virat kohli : ಒಲ್ಲದ ಮನಸ್ಸಿನಿಂದಲೇ ಪ್ರೀತಿಯ ಟೆಸ್ಟ್ ಕ್ರಿಕೆಟ್‍ಗೆ ಕೊಹ್ಲಿ ಡಿವೋರ್ಸ್..!

prathapa thirthahalli
Prathapa thirthahalli - content producer

virat kohli: ನಿನ್ನ ಹೆಸರು ಹೇಳಿದ ತಕ್ಷಣ… ನಿನ್ನ ಆಟದ ವೈಖರಿ ರಪ್ಪನೆ ಒಂದು ಕ್ಷಣ ಕಣ್ಣ ಮುಂದೆ ಹಾದು ಹೋಗುತ್ತದೆ. ತಂಡದ ಗೆಲುವಿಗಾಗಿ ನೀನು ಹೋರಾಡುವ ರೀತಿಯಂತೂ ರೋಮಾಂಚನಗೊಳಿಸುತ್ತದೆ.ಅದು ಶತಕದ ಸಂಭ್ರಮವೇ ಆಗಿರಲಿ, ಗೆಲುವಿನ ಖುಷಿಯೇ ಆಗಿರಲಿ..ಯಾವುದೇ ದಾಖಲೆಗಳೇ ಆಗಿರಲಿ..ನೀನಾಡುವ ಪರಿ ಪುಳಕಗೊಳ್ಳುವಂತೆ ಮಾಡುತ್ತದೆ. 

ಅಷ್ಟೇ ಯಾಕೆ ಸಹ ಆಟಗಾರರ ಅದ್ಭುತ ಸಾಧನೆಯನ್ನು ಮನಸಾರೆ ಆಸ್ವಾದಿಸುವ ಗುಣ ನಿನ್ನ ಮೇಲಿನ ಅಭಿಮಾನವನ್ನು ಇಮ್ಮಡಿಗೊಳಿಸುತ್ತದೆ.ಪ್ರತಿ ಪಂದ್ಯವನ್ನು ಜಿದ್ದಿಗೆ ಬಿದ್ದಂತೆ ಆಡುವುದನ್ನು ನೋಡಿದಾಗ ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ.ಏಟಿಗೆ ಏಟು..ಮಾತಿಗೆ ಮಾತು.. ಅಲ್ಲೆ ಡ್ರಾ ಅಲ್ಲೆ ಬಹುಮಾನ ಅನ್ನೋ ದಾದಾಗಿರಿಯ ಪ್ರವೃತ್ತಿ ಮೀತಿ ಮೀರುತ್ತಿದೆ ಎಂದು ಅನ್ನಿಸಿದ್ರೂ ಅದು ಇರಬೇಕು ಎಂದು ಅನ್ನಿಸುತ್ತಿದೆ.ಟೀಮ್ ಇಂಡಿಯ ಟೆಸ್ಟ್ ತಂಡದ ಮನೋಭಾವನೆಯನ್ನೇ ಬದಲಾಯಿಸಿದ ಕ್ರಾಂತಿಕಾರಿ ನಾಯಕ ಎಂದು ಸಾರಿ ಸಾರಿ ಹೇಳಬೇಕಾಗುತ್ತದೆ. ಸೂಜಿಗಲ್ಲಿನಂತೆ ಸೆಳೆಯುವ ನೋಟ..ಬೆಂಕಿಯಂತೆ ಕಾರುವ ದೃಷ್ಟಿ.. ದಿಟ್ಟ ಹೆಜ್ಜೆ…ಲಯಬದ್ಧವಾದ ಟೆಸ್ಟ್ ಕ್ರಿಕೆಟ್‍ನ ಶಾಸ್ತ್ರೀಯ ಆಟದ ಕಲೆ.. ಸೋಲಲೇ ಬಾರದು ಅನ್ನೋ ಹಠ..ಏಕಾಂಗಿಯಾಗಿ ಹೋರಾಟ ಮಾಡೋ ಛಲ..ತಂಡಕ್ಕಾಗಿ ಎಲ್ಲವನ್ನೂ ಸಮರ್ಪಣೆ ಮಾಡೋ ಪರಿಶ್ರಮ,ತ್ಯಾಗ..ಇದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ  ಉಳಿಯುತ್ತದೆ. 

virat kohli :  ಕ್ರಿಕೆಟ್ ಆಟದಲ್ಲಿ ಪ್ರಬುದ್ಧನಾದ್ರೂ ಚಿಕ್ಕ ಮಕ್ಕಳಂತೆ ಅಂಗಣದಲ್ಲಿ  ಹಾರಾಡುತ್ತಾ,, ಕುಣಿಯುತ್ತಾ..ಆಟ-ಚೆಲ್ಲಾಟವಾಡುತ್ತಾ..ಹೀಗೆ  ನಾನಾ ಚೇಷ್ಠೆಗಳನ್ನು ಮಾಡುತಾ.್ತ ಸಹ ಆಟಗಾರರನ್ನು ಹುರಿದುಂಬಿಸುತ್ತಾ..ಆಟವನ್ನು ಸೃಜಿಸುತ್ತಾ.. ಅಭಿಮಾನಿಗಳನ್ನು ರಂಜಿಸುತ್ತಾ ನಿನ್ನ ತಾಳ ಮೇಳವನ್ನು ಮತ್ತೆ ನೋಡಬೇಕು ಎಂದು ಎನಿಸುತ್ತಿದೆ. 36ರ ಹರೆಯದಲ್ಲೂ ಫಿಟ್  ಆಂಡ್ ಫೈನ್ ಆಗಿರುವ ನೀನು ಇನ್ನೂ ಮೂರು ನಾಲ್ಕು ವರ್ಷ ಟೆಸ್ಟ್ ಮ್ಯಾಚ್ ಆಡಬೇಕು ಎಂದು ಮನಸು ಹೇಳುತ್ತದೆ. ಆದ್ರೆ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್‍ಗೆ  ನಿವೃತ್ತಿಯ ಕಠಿಣ ನಿರ್ಧಾರ ತಗೊಂಡಿರುವುದು ಹೃದಯಕ್ಕೆ ವೇದನೆಯಾಗುತ್ತಿದೆ. ನಿನಗೂ ಗೊತ್ತಿದೆ ಈ ನಿರ್ಧಾರ ನಿನಗಷ್ಟೇ ಅಲ್ಲ, ಖಂಡಿತವಾಗಿಯೂ ಅಭಿಮಾನಿಗಳಿಗೆ ಎಂದೆಂದಿಗೂ ನಿರಾಸೆಯಾಗುತ್ತದೆ. ಯಾಕಂದ್ರೆ ನಿನ್ನ ಕಟ್ಟ ಕಡೆಯ ಟೆಸ್ಟ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಆಗಲಿಲ್ಲ ಅನ್ನೋ ಕೊರಗು ಕಾಡುತ್ತಿದೆ.

ಯುವ ಆಟಗಾರನಾಗಿ, ನಾಯಕನಾಗಿ, ಹಿರಿಯ ಆಟಗಾರನಾಗಿ ರೆಡ್ ಬಾಲ್ ಕ್ರಿಕೆಟ್‍ನಲ್ಲಿ ಟೀಮ್ ಇಂಡಿಯಾಗೆ ಐತಿಹಾಸಿಕ ಜಯ ದಾಖಲಿಸಿದ್ದ ನಿನ್ನನ್ನು ಮೈದಾನದಲ್ಲಿ ಮೆರವಣಿಗೆ ಮಾಡಿ ನಿನ್ನ ಟೆಸ್ಟ್ ಕ್ರಿಕೆಟ್ ಬದುಕನ್ನು ಅರ್ಥಪೂರ್ಣಗೊಳಿಸದ ಬಿಸಿಸಿಐ ಮೆಲೆ ಸಿಟ್ಟು, ಕೋಪ ಬರುತ್ತಿದೆ. ಅದು ಕೋಚ್ ಆಗಿರಲಿ, ಬಿಸಿಸಿಐ ಆಗಿರಲಿ ಅಥವಾ ಆಯ್ಕೆ ಸಮಿತಿಯೇ ಆಗಿರಲಿ.. ಒಬ್ಬ ಮಹಾ ಕ್ರಿಕೆಟಿಗನಿಗೆ ಅಪಮಾನ ಮಾಡಿದೆ.ಹಾಗಂತ ಬಿಸಿಸಿಐಗೆ ಇದು ಹೊಸತು ಅಲ್ಲ.. ಹಳೆಯದ್ದು ಅಲ್ಲ..ಇದು ತಪ್ಪು – ಸರಿ ಅನ್ನೋ ವಾದ ಮಾಡೋ ಸಮಯ ಕೂಡ ಅಲ್ಲ. ಭವಿಷ್ಯದ ಟೀಮ್ ಇಂಡಿಯಾದ ಹಿತದೃಷ್ಟಿಯಿಂದ ಬಿಸಿಸಿಐನ  ಕೆಲವೊಂದು ನಿರ್ಧಾರಗಳನ್ನು ಅರಗಿಸಿಕೊಳ್ಳಬೇಕಾಗುತ್ತದೆ .ಅದೇನೇ ಇರಲಿ, 14 ವರ್ಷಗಳ ಕಾಲ ರೆಡ್ ಬಾಲ್ ಕ್ರಿಕೆಟ್‍ನಲ್ಲಿ ರಸದೌತಣವನ್ನು ಉಣಬಡಿಸಿದ ಚೇಸಿಂಗ್ ಗಾಡ್ ವಿರಾಟ್ ಕೊಹ್ಲಿ ಇನ್ನು ಮುಂದೆ ಶ್ವೇತ ಬಣ್ಣದ ಜೆರ್ಸಿಯಲ್ಲಿ  ಕಾಣಿಸಿಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ಕೆಂಪು ಸುಂದರಿ ಕೊಹ್ಲಿಯ ಬ್ಯಾಟ್ ಅನ್ನು ಕೂಡ ಸ್ಪರ್ಶ ಕೂಡ ಮಾಡಲ್ಲ. ರೆಡ್ ಬ್ಯೂಟಿಗೆ ವಿರಾಟ್ ಒಲ್ಲದ ಮನಸ್ಸಿನಿಂದಲೇ ಡಿವೋರ್ಸ್ ನೀಡಿದ್ದಾರೆ. 

virat kohli: ಸಚಿನ್ ತೆಂಡುಲ್ಕರ್ ಉತ್ತರಾಧಿಕಾರಿ ವಿರಾಟ್ ಕೊಹ್ಲಿ 

ಸಚಿನ್ ತೆಂಡುಲ್ಕರ್ ಉತ್ತರಾಧಿಕಾರಿ ಎಂದೆ ಬಿಂಬಿತವಾಗಿದ್ದ ವಿರಾಟ್ ಕೊಹ್ಲಿ ಎಲ್ಲರ ನಿರೀಕ್ಷೆಗೂ ಮೀರಿ ಆ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಅಷ್ಟೇ ಅಲ್ಲ, ಸಚಿನ್‍ಗಿಂತಲೂ ಮೀರಿಸುವ ಆಟವನ್ನು ಆಡಿದ್ದಾರೆ 

ಅಂದ ಹಾಗೇ, ಟೆಸ್ಟ್ ಕ್ರಿಕೆಟ್ ಅಂದ್ರೆ ಅದು ಹೊಡಿಬಡಿ ಆಟವಲ್ಲ.. ಅಲ್ಲಿ ತಾಳ್ಮೆ, ಏಕಾಗ್ರತೆ, ಪರಿಶ್ರಮದ ಜೊತೆಗೆ ತಾಂತ್ರಿಕ ಕೌಶಲ್ಯಗಳಿಗೆ ಹೆಚ್ಚಿನ ಆದ್ಯತೆ. ಈ ಎಲ್ಲಾ ಕಟ್ಟುಪಾಡುಗಳನ್ನು ಪಾಲಿಸಿಕೊಂಡು, ತನ್ನದೇ ಶೈಲಿಯಿಂದ  ಆಕ್ರಮಣಕಾರಿ ಆಟವಾಡುತ್ತಾ ವಿಶ್ವಟೆಸ್ಟ್ ಕ್ರಿಕೆಟ್‍ನಲ್ಲಿ ಚರಿತ್ರೆ ಬರೆದ ಚೀಕೂಗೆ ತುಂಬು ಹೃದಯದ ಅಭಿನಂದನೆಗಳು.. ಕೃತಜ್ಜತೆಗಳು.. ಥ್ಯಾಂಕ್ಯೂ  ವಿರಾಟ್ ಕೊಹ್ಲಿ.. ಟೆಸ್ಟ್ ಕ್ರಿಕೆಟ್ ಜಗತ್ತಿನಲ್ಲಿ ನೀನು ಮಾಡಿರೋ ಒಡ್ಡೋಲಗ.. ನಿನ್ನ ವಿರಾಟ ದರ್ಶನ ಎಂದೆಂದಿಗೂ ನೆನಪಿನಲ್ಲಿರುತ್ತೆ.. ಮುಂದೆ ಇದೆಯಲ್ವಾ ಏಕದಿನ ಕ್ರಿಕೆಟ್.. ಐಪಿಎಲ್..ಅಲ್ಲಿ ನಿನ್ನ ಆಟವನ್ನು ಇನ್ನಷ್ಟು ವರ್ಷಗಳ ಕಾಲ ನೋಡೋಣ..! 

ಸನತ್​ ರೈ

ಹಿರಿಯ ಪತ್ರಕರ್ತರು

TAGGED:
Share This Article