ಶಿವಮೊಗ್ಗದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ದಂಡ ಪಾವತಿಸಬೇಕಿದ್ದ ವಾಹನ ಸವಾರರಿಗೆ ಸಂಚಾರಿ ಪೊಲೀಸರು ಉತ್ತಮ ಅವಕಾಶವೊಂದನ್ನು ಕಲ್ಪಿಸಿದ್ದಾರೆ. ಸಂಚಾರಿ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಲಾಗಿದ್ದು, ಆಗಸ್ಟ್ 23 ರಿಂದ ಆರಂಭವಾದ ಈ ರಿಯಾಯಿತಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ರಿಯಾಯಿತಿ ಸೌಲಭ್ಯವನ್ನು ಬಳಸಿಕೊಂಡು ಕಳೆದ 7 ದಿನಗಳಲ್ಲಿ ಬರೋಬ್ಬರಿ 43.65 ಲಕ್ಷ ರೂಪಾಯಿಗಳ ದಂಡವನ್ನು ಸಂಗ್ರಹಿಸಲಾಗಿದೆ. ಈ ವಿಶೇಷ ಅವಕಾಶವು ಸೆಪ್ಟೆಂಬರ್ 12 ರವರೆಗೆ ಲಭ್ಯವಿರಲಿದೆ.
Traffic rules : ನಿಮ್ಮ ವಾಹನದ ಮೇಲಿನ ದಂಡವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?
ನಿಮ್ಮ ವಾಹನದ ಮೇಲೆ ಸಂಚಾರಿ ದಂಡ ಬಿದ್ದಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಪೊಲೀಸ್ ಠಾಣೆಗೆ ಹೋಗಬೇಕಾಗಿಲ್ಲ. ನಿಮ್ಮ ಮೊಬೈಲ್ ಫೋನ್ ಮೂಲಕವೇ ಸುಲಭವಾಗಿ ಇದನ್ನು ಪರಿಶೀಲಿಸಬಹುದು.
ಮೊದಲನೆಯದಾಗಿ ನಿಮ್ಮ ಮೊಬೈಲ್ನಲಲ್ಲಿರುವ ಗೂಗಲ್ ಪ್ಲೇ ಸ್ಟೋರ್‌ನಲ್ಲಿ mParivahan ಎಂಬ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಚೆಕ್ ಚಲನ್ ಎಂಬ ಆಪ್ಷನ್ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ವಾಹನದ ಸಂಖ್ಯೆಯನ್ನು ಹಾಕಬೇಕು ಆಗ ನಿಮ್ಮ ವಾಹನದ ಮೇಲೆ ದಂಡ ಬಿದ್ದಿದೆಯೇ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ಸಿಗುತ್ತದೆ.
ಅಥವಾ, ನಿಮ್ಮ ಮೊಬೈಲ್‌ನ ಗೂಗಲ್ ಕ್ರೋಮ್ ಅಥವಾ ಯಾವುದೇ ವೆಬ್ ಬ್ರೌಸರ್ ತೆರೆದು e Challan Status ಎಂದು ಹುಡುಕಿ. ನಂತರ e Challan ವೆಬ್‌ಸೈಟ್ ತೆರೆಯುತ್ತದೆ. ಅಲ್ಲಿ ‘ಚಲನ್ ಡೀಟೇಲ್ಸ್’ (Challan Details) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ವಾಹನದ ಸಂಖ್ಯೆಯನ್ನು ನಮೂದಿಸಿ ದಂಡದ ಮಾಹಿತಿ ಪಡೆಯಬಹುದು.
Traffic rules : ತಪ್ಪಾದ ದಂಡದ ಬಗ್ಗೆ ಏನು ಮಾಡಬೇಕು?
ಕೆಲವೊಮ್ಮೆ ಬೇರೊಬ್ಬರ ವಾಹನದ ನಿಯಮ ಉಲ್ಲಂಘನೆಗೆ ನಿಮ್ಮ ವಾಹನದ ಮೇಲೆ ದಂಡ ದಾಖಲಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ತಕ್ಷಣ ಅದನ್ನು ಸರಿಪಡಿಸಲು, trafficeashi@gmail.com ವಿಳಾಸಕ್ಕೆ ಇ-ಮೇಲ್ ಕಳುಹಿಸಿ ಮಾಹಿತಿ ನೀಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಮೊಗ್ಗ ಸಂಚಾರಿ ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.

