ಗಂಡ, ಹೆಂಡತಿ, ಮಗ, ಅಪ್ಪನ ಹತ್ಯೆ! | ಶಿಕಾರಿಪುರದಲ್ಲಿ ಕೊಲೆಗಳಿಗೆ ಕಾರಣವಾಗ್ತಿದ್ಯಾ ಕೌಟುಂಬಿಕ ಶಂಕೆ?

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 11, 2024 ‌ 

ಶಿಕಾರಿಪುರದ ಕೌಟಂಬಿಕ ಸರಣಿ ಕೊಲೆಗಳಿಗೆ ಅಂತ್ಯ ಎಂದು..? ಕೇವಲ ಒಂದುವರೆ ತಿಂಗಳಲ್ಲಿ ನಾಲ್ಕು ಕುಟುಂಬಗಳಲ್ಲಿ ಹರಿದ ನೆತ್ತರು..ಮಕ್ಕಳನ್ನು ಅನಾಥರನ್ನಾಗಿಸಿದ್ದಕ್ಕೆ ಹೊಣೆ ಯಾರು…ಜೆಪಿ ಬರೆಯುತ್ತಾರೆ.

ಶಿಕಾರಿಪುರ ತಾಲೂಕು ಈಗ ರಕ್ತ ಸಿಕ್ತ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಕೇವಲ ರಸ್ತೆ ಅಪಘಾತ ಕಳ್ಳತನದಂತ ಪ್ರಕರಣಗಳು ನಡೆಯುತ್ತಿದ್ದ ತಾಲೂಕಿನಲ್ಲಿ ಈಗ ಕೌಟುಂಬಿಕ ಕಾಳಗದ ನೆತ್ತರು ಹರಿಯುತ್ತಿದೆ. ತಂದೆಯಿಂದ ಮಗನ ಕೊಲೆ..ಮಗನಿಂದ ತಂದೆ ಕೊಲೆ.ಗಂಡನಿಂದ ಹೆಂಡ್ತಿ ಕೊಲೆಯಂತ ರಕ್ತ ಸಂಬಂಧಿ ಕೊಲೆಗಳು ಮನೆಗಳಲ್ಲಿ ನೆತ್ತರು ಹರಿಸುತ್ತಿವೆ. ಯಾವತ್ತೂ ಕ್ರೈಂ ಫೈಲ್ ನಲ್ಲಿ ಎಂಟ್ರಿಯಾಗದ..ಅಪರಾದ ಜಗತ್ತನ್ನು ನೋಡದ ಮುಖಗಳೇ, ಈಗ ಕೊಲೆ ಆರೋಪಿಗಳಾಗಿ ಜೈಲು ಸೇರುತ್ತಿದ್ದಾರೆ. ಇದು ನಿಜಕ್ಕೂ ದುರಂತವೇ ಸರಿ..

ಕೌಟಂಬಿಕ ವ್ಯವಸ್ಥೆಗಳಲ್ಲಿ ಮೌಲ್ಯಗಳು ಕುಸಿಯುತ್ತಿದೆ ಎಂಬುದಕ್ಕೆ ಈ ಘಟನೆಗಳು ಸಾಕ್ಷಿಯಾಗಿದೆ. ಜೈಲಿನ ಗೋಡೆಗಳಲ್ಲಿ ಎಲ್ಲದಕ್ಕಿಂತ ದೊಡ್ಡ ದಾನ ಸಮಾಧಾನ ಎಂದು ಬರೆಯಲಾಗಿರುತ್ತೆ. ಇದು ಜೈಲು ಸಜಾಬಂಧಿಗಳಿಗೆ ಅಕ್ಷರಶಹ ಅನ್ವಯವಾಗುವ ಮೌಲ್ಯಯುತ ಪದವಾಗಿರುತ್ತೆ. ಕ್ಷಣಿಕ ಕಾಲದ ಸಿಟ್ಟಿಗೆ ಕೈಗೆ ಸಿಕ್ಕ ಮಾರಕಾಸ್ತ್ರಗಳಿಂದ ಕುಟುಂಬದ ಸದಸ್ಯರನ್ನೇ ರಾಕ್ಷಸರಂತೆ ಕೊಚ್ಚಿ ಕೊಲೆ ಮಾಡುವ ವ್ಯಕ್ತಿ ಜೈಲು ಸೇರಿದಾಗ ಆತನಿಗೆ ನಿಜವಾದ ಬದುಕಿನ ಸಾಕ್ಷಾತ್ಕಾರವಾಗುತ್ತದೆ. ನಾನು ನನ್ನ ಪತ್ನಿಯನ್ನು ಕೊಲೆ ಮಾಡಬಾರದಿತ್ತು..ನಾನು ನನ್ನ ತಂದೆಯನ್ನು ಕೊಲೆ ಮಾಡಬಾರದಿತ್ತು..ನಾನು ನನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನನ್ನು ಕೊಲೆ ಮಾಡಬಾರದಿತ್ತು ಎಂದು ಹಗಲು ರಾತ್ರಿ ನೊಂದು ದುಃಖಪಡುವ ಸಜಾ ಬಂಧಿಗಳೇ ಜೈಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಆ ಸಿಟ್ಟಿನಲ್ಲಿ ಸ್ವಲ್ಪ ತಾಳ್ಮೆ ತೆಗೆದುಕೊಂಡಿದ್ದರೆ ಮುಂದೆ ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಬಹುದಿತ್ತು ಎಂದು ಜೈಲು ಸಜಾಬಂಧಿಗಳು..ಈಗಲೂ ಪಶ್ಚಾತಾಪ ಪಡುತ್ತಾರೆ…

ಆದರೆ ಶಿಕಾರಿಪುರದಲ್ಲಿ ಇಂತಹ ಕೋಪತಾಪದ ಅತಿರೇಕದ ಘಟನೆಗಳು ಸಾಲು ಸಾಲಾಗಿ ನಡೆಯುತ್ತಿದೆ. ಎಷ್ಟರಮಟ್ಟಿಗೆ ಅಂದರೆ, ಬರುವ ಸಿಟ್ಟಿನಲ್ಲಿ ಸಂಬಂಧಿಗಳನ್ನ ತುಂಡು ತುಂಡಾಗಿ ಕತ್ತರಿಸದಂತಹ ಪ್ರಕರಣಗಳು ಇಲ್ಲಿ ದಾಖಲಾಗಿವೆ. ಶಿಕಾರಿಪುರದಲ್ಲಿ ಕಳೆದ ಒಂದುವರೆ ತಿಂಗಳಲ್ಲಿ ಐದು ಕೊಲೆ ಘಟನೆಗಳು ನಡೆದಿದೆ. ಅದು ಕೌಟಂಬಿಕ ಕಲಹದಲ್ಲಿ ಆದ ತಣ್ಣಪುಟ್ಟ ತಪ್ಪುಗಳಿಗೆ ನಡೆದು ಹೋಗಿರುವ ಕೊಲೆ ಘಟನೆಗಳಾಗಿವೆ. 

1.ಪತ್ನಿ ಶೀಲ ಶಂಕಿಸಿ ಕೊಲೆ

ಅಂಬ್ಲಿಗೊಳದಲ್ಲಿ ಗಂಡನೇ ತನ್ನ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ್ದ. ಗಂಡ ಮನುಕುಮಾರ್ ಕೊಲೆ ಮಾಡಿದ ಆರೋಪಿಯಾಗಿದ್ದು, ಗೌರಮ್ಮ ಸಾವನ್ನಪ್ಪಿದ ಪತ್ನಿಯಾಗಿದ್ದಾರೆ.  

2 . ಹೆಂಡತಿಯನ್ನ ಕೊಂದ ಗಂಡ 

ಇದಾದ ಬಳಿಕ ರವಿ ಕುಮಾರ್ ಎಂಬಾತ ತನ್ನ ಪತ್ನಿ ಶೀಲ ಶಂಕಿಸಿ ಕೊಲೆ ಮಾಡಿದ್ದ. 

3.ತಂದೆಯಿಂದಲೇ ಮಗನ ಕೊಲೆ

ಶಿಕಾರಿಪುರ ತಾಲ್ಲೂಕು ಬಳ್ಳೂರು ಗ್ರಾಮದಲ್ಲಿ ತಂದೆಯಿಂದಲೇ ಮಗನ ಕೊಲೆಯಾಗಿದೆ.  ಇಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ.ಬಳ್ಳೂರು ಗ್ರಾಮದಲ್ಲಿ ತಂದೆ ಲಿಂಗಾನಾಯ್ಕ ಮಗ ಗಂಗ್ಯಾನಾಯ್ ನಡುವೆ ಜಗಳ ನಡಿದಿತ್ತು. ಆಸ್ತಿ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ಹೋಗಿ , ಲಿಂಗಾನಾಯ್ಕ , ಮಗನ ಎದೆಗೆ ಕುಡುಗೋಲಿನಿಂದ ಚುಚ್ಚಿದ್ದ.

4. ಮಗನಿಂದಲೇ ತಂದೆಯ ಕೊಲೆ

ಇದಾದ ಬಳಿಕ ಅಪ್ಪಮಗನ ಜಗಳ ವಿಕೋಪಕ್ಕೆ ಹೋಗಿ ಮಗನೇ ತಂದೆಯನ್ನ ಸುತ್ತಿಗೆಯಿಂದ ಹೊಡೆದು ಕೊಂದಿದ್ದ.  ಮುಸ್ತಾಫ(42) ಕೊಲೆಯಾದ ವ್ಯಕ್ತಿ, ಮಗ ಶಾಹಿದ್ (22) ಕೊಲೆಗೈದ ಆರೋಪಿಯಾಗಿದ್ದಾನೆ. ಇಲ್ಲಿ ತನ್ನ ತಂಗಿಯ ಪ್ರೇಮಕ್ಕೆ ತಂದೆಯೆ ಅಡ್ಡವಾಗಿದ್ದ ಕಾರಣಕ್ಕೆ ಘಟನೆ ನಡೆದಿತ್ತು ಎನ್ನಲಾಗಿದೆ

5.ಗಂಡನಿಂದಲೇ ಪತ್ನಿ ಕೊಲೆ

ಇಂದು ಶಿಕಾರಿಪುರದ ಟೌನ್‌ನಲ್ಲಿ ಮಹಿಳೆಯೊಬ್ಬಳನ್ನ ಕೊಲೆ ಮಾಡಲಾಗಿದೆ. ಶಿಕಾರಿಪುರ ಟೌನ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಪತಿಯೇ ಪತ್ನಿಯನ್ನ  ಕೊಲೆಮಾಡಿದ್ದಾನೆ.ಶಿಕಾರಿಪುರ ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಮೃತ ಮಹಿಳೆಯನ್ನ ರೇಣುಕಾ(40) ಎಂದು ಗುರುತಿಸಲಾಗಿದೆ. ನಾಗರಾಜ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

6.ಅನೈತಿಕ ಸಂಬಂಧ ಪ್ರಶ್ನಿಸಿದಕ್ಕೆ ಕೊಲೆ

ಕಳೆದ ಸೆಪ್ಟಂಬರ್ ತಿಂಗಳಲ್ಲಿ ಪತ್ನಿ ಜೊತೆ ಮಾತನಾಡಬೇಡ ಎಂದು ಹೇಳಿದಕ್ಕೆ ಯುವಕ ತನ್ನ ಸ್ನೇಹಿತರ ಜೊತೆಗೂಡಿ ಕೃಷ್ಣಪ್ಪ ಎಂಬುವರನ್ನು ಕೊಲೆ ಮಾಡಿದ್ದರು. ಆ ಬಳಿಕ ಅಲ್ಲಿಯೇ ಇದ್ದ ಗುಂಡಿಯೊಂದಕ್ಕೆ ಕೃಷ್ಣಪ್ಪನನ್ನ ಶಿಫ್ಟ್‌ ಮಾಡಿ ಆತನ ಅಂಗಾಂಗಗಳನ್ನ ಕತ್ತರಿಸಿ ಎರಡು ಪ್ಲಾಸ್ಟಿಕ್‌ ಚೀಲಗಳಿಗೆ ತುಂಬಿಕೊಂಡಿದ್ದಾರೆ. ಬಳಿಕ, ಬಾರಂಗಿ ಮೂಲಕ ಗೋಂದಿ ಚಾನಲ್‌ ಅಂಗಾಂಗಳನ್ನ ಎಸೆದು ಪರಾರಿಯಾಗಿದ್ದರು. ಆ ಪ್ರಕರಣವೂ  ತೀರಾ ಗಂಭೀರವಾಗಿತ್ತು. 

ವಿಪರ್ಯಾಸವೆಂದರೆ ಇಲ್ಲಿ ನೆಡದ ಕೊಲೆ ಘಟನೆಗಳಲ್ಲಿ ಯಾರು ಹೆಬ್ಯುಚಿಯಲ್ ಅಫೈಂಡರ್ ಗಳೇನಲ್ಲ. ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿಯೇ ಬಾಳುತ್ತಿದ್ದ ಮನಸ್ಸುಗಳೇ ಆಗಿವೆ..ಆದರೆ ಕೋಪದಲ್ಲಿ ಮೂಗು ಕೊಯ್ದುಕೊಂಡವರೇ ಆಗಿದ್ದಾರೆ. ಕೌಟುಂಬಿಕ ವ್ಯವಸ್ಥೆಯಲ್ಲಿ ಎಂತಹದ್ದೇ ಸಮಸ್ಯೆಗಳು ಹಾಗು ಆಕ್ರೋಶವಾಗಬಹುದಾದ ಸಂಗತಿಗಳು ಎದುರಾದರೂ ಮೊದಲು ಸಮಾಧಾನಿಗಳಾಗಿರಬೇಕಾಗುತ್ತದೆ.ಬದುಕಿಕೊ..ಎಂದು ಕೈ ಚೆಲ್ಲಿದರೂ ಅದು ಬದುಕಿನ ದೊಡ್ಡ ತ್ಯಾಗವಾಗುತ್ತದೆ..ಕೌಟಂಬಿಕ ಕೊಲೆ ಪ್ರಕರಣಗಳಲ್ಲಿ ಜೈಲುವಾಸಿಗಳಾಗಿರುವವರನ್ನು ಭೇಟಿ ಮಾಡಿ ವಿಚಾರಿಸಿದರೆ….ಅವರು ಹೇಳುವುದು ಒಂದೇ..ನಾನು ಅಂದು ಸಿಟ್ಟಿನಲ್ಲಿ ಆ ಕೆಲಸ ಮಾಡಬಾರದಿತ್ತು ಎಂಬ ಪಶ್ಚಾತಾಪದ ನುಡಿಗಳನ್ನು ಆಡುತ್ತಾರೆ..ಮನಸ್ಸು ಹಗುರವಾಗಿರಲಿ..ಕೆಟ್ಟದ್ದನ್ನು ಕಂಡಾಗ ಕಂಗಾಲಾಗದಿರುವ ಮನಸ್ಸು ನಮ್ಮದಾಗಿರಲಿ.

SUMMARY |  shikaripura and murder incident 

KEY WORDS | shikaripura , murder incident 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು