ. ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ 5 ದಿನಗಳ ಕಾಲ ಈ ದೇವಾಲಯದಲ್ಲಿ ಜಾತ್ರೆಯನ್ನು ನಡೆಸಲಾಗುತ್ತದೆ. ಈ ಬಾರಿಯೂ ಸಹ ಮಂಗಳವಾರ ಶುರುವಾದ ಈ ಜಾತ್ರಾ ಮಹೋತ್ಸವ ಶನಿವಾರ ಸಂಜೆ ಓಕಳಿಯ ನಂತರ ಸಂಪನ್ನವಾಗುತ್ತದೆ. ಈ ಜಾತ್ರಾ ಮಹೋತ್ಸವವನ್ನು ಶ್ರೀ ದುರ್ಗಾ ಪರಮೇಶ್ವರಿ ಸೇವಾ ಸಮಿತಿ ಅಚ್ಚು ಕಟ್ಟಾಗಿ ನಡೆಸಿಕೊಂಡು ಬರುತ್ತಿದೆ. ದುರ್ಗಿಗುಡಿಯಿಂದ ಮದುವೆಯಾಗಿ ಅಥವಾ ಇನ್ಯಾವುದೋ ಕಾರಣದಿಂದ ಹೊರಹೋದ ಎಲ್ಲಾ ಮಹಿಳೆಯರು ಕೂಡಾ ಈ ಜಾತ್ರೆಯಲ್ಲಿ ಭಾಗವಹಿಸುವುದು ಪ್ರತೀತಿ. ಪ್ರತಿ ಬಾರಿಯಂತೆ ಈ ಭಾರಿಯು ಸಹ ದುರ್ಗಮ್ಮ ಮರಿಯಮ್ಮ ಗೆಳೆಯರ ಬಳಗದ ವತಿಯಿಂದ ಅನ್ನ ಸಂತರ್ಪಣೆ ನೇರವೇರಿಸಲಾಯಿತು.